ಶನಿವಾರ, ಮೇ 21, 2022
28 °C
ವಿಷಯದ ಅರಿವು – ಪರೀಕ್ಷೆ ಸುಲಭ | ಕೆಎಸ್‌ಆರ್‌ಪಿ & ಐಆರ್‌ಬಿ ನೇಮಕಾತಿ ಪರೀಕ್ಷೆಗೆ ಸಿದ್ಧತೆ

ಕರ್ನಾಟಕ ವಿಶೇಷ ಮೀಸಲು ಸಬ್‌ಇನ್ಸ್‌ಪೆಕ್ಟರ್‌ ನೇಮಕಾತಿ: ಹೀಗಿರಲಿ ಸಿದ್ಧತೆ...

ಕೆ.ಎಚ್‌. ಮಂಜುನಾಥ್ Updated:

ಅಕ್ಷರ ಗಾತ್ರ : | |

Prajavani

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಖಾಲಿ ಇರುವ ‘ಕರ್ನಾಟಕ ವಿಶೇಷ ಮೀಸಲು ಸಬ್‌ಇನ್ಸ್‌ಪೆಕ್ಟರ್‌’ (ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ) 70 ಹುದ್ದೆಗಳ ನೇರ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಅಧಿಸೂಚನೆ ಪ್ರಕಟಿಸಿದೆ.

ಈಗ ಪರೀಕ್ಷೆಗಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಯ ಸ್ವರೂಪ, ಅರ್ಜಿ ಸಲ್ಲಿಸುವ ವಿಧಾನ, ಶುಲ್ಕಗಳ ವಿವರ, ಪ್ರಶ್ನೆಪತ್ರಿಕೆಗಳ ಸ್ವರೂಪ, ಯಾವ ವಿಷಯಗಳನ್ನು ಆಧರಿಸಿ ಪ್ರಶ್ನೆಗಳಿರುತ್ತವೆ ಎಂಬ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮತ್ತು ಪರೀಕ್ಷೆಯ ಪೂರಕ ಸಿದ್ಧತೆಗೆ ಅಗತ್ಯವಾದ ಮಾಹಿತಿ ಇಲ್ಲಿದೆ.

ವಿದ್ಯಾರ್ಹತೆ

ಯುಜಿಸಿ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಶಿಕ್ಷಣ ಪಡೆದವರು ಈ ಪರೀಕ್ಷೆಗೆ ಅರ್ಹರಾಗಿರುತ್ತಾರೆ.

ಲಿಖಿತ ಪರೀಕ್ಷೆ

ಅಭ್ಯರ್ಥಿಗಳು ಮೊದಲು ದೇಹದಾರ್ಢ್ಯ ಅರ್ಹತಾ ಪರೀಕ್ಷೆ ಎದುರಿಸಬೇಕು. ಅದರಲ್ಲಿ ಯಶಸ್ವಿಯಾದವರಿಗೆ ಮಾತ್ರ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.

ಲಿಖಿತ ಪರೀಕ್ಷೆಯಲ್ಲಿ ಪದವಿ ಹಂತದ ವಿಷಯಗಳನ್ನು ಒಳಗೊಂಡ ಎರಡು ಪತ್ರಿಕೆಗಳಿರುತ್ತವೆ.

ಪತ್ರಿಕೆ-1: ಈ ಪತ್ರಿಕೆಯು ಎರಡು ಭಾಗಗಳನ್ನು ಒಳಗೊಂಡಿದೆ. ಮೊದಲ ಭಾಗ ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಪ್ರಬಂಧ ಬರೆಯುವುದು. ಇದಕ್ಕೆ 30 ಅಂಕಗಳು. ಎರಡನೇ ಭಾಗದಲ್ಲಿ ಕನ್ನಡದಿಂದ ಇಂಗ್ಲಿಷ್‌ಗೆ, ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡಬೇಕು. ಇದಕ್ಕೆ 20 ಅಂಕಗಳು. ಈ ಪರೀಕ್ಷೆಯ ಅವಧಿ ಒಂದು ಗಂಟೆ. ಒಟ್ಟು 50 ಅಂಕಗಳಿರುತ್ತವೆ. ಇದರಲ್ಲಿ ಕನಿಷ್ಠ ಅಂಕಗಳು ಇರುವುದಿಲ್ಲ.

ಪತ್ರಿಕೆ-2: ಈ ಪ್ರಶ್ನೆಪತ್ರಿಕೆಯಲ್ಲಿ  ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಮಾನಸಿಕ ಸಾಮರ್ಥ್ಯ ಎಂಬ ವಿಭಾಗಗಳಿರುತ್ತವೆ.  

(i) ಸಾಮಾನ್ಯ ಜ್ಞಾನದಲ್ಲಿ: (ಎ) ವಿಜ್ಞಾನ (ಬಿ) ಭೂಗೋಳ (ಸಿ) ಆಧುನಿಕ ಭಾರತೀಯ ಇತಿಹಾಸ, ಭಾರತೀಯ ಸ್ವಾತಂತ್ರ್ಯ ಚಳವಳಿ (ಡಿ) ಭಾರತೀಯ ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ನಿರ್ದೇಶನಾತ್ಮಕ ತತ್ವಗಳನ್ನು ಕುರಿತ ಪ್ರಶ್ನೆಗಳಿರುತ್ತವೆ.

(ii) ಸಾಮಾನ್ಯ ಮಾನಸಿಕ ಸಾಮರ್ಥ್ಯದಲ್ಲಿ: (ಎ) ಗಣನಾ ಕೌಶಲ(Simple Mathematical calculation in reasoning) (ಬಿ) ಪ್ರಾದೇಶಿಕ ಮನ್ನಣೆ ಕೌಶಲ (ಸಿ) ಗ್ರಹಿಸುವಿಕೆ (ಡಿ) ತೀರ್ಮಾನ (ಇ) ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ (ಎಫ್) ನೈತಿಕ ಶಿಕ್ಷಣ ವಿಷಯಗಳನ್ನು ಒಳಗೊಂಡ ಪ್ರಶ್ನೆಗಳಿರುತ್ತವೆ.

ಈ ಪತ್ರಿಕೆಯಲ್ಲಿ ಬಹುವಿಧ ಆಯ್ಕೆ (Multiple Choice) ಮತ್ತು ವಸ್ತುನಿಷ್ಠ(Objective) ಮಾದರಿಯ ಪ್ರಶ್ನೆಗಳಿರುತ್ತವೆ. ಇದು 150 ಅಂಕಗಳ, ಒಂದೂವರೆ ಗಂಟೆಯ ಪರೀಕ್ಷೆಯಾಗಿರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ, ಸರಿ ಉತ್ತರದ
ಶೇ 25 (0.375) ರಷ್ಟು ಅಂಕಗಳನ್ನು ಕಳೆಯಲಾಗುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಗೆ ಏನನ್ನು ಓದಬೇಕು?

ಈ ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಯನ್ನು ಗಮನಿಸಿ. ಇದರಿಂದ ಪ್ರಶ್ನೆಗಳ ಸ್ವರೂಪ ಅರ್ಥವಾಗುತ್ತದೆ. ಯಾವ ವಿಷಯದಿಂದ ಎಷ್ಟು ಪ್ರಶ್ನೆಗಳನ್ನು ಕೇಳಬಹುದೆಂಬ ಮಾಹಿತಿ ಲಭ್ಯವಾಗುತ್ತದೆ. ಇದಾದ ನಂತರ 8, 9, 10ನೇ ತರಗತಿಯ ಸಮಾಜ ವಿಜ್ಞಾನ ಮತ್ತು ವಿಜ್ಞಾನದ ಪುಸ್ತಕಗಳನ್ನು ಓದಿ. ಮನೊರಮಾ ಅಥವಾ ಯಾವುದಾದರೂ ವಾರ್ಷಿಕ ಕೋಶ (ಇಯರ್ ಬುಕ್) ಓದುವುದು ಒಳ್ಳೆಯದು.

‘ಭಾರತದ ಸಂವಿಧಾನ’ ವಿಷಯಕ್ಕಾಗಿ ಪಿ. ಎಸ್. ಗಂಗಾಧರ್ ಅವರ ‘ಭಾರತ ಸಂವಿಧಾನ ಮತ್ತು ರಾಜಕೀಯ’ ಕೃತಿಯನ್ನು ಓದಬಹುದು. ಭಾರತ ಇತಿಹಾಸ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಡಾ. ಸದಾಶಿವ ಅವರ ಕೃತಿಗಳು ಉತ್ತಮ. ಇದರ ಜೊತೆಗೆ, ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಾಗಿ ಪದವಿಪೂರ್ವ ಶಿಕ್ಷಣ ಮಂಡಳಿ ಪ್ರಕಟಿಸಿರುವ ಇತಿಹಾಸ, ಭೂಗೋಳ, ರಾಜ್ಯಶಾಸ್ತ್ರ ವಿಭಾಗದಲ್ಲಿರುವ ಭಾರತದ ಸಂವಿಧಾನದ ವಿಭಾಗಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಬೇಕು.

‘ಮಾನಸಿಕ ಸಾಮರ್ಥ್ಯ’ ವಿಷಯಕ್ಕಾಗಿ ಆರ್.ಎಸ್. ಅಗರವಾಲ್ ಅವರು ಬರೆದಿರುವ ‘ರೀಸನಿಂಗ್’ ಪುಸ್ತಕ  ಓದಿ. ಪ್ರಚಲಿತ ವಿದ್ಯಮಾನಕ್ಕಾಗಿ ಪ್ರತಿದಿನ ಕಡ್ಡಾಯವಾಗಿ ದಿನಪತ್ರಿಕೆಯನ್ನು ಓದಿ.

ಪರೀಕ್ಷೆ ತಯಾರಿಗೆ ಟಿಪ್ಸ್

 ಬಹು ಆಯ್ಕೆ ಪ್ರಶ್ನೆ ಮಾದರಿ ಪ್ರಶ್ನೆಗಳಲ್ಲಿ, ಒಂದು ಪ್ರಶ್ನೆಗೆ, ನಾಲ್ಕು ಉತ್ತರಗಳನ್ನು ನೀಡಿರುತ್ತಾರೆ. ಅವುಗಳಲ್ಲಿ ಸರಿಯಾಗಿರುವ ಒಂದು ಉತ್ತರವನ್ನು ಆಯ್ಕೆ ಮಾಡಬೇಕು.

ಇದು ಪಿಯುಸಿ ಅಥವಾ ಎಸ್‌ಎಸ್‌ಎಲ್‌ಸಿ ತರಹದ ಅಕಾಡೆಮಿಕ್ ಪರೀಕ್ಷೆಯಲ್ಲ. ಬಾಯಿಪಾಠ ಮಾಡಿಕೊಂಡು ಹೋಗಿ ಬರೆಯುವ ಪ್ರಶ್ನೆಗಳೂ ಬರುವುದಿಲ್ಲ. ಆದ್ದರಿಂದ ಪ್ರತಿ ವಿಷಯವನ್ನು ಓದುವಾಗಲೂ ಹಿಂದಿನ ಪ್ರಶ್ನೆಪತ್ರಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ಓದುವುದು ಒಳ್ಳೆಯದು. ಕಂಠ ಪಾಠಕ್ಕಿಂತ ವಿಷಯದ ತಿಳಿವಳಿಕೆಯೇ ಮುಖ್ಯ.

 ಒಂದೂವರೆ ಗಂಟೆಯಲ್ಲಿ 100 ಪ್ರಶ್ನೆಗಳಿಗೆ ಉತ್ತರಿಸಬೇಕು. ಹಾಗಾಗಿ ಸಮಯದ ಹೊಂದಾಣಿಕೆ ಮುಖ್ಯ.  ಈ ಹಿನ್ನೆಲೆಯಲ್ಲಿ ನಿತ್ಯ ಬಹುಆಯ್ಕೆ ಪ್ರಶ್ನೆಗಳನ್ನು ಬಿಡಿಸುವ ಅಭ್ಯಾಸ ಮಾಡಿ.

‌ ಪರೀಕ್ಷೆ ಮುಗಿಯುವವರೆಗೆ ನಿತ್ಯ ಕನಿಷ್ಠ 5 ರಿಂದ 6 ಗಂಟೆ ಓದುವುದಕ್ಕೆ ಮೀಸಲಿಡಿ. ಅದರಲ್ಲಿ 1 ಗಂಟೆ ಬಹುಆಯ್ಕೆ ಪ್ರಶ್ನೆಗಳನ್ನು ಬಿಡಿಸುವುದಕ್ಕೇ ಮೀಸಲಿಟ್ಟರೆ ಒಳ್ಳೆಯದು.

 ಓದುವ ಜೊತೆಗೆ, ಪ್ರತಿದಿನ ಅಭ್ಯಾಸಕ್ಕಾಗಿ/ಬರೆಯುವುದಕ್ಕಾಗಿ ಒಂದಿಷ್ಟು ಸಮಯವನ್ನು ತೆಗೆದಿಡಿ. ಹಿಂದೆ ಓದಿದ ವಿಷಯವನ್ನು ಪುನರ್‌ ಮನನ ಮಾಡುತ್ತಾ ಅಧ್ಯಯನ ಮುಂದುವರಿಸಿ. ಇದರಿಂದ ಹಿಂದೆ ಓದಿರುವುದನ್ನು ನೆನಪಿಟ್ಟುಕೊಳ್ಳಲು ಅನುಕೂಲ.

ಅರ್ಜಿ ಸಲ್ಲಿಕೆ ವಿವರ

ಅರ್ಜಿ ಸಲ್ಲಿಸಲು ಕೊನೆಯ ದಿನ, ಜನವರಿ 18, 2022. ಅರ್ಜಿ ಶುಲ್ಕವನ್ನು ಅಧಿಕೃತ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಪಾವತಿಸಬೇಕು. ಶುಲ್ಕ ಪಾವತಿಗೆ ಕೊನೆ ದಿನ ಜನವರಿ 20, 2022. ಆನ್‌ಲೈನ್ ಮೂಲಕವೇ ಅರ್ಜಿ ತುಂಬಬೇಕು. ಅರ್ಜಿ ಭರ್ತಿ ಮಾಡುವ ವೇಳೆ ಸಮಸ್ಯೆ ಎದುರಾದಲ್ಲಿ ಸಹಾಯವಾಣಿ
080-22943346 ಅನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ

ಸಾಮಾನ್ಯ ವರ್ಗ. ಪ್ರವರ್ಗ 2(ಎ), 2(ಬಿ) 3(ಎ) 3(ಬಿ)ಗೆ ಸೇರಿದ ಅಭ್ಯರ್ಥಿಗಳಿಗೆ ₹500. ಎಸ್‌ಸಿ/ ಎಸ್‌ಟಿ ಹಾಗೂ ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ₹ 250.  

ವಯೋಮಿತಿ

ಅರ್ಜಿ ಸ್ವೀಕರಿಸುವ ಕೊನೆ ದಿನಾಂಕದ ವೇಳೆಗೆ ಸಾಮಾನ್ಯ ವರ್ಗದ ಅಭ್ಯರ್ಥಿಗೆ ಕನಿಷ್ಠ 21 ವರ್ಷವಾಗಿರಬೇಕು. ಗರಿಷ್ಠ 26 ವರ್ಷ ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಎರಡು ವರ್ಷಗಳ ವಯೋಮಿತಿ ಸಡಿಲಿಕೆ ಇದೆ( 28 ವರ್ಷಗಳು)

ಸೇವಾನಿರತ ಅಭ್ಯರ್ಥಿಗಳಿಗೆ

ಎ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು 40 ವರ್ಷಗಳಿಗೆ ನಿಗದಿಪಡಿಸಲಾಗಿದೆ.

ಬಿ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷಗಳನ್ನು ನಿಗದಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ www.recruitment.ksp.gov.in ನೋಡಬಹುದು.

(ಲೇಖಕರು: ನಿರ್ದೇಶಕರು, ಜ್ಞಾನಭಾರತಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ, ಬೆಂಗಳೂರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು