ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆಗಳಲ್ಲಿ ಸಂವಹನ ಕೌಶಲ ಭಾಗ-8: ಸಂವಹನವೇ ಮುಳುವಾಗದಿರಲಿ!

Last Updated 7 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಶಾಬ್ದಿಕ ಸಂವಹನವಾಗಲೀ ಅಶಾಬ್ದಿಕವಾದ ಸಂಜ್ಞಾರೂಪಿ ಸಂವಹನವಾಗಲೀ ಬಯಸಿದ ರೀತಿಯಲ್ಲಿ ಹಾಗೂ ಅದಕ್ಕೆ ವಿರುದ್ಧ ಸಂದೇಶ ಕೊಡದ ರೀತಿಯಲ್ಲಿ ಸಂವಹನಗೊಳ್ಳಬೇಕು. ಇಲ್ಲದಿದ್ದರೆ ಪರಿಣಾಮ ನಿರೀಕ್ಷಿತ ರೀತಿ ಇರಲಾರದು.

ಲಿಖಿತ ಪರೀಕ್ಷೆಗಳು, ಮೌಖಿಕ ಪರೀಕ್ಷೆಗಳಲ್ಲೂ ಒಟ್ಟಾರೆ ಎಲ್ಲಾ ಸಂವಹನದಲ್ಲೂ ಮುಖ್ಯವಾಗುವ ವಿಷಯ ನೀವು ಏನು ಅಂದು ಕೊಂಡಿದ್ದೀರೋ ಅದನ್ನು ಹೇಳಲು ಸಾಧ್ಯವಾಯಿತೋ ಇಲ್ಲವೋ ಎಂಬುದು. ಕೆಲವು ಸಾರಿ ನಾವು ಆಡಿದ ಮಾತಿಗೆ ವಿಪರೀತ ಅರ್ಥ ಬಂದುಬಿಡುತ್ತದೆ. ಆಗ ಅಚಾನಕ್ ತೊಂದರೆಗೆ ಸಿಲುಕಿಕೊಂಡು ವಿಷಾದ ವ್ಯಕ್ತಪಡಿಸ ಬೇಕಾಗುತ್ತದೆ. ಬರವಣಿಗೆಯಲ್ಲೂ ಇದು ಆಗಬಹುದು. ‘ನಿನ್ನಷ್ಟು ಬುದ್ಧಿವಂತರು ಯಾರೂ ಇರಲಿಕ್ಕಿಲ್ಲ ಬಿಡು’ ಎಂಬ ಒಂದು ವಾಕ್ಯ ಮೆಚ್ಚುಗೆಯಾಗಿಯೂ ವ್ಯಂಗ್ಯವಾಗಿಯೂ ಕಾಣಲು ಸಾಧ್ಯ. ಅದು ಸ್ವೀಕರಿಸುವವರ ಮೇಲೆ ಹೋಗುತ್ತದೆ. ಆದರೆ ಸಂವಹನದ ಮೂಲ ನಾವೇ ಆಗಿರುವುದರಿಂದ ಪರಿಣಾಮಕ್ಕೆ ನಾವೇ ಹೊಣೆಗಾರರಾಗಿರ ಬೇಕಾಗುತ್ತದೆ. ಅಂದರೆ ಶಾಬ್ದಿಕ ಸಂವಹನವಾಗಲೀ ಅಶಾಬ್ದಿಕವಾದ ಸಂಜ್ಞಾರೂಪಿ ಸಂವಹನವಾಗಲೀ ಸಂವಹನಕಾರರು ಎಚ್ಚರದಿಂದ ಗಮನಿಸಬೇಕಾದುದು, ತಮ್ಮ ಸಂವಹನ, ಬಯಸಿದ ರೀತಿಯಲ್ಲಿ ಹಾಗೂ ಅದಕ್ಕೆ ವಿರುದ್ಧ ಸಂದೇಶ ಕೊಡದ ರೀತಿಯಲ್ಲಿ ಸಂವಹನಗೊಳ್ಳಬೇಕು.

ಎಷ್ಟೋ ಸಾರಿ ನಾವು ಬಯಸದ ಅರ್ಥವನ್ನು ನಮ್ಮ ಸಂದೇಶ ನೀಡಬಹುದು. ಹೆಚ್ಚಾಗಿ ಅಶಾಬ್ದಿಕ ಸಂವಹನದಲ್ಲಿ ಇದಾಗುತ್ತದೆ. ಸಂದರ್ಶನಗಳಲ್ಲಿ ಹೀಗೆ ಆಗುವ ಸಾಧ್ಯತೆ ಹೆಚ್ಚು. ನೀವು ಹೇಳುತ್ತಿರುವುದು ಒಂದು ಹಾಗೂ ನಿಮ್ಮ ಮುಖದಲ್ಲಿ ವ್ಯಕ್ತವಾಗುತ್ತಿರುವ ಭಾವ ಇನ್ನೊಂದು ಆದರೆ, ಅಂಥ ಸಂದರ್ಭದಲ್ಲಿ ಅಶಾಬ್ದಿಕ ಸಂವಹನವೇ ಹೆಚ್ಚು ವಿಶ್ವಾಸಾರ್ಹವೆನಿಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಸಂದರ್ಶನಗಳಲ್ಲಿ ನಿಮ್ಮ ಉತ್ತರಕ್ಕೂ ಹಾವಭಾವಕ್ಕೂ ತಾಳಮೇಳವಿರದಿದ್ದರೆ ಸಂದರ್ಶಕರಿಗೆ ನಿಮ್ಮ ಮುಖಚರ್ಯೆಯೇ ಹೆಚ್ಚು ವಿಶ್ವಾಸಾರ್ಹವಾಗಿ ಕಾಣುತ್ತದೆ.

ಸಂವಹನದ ಸಾಧ್ಯತೆಗಳನ್ನು ಅರಿತ ಕೆಲವು ಬುದ್ಧಿವಂತರು ಒಳ್ಳೆಯ ಸಂವಹನ ತಮ್ಮ ಎಲ್ಲಾ ನ್ಯೂನತೆಗಳನ್ನೂ ಮರೆಸಬಲ್ಲದು ಎಂದು ಭಾವಿಸುತ್ತಾರೆ. ಆದರೆ, ಸಂವಹನದ ಮೇಲೆ ಅತಿಯಾದ ಅವಲಂಬನೆ ಕೂಡಾ ಒಳ್ಳೆಯದಲ್ಲ. ಮೂಲತಃ ನಿಮ್ಮಲ್ಲಿ ಪ್ರಶ್ನೆಗಳಿಗೆ ಸರಿಯಾದ ಉತ್ತರವಿದ್ದರೆ ಸಂವಹನವು ಈ ಸರಿಯುತ್ತರಗಳನ್ನು ಯುಕ್ತರೀತಿಯಲ್ಲಿ ಪರೀಕ್ಷಕರಿಗೆ ತಲುಪಿಸುವ ಕೆಲಸ ಮಾಡಬಹುದು. ನಿಮ್ಮ ಉತ್ತರ ತಪ್ಪಾಗಿದ್ದರೆ ಒಳ್ಳೆಯ ಸಂವಹನ ತಪ್ಪನ್ನೇ ಎತ್ತಿ ತೋರುತ್ತದೆ!

ಕೆಲವು ಸಾರಿ ವಿದ್ಯಾರ್ಥಿಗಳು ಪರೀಕ್ಷಕರು ಓದಲು ಸಾಧ್ಯವೇ ಆಗಬಾರದು ಎಂಬ ರೀತಿಯ ಅಕ್ಷರಗಳನ್ನು ಬರೆಯುತ್ತಾರೆ. ಉತ್ತರಪತ್ರಿಕೆಯನ್ನು ನೋಡಿದಾಗಲೇ ಅರ್ಥವಾಗುತ್ತದೆ, ಇದು ಅರ್ಥವಾಗಬಾರದು ಅಂತಲೇ ಬರೆದ ಉತ್ತರ ಎಂಬುದಾಗಿ! ಅಂಥ ಉತ್ತರಗಳ ಒಂದು ಒಳ್ಳೆಯ ಅಂಶವೆಂದರೆ ನೀವು ಏನು ಬರೆದಿದ್ದೀರೆಂದು ಪರೀಕ್ಷಕರಿಗೆ ಓದಲು ಸಾಧ್ಯವಾಗದೇ ಅಂದಾಜಿನ ಮೇಲೆ ಅಂಕಹಾಕಬೇಕಾಗುತ್ತದೆ! ಬದಲಾಗಿ ನಿಮ್ಮ ಅಕ್ಷರಗಳು ಮುದ್ದಾಗಿದ್ದಾಗ ನೀವು ತಪ್ಪು ಬರೆದದ್ದು ಕೂಡಾ ಎದ್ದು ಕಾಣುತ್ತದೆ. ಆಗ ಅಂದಾಜಿನ ಮೇಲೆ ಅಂಕ ಹಾಕುವ ಸಾಧ್ಯತೆಯೇ ಇರುವುದಿಲ್ಲ. ಉತ್ತರ ಸರಿಯಾಗಿದ್ದರೆ ಒಂದೋ ನಿಮಗೆ ಪೂರ್ಣಾಂಕ ಬರುತ್ತದೆ ಅಥವಾ ಉತ್ತರ ಅಸಂಬದ್ಧವೆಂದು ದೃಢವಾದರೆ ಸೊನ್ನೆಯೇ ಗತಿಯಾಗುತ್ತದೆ. ನಿಮ್ಮ ಹೂರಣ ತಪ್ಪಾಗಿದ್ದಾಗ ಒಳ್ಳೆಯ ಸಂವಹನವೇ ಕೈಕೊಡುವ ಸಾಧ್ಯತೆಯೂ ಪರೀಕ್ಷೆಗಳಲ್ಲಿರುವುದರ ಬಗ್ಗೆ ಎಚ್ಚರಿಸಿದೆ ಅಷ್ಟೇ.

ಅಂದರೆ ಒಳ್ಳೆಯ ಸಂವಹನ ನಮ್ಮ ಎಲ್ಲಾ ತಪ್ಪುಗಳಿಗೂ ಔಷಧವೆಂದು ಭಾವಿಸಲಾಗದು. ಪರೀಕ್ಷೆಗಳಲ್ಲಿ ನಮ್ಮ ಅಜ್ಞಾನವನ್ನು ಒಳ್ಳೆಯ ಸಂವಹನ ಮುಚ್ಚಿಹಾಕಲಾರದು. ಬದಲಾಗಿ ನಿಮಗೆ ಉತ್ತರ ಗೊತ್ತಿರದಿದ್ದರೆ ಅಥವಾ ಗೊತ್ತಿರುವ ಉತ್ತರ ತಪ್ಪಾದರೆ ಸಂವಹನವೇ ಮುಳುವಾಗುವ ಸಾಧ್ಯತೆಯಿರುತ್ತದೆ!

ನಿಮ್ಮ ಸಂವಹನ ನಿಮ್ಮನ್ನು ಗೆಲ್ಲಿಸಬೇಕು. ಅದಕ್ಕೆ ಮೂಲತಃ ನಿಮ್ಮ ಜ್ಞಾನದ ಮಟ್ಟ ಎತ್ತರದಲ್ಲಿ ಬೇಕು, ಅದಕ್ಕೆ ಪೂರಕ ಸಂವಹನವಿರಬೇಕು. ಒಂದಿದ್ದು ಇನ್ನೊಂದು ಇಲ್ಲದಿದ್ದರೆ ಪರಿಣಾಮ ನಿರೀಕ್ಷಿತ ರೀತಿ ಇರಲಾರದು!

(ಲೇಖಕರು: ಸಂವಹನ ಪ್ರಾಧ್ಯಾಪಕರು ಮತ್ತು ಕುಲಪತಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT