ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯದ ಕನಸೇ ನನ್ನನ್ನು ಪೊಲೀಸ್‌ ಮಾಡಿದ್ದು..!

ಪಿಎಸ್‌ಐ ಪ್ರಥಮ ರ‍್ಯಾಂಕ್‌ ವಿಜೇತ ರಚನಾ ಹನುಮಂತ
Last Updated 2 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಕರ್ನಾಟಕ ಪೊಲೀಸ್ ಇಲಾಖೆ ಇತ್ತೀಚೆಗೆ ನಡೆಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜಯಪುರದ ಬಸವನಬಾಗೇವಾಡಿಯ ರಚನಾ ಹನುಮಂತ ಅವರು ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಆಯ್ಕೆಯಾಗಿದ್ದಾರೆ. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದಲ್ಲಿ ತಮ್ಮ ಸಾಧನೆಯ ಜೊತೆಗೆ, ಪರೀಕ್ಷೆ ಸಿದ್ಧತೆಯ ಕುರಿತು ಮಾತನಾಡಿದ್ದಾರೆ.

ಮೊದಲ ಸ್ಥಾನ ಪಡೆದಿದ್ದೀರಿ. ಹೇಗನ್ನಿಸುತ್ತಿದೆ?

ತುಂಬಾ ಖುಷಿಯಾಗಿದೆ. ಹೆಮ್ಮೆ ಎನ್ನಿಸುತ್ತಿದೆ. ಮೊದಲ ಸ್ಥಾನ ಬರುವ ನಿರೀಕ್ಷೆ ಇರಲಿಲ್ಲ. ಆದರೆ, ಪ್ರಶ್ನೆ ಪತ್ರಿಕೆ ಕೀ ಆನ್ಸರ್‌ ಪ್ರಕಟವಾದಾಗಲೇ ನಾನು ಆಯ್ಕೆಯಾಗುತ್ತೇನೆ ಎಂಬ ವಿಶ್ವಾಸವಿತ್ತು. ಪೊಲೀಸ್‌ ಇಲಾಖೆಯಲ್ಲಿ ಇನ್ನೂ ಉನ್ನತ ಹುದ್ದೆಗೆ ಹೋಗಬೇಕು ಎಂಬ ಬಯಕೆ ಇದೆ.

ನಿಮ್ಮೂರು, ಬಾಲ್ಯ, ಶಿಕ್ಷಣ ಹೇಗಿತ್ತು?

ನಮ್ಮದು ಬಸವನಬಾಗೇವಾಡಿ. ತಾಯಿ ಸಾವಿತ್ರಿ ಮುತ್ತಲಗೇರಿ ಆಶ್ರಯದಲ್ಲಿ ಬೆಳೆದೆ. ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರೈಸಿದೆ.ಬಾಗಲಕೋಟೆಯ ಬಸವೇಶ್ವರ ಶಿಶುವಿಹಾರದಲ್ಲಿ ಪ್ರೌಢಶಿಕ್ಷಣ, ಅಲ್ಲಿನ ವಾಗ್ದೇವಿ ಪಿಯು ವಿಜ್ಞಾನ ಕಾಲೇಜಿನಲ್ಲಿ ಪಿಯುಸಿ, ಬೆಳಗಾವಿಯ ಬಾಳೆಕುಂದ್ರಿ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪದವಿ(ಎಲೆಕ್ಟ್ರಿಕಲ್ಸ್‌) ಪೂರೈಸಿದೆ. ಸದ್ಯ, ವಿಜಯಪುರ ಜಿಲ್ಲೆ ಕೂಡಗಿ ಎನ್‌ಟಿಪಿಸಿಯಲ್ಲಿ ಮೂರು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆಎಕ್ಸಿಕ್ಯೂಟಿವ್‌ ಆಗಿ ಕಾರ್ಯನಿರ್ವಹಿಸುತ್ತಿದ್ದೆ.

ಪೊಲೀಸ್‌ ಇಲಾಖೆಗೆ ಸೇರಬೇಕು ಎನಿಸಿದ್ದು ಏಕೆ?

– ಸೈರನ್‌ (ಕೆಂಪು ಲೈಟ್‌) ಹಾಕಿಕೊಂಡು ಸುತ್ತಾಡುವಪೊಲೀಸ್‌ ಜೀಪಿನ ಬಗ್ಗೆ ಬಾಲ್ಯದಿಂದಲೂ ಎಲ್ಲಿಲ್ಲದ ಕುತೂಹಲ. ಆ ಜೀಪಿನಲ್ಲಿ ನಾನೂ ಕುಳಿತು ಸುತ್ತಾಡಬೇಕು,ದಕ್ಷ ಪೊಲೀಸ್‌ ಅಧಿಕಾರಿಯಾಗಬೇಕು ಎಂಬುದು ಬಾಲ್ಯದ ಕನಸಾಗಿತ್ತು. ಆ ಬಾಲ್ಯದ ಕನಸು ಇದೀಗ ನನಸಾಗಿದೆ. ಪೊಲೀಸ್‌ ಆಗಬೇಕು ಎಂಬ ಭಂಡ ಧೈರ್ಯ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ.

ಪರೀಕ್ಷೆಗೆ ಸಿದ್ಧತೆ ಹೇಗೆ ಮಾಡಿದ್ದೀರಿ? ಕೋಚಿಂಗ್ ಹೇಗೆ ತಗೊಂಡಿರಿ?

ಈ ಮೊದಲು ಎರಡು ಬಾರಿ ಪಿಎಸ್ಐ ಪರೀಕ್ಷೆ ಎದುರಿಸಿದ್ದೆ. ಯಶಸ್ವಿಯಾಗಿರಲಿಲ್ಲ. ಆದರೆ, ಮೂರನೇ ಬಾರಿ ಬಹಳ ವಿಶ್ವಾಸದಿಂದ ಪರೀಕ್ಷೆ ಎದುರಿಸಿ ಯಶಸ್ವಿಯಾಗಿರುವೆ. ಕೆಲಸದ ನಡುವೆಯೇ ಎರಡು ವರ್ಷಗಳ ಕೋವಿಡ್‌ ಅವಧಿಯಲ್ಲಿ ಈ ಪರೀಕ್ಷೆಗಾಗಿ ಉತ್ತಮ ತಯಾರಿ ನಡೆಸಿದ್ದೆ. ಕೂಡಗಿ ಎನ್‌ಟಿಪಿಸಿಯಲ್ಲಿ ಸಹೋದ್ಯೋಗಿ ವಿಜಯ್‌ ಹೂಗಾರ್‌ ಮಾರ್ಗದರ್ಶನ ನನಗೆ ಪರೀಕ್ಷೆ ಎದುರಿಸುವುದು ಸುಲಭವಾಗಿಸಿತು. ಅಲ್ಲದೇ, ಪ್ರತಿ ದಿನ ಮುಂಜಾನೆ 3 ಗಂಟೆಗೆ ನನ್ನ ತಾಯಿ ಎಬ್ಬಿಸುತ್ತಿದ್ದರು, ರನ್ನಿಂಗ್‌, ಲಾಂಗ್‌ಜಂಪ್‌, ಶಾಟ್‌ಪಟ್‌ ಅಭ್ಯಾಸ ಮಾಡುವ ಮೂಲಕ ದೈಹಿಕ ಪರೀಕ್ಷೆಗೆ ಅಭ್ಯಾಸ ಮಾಡಿದೆ. ಬಳಿಕ ಬೆಳಿಗ್ಗೆ 6 ರಿಂದ 9.30ರ ವರೆಗೆ ಹಾಗೂ ರಾತ್ರಿ 8ರಿಂದ 12 ವರೆಗೆ ಪ್ರತಿದಿನ ತಪ್ಪದೇ ಅಭ್ಯಾಸದಲ್ಲಿ ತೊಡಗಿದ್ದೆ. ಯಾವುದೇ ಕೋಚಿಂಗ್‌ ತೆಗೆದುಕೊಳ್ಳಲಿಲ್ಲ. ಆದರೆ, ‘ಅನ್‌ ಅಕಾಡೆಮಿ’ ನಡೆಸುವ ಆನ್‌ಲೈನ್‌ ಕೋಚಿಂಗ್‌ಒಂದು ವರ್ಷ ಪಡೆದುಕೊಂಡಿದ್ದೆ.

ಮುಂದೆ ಪರೀಕ್ಷೆ ತೆಗೆದುಕೊಳ್ಳುವವರಿಗೆ ನಿಮ್ಮ ಸಲಹೆಗಳೇನು?

–ಸತತ ಪರಿಶ್ರಮ ಮಾಡಬೇಕು. ಜೊತೆಗೆ ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಬೇಕು. ಈ ಎರಡೂ ಸಾಧ್ಯವಾದರೆ ಅಂದುಕೊಂಡ ಗುರಿಯನ್ನು ಸುಲಭವಾಗಿ ತಲುಪಬಹುದು. ಸರ್ಕಾರ ಎಲ್ಲರಿಗೂ ಅವಕಾಶ ನೀಡಿದೆ. ಹೀಗಾಗಿ ಪೊಲೀಸ್‌ ಇಲಾಖೆ ಬಗ್ಗೆ ಯುವತಿಯರು ಯಾವುದೇ ಅಂಜಿಕ ಬೇಡ.

***

ಸಾಮಾನ್ಯ ಜ್ಞಾನಕ್ಕಾಗಿ ಪ್ರಜಾವಾಣಿ ಪತ್ರಿಕೆ ಮತ್ತು ‘ಅರಿ’ ಪುಸ್ತಕವನ್ನು ಓದುತ್ತಿದ್ದೆ. ಇವೆರಡೂಪರೀಕ್ಷೆಯಲ್ಲಿ ನನ್ನ ನೆರವಿಗೆ ಬಂತು. ‘ಜಿಕೆ ಟುಡೇ’ ಮ್ಯಾಗಜಿನ್‌ ಹಾಗೂ ಎನ್‌ಸಿಆರ್‌ಟಿಇ ಪಿಯುಸಿ ಪುಸ್ತಕಗಳ ಅಭ್ಯಾಸ ನನಗೆ ಪರೀಕ್ಷೆ ಎದುರಿಸಲು ಸಹಾಯವಾಯಿತು

- ರಚನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT