ಬುಧವಾರ, ಜೂನ್ 29, 2022
25 °C

ಸ್ಪರ್ಧಾತ್ಮಕ ಪರೀಕ್ಷೆ: ಭಾಷೆ, ವಿಷಯ ಪ್ರಸ್ತುತಿಗೆ ಪತ್ರಿಕೆ ಓದಿ

ಮಾಲಾ Updated:

ಅಕ್ಷರ ಗಾತ್ರ : | |

Prajavani

ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವವರದು ಒಂದು ಆಕ್ಷೇಪ. ಅದೇನು ಅಂತ ಬರೀತಾರೋ, ವಿಷಯ ಮಂಡನೆಯ ಚಾತುರ್ಯ, ಭಾಷಾ ಬಳಕೆಯ ಔಚಿತ್ಯ ಸಪ್ಪೆಸಪ್ಪೆ. ಉತ್ತರಗಳು ಕೇವಲ ಮಾಹಿತಿಯನ್ನು ತುರುಕಿದಂತೆ ಇರುತ್ತದೆ ಎಂಬ ಸಂಗತಿ ಅವರನ್ನು ಖಾಸಗಿಯಾಗಿ ಮಾತನಾಡಿಸಿದಾಗ ವ್ಯಕ್ತವಾಗುತ್ತಿರುತ್ತದೆ.

ಈ ಮಾತಿನ ಚುಂಗು ಹಿಡಿದು ವಿಚಾರ ಮಾಡಿದಾಗ ಮಕ್ಕಳನ್ನು ಬೆಳೆಸುವ, ಭಾಷೆಯನ್ನು ಕಲಿಸುವ ಹಂತದಲ್ಲಿ ಆಗಿರುವ ಲೋಪಗಳೇ ಇದಕ್ಕೆ ಕಾರಣ ಇರಬಹುದು ಎನಿಸದಿರದು. ಪತ್ರಿಕೆಗಳು ಬರುವ ಮನೆಗಳಲ್ಲಿ ಸಹಜವಾಗಿಯೇ ಓದುವ ಆಸಕ್ತಿ ಬೆಳೆಯುತ್ತದೆ. ಸಣ್ಣ ಸುದ್ದಿ, ಕಥೆ, ಸಂಪಾದಕೀಯ ಓದುವ ಮೂಲಕ ಸಿದ್ಧವಾಗುವ ಮನಸ್ಸು ಮುಂದಿನ ದಿನಗಳಲ್ಲಿ ಸಾಹಿತ್ಯ ಕೃತಿಗಳನ್ನು ಅಥವಾ ಸಾಮಾಜಿಕ ಪುಸ್ತಕಗಳನ್ನು ಓದಿ ಅರ್ಥೈಸಿಕೊಳ್ಳುವ ಮಟ್ಟಕ್ಕೆ ವಿಕಸಿತಗೊಳ್ಳುತ್ತದೆ. ಕೇವಲ ಕಲಾ ನಿಕಾಯಕ್ಕೆ ಮಾತ್ರವಲ್ಲ, ವಿಜ್ಞಾನದಲ್ಲಿ ಆಸಕ್ತಿ ಇರುವವರಿಗೂ ಸಮಕಾಲೀನ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ಪತ್ರಿಕೆಗಳ ಓದು ಅತ್ಯುತ್ತಮ ಮಾರ್ಗ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಆರಂಭಿಸುವ ಹಲವರು ಕೇಳಿಸಿಕೊಳ್ಳುವ ಮೊದಲ ಮಾತು ‘ಪತ್ರಿಕೆಗಳನ್ನು ಓದಬೇಕು’ ಎನ್ನುವುದೇ ಆಗಿರುತ್ತದೆ. ಆದರೆ ಬಹುತೇಕರದ್ದು ಯುದ್ಧಕಾಲೇ ಶಸ್ತ್ರಾಭ್ಯಾಸ. ಇಂಥವರು ಮಾಹಿತಿಗಳನ್ನು ಸಂಗ್ರಹಿಸಬಹುದು. ಆದರೆ ಬಾಲ್ಯದಿಂದಲೇ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡವರಲ್ಲಿ ಇರುವಷ್ಟು ಭಾಷಾಬಳಕೆಯ ಸಾಮರ್ಥ್ಯ ಮತ್ತು ವಿಷಯ ವಿಶ್ಲೇಷಣೆ, ಮಂಡನೆಯ ಚಾತುರ್ಯ ಬೆಳೆಯುವುದಿಲ್ಲ.

ದಿನಪತ್ರಿಕೆಗಳ ಓದು ನನ್ನ ಹಿಂದಿನ ಮತ್ತು ಇಂದಿನ ಬದುಕಿನ ಭಾಗವೇ ಆಗಿದೆ. ಅಮ್ಮನಾದ ನಾನು ಪತ್ರಿಕೆಗಳನ್ನು ಓದುವಾಗ ಮಕ್ಕಳು ಅರ್ಥವಾಗಲಿ ಬಿಡಲಿ ನನ್ನೆದುರು ಕೂತು ಓದಲು ಪ್ರಯತ್ನಿಸುತ್ತಾರೆ. ಅವರಿಗಿಷ್ಟವಾದ ಚಿತ್ರಗಳ ಬಗ್ಗೆ ವಿವರ ಕೇಳುತ್ತಾರೆ. ಹೀಗೆ ಆಟದ ಜೊತೆಗೆ ಸಾಮಾನ್ಯ ಜ್ಞಾನದ ಪಾಠವೂ ನಮ್ಮ ಮನೆಯಲ್ಲಿ ನಡೆಯುತ್ತಿರುತ್ತದೆ. ನನ್ನ ಮಕ್ಕಳು ಐಎಎಸ್‌ ಮಾಡಬೇಕು ಎನ್ನುವ ಆಸೆ ನನಗಿದೆ. ಅದಕ್ಕೆ ದಿನಪತ್ರಿಕೆಗಳಿಗಿಂತಲೂ ಒಳ್ಳೆಯ ಬುನಾದಿ ಬೇರೆ ಯಾವುದೂ ಇಲ್ಲ ಎಂದು ಬಲ್ಲವರು ಮಾರ್ಗದರ್ಶನ ಮಾಡಿದ್ದಾರೆ.

ದಿನಪತ್ರಿಕೆಗಳನ್ನು ಓದಲೇಬೇಕೆಂಬ ನನ್ನ ನಂಬಿಕೆಗೆ ಇಂಬುಕೊಟ್ಟ ಎರಡು ಅಂಶಗಳನ್ನು ಇಲ್ಲಿ ಹಂಚಿಕೊಳ್ಳಬೇಕು ಎನಿಸುತ್ತಿದೆ. ನಿಮಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಸಕ್ತಿಯಿದ್ದರೆ ಸಹಜವಾಗಿಯೇ ಜುನೈದ್ ಅಹಮದ್ ಅವರ ಹೆಸರು ಕೇಳಿರುತ್ತೀರಿ. 2018ರ ಐಎಎಸ್ ಪರೀಕ್ಷೆಯಲ್ಲಿ 3ನೇ ರ‍್ಯಾಂಕ್ ಪಡೆದ ಸಾಧಕರು ಅವರು. ‘ಹೌ ಟು ರೀಡ್ ನ್ಯೂಸ್‌ಪೇಪರ್ (How to Read News Paper)’ ಎಂಬ ಅವರ ವಿಡಿಯೊ ಯುಟ್ಯೂಬ್‌ನಲ್ಲಿದೆ. ಸುಮಾರು 19 ಲಕ್ಷ ವೀಕ್ಷಣೆ ಗಳಿಸಿರುವ 15 ನಿಮಿಷಗಳ ಈ ವಿಡಿಯೊ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವವರು ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ದಿನಪತ್ರಿಕೆಗಳನ್ನು ಹೇಗೆ ಓದಬೇಕು ಎಂಬ ಬಗ್ಗೆ ಇಣುಕುನೋಟ ನೀಡುತ್ತದೆ.

ದಿನಪತ್ರಿಕೆಗಳ ಪ್ರಾಮುಖ್ಯವನ್ನು ವಿವರಿಸುವ ಇದೇ ರೀತಿಯ ಮತ್ತೊಂದು ಯುಟ್ಯೂಬ್‌ ವಿಡಿಯೊ ರೌನಕ್ ಓಂಕಾರ್ ಅವರ ನ್ಯೂಸ್‌ಪೇಪರ್ ಬ್ಯುಸಿನೆಸ್. 1ಗಂಟೆ 15 ನಿಮಿಷದ ಈ ಸುದೀರ್ಘ ವಿಡಿಯೊದಲ್ಲಿ ಪತ್ರಿಕಾಲೋಕದ ಆಗುಹೋಗುಗಳನ್ನು ಚರ್ಚಿಸುವ ಜೊತೆಗೆ ಪತ್ರಕರ್ತರು ಮತ್ತು ಪತ್ರಿಕೆಗಳ ಪ್ರಾಮುಖ್ಯವನ್ನು ಅವರು ವಿವರಿಸಿದ್ದಾರೆ.  

ದಿನಪತ್ರಿಕೆಗಳನ್ನು ಸಾಮಾನ್ಯ ಜನರು ಓದುವ ಕ್ರಮ ಬೇರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವವರು ಓದುವ ಕ್ರಮ ಬೇರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿರುವವರು ಈ ಅಂಶಗಳನ್ನು ಗಮನಿಸಿ.

ಪ್ರತಿದಿನ ದಿನಪತ್ರಿಕೆ ಓದಿ. ಅಕಸ್ಮಾತ್ ಒಂದು ದಿನ ಓದಲು ಆಗದಿದ್ದರೆ ಮಾರನೆಯ ದಿನವಾದರೂ ಸರಿ, ಪತ್ರಿಕೆ ಓದುವುದನ್ನು ತಪ್ಪಿಸಬೇಡಿ.

ಒಂದು ಕನ್ನಡ ಮತ್ತು ಒಂದು ಇಂಗ್ಲಿಷ್ ಪತ್ರಿಕೆಯನ್ನು ಓದುವುದನ್ನು ರೂಢಿಸಿಕೊಳ್ಳಿ

ನಾವು ಓದಲು ಆರಿಸಿಕೊಳ್ಳುವ ಪತ್ರಿಕೆಗಳು ವಿಶ್ವಾಸಾರ್ಹವಾಗಿರಬೇಕು. ತಲಸ್ಪರ್ಶಿ ಅಧ್ಯಯನಕ್ಕೆ ಒತ್ತುಕೊಡುವ ಬರಹಗಳು ಹೆಚ್ಚಿನ ಸಂಖ್ಯೆಯಲ್ಲಿರಬೇಕು. 

ಸಂಪಾದಕೀಯ ಪುಟದ ಎಲ್ಲ ಬರಹಗಳನ್ನೂ ಓದಿ. ಈ ಬರಹಗಳು ವಿಷಯವನ್ನು ಆಳವಾಗಿ ಪರಿಶೀಲಿಸುವುದಲ್ಲದೆ, ಭಾಷಾ ಬಳಕೆಯ ಬಿಗಿ, ವಿಷಯ ಮಂಡನೆಯ ಕ್ರಮ ಅರಿತುಕೊಳ್ಳಲು ನೆರವಾಗುತ್ತದೆ.

ಸಂಪಾದಕೀಯ ಪುಟದ ನಂತರ ಪುರವಣಿ ಬರಹಗಳನ್ನು ಗಮನಿಸಿ. ಇಲ್ಲಿಯೂ ವಿಷಯ ಶೋಧನೆ ಮತ್ತು ಭಾಷಾ ಬಳಕೆಯ ದೃಷ್ಟಿಯಿಂದ ಹಲವು ಅನುಕೂಲಗಳಿವೆ.

ರಾಜಕೀಯಕ್ಕಿಂತಲೂ ಸರ್ಕಾರದ ಯೋಜನೆಗಳು, ಹೊಸ ಕಾಯ್ದೆಗಳು, ವ್ಯಾಪಾರ, ವಿಜ್ಞಾನ, ಕ್ರೀಡಾ ಕ್ಷೇತ್ರದ ಪ್ರಚಲಿತ ವಿದ್ಯಮಾನಗಳಿಗೆ ಹೆಚ್ಚು ಮಹತ್ವ ಕೊಡಿ. ಪರೀಕ್ಷೆಗಳ ದೃಷ್ಟಿಯಿಂದ ಜಿಯೊ ಪಾಲಿಟಿಕ್ಸ್‌ ವಿಚಾರದಲ್ಲಿ ಅಪ್‌ಡೇಟ್ ಆಗುವುದು ಅತ್ಯಗತ್ಯ.

ದಿನಪತ್ರಿಕೆಗಳನ್ನು ಆಸಕ್ತಿಯಿಂದ ಓದುವ ಇತರ ಗೆಳೆಯರೊಂದಿಗೆ ಸಂಪರ್ಕದಲ್ಲಿರಿ, ದಿನದ ವಿದ್ಯಮಾನಗಳನ್ನು ಚರ್ಚಿಸಿ. ಇದರಿಂದ ವಿಷಯಗಳು ಮನದಟ್ಟಾಗಲು ಅನುಕೂಲವಾಗುತ್ತದೆ

ಪ್ರಚಲಿತ ವಿದ್ಯಮಾನಗಳ ಬಗ್ಗೆ ಒಂದು ಡೈರಿ ನಿರ್ವಹಿಸಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು