ಶುಕ್ರವಾರ, ಮೇ 27, 2022
23 °C
ವೈಫಲ್ಯಕ್ಕೆ ಕಾರಣ ಅರಿತರೆ ಯಶಸ್ಸು ನಿಶ್ಚಿತ

ಯಶಸ್ಸು ನಿಮ್ಮದಾಗಬೇಕೆ? ಈ ತಪ್ಪುಗಳನ್ನು ಮಾಡದಿರಿ

ಚನ್ನಬಸಪ್ಪ ರೊಟ್ಟಿ Updated:

ಅಕ್ಷರ ಗಾತ್ರ : | |

Prajavani

ಇತ್ತೀಚೆಗೆ ಬಹುತೇಕ ಸರ್ಕಾರಿ ಉದ್ಯೋಗಗಳ ನೇಮಕಾತಿಯು ಸ್ಪರ್ಧಾತ್ಮಕ ಪರೀಕ್ಷೆ ಆಧರಿಸಿ ನಡೆಯುತ್ತದೆ. ಆದರೆ, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಲ್ಲಿ ಕೆಲವರು ಮಾತ್ರ ಯಶಸ್ಸು ಸಾಧಿಸಿದರೆ ಹಲವರು ವಿಫಲರಾಗುತ್ತಾರೆ. ಈ ವೈಫಲ್ಯಕ್ಕೆ ಕಾರಣಗಳೇನು ಎಂದು ಅರಿತರೆ ಯಶಸ್ಸು ಕಟ್ಟಿಟ್ಟ ಬುತ್ತಿ.

ಸಾಮಾನ್ಯವಾಗಿ ಎಲ್ಲ ಸ್ಪರ್ಧಾರ್ಥಿಗಳು ಮಾಡುವ ತಪ್ಪುಗಳೆಂದರೆ…

ಪ್ರಕಟಣೆ ಹೊರಬಿದ್ದ ನಂತರ ತಯಾರಿ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ನಿರಂತರ ಅಧ್ಯಯನ ಅಗತ್ಯ. ಬಹುತೇಕ ಸ್ಪರ್ಧಾರ್ಥಿಗಳು ‘ಬೆಂಕಿ ಬಿದ್ದಾಗ ಬಾವಿ ತೋಡಿದರು’ ಎಂಬಂತೆ ನೇಮಕಾತಿ ಪ್ರಕಟಣೆಯ ನಂತರ ಅಧ್ಯಯನದಲ್ಲಿ ತೊಡಗುತ್ತಾರೆ. ಇದರಿಂದ ಪರಿಪೂರ್ಣ ಅಧ್ಯಯನ ಸಾಧ್ಯವಾಗುವುದಿಲ್ಲ.

ಪಠ್ಯಕ್ರಮ ಪರಿಶೀಲಿಸದೇ ಇರುವುದು: ಪ್ರತಿ ಪರೀಕ್ಷೆಗೂ ನಿಗದಿತ ಪಠ್ಯಕ್ರಮ ಇದ್ದೇ ಇರುತ್ತದೆ. ಆದರೆ, ಬಹುತೇಕ ಸ್ಪರ್ಧಾರ್ಥಿಗಳು ಪಠ್ಯಕ್ರಮ ಅರಿಯದೆ ತಮಗೆ ತಿಳಿದುದನ್ನು ತಿಳಿದಂತೆ ಓದುವುದರಿಂದ ಹಿನ್ನಡೆ ಅನುಭವಿಸುತ್ತಾರೆ.

ಉದಾಹರಣೆಗೆ: ಕೆಎಎಸ್, ಪಿಎಸ್ಐ ಮತ್ತು ಎಫ್‌ಡಿಎ ಪಠ್ಯಕ್ರಮದಲ್ಲಿ ಸಾಮಾನ್ಯ ಅಂಶಗಳು ಇದ್ದರೂ ಪ್ರಶ್ನೆಪತ್ರಿಕೆ ತಯಾರಿಕೆಯಲ್ಲಿ ಬಹಳ ವ್ಯತ್ಯಾಸಗಳಿವೆ. ಪಿಎಸ್ಐ / ಎಫ್‌ಡಿಎ ಮಟ್ಟದ ತಯಾರಿ ಮಾಡಿಕೊಂಡವರು ಕೆಎಎಸ್ ಪರೀಕ್ಷೆಯಲ್ಲಿ ಪಾಸಾಗುವುದು ಅಸಾಧ್ಯದ ಮಾತು.

ತಪ್ಪಾದ ಅಧ್ಯಯನ ಸಾಮಗ್ರಿಗಳ ಆಯ್ಕೆ: ಒಳ್ಳೆಯ ಪುಸ್ತಕ ಹಾಗೂ ವೆಬ್ ರೆಫರೆನ್ಸ್ ಆಯ್ಕೆ ಮಾಡುವಲ್ಲಿ ತಪ್ಪು ಮಾಡಿದರೆ ಓದು, ಸಮಯ ವ್ಯರ್ಥವಾಗುತ್ತದೆ. ಈ ನಿಟ್ಟಿನಲ್ಲಿ ಪರೀಕ್ಷೆ ಪಾಸಾದವರು ಅಥವಾ ತಜ್ಞರ ಮಾರ್ಗದರ್ಶನ ಅಗತ್ಯ.

ಮೂಲ ಆಕರಗಳ ನಿರ್ಲಕ್ಷ್ಯ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 5 ರಿಂದ 12ನೇ ತರಗತಿವರೆಗಿನ ರಾಜ್ಯ ಪಠ್ಯಕ್ರಮ, ಎನ್‌ಸಿಇಆರ್‌ಟಿ ಪುಸ್ತಕಗಳು ಮೂಲ ಆಕರಗಳಾಗಿರುತ್ತವೆ. ಈ ಪುಸ್ತಕಗಳನ್ನು ಬಿಟ್ಟು ಬೇರೆ ಪುಸ್ತಕ ಓದುವುದು ಸರಿಯಾದ ಕ್ರಮವಲ್ಲ.

ಪ್ರಶ್ನೆ ಭಂಡಾರ, ಮಾದರಿ ಪ್ರಶ್ನೆಪತ್ರಿಕೆಗಳ ಕಡೆಗಣನೆ: ಆಯಾ ಪರೀಕ್ಷೆಗಳ ಹಿಂದಿನ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ ಪರೀಕ್ಷೆಗಳ ಒಳನೋಟ ಒದಗಿಸಿದರೆ, ಮಾದರಿ ಪ್ರಶ್ನೆಪತ್ರಿಕೆಗಳು ಮುನ್ನೋಟ ಒದಗಿಸುತ್ತವೆ. ಇದರಿಂದ ಯಾವ ವಿಷಯದಲ್ಲಿ ಯಾವ ಪ್ರಶ್ನೆಗಳನ್ನು ಕೇಳಿದ್ದಾರೆ, ಯಾವ ಪ್ರಶ್ನೆ ಕೇಳಬಹುದು ಎಂದು ಊಹಿಸಬಹುದು.

ಬರೆಯದೇ ಓದುವುದು: ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳು ಬರವಣಿಗೆ ಆಧಾರಿತವಾಗಿರುತ್ತವೆ. ಉದಾಹರಣೆಗೆ: ಕೆಎಎಸ್ ಮುಖ್ಯ ಪರೀಕ್ಷೆ, ಪಿಎಸ್ಐ ಪ್ರಥಮ ಪತ್ರಿಕೆಯಲ್ಲಿ ಪ್ರಬಂಧ ಮಾದರಿ ಉತ್ತರ ಬರೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶುದ್ಧ, ವೇಗವಾದ ಬರವಣಿಗೆಯನ್ನು ರೂಢಿಸಿಕೊಳ್ಳಬೇಕು.

ಸ್ಪಸಾಮರ್ಥ್ಯ ಪರಾಮರ್ಶಿಸದೇ ಇರುವುದು: ಎಸ್‌ಡಿಎ ಪರೀಕ್ಷೆ ಪಾಸು ಮಾಡುವ ಸಾಮರ್ಥ್ಯ ಇಲ್ಲದ ವ್ಯಕ್ತಿ ಕೆಎಎಸ್ ಪಾಸಾಗುತ್ತೇನೆ ಎಂದು ಭಾವಿಸಿ, ತಯಾರಿಯಲ್ಲಿ ತೊಡಗುತ್ತಾರೆ. ಇದರಿಂದ ವೇಳೆ, ಶ್ರಮದ ಅಪವ್ಯಯಕ್ಕೆ ಕಾರಣವಾಗುತ್ತದೆ.

ದಿನಪತ್ರಿಕೆಗಳ ಓದಿನಲ್ಲಿ ನಿರ್ಲಕ್ಷ್ಯ: ಕೆಲವರು ಆಕರ ಗ್ರಂಥಗಳ ಓದಿಗೆ ನೀಡುವ ಆದ್ಯತೆಯನ್ನು ದಿನಪತ್ರಿಕೆ ಓದಿಗೆ ನೀಡುವುದಿಲ್ಲ. ದಿನಪತ್ರಿಕೆಗಳಲ್ಲಿನ ಪ್ರಚಲಿತ ವಿದ್ಯಮಾನಗಳ ವರದಿ, ಅಂಕಿ-ಅಂಶಗಳು, ಸಂಪಾದಕೀಯ, ಲೇಖನಗಳು ಪರೀಕ್ಷೆಗೆ ಉಪಯುಕ್ತವಾಗಿವೆ. ಇದನ್ನು ಕಡೆಗಣಿಸಿದರೆ ಪ್ರಚಲಿತ ವಿದ್ಯಮಾನ, ಸಾಮಾನ್ಯ ಅಧ್ಯಯನ ವಿಷಯಗಳಲ್ಲಿ ಹಿನ್ನಡೆಯಾಗುತ್ತದೆ.

ಐಚ್ಛಿಕ ವಿಷಯ ಆಯ್ಕೆಯಲ್ಲಿ ಎಡವಟ್ಟು: ರಾಜ್ಯ ಅಥವಾ ಕೇಂದ್ರ ಲೋಕಸೇವಾ ಆಯೋಗದ ಮುಖ್ಯ ಪರೀಕ್ಷೆಗಳಲ್ಲಿ ತಮ್ಮ ಆಸಕ್ತಿ, ಆಕರ, ಅಧ್ಯಯನ ಆಧರಿಸಿ ಐಚ್ಛಿಕ ವಿಷಯಗಳ ಆಯ್ಕೆ ಮಾಡಿಕೊಳ್ಳದೇ, ತಪ್ಪು ವಿಷಯಗಳನ್ನು ಆಯ್ದುಕೊಂಡರೆ ನಿರೀಕ್ಷಿತ ಅಂಕಗಳಿಕೆ ಅಸಾಧ್ಯ.

ಸಮಯ ನಿರ್ವಹಣೆಯ ಕಡೆಗಣನೆ: ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಯೋಜನಾಬದ್ಧವಾಗಿರಬೇಕು. ಆಳ ಅಧ್ಯಯನ, ನೋಟ್ಸ್ ತಯಾರಿ, ಪುನರ್‌ಮನನಕ್ಕೆ ಸಮರ್ಪಕ ವೇಳೆ ನೀಡಬೇಕು. ಇಲ್ಲದಿದ್ದರೆ, ಇಡೀ ಓದು ವ್ಯರ್ಥವಾಗುತ್ತದೆ.

ಒತ್ತಡ ನಿರ್ವಹಣೆಯಲ್ಲಿ ವೈಫಲ್ಯ: ಪರೀಕ್ಷಾ ಸಮಯದಲ್ಲಿ ಉಂಟಾಗುವ ಒತ್ತಡ ನಿರ್ವಹಿಸುವಲ್ಲಿ ಬಹುತೇಕರು ವಿಫಲರಾಗುತ್ತಾರೆ. ಇದರಿಂದ ಪ್ರತಿಭಾವಂತರು ಅವಕಾಶ ವಂಚಿತರಾಗುತ್ತಾರೆ.

(ಲೇಖಕರು: ನಿರ್ದೇಶಕರು, ಸ್ಲೇಟ್ ಸ್ಪರ್ಧಾತ್ಮಕ
ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ದೀರ್ಘಾವಧಿ ಓದಿನ ನಡುವೆ ವಿರಾಮ ಪಡೆಯಿರಿ

ಕೊನೆಯ ನಿಮಿಷದ ತಯಾರಿ ತಪ್ಪಿಸಿ, ಒತ್ತಡ ಮುಕ್ತರಾಗಿರಿ

ಕಠಿಣ ವಿಷಯದ ಅಧ್ಯಯನ ಮುಂದೂಡಬೇಡಿ

ಅತೀ ಹೆಚ್ಚು ಅಥವಾ ಕಡಿಮೆ ನಿದ್ರೆ ಮಾಡಬೇಡಿ

ಮೊಬೈಲ್, ಸಾಮಾಜಿಕ ಮಾಧ್ಯಮಗಳ ಮೋಹಕ್ಕೆ ಸಿಲುಕದಿರಿ

ಅಧ್ಯಯನಕ್ಕಾಗಿ ಬೇರೆಯವರ ಮೇಲೆ ಅವಲಂಬಿತರಾಗದಿರಿ

ನಿಮ್ಮ ತಪ್ಪು ಮರೆಮಾಚಲು ರಕ್ಷಣಾತಂತ್ರ ಬಳಸದಿರಿ

ಅನಗತ್ಯ ಅಧ್ಯಯನ ಸಾಮಗ್ರಿಗಳನ್ನು ಖರೀದಿಸದಿರಿ

ಹಲವಾರು ಪರೀಕ್ಷೆಗಳಿಗೆ ಹಾಜರಾಗದೇ ಆದ್ಯತೆ ಪರಿಗಣಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು