ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್ ಅಧಿಕಾರಿ ಸಂದರ್ಶನ: ಅಧ್ಯಯನ ಆನಂದಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ

Last Updated 28 ಜುಲೈ 2021, 19:45 IST
ಅಕ್ಷರ ಗಾತ್ರ

ಬೆಂಗಳೂರಿನವರಾದ ಡಾ. ಗೋಪಾಲಕೃಷ್ಣ ಬಿ. 2018 ರ ಬ್ಯಾಚ್‌ನ ಐಎಎಸ್ ಅಧಿಕಾರಿ. ಅವರು ಪ್ರಸ್ತುತ ಧಾರವಾಡದಲ್ಲಿ ಪ್ರೊಬೇಷನರಿ ಸೇವೆಯಲ್ಲಿದ್ದು, ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ‌ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶ ಸಾಧಿಸಿ, ಉನ್ನತ ಹುದ್ದೆ ಗಿಟ್ಟಿಸುವ ನಿಟ್ಟಿನಲ್ಲಿ ಕೆಲವು ಸಲಹೆಗಳನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ.

  • ಸಂದರ್ಶನ: ಚನ್ನಬಸಪ್ಪ ರೊಟ್ಟಿ

ಶೈಕ್ಷಣಿಕ ಜೀವನ ಹೇಗಿತ್ತು?

ಪ್ರಾಥಮಿಕ, ಮಾಧ್ಯಮಿಕ ಹಾಗೂ ಪಿಯು ಶಿಕ್ಷಣವನ್ನು ಬೆಂಗಳೂರಿನಲ್ಲಿಯೇ ಮುಗಿಸಿ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ (ಬಿ.ಎಂ.ಸಿ.ಆರ್‌.ಐ) ದಲ್ಲಿ ಎಂಬಿಬಿಎಸ್ ಓದಿದ್ದೇನೆ.

ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಒಲವು ಬೆಳೆದಿದ್ದು ಹೇಗೆ?

ಆರಂಭದಿಂದಲೇ ಶಾಲೆಯಲ್ಲಿ ಟಾಪರ್ ಆಗಿದ್ದೆ. ಈ ನಿಟ್ಟಿನಲ್ಲಿ ಚೆನ್ನಾಗಿ ಓದಿ, ಐಎಎಸ್ ಅಧಿಕಾರಿ ಆಗಬೇಕು ಎಂದು ಪೋಷಕರು ಯಾವಾಗಲೂ ಹೇಳುತ್ತಿದ್ದರು. ಹೀಗಾಗಿ, ಬಾಲ್ಯದಿಂದಲೇಈ ಕುರಿತು ಆಸಕ್ತಿ ಇತ್ತು.ಎಂಬಿಬಿಎಸ್ ಮುಗಿಸಿದ ನಂತರ ಬೆಂಗಳೂರಿನ ಅವಲಳ್ಳಿಯಲ್ಲಿವೈದ್ಯಾಧಿಕಾರಿ ಆಗಿ ಸೇವೆಯಲ್ಲಿದ್ದಾಗ ಜಿಲ್ಲಾಧಿಕಾರಿಯಾದರೆ, ಇನ್ನೂ ಹೆಚ್ಚು ಜನಸೇವೆ ಮಾಡಬಹುದು ಎಂದರಿತು ಆ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದೆ. ಆಗ ಬಿಡುಗಡೆಯಾಗಿದ್ದ ‘ಪೃಥ್ವಿ’ಚಲನಚಿತ್ರ ಕೂಡ ನನಗೆ ಪ್ರೇರಣೆ ನೀಡಿತು.

ಸ್ಪರ್ಧಾತ್ಮಕ ಪರೀಕ್ಷೆಗೆತಯಾರಿಹೇಗಿತ್ತು?

2013ರಲ್ಲಿ ದೆಹಲಿಯ ಕೋಚಿಂಗ್ ಸೆಂಟರ್ ಒಂದರಲ್ಲಿ 10 ತಿಂಗಳ ತರಬೇತಿ ಪಡೆದೆ. ನಂತರ ಬೆಂಗಳೂರಿನಲ್ಲಿಒಂದು ವರ್ಷ ಸ್ವಯಂ ಅಧ್ಯಯನ ಕೈಗೊಂಡು ಐಎಎಸ್ ಎದುರಿಸಲು ಭದ್ರ ಬುನಾದಿ ಹಾಕಿಕೊಂಡೆ. ನಂತರ Insight India, Vision IAS ಸೇರಿದಂತೆ ವಿವಿಧ ವೆಬ್‌ಸೈಟ್‌ ಹಾಗೂ ತರಬೇತಿ ಕೇಂದ್ರಗಳಲ್ಲಿ ಮಾದರಿ (ಅಣಕು) ಪೂರ್ವಭಾವಿ, ಮುಖ್ಯ ಪರೀಕ್ಷೆ, ಸಂದರ್ಶನಗಳನ್ನೂ ಸತತವಾಗಿ ಎದುರಿಸಿದೆ. ಹಳೆಯ ಪ್ರಶ್ನೆಪತ್ರಿಕೆಗಳನ್ನು ಅವುಗಳ ಮಾದರಿ ಉತ್ತರಗಳನ್ನೂ ಅವಲೋಕಿಸಿದೆ.

ಇದೆಲ್ಲವನ್ನೂ ಹೊರತುಪಡಿಸಿ, ದಿನಕ್ಕೆ 5 ಗಂಟೆ ವೈಯಕ್ತಿಕವಾಗಿ ಓದು, ಬರಹದ ಮೂಲಕ ಪರೀಕ್ಷೆ ತಯಾರಿ ನಡೆಸುತ್ತಿದ್ದೆ. ಒಂದು ವಿಷಯದ ಒಂದೇಉತ್ತಮವಾದ ಆಕರ ಗ್ರಂಥವನ್ನು ಪದೇಪದೇ ಓದುತ್ತಿದ್ದೆ.ಪುಸ್ತಕದಲ್ಲಿಯೇ ಅಂಡರ್‌ಲೈನ್ ಮಾಡಿ, ಮುಖ್ಯಾಂಶಗಳನ್ನು ಮನನ ಮಾಡಿಕೊಳ್ಳುತ್ತಿದ್ದೆ.ಪ್ರಚಲಿತ ವಿದ್ಯಮಾನಗಳಿಗಾಗಿ ಇಂಗ್ಲಿಷ್‌ ದಿನಪತ್ರಿಕೆ,ಯೋಜನಾ,ಕುರುಕ್ಷೇತ್ರದಂಥ ನಿಯತಕಾಲಿಕೆಗಳನ್ನು ಓದುತ್ತಿದ್ದೆ.ಒಂದು ಪರಿಕಲ್ಪನೆಗೆ ಸಂಬಂಧಿಸಿ 10 ರಿಂದ 15 ಮುಖ್ಯಾಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದೆ.

ವೃತ್ತಿ ಜೀವನದ ಆರಂಭ ಹೇಗಿತ್ತು?

ನಾನು 2014 ರಿಂದ2017 ರವರೆಗೆ ನಾಲ್ಕು ಬಾರಿ ಯುಪಿಎಸ್‌ಸಿ ಪರೀಕ್ಷೆ ಎದುರಿಸಿದ್ದು, ನಾಲ್ಕೂ ಬಾರಿ ಪ್ರಿಲಿಮ್ಸ್ ಪಾಸಾಗಿದ್ದೆ. ಮೊದಲ ಬಾರಿ ಮೇನ್ಸ್‌ನಲ್ಲಿ, ಎರಡನೇ ಬಾರಿ ಸಂದರ್ಶನದಲ್ಲಿ ವಿಫಲನಾದೆ. ಮೂರನೇ ಪ್ರಯತ್ನದಲ್ಲಿ (2017) ಇಂಡಿಯನ್ ಆಡಿಟ್ಸ್ ಮತ್ತು ಅಂಕೌಂಟ್ಸ್‌ ಸೇವೆಗೆ ಆಯ್ಕೆಯಾದೆ. 4ನೇ ಯತ್ನದಲ್ಲಿ (2018) ಐಎಎಸ್ ಹುದ್ದೆ ಒಲಿಯಿತು.

ಸಂದರ್ಶನದ ಅನುಭವವೇನು?

ಸಂದರ್ಶನ ನಮ್ಮ ವ್ಯಕ್ತಿತ್ವದ ಪರೀಕ್ಷೆ ಆಗಿರುತ್ತದೆ. ಅಲ್ಲಿ ನಾವು ಅಧಿಕಾರಿ ಆಗುವ ಯೋಗ್ಯತೆಯನ್ನು ಪರೀಕ್ಷಿಸಲಾಗುತ್ತದೆ. ಈ ನಿಟ್ಟಿನಲ್ಲಿ ಪರೀಕ್ಷೆಗೆ ತಯಾರಾಗುವ ಮೊದಲ ದಿನದಿಂದಲೇ ಸಿದ್ಧತೆ ಆರಂಭವಾಗಬೇಕು. ಸುತ್ತಲಿನ ಜನರ ಕಷ್ಟ–ನಷ್ಟಗಳಿಗೆ ಸ್ಪಂದಿಸಬೇಕು. ಗುಣಾದರ್ಶಗಳನ್ನು (ಎಥಿಕ್ಸ್‌) ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ವ್ಯಕ್ತಿತ್ವವನ್ನು ಧನಾತ್ಮಕವಾಗಿ ಪರಿವರ್ತಿಸಿಕೊಳ್ಳಬೇಕು.

ಸ್ಪರ್ಧಾರ್ಥಿಗಳಿಗೆ ನಿಮ್ಮ ಸಲಹೆ ಏನು?

ಯಾವುದೇ ಒಂದು ಸ್ಪರ್ಧಾತ್ಮಕವಾದ ಉನ್ನತ ಹುದ್ದೆ ಪಡೆಯಲು 22 ರಿಂದ 30 ವರ್ಷದ ಅವಧಿ ಉತ್ಕೃಷ್ಟವಾಗಿರುತ್ತದೆ. ಈ ಅವಧಿಯಲ್ಲಿ ನೀವು ನಿಮ್ಮ ಶೇ 100 ರಷ್ಟು ಪ್ರಯತ್ನ ಮಾಡುವುದು ಕಡ್ಡಾಯ. ನಿಮ್ಮ ಓದು ಯೋಜನಾಬದ್ಧವಾಗಿರಬೇಕು. ಕಿರು, ಮಧ್ಯಮ ಮತ್ತು ದೀರ್ಘಾವಧಿ ಓದಿನ ಯೋಜನೆಯನ್ನು ಬರೆದಿಟ್ಟುಕೊಳ್ಳಬೇಕು. ಅದಕ್ಕನುಗುಣವಾಗಿ ಪ್ರಾಮಾಣಿಕತೆಯಿಂದ ಓದಬೇಕು. ಎಷ್ಟು ಹೊತ್ತು ಓದುತ್ತೀರಿ ಎಂಬುದಕ್ಕಿಂತ ಆಯಾ ಪರಿಕಲ್ಪನೆ ಅರ್ಥವಾಗುವವರೆಗೆ, ಅಂದಿನ ಗುರಿ ಮುಟ್ಟುವವರೆಗೆ ಓದಬೇಕು. ಓದಿನೊಂದಿಗೆ ಬರವಣಿಗೆಯ ಕೌಶಲವೂ ಕಡ್ಡಾಯ ಎಂಬುದನ್ನು ಮರೆಯಬಾರದು. ಅಧ್ಯಯನವನ್ನು ಅನಿವಾರ್ಯ ಎಂದು ಭಾವಿಸದೇ ಅದನ್ನು ಆನಂದಿಸಬೇಕು.

(ಸಂದರ್ಶಕರು: ನಿರ್ದೇಶಕರು, ಸ್ಲೇಟ್‌ ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT