ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಕ್ಷೇತ್ರದಲ್ಲಿ ಅವಕಾಶ ಕೌಶಲದೊಂದಿಗೆ ವೃತ್ತಿ ಜ್ಞಾನವೂ ಇರಲಿ

Last Updated 12 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಕೊರೊನಾ ಎನ್ನುವುದು ಒಬ್ಬೊಬ್ಬರ ಜೀವನದಲ್ಲಿ ಒಂದೊಂದು ರೀತಿಯ ಬದಲಾವಣೆಗೆ ಕಾರಣವಾಗಿದೆ, ಇದಕ್ಕೆ ವಿದ್ಯಾರ್ಥಿಗಳೂ ಹೊರತಾಗಿಲ್ಲ. ಕಳೆದ ಎರಡು ವರ್ಷಗಳಿಂದ ಶಾಲೆ ಹಾಗೂ ಕಾಲೇಜುಗಳ ಬಾಗಿಲು ತೆರೆಯಲು ಸಾಧ್ಯವಾಗಿರಲಿಲ್ಲ. ಆನ್‌ಲೈನ್ ತರಗತಿಗಳು ನಡೆಯುತ್ತಿದ್ದರೂ ಹಲವು ಸಮಸ್ಯೆಗಳಿಂದ ವಿದ್ಯಾರ್ಥಿಗಳಿಗೆ ತೊಡಕಾಗಿದ್ದೇ ಹೆಚ್ಚು, ಈ ನಡುವೆ ವಿದ್ಯಾರ್ಥಿಗಳು ಹಿಂದೆ ಕಲಿತಿದ್ದನ್ನೆಲ್ಲಾ ಮರೆತು ಬಿಟ್ಟಿದ್ದಾರೆ. ಆ ಕಾರಣಕ್ಕೆ ವಿದ್ಯಾರ್ಥಿಗಳಲ್ಲಿ ಹಿಂದಿನ ಪಾಠಗಳನ್ನು ನೆನೆಪಿಸಲು ಹಾಗೂ ಹೊಸ ಹೊಸ ಕೌಶಲಗಳನ್ನು ರೂಢಿಸಿಕೊಳ್ಳಲು ವಿದ್ಯಾಸಂಸ್ಥೆಗಳು ಸೇತುಬಂಧದಂತಹ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಪ್ರಸ್ತುತ ಉದ್ಯಮರಂಗ ಬಯಸುವ ಹೊಸ ಕೌಶಲಕ್ಕೆ ಸಂಬಂಧಿಸಿದ ಕೋರ್ಸ್‌ಗಳನ್ನು ಕಾಲೇಜುಗಳು ಪರಿಚಯಿಸುತ್ತಿವೆ. ಆ ಮೂಲಕ ವಿದ್ಯಾರ್ಥಿಗಳಲ್ಲಿ ಉದ್ಯೋಗಕ್ಕೆ ಸೇರಲು ನೆರವಾಗುವಂತೆ ಮಾಡುತ್ತಿವೆ. ಈಗಿನ ತಂತ್ರಜ್ಞಾನಕ್ಕೆ ತಕ್ಕಂತಹ ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ರೂಢಿಸುವುದು ವಿದ್ಯಾಸಂಸ್ಥೆಗಳ ಹೊಣೆಯಾದರೆ, ಹೊಸ ಹೊಸ ಕೌಶಲಗಳನ್ನು ರೂಢಿಸಿಕೊಳ್ಳುವುದು ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ.

ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳು ತಮ್ಮ ಪಠ್ಯಕ್ರಮದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿವೆ. ಪ್ರಸ್ತುತ ವಿದ್ಯಮಾನಕ್ಕೆ ಹೊಂದುವಂತಹ ಅದ್ಯಯನ ಕ್ರಮಗಳನ್ನು ಪ್ರಾಧ್ಯಾಪಕರು ರೂಢಿಸಿಕೊಂಡಿದ್ದಾರೆ. ಆ ಮೂಲಕ ವಿದ್ಯಾರ್ಥಿಗಳಿಗೂ ಕಲಿಸಲು ಯತ್ನಿಸುತ್ತಿದ್ದಾರೆ.

ಆಟೊಮೇಷನ್, ರೋಬೊಟೈಜೇಷನ್, ಕೃತಕ ಬುದ್ಧಿಮತ್ತೆ ಈ ವಿಷಯಗಳಿಗೆ ಹೆಚ್ಚು ಪ್ರಾಧಾನ್ಯ ನೀಡುತ್ತಿವೆ. ಇಂದಿನ ಉದ್ಯೋಗಕ್ಷೇತ್ರದಲ್ಲಿ ಬೇಡಿಕೆ ಹೆಚ್ಚಿಸಿಕೊಂಡು ಸ್ಥಿರತೆ ಕಾಪಾಡಿಕೊಳ್ಳಲು ವಿದ್ಯಾರ್ಥಿಗಳು ಈ ಕೆಲವು ಕೌಶಲಗಳನ್ನು ರೂಢಿಸಿಕೊಳ್ಳುವುದು ಅನಿವಾರ್ಯವಾಗಿದೆ.

ವಾಣೀಜೋದ್ಯಮದ ಅರಿವು

ಉದ್ಯಮ ಕ್ಷೇತ್ರಕ್ಕೆ ಕಾಲಿಡ ಬಯಸುವವರು ಚಾಣಕ್ಷರಾಗಿರಬೇಕು ಎಂಬ ಕಾಲವಿತ್ತು. ಆದರೆ ಇಂದು ಉದ್ಯಮಿಗಳು ಮಾತ್ರ ವ್ಯಾಪಾರ ಚಾಣಾಕ್ಷತೆಯನ್ನು ಹೊಂದಿರಬೇಕು ಎನ್ನುವ ಹಾಗಿಲ್ಲ. ಪ್ರತಿಯೊಬ್ಬರೂ ಉದ್ಯಮ ಕ್ಷೇತ್ರದ ಕುರಿತು ಚಾಣಾಕ್ಷತೆ ಹಾಗೂ ಸಂಪೂರ್ಣ ಜ್ಞಾನವನ್ನು ಹೊಂದುವುದು ಅವಶ್ಯವಾಗಿದೆ. ಒಂದು ಸಂಸ್ಥೆಯನ್ನು ಯಶಸ್ಸಿನತ್ತ ಕೊಂಡ್ಯೊಯಲು ಬೇಕಾಗುವ ಮಾರ್ಗಗಳನ್ನು ಯೋಚಿಸುವ ಕೌಶಲವೂ ಬೇಕು. ಮ್ಯಾನೇಜ್‌ಮೆಂಟ್ ಪದವೀಧರರು ತಾವು ಆಯ್ಕೆ ಮಾಡಿಕೊಂಡ ಉದ್ಯೋಗದ ಬಗ್ಗೆ ಅರ್ಥಮಾಡಿಕೊಳ್ಳಲು ಜಾಣ್ಮೆ ಬೆಳೆಸಿಕೊಳ್ಳಬೇಕು.

ಡಿಜಿಟಲ್ ಜ್ಞಾನ

ಸಾಮಾಜಿಕ ಜಾಲತಾಣಗಳ ಬಳಕೆ ಎನ್ನುವುದು ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಸಾಮಾನ್ಯ ಎಂಬಂತಾಗಿದೆ. ಅದರಲ್ಲೂ ಯುವಜನರು ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ನಿಪುಣರು. ಇದು ಸದ್ಯದ ಉದ್ಯೋಗರಂಗಕ್ಕೆ ವರದಾನವೂ ಹೌದು. ಡಿಜಿಟಲ್ ಮಾಧ್ಯಮಗಳ ಕುರಿತು ಆಳವಾಗಿ ತಿಳಿದುಕೊಂಡವರಿಗೆ ಉದ್ಯೋಗರಂಗದಲ್ಲಿ ಬೇಡಿಕೆ ಹೆಚ್ಚು. ಉದ್ಯಮ ಕ್ಷೇತ್ರದ ಒಟ್ಟಾರೆ ಬೆಳವಣಿಗೆ ಹಾಗೂ ಯಶಸ್ಸಿಗೆ ಸಾಮಾಜಿಕ ಜಾಲತಾಣವು ಒಂದು ಪ್ರಮುಖ ಅಸ್ತ್ರ ಎಂದರೆ ತಪ್ಪಾಗಲಿಕ್ಕಿಲ್ಲ. ಇದು ಉದ್ಯಮರಂಗದಲ್ಲಿ ನೆಲೆಯೂರಲು ಸಹಾಯ ಮಾಡುವುದು ಸುಳ್ಳಲ್ಲ.

ಸಂವಹನ ಕಲೆ

ಸಂವಹನ ಕಲೆ ಎನ್ನುವುದು ಉದ್ಯೋಗಕ್ಕೆ ಸೇರಬಯಸುವ ಪ್ರತಿಯೊಬ್ಬರಿಗೂ ಬಹಳ ಅವಶ್ಯ. ಯಾವುದೇ ವಯಸ್ಸು, ಕ್ಷೇತ್ರವಾಗಲಿ ಪರಿಣಾಮಕಾರಿ ಸಂವಹನ ಎನ್ನುವುದು ತುಂಬಾ ಮುಖ್ಯ, ಪರಿಣಾಮಕಾರಿ ಸಂವಹನದಿಂದ ಉದ್ಯೋಗಾಕಾಂಕ್ಷಿಗಳು ಯಶಸ್ಸು ಗಳಿಸಲು ಸಾಧ್ಯ. ತಮ್ಮ ಸಂವಹನ ಕೌಶಲದಿಂದ ಸಂಸ್ಥೆಯ ಕುರಿತು ಪ್ರಪಂಚಕ್ಕೆ ತಿಳಿಸಲು ಸಾಧ್ಯವಾಗುತ್ತದೆ. ಉತ್ತಮ ಸಂವಹನವೇ ಸಂದರ್ಶನಗಳಲ್ಲಿ ಪ್ಲಸ್ ಪಾಯಿಂಟ್ ಆಗಿರುತ್ತದೆ.

ಗುಂಪಿನಲ್ಲಿ ಕೆಲಸ ಮಾಡುವುದು

ಟೀಮ್ ಲೀಡರ್ ಅಥವಾ ಒಂದು ತಂಡದ ನಾಯಕ ಎನ್ನಿಸಿಕೊಳ್ಳುವುದು ಸುಲಭದ ಮಾತಲ್ಲ. ಗುಂಪಿನಲ್ಲಿ ಕೆಲಸ ಮಾಡುವುದು ಹಾಗೂ ಮಾಡಿಸುವುದು ಕೂಡ ಒಂದು ಕಲೆ. ಸಂಸ್ಥೆ ಏನು ಬಯಸುತ್ತದೆ ಎನ್ನುವುದನ್ನು ಗುಂಪಿನಲ್ಲಿ ಸೇರಿ ಕೆಲಸ ಮಾಡಿ ತೋರಿಸುವುದು ನಿಜಕ್ಕೂ ಸವಾಲು. ಹಾಗಾಗಿ ಗುಂಪಿನಲ್ಲಿ ಕೆಲಸ ಮಾಡುವ ಕೌಶಲವನ್ನೂ ರೂಢಿಸಿಕೊಳ್ಳಬೇಕು. ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ಗುಂಪಿನಲ್ಲಿ ಕೆಲಸ ಮಾಡುವುದು ಹಾಗೂ ಮಾಡಿಸುವುದು ಈ ಎರಡರ ಕುರಿತೂ ಆಳವಾದ ಜ್ಞಾನ ಹೊಂದಿರಬೇಕು.

ಸಮಸ್ಯೆಗೆ ಪರಿಹಾರ

ಯಾವುದೇ ಉದ್ಯೋಗಕ್ಷೇತ್ರದಲ್ಲಿ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಅದಕ್ಕೆ ಪರಿಹಾರ ಕಂಡುಕೊಳ್ಳುವ ಮಾರ್ಗ ಹುಡುಕುವಂತಹ ಮನೋಭಾವವುಳ್ಳವರನ್ನು ಕ್ಷೇತ್ರ ಹೆಚ್ಚು ಬಯಸುತ್ತದೆ. ತಮ್ಮ ಸಮಸ್ಯೆಯ ಪರಿಹಾರಕ್ಕೆ ಬೇರೆಯವರನ್ನು ಅವಲಂಬಿಸದೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಕೌಶಲ ಹೊಂದಿರುವುದು ಅಗತ್ಯವಾಗಿದೆ.

(ಪೂರಕ ಮಾಹಿತಿ: ಪ್ರೊ. ಎಸ್‌.ಕೆ. ಜಾರ್ಜ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT