ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲವರ ಹಣ ದಾಹಕ್ಕೆ ಖನಿಜ ಸಂಪತ್ತು ಲೂಟಿ: ಬಿ.ಎಸ್. ಯಡಿಯೂರಪ್ಪ ಕಳವಳ

Last Updated 5 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕೆಲವರ ಹಣದಾಹಕ್ಕೆ ರಾಜ್ಯದಲ್ಲಿನ ಅಮೂಲ್ಯ ಖನಿಜ ಸಂಪತ್ತು ಲೂಟಿಯಾಗುತ್ತಿದ್ದು, ಹಗಲು ದರೋಡೆ ನಡೆಯುತ್ತಿದೆ~ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಳವಳ ವ್ಯಕ್ತಪಡಿಸಿದರು.

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

`ಅನೇಕ ರಾಷ್ಟ್ರಗಳು ಖನಿಜ ಸಂಪತ್ತನ್ನು ರಫ್ತು ಮಾಡುವುದನ್ನು ನಿಷೇಧಿಸಿವೆ. ಆದರೆ ನಮ್ಮ ಪೂರ್ವಜರು ಸಂರಕ್ಷಿಸಿದ್ದ ಖನಿಜಗಳನ್ನು ನಾವು ಇಂದು ಕಳೆದುಕೊಳ್ಳುತ್ತಿದ್ದೇವೆ. ಆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟಲು ಬಿಗಿ ಕ್ರಮ ತೆಗೆದುಕೊಳ್ಳಲಾಗುವುದು~ ಎಂದರು.

ಪ್ರಾಮಾಣಿಕತೆ ಕಡಿಮೆ
`ಅರಣ್ಯ ಸಂರಕ್ಷಣೆ ಹೊಣೆ ಹೊತ್ತ ಹಲವು ಅಧಿಕಾರಿಗಳಲ್ಲಿ ಪ್ರಾಮಾಣಿಕತೆ ಕಡಿಮೆ ಇದೆ. ಅರಣ್ಯ ಇಲಾಖೆ ಕೂಡ ಸಾಕಷ್ಟು ಸುಧಾರಿಸಬೇಕಿದೆ. ಅರಣ್ಯ ಪ್ರದೇಶವನ್ನು ಉಳಿಸಬೇಕಾದವರು ತಮ್ಮ ಸ್ವಾರ್ಥಕ್ಕಾಗಿ ಅರಣ್ಯ ನಾಶಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಇಲಾಖೆ ಕಠಿಣ ಕ್ರಮ ಜರುಗಿಸಬೇಕು~ ಎಂದು ಸೂಚಿಸಿದರು.

`ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಡು ನಾಶವಾಗಿ ವನ್ಯಜೀವಿಗಳು ನಾಡು ಪ್ರವೇಶಿಸುವಂತಾಗಿದೆ. ಅಧಿಕಾರಿಗಳನ್ನೇ ನೆಚ್ಚಿಕೊಂಡರೆ ಅರಣ್ಯ ರಕ್ಷಣೆ ಸಾಧ್ಯವಿಲ್ಲ. ಹಾಗಾಗಿ ಮಕ್ಕಳಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು. ಆ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪೋಷಕರು ಮಕ್ಕಳಿಗೆ ತಿಳಿವಳಿಕೆ ನೀಡಬೇಕು. ಗ್ರಾಮೀಣ ಜನರಲ್ಲೂ ಜಾಗೃತಿ ಮೂಡಿಸಬೇಕು~ ಎಂದು ಮನವಿ ಮಾಡಿದರು.

ಆಂದೋಲನವಾಗಬೇಕು
`2011ನೇ ವರ್ಷವನ್ನು ಅಂತರರಾಷ್ಟ್ರೀಯ ಅರಣ್ಯ ರಕ್ಷಣಾ ವರ್ಷ ಎಂದು ಘೋಷಿಸಲಾಗಿದ್ದು, ಅರಣ್ಯ ಸಂಪತ್ತು ಒಳಗೊಂಡಂತೆ ಪರಿಸರ ರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಪರಿಸರ ಮತ್ತು ಖನಿಜ ಸಂಪತ್ತಿನ ಸಂರಕ್ಷಣೆಗಾಗಿ ದೊಡ್ಡ ಆಂದೋಲನವಾಗಬೇಕಿದೆ~ ಎಂದರು.

1 ಕೋಟಿ ಸಸಿ ನೆಡುವ ಗುರಿ
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಎ.ಎಸ್. ಸದಾಶಿವಯ್ಯ, `ಜಾಗತಿಕ ತಾಪಮಾನ ನಿಯಂತ್ರಿಸುವ ನಿಟ್ಟಿನಲ್ಲಿ ಕಳೆದ ಸಾಲಿನಲ್ಲಿ ರಾಜ್ಯದ ಕಾರ್ಖಾನೆ ಮತ್ತು ಕೈಗಾರಿಕಾ ಪ್ರದೇಶದಲ್ಲಿ 57 ಲಕ್ಷ ಸಸಿಗಳನ್ನು ನೆಡಲಾಗಿದೆ. ಬಳ್ಳಾರಿ ಗಣಿ ಪ್ರದೇಶದಲ್ಲಿ ಮೇಲ್ಪದರದ ಮಣ್ಣಿನ ಸಂರಕ್ಷಣೆಗೆ 27 ಲಕ್ಷ ಗಿಡಗಳನ್ನು ನೆಡಲಾಗಿದೆ. ಈ ಮಳೆಗಾಲದಲ್ಲಿ ರಾಜ್ಯದಾದ್ಯಂತ ಒಂದು ಕೋಟಿ ಸಸಿ ನೆಡುವ ಗುರಿ ಇದೆ. ಅತಿ ಹೆಚ್ಚು ಮಾಲಿನ್ಯ ಉಂಟು ಮಾಡುವ 56 ಕೈಗಾರಿಕೆಗಳನ್ನು ಮುಚ್ಚುವಂತೆ ಆದೇಶ ನೀಡಲಾಗಿದೆ~ ಎಂದರು.

ಇದೇ ಸಂದರ್ಭದಲ್ಲಿ ರಾಜ್ಯ ವಿಜ್ಞಾನ ಪರಿಷತ್ತು, ಬೆಳಗಾವಿಯ ಪರ್ಯಾವರಣಿ ಸಂಸ್ಥೆ, ಮಂಗಳೂರಿನ ಪಿಲಿಕುಳ ನಿಸರ್ಗಧಾಮ ಸೊಸೈಟಿ (ಸಂಸ್ಥೆ ವಿಭಾಗ), ಚಿತ್ರದುರ್ಗದ ಎನ್.ಜೆ. ದೇವರಾಜ ರೆಡ್ಡಿ, ಬೆಂಗಳೂರಿನ ನಂದಿದುರ್ಗ ಬಾಲುಗೌಡ (ವೈಯಕ್ತಿಕ ವಿಭಾಗ) ಅವರಿಗೆ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೈಯಕ್ತಿಕ ವಿಭಾಗದಲ್ಲಿ ಪ್ರಶಸ್ತಿ ಪಡೆದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ಸಮಾರಂಭದಲ್ಲಿ ಪಾಲ್ಗೊಂಡಿರಲಿಲ್ಲ. ಸಚಿವರೇ ಈ ಪ್ರಶಸ್ತಿಯನ್ನು ಸ್ವಾಮೀಜಿ ಅವರಿಗೆ ನೀಡಬೇಕು ಎಂದು ಮುಖ್ಯಮಂತ್ರಿಯವರು ಸೂಚಿಸಿದರು.

ಕರ್ನಾಟಕ ಜೀವವೈವಿಧ್ಯ ಮಂಡಳಿ ವತಿಯಿಂದ 2010-11ನೇ ಸಾಲಿನ ಜೀವ ವೈವಿಧ್ಯ ಪ್ರಶಸ್ತಿಯನ್ನು ಪುತ್ತೂರಿನ ಎ.ಪಿ. ಚಂದ್ರಶೇಖರ್, ಉಡುಪಿಯ ಡಾ.ರವೀಂದ್ರನಾಥ ಐತಾಳ್, ಬೀದರ್ ಜಿಲ್ಲೆಯ ಹುಮ್ನಾಬಾದ್‌ನ ಪ್ರೊ.ಎಸ್.ವಿ. ಕಲ್ಮಠ, ಶಿರಸಿಯ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಸಂಸ್ಥೆ, ಭದ್ರಾವತಿಯ ಸರೋಜಮ್ಮ ಹಾಗೂ ಮಂಡ್ಯ ಜಿಲ್ಲೆ ಮಳವಳ್ಳಿಯ ಕಿರುಗಾವಲು ಗ್ರಾಮದ ಸೈಯದ್ ಘನಿಖಾನ್ ಅವರಿಗೆ ಪ್ರದಾನ ಮಾಡಲಾಯಿತು.

ಬಳಿಕ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.  ಸಂಸದ ಡಿ.ಬಿ. ಚಂದ್ರೇಗೌಡ, ಸಚಿವರಾದ ಸಿ.ಎಚ್.ವಿಜಯಶಂಕರ್, ಜೆ.ಕೃಷ್ಣ ಪಾಲೇಮಾರ್, ಶಾಸಕ ದಿನೇಶ್ ಗುಂಡೂರಾವ್, ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಕಾರ್ಯದರ್ಶಿ ಕನ್ವರ್‌ಪಾಲ್ ಇತರರು ಉಪಸ್ಥಿತರಿದ್ದರು.
 

ಮಾಸಾಂತ್ಯಕ್ಕೆ ಹೊಸ ಅರಣ್ಯ ನೀತಿ
`ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಜಲವಿದ್ಯುತ್ ಯೋಜನೆ ಹಾಗೂ ಗಣಿಗಾರಿಕೆ ನಿಷೇಧ ಸೇರಿದಂತೆ ಹಲವು ವಿಷಯಗಳನ್ನು ಒಳಗೊಂಡ ಹೊಸ ಅರಣ್ಯ ನೀತಿಯನ್ನು ಮಾಸಾಂತ್ಯಕ್ಕೆ ಪ್ರಕಟಿಸಲಾಗುವುದು~ ಎಂದು ಸಚಿವ ಸಿ.ಎಚ್. ವಿಜಯಶಂಕರ್ ಹೇಳಿದರು.

`ಅರಣ್ಯೇತರ ಭೂಮಿಯಲ್ಲೂ ಹಸಿರೀಕರಣ ಕಾರ್ಯ ಕೈಗೊಳ್ಳುವಿಕೆ, ಏಕ ಜಾತಿ ಸಸಿ ನೆಡುವ ಬದಲಿಗೆ ಸಹಜ ಅರಣ್ಯ ನಿರ್ಮಾಣ, ಭೌಗೋಳಿಕ ಪರಿಸರಕ್ಕೆ ಹೊಂದುವ ಸಸಿಗಳನ್ನು ನೆಡುವುದು ಹಾಗೂ ಬೀಜಗಳ ಸಂರಕ್ಷಣೆಯಂತಹ ಅಂಶಗಳನ್ನು ಹೊಸ ನೀತಿ ಒಳಗೊಂಡಿದೆ~ ಎಂದರು.

`ಶ್ರೀಗಂಧ ಮರವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಲು ಪ್ರೋತ್ಸಾಹ ನೀಡಲಾಗುತ್ತಿದೆ. ಪ್ರತಿವರ್ಷ ಉತ್ತಮ ಪ್ರಭೇದದ 2 ಲಕ್ಷ ಸಸಿಗಳನ್ನು ಪಡೆಯುವ ಸಂಬಂಧ ಕೇಂದ್ರ ಮರ ವಿಜ್ಞಾನ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ~ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT