ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ: ಉತ್ತರಿಸುವ ತಂತ್ರ ಉತ್ಕೃಷ್ಟವಿರಲಿ

Last Updated 10 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಗ್ರೂಪ್-ಸಿ ತಾಂತ್ರಿಕೇತರ ಹುದ್ದೆಗಳಿಗೆ ಪರೀಕ್ಷೆ ಡಿ.4ರಿಂದ ನಡೆಯಲಿದ್ದು, ಸ್ಪರ್ಧಾರ್ಥಿಗಳು ಪುನರ್‌ಮನನದತ್ತ ಗಮನ ಹರಿಸಬಹುದು. ಹಾಗೆಯೇ ಪರೀಕ್ಷಾ ತಂತ್ರವನ್ನೂ ರೂಪಿಸಿಕೊಳ್ಳಬಹುದು.

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ವು 523 ಗ್ರೂಪ್-ಸಿ ತಾಂತ್ರಿಕೇತರ ಹುದ್ದೆಗಳಿಗೆ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಇದರ ಅನುಸಾರ ಪದವಿ ಮಟ್ಟದ ವಿದ್ಯಾರ್ಹತೆಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಇದೇ ಡಿಸೆಂಬರ್‌ 5ರಂದು, ಪದವಿಗಿಂತ ಕೆಳಮಟ್ಟದ ವಿದ್ಯಾರ್ಹತೆಯ ಪರೀಕ್ಷೆಯನ್ನು ಡಿ.19ರಂದು ಹಾಗೂ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ಡಿ.4ರಂದು ನಡೆಸಲು ತೀರ್ಮಾನಿಸಿದೆ. ಅಧಿಸೂಚನೆ ಹೊರಡಿಸಿದ ದಿನದಿಂದ ಇಲ್ಲಿಯವರೆಗೂ ಸಹಜವಾಗಿಯೇ ಅಭ್ಯಾಸ ನಡೆಸಲು ಸಾಕಷ್ಟು ಸಮಯಾವಕಾಶ ದೊರಕಿದೆ. ಸದ್ಯ ಈಗ ಉಳಿದಿರುವ ಸಮಯದಲ್ಲಿ ವಿದ್ಯಾರ್ಥಿಗಳು ಪುನರ್‌ಮನನ ನಡೆಸಬಹುದು.

ಪಠ್ಯಕ್ರಮ ಆಧಾರಿತ ತಯಾರಿ

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇರಲಿ, ಅದರ ಅಧಿಸೂಚನೆ ಹೊರಡಿಸಿದಾಗ ನಾವು ಪರೀಕ್ಷೆ ಬರೆಯಲು ಅರ್ಹರು ಎಂಬುದು ತಿಳಿದ ತಕ್ಷಣ ಮೊದಲು ಅವಲೋಕಿಸಬೇಕಾಗಿರುವುದು ಆ ಪರೀಕ್ಷೆಯ ಪಠ್ಯಕ್ರಮ. ಇದು ವರ್ಷದಿಂದ ವರ್ಷಕ್ಕೆ ಸ್ವಲ್ಪಮಟ್ಟಿಗಾದರೂ ಬದಲಾಗುವ ಸಾಧ್ಯತೆ ಇರುತ್ತದೆ. ಬದಲಾಗದಿದ್ದರೂ ಇದನ್ನು ಅವಲೋಕಿಸಿದಾಗ ಯಾವ ವಿಷಯಕ್ಕೆ ಎಷ್ಟು ಮಹತ್ವ ನೀಡುವುದು ಸೂಕ್ತ ಎಂಬುದು ಸ್ಪಷ್ಟ ವಾಗಿ ತಿಳಿಯುತ್ತದೆ. ಈಗಾಗಲೇ ಇದು ಪುನರಾವರ್ತನೆಯ ಸಮಯವಾಗಿರುವುದರಿಂದ ಸ್ಪರ್ಧಾರ್ಥಿಗಳಿಗೆ ಕಷ್ಟ ಎನಿಸಿದ ಹಾಗೂ ಪರೀಕ್ಷೆಗೆ ಅತಿಮುಖ್ಯ ಎನಿಸುವ ವಿಷಯಗಳತ್ತ ಹೆಚ್ಚು ಗಮನ ಕೊಡುವುದು ಸೂಕ್ತ.

ಪರೀಕ್ಷಾ ವಿಧಾನ ಬಳಸಿಕೊಳ್ಳಿ

ಬ್ಯಾಂಕಿಂಗ್ ಅಥವಾ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಂತೆ ಈ ಪರೀಕ್ಷೆಯಲ್ಲಿ ಪ್ರಿಲಿಮ್ಸ್ ಹಾಗೂ ಮೇನ್ಸ್ ಎಂಬ ಪ್ರತ್ಯೇಕ ಪರೀಕ್ಷೆ ಗಳಿಲ್ಲ. ಬದಲಾಗಿ ಒಂದೇ ದಿನದಲ್ಲಿ

ಪೇಪರ್‌ 1: ಸಾಮಾನ್ಯ ಪತ್ರಿಕೆ : 100 ಅಂಕಗಳು: 1 ಘಂಟೆ 30 ನಿಮಿಷ

ಪೇಪರ್‌ 2: ಸಂವಹನ: 100 ಅಂಕಗಳು: 2 ಘಂಟೆ

ಹೀಗೆ ಎರಡು ಪರೀಕ್ಷೆಗಳು ಸಹ ಒಂದೇ ದಿನ ಜರುಗಲಿವೆ. ಪದವಿ ಮಟ್ಟದ ಹಾಗೂ ಪದವಿಗಿಂತ ಕೆಳಮಟ್ಟದ ಎರಡು ಪರೀಕ್ಷೆಗಳಿಗೂ ಇದೇ ಮಾದರಿ ಅನ್ವಯಿಸಲಿದೆ.

ಈ ವಿಧಾನದಿಂದ ಅನುಕೂಲವೇನೆಂದರೆ ಪ್ರಿಲಿಮ್ಸ್ ಪರೀಕ್ಷೆ ತೇರ್ಗಡೆ ಹೊಂದಿದ ನಂತರ ಮಾತ್ರ ಮೇನ್ಸ್ ಪರೀಕ್ಷೆ ಬರೆಯಲು ಅವಕಾಶ ಎಂಬ ನಿರ್ಬಂಧವಿಲ್ಲ. ಹಾಗಾಗಿ ಈ ಅವಕಾಶವನ್ನು ಸ್ಪರ್ಧಾರ್ಥಿಗಳು ಬಳಸಿಕೊಂಡು ಎರಡು ಪರೀಕ್ಷೆಗಳನ್ನು ಸೂಕ್ತ ತಯಾರಿಯೊಂದಿಗೆ ಅಭ್ಯಾಸ ಮಾಡಿ. ಅಲ್ಲದೆ ತಪ್ಪು ಉತ್ತರಗಳಿಗೆ 0.25 ಋಣಾತ್ಮಕ ಅಂಕಗಳಿವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಿಖರತೆ ಇರುವ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ. ಋಣಾತ್ಮಕ ಅಂಕಗಳಿಗೆ ಎಡೆ ಮಾಡಿಕೊಡದೆ ಅಂಕಗಳನ್ನು ಹೆಚ್ಚಿಸಿಕೊಳ್ಳಿ.

ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸಿ

ಪರೀಕ್ಷೆಗಾಗಿ ಈಗ ಕೇವಲ ಒಂದು ತಿಂಗಳಿಗಿಂತ ಕಡಿಮೆ ಸಮಯ ಉಳಿದಿರುವುದರಿಂದ ಪ್ರತಿನಿತ್ಯ ಕನಿಷ್ಠ ಮೂರರಿಂದ ನಾಲ್ಕು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನಿಗದಿತ ಕಾಲಮಿತಿಯೊಂದಿಗೆ ಬಿಡಿಸಿರಿ. ನಂತರ ಅವುಗಳನ್ನು ಅವಲೋಕಿಸುವುದನ್ನು ಮರೆಯದಿರಿ. ಇದರಿಂದ ನೀವು ಯಾವ ವಿಷಯದಲ್ಲಿ ಪರಿಣಿತಿ ಹೊಂದಿರುವಿರಿ ಹಾಗೂ ಯಾವ ವಿಷಯದಲ್ಲಿ ದೌರ್ಬಲ್ಯ ಇದೆ ಎಂಬುದನ್ನು ಕೊನೆಯ ಈ ಕ್ಷಣದಲ್ಲಿ ಸುಲಭವಾಗಿ ತಿಳಿದುಕೊಳ್ಳಬಹುದು. ದೌರ್ಬಲ್ಯ ಇರುವ ಅತಿಮುಖ್ಯವಾದ ವಿಷಯಗಳತ್ತ ಹೆಚ್ಚು ಗಮನ ನೀಡಿ ಪುನರಾವರ್ತಿಸಿ ಪರೀಕ್ಷೆಯಲ್ಲಿ ಸುಲಭವಾಗಿ ಅತಿ ಹೆಚ್ಚು ಅಂಕಗಳನ್ನು ಗಳಿಸಬಹುದು.

ಪೂರ್ವ ನಿರ್ಧಾರ ಸಲ್ಲದು

ಪೇಪರ್ 1 ಅಥವಾ ಪೇಪರ್ 2 ಪರೀಕ್ಷೆ ಆಗಿರಲಿ ಕನಿಷ್ಠವಾಗಿ ಇಂತಿಷ್ಟು ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಪೂರ್ವ ನಿರ್ಧಾರ ಮಾಡಿಕೊಂಡು ಉತ್ತರಿಸದಿರಿ. ಕಾರಣ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 0.25 ಋಣಾತ್ಮಕ ಅಂಕಗಳಿವೆ ಎಂಬುದು ಗಮನದಲ್ಲಿರಲಿ. ಪರೀಕ್ಷೆಯ ಕಠಿಣತೆಯ ಮಟ್ಟ ಯಾವ ಹಂತದಲ್ಲಿದೆ ಎಂದು ಮೊದಲೇ ನಿರ್ಧರಿಸಲಾಗದು. ಹಾಗಾಗಿ ಪರೀಕ್ಷೆಯ ಮಟ್ಟ ಕಠಿಣತೆಯಿಂದ ಕೂಡಿದ್ದರೆ ಅಂದಾಜಿನ ಮೇಲೆ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸುವ ಮಾರ್ಗ ಸಲ್ಲದು. ಈ ರೀತಿಯಾದಾಗ ಸಹಜವಾಗಿಯೇ ಕಟಾಫ್ ಕಡಿಮೆ ಇರುತ್ತದೆ ಎಂಬುದು ಗಮನದಲ್ಲಿರಲಿ. ಹಾಗಾಗಿ ನಿಮಗೆ ಸರಿ ಎನಿಸಿದ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ. ಉತ್ತರಿಸುವಲ್ಲಿ ನಿಖರತೆಗೆ ಪ್ರಾಮುಖ್ಯತೆ ಕೊಟ್ಟಾಗ ಸಫಲತೆ ಸಾಧ್ಯ.

ಸಮಯದ ಸದ್ಬಳಕೆ

ಸದ್ಯ ಈ ಪರೀಕ್ಷೆಯ ಅಧಿಸೂಚನೆ ಹೊರಬಿದ್ದು ಒಂದು ವರ್ಷದ ಮೇಲಾಯಿತು. ಹಾಗಾಗಿ ಯಾವ ಸ್ಪರ್ಧಾರ್ಥಿಗಳು ಇದೊಂದೇ ಪರೀಕ್ಷೆಯ ಮೇಲೆ ಕೇಂದ್ರೀಕರಿಸಿ ಅಭ್ಯಾಸ ನಡೆಸಿದ್ದಾರೋ ಅವರು ಮುಂಬರುವ ಒಂದು ತಿಂಗಳಿನಲ್ಲಿ ಪುನರಾವರ್ತನೆ ನಡೆಸಿದಲ್ಲಿ ಉತ್ತೀರ್ಣರಾಗುವುದು ನಿಶ್ಚಿತ.

ಸ್ವಂತ ಪರೀಕ್ಷಾ ತಂತ್ರ ರೂಪಿಸಿಕೊಳ್ಳಿ

ಸಾಮಾನ್ಯವಾಗಿ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪಠ್ಯಾಧಾರಿತ ಪ್ರತ್ಯೇಕ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯ. ಈ ರೀತಿಯ ಪುಸ್ತಕಗಳಿಂದ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೇ ಹೊರತು ಅಧ್ಯಯನಕ್ಕಾಗಿ ಇದರಲ್ಲಿ ಪರೀಕ್ಷೆಗೆ ಪಠ್ಯಕ್ರಮ ಆಧಾರಿತ ಸಂಪೂರ್ಣ ಪ್ರಶ್ನೆಗಳು ಇವೆ ಎಂಬ ನಿರ್ಣಯಕ್ಕೆ ಬಾರದಿರಿ ಹಾಗೂ ಕೇವಲ ಅಂತಹ ಒಂದೇ ಪುಸ್ತಕವನ್ನು ಅವಲಂಬಿಸುವುದು ಒಳ್ಳೆಯದಲ್ಲ. ಕಾರಣ ಪೇಪರ್ 1- ಸಾಮಾನ್ಯ ಪತ್ರಿಕೆ ಇದರಲ್ಲಿ ಪಠ್ಯಕ್ರಮ ಒಂದೇ ಇದ್ದರೂ ಸಹ ನವೀಕರಿಸಿದ ಪ್ರಶ್ನೆಗಳತ್ತ ಗಮನ ಕೊಡುವುದು ಸೂಕ್ತ. ಇವು ನಿಮಗೆ ವಿವಿಧ ಆನ್‌ಲೈನ್‌ ಅಥವಾ ಆಫ್‌ಲೈನ್‌ ಅಧ್ಯಯನ ನಡೆಸಿದಾಗ ಕಾಣಸಿಗುತ್ತವೆ ಹಾಗೂ ಈ ಪ್ರಶ್ನೆಗಳು ಕಾಲಕಾಲಕ್ಕೆ ನವೀಕರಣಗೊಳ್ಳುತ್ತಿರುತ್ತವೆ. ಹಾಗಾಗಿ ನೀವು ಇವುಗಳನ್ನು ಅನುಸರಿಸುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT