ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿಯಲ್ಲಿ 2,500 ಕಂಡಕ್ಟರ್ ಹುದ್ದೆಗಳು: ಪರೀಕ್ಷೆ, ನೇಮಕಾತಿ ಹೇಗಿರಲಿದೆ?

ಕಂಡಕ್ಟರ್ ಲೈಸನ್ಸ್ ಪಡೆಯುವುದು ಹೇಗೆ? ಈ ನೇಮಕಾತಿ ಪ್ರಕ್ರಿಯೆಯ ಸಂಪೂರ್ಣ ವಿವರ ಇಲ್ಲಿದೆ
Published 14 ಮಾರ್ಚ್ 2024, 0:31 IST
Last Updated 14 ಮಾರ್ಚ್ 2024, 0:31 IST
ಅಕ್ಷರ ಗಾತ್ರ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2,500 ಕಂಡಕ್ಟರ್ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಈ ನೇಮಕಾತಿ ಪ್ರಕ್ರಿಯೆಯ ಹೊಣೆ ಹೊತ್ತಿದೆ.

------

ರಾಜಧಾನಿಯ ಜನಸಮಾನ್ಯರ ಒಡನಾಡಿ ಆಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2,500 ನಿರ್ವಾಹಕ (ಕಂಡಕ್ಟರ್) ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ಬಿಎಂಟಿಸಿಯಲ್ಲಿ ಕೆಲಸ ಮಾಡಬೇಕು ಎನ್ನುವ ನಾಡಿನ ತರುಣರಿಗೆ ಸದಾವಕಾಶ ಒದಗಿ ಬಂದಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಈ ನೇಮಕಾತಿ ಪ್ರಕ್ರಿಯೆಯ ಹೊಣೆ ಹೊತ್ತಿದ್ದು, ಈ ಕುರಿತು ಇತ್ತೀಚಿಗೆ ವಿವರವಾದ ಅಧಿಸೂಚನೆ ಹೊರಡಿಸಿದೆ. ಅರ್ಹ ಪುರುಷ–ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಬಿಎಂಟಿಸಿ ಮಿಕ್ಕುಳಿದ ವೃಂದದಲ್ಲಿ 2,286 (ಆರ್‌ಪಿಸಿ) ಹಾಗೂ ಸ್ಥಳೀಯ ವೃಂದ (ಹೈ–ಕ) 214 ಹುದ್ದೆಗಳಿದ್ದು ಒಟ್ಟಾರೆಯಾಗಿ ಮಹಿಳೆಯರಿಗೂ 825 ಹುದ್ದೆಗಳು ಮೀಸಲಿವೆ. ಮಾರ್ಚ್ 10 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಏಪ್ರಿಲ್ 10 ರಂದು ಮುಕ್ತಾಯವಾಗಲಿದೆ.

ಕೆಇಎನ ಅಧಿಕೃತ cetonline.karnataka.gov.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಶೈಕ್ಷಣಿಕ ವಿದ್ಯಾರ್ಹತೆ

ಪಿಯುಸಿ (ಕಲಾ, ವಿಜ್ಞಾನ, ಕಾಮರ್ಸ್) ಅಥವಾ ಸಿಬಿಎಸ್‌ಸಿ 10+2 ಅಥವಾ ಮೂರು ವರ್ಷದ ಡಿಪ್ಲೋಮಾ ಅಥವಾ ಅದಕ್ಕೆ ಸಮಾನವಾದ ಶೈಕ್ಷಣಿಕ ಅರ್ಹತೆ ಜೊತೆಗೆ ‘ಮಾನ್ಯತೆ ಹೊಂದಿರುವ ಮೋಟಾರು ವಾಹನ ನಿರ್ವಾಹಕ ಪರವಾನಗಿ ಮತ್ತು ಬ್ಯಾಡ್ಜ್‌’ ಅನ್ನು ಹೊಂದಿದವರು ಅರ್ಜಿ ಸಲ್ಲಿಸಬಹುದು. ಬಾಹ್ಯ ಕೋರ್ಸ್ ಮತ್ತು ಜೆಒಸಿ ಕೋರ್ಸ್‌ ಮುಗಿಸಿದವರು ಅರ್ಹರಲ್ಲ ಮತ್ತು ಪರೀಕ್ಷೆ ಬರೆದು ಈಗಾಗಲೇ ಫಲಿತಾಂಶಕ್ಕೆ ಕಾಯುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.

ವಯೋಮಿತಿ

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು. ಸಾಮಾನ್ಯ ವರ್ಗದವರಿಗೆ ಗರಿಷ್ಠ 35 ವರ್ಷಗಳು, 2ಎ, 2ಬಿ, 3ಎ, 3ಬಿ ಗಳಿಗೆ 38 ವರ್ಷಗಳು, ಎಸ್‌ಸಿ, ಎಸ್‌ಟಿ, ಪ್ರವರ್ಗ–1 ದವರಿಗೆ 40 ಹಾಗೂ ಮಾಜಿ ಸೈನಿಕರಿಗೆ 45 ವರ್ಷದವರೆಗೆ ಮಿತಿ ಇದೆ.

ಅರ್ಜಿ ಶುಲ್ಕ

ಸಾಮಾನ್ಯ ವರ್ಗ, 2ಎ, 2ಬಿ, 3ಎ, 3ಬಿ ವರ್ಗದವರಿಗೆ ₹700 ಮತ್ತು ಎಸ್‌ಸಿ, ಎಸ್‌ಟಿ, ಪ್ರವರ್ಗ–1, ಮಾಜಿ ಸೈನಿಕ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ₹500. ಫೋನ್ ಪೇ, ಗೂಗಲ್ ಪೇ ಅಂತಹ ಯುಪಿಐ ಮೂಲಕವೂ ಪಾವತಿಸಬಹುದು.

–––

ನೇಮಕಾತಿ ಪ್ರಕ್ರಿಯೆ ಹೇಗೆ ನಡೆಯಲಿದೆ?

ಕಂಡಕ್ಟರ್ ಹುದ್ದೆಗಳಿಗೆ ನೇಮಕಾತಿ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲಿಗೆ ಬಹು ಆಯ್ಕೆ ಮಾದರಿಯ ‘ಸಾಮಾನ್ಯ ಸಾಮರ್ಥ್ಯ ಪರೀಕ್ಷೆ’ (ಆಪ್ಟಿಟ್ಯೂಡ್ ಟೆಸ್ಟ್) ಇರಲಿದೆ. ಇದು ತಲಾ 100 ಅಂಕಗಳಿಗೆ ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ನಾಲ್ಕು ತಪ್ಪು ಉತ್ತರಗಳಿಗೆ ಒಂದು ಅಂಕ ಕಳೆಯಲಾಗುತ್ತದೆ. ಹಾಗಾಗಿ ಸ್ಪರ್ಧಾಳುಗಳು ಸರಿಯಾಗಿ ಯೋಚಿಸಿ ಉತ್ತರಿಸಬೇಕು.

ಮುಂದಿನ ಹಂತಕ್ಕೆ ಹೋಗಬೇಕಾದರೆ ಇದರಲ್ಲಿ ಕನಿಷ್ಠ ಶೇ 30 ರಷ್ಟು ಅಂಕಗಳನ್ನು ಪಡೆಯುವುದು ಕಡ್ಡಾಯ. ಆಪ್ಟಿಟ್ಯೂಡ್ ಟೆಸ್ಟ್‌ನಲ್ಲಿ ಗಳಿಸಿದ ಶೇ 75 ರಷ್ಟು ಅಂಕಗಳೊಡನೆ ಪಿಯುಸಿಯಲ್ಲಿ ಗಳಿಸಿರುವ (ಸಂಬಂಧಿತ ಕೋರ್ಸ್‌) ಅಂಕಗಳ ಶೇ 25 ಅಂಕಗಳೊಡನೆ ಮೆರಿಟ್ ಪಟ್ಟಿ ಪ್ರಕಟಿಸಲಾಗುತ್ತದೆ.

––––

ದೇಹದಾರ್ಡತ್ಯೆ ಪರೀಕ್ಷೆ ಮತ್ತು ದಾಖಲೆಗಳ ತಪಾಸಣೆ

ಮೆರಿಟ್ ಪಟ್ಟಿಯ ಅನ್ವಯ 1:5 ರ ಅನುಪಾತದದಲ್ಲಿ ಅಭ್ಯರ್ಥಿಗಳನ್ನು ದೇಹದಾರ್ಡತ್ಯೆ ಪರೀಕ್ಷೆ ಮತ್ತು ದಾಖಲೆಗಳ ತಪಾಸಣೆಗೆ ಕರೆಯಲಾಗುತ್ತದೆ. ಇದು ಎರಡನೇ ಹಾಗೂ ಕೊನೆಯ ಹಂತ. ದೇಹದಾರ್ಡತ್ಯೆ ಪರೀಕ್ಷೆಯಲ್ಲಿ ಪುರುಷ ಅಭ್ಯರ್ಥಿಗಳು ಕನಿಷ್ಠ 160 ಸೆಂಟಿ ಮೀಟರ್ ಹಾಗೂ ಮಹಿಳಾ ಅಭ್ಯರ್ಥಿಗಳು 150 ಸೆಂಟಿ ಮೀಟರ್ ಎತ್ತರ ಹೊಂದಿರಬೇಕು.

ಈ ಹಂತವನ್ನು ಯಶಸ್ವಿಯಾಗಿ ಪೂರೈಸಿದವರು ಮೆರಿಟ್ ಅನ್ವಯ ಹಾಗೂ ಮೀಸಲಾತಿ ಅನ್ವಯ ಹುದ್ದೆಗಳಿಗೆ ನೇಮಕವಾಗುತ್ತಾರೆ.

ಬಿಎಂಟಿಸಿ ಕಂಡಕ್ಟರ್ ಹುದ್ದೆಗಳಿಗೆ ಸಂದರ್ಶನ ಇರುವುದಿಲ್ಲ. ಆಯ್ಕೆಯಾದವರು ಒಂದು ವರ್ಷ ಮಾಸಿಕ ₹9,100 ಜೊತೆ ಸಂಸ್ಥೆಯಲ್ಲಿ ಟ್ರೈನಿಯಾಗಿ ಕೆಲಸ ಮಾಡಬೇಕು. ಟ್ರೈನಿಯನ್ನು ಯಶಸ್ವಿಗೊಳಿಸಿದವರು ಎರಡು ವರ್ಷ ಮಾಸಿಕ ₹25,300 ಜೊತೆ ಪ್ರೊಬೇಷನರಿ ಅವಧಿ ಮುಗಿಸಬೇಕು. ಆ ನಂತರ ಅವರು ಬಿಎಂಟಿಸಿಯ ನೌಕರರಾಗಿ ಕೆಲಸ ಮಾಡುತ್ತಾರೆ.

–––

<div class="paragraphs"><p></p></div>

ಕಂಡಕ್ಟರ್ ಲೈಸನ್ಸ್ ಪಡೆಯುವುದು ಹೇಗೆ?

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ‘ಮಾನ್ಯತೆ ಹೊಂದಿರುವ ಮೋಟಾರು ವಾಹನ ನಿರ್ವಾಹಕ ಪರವಾನಗಿ ಮತ್ತು ಬ್ಯಾಡ್ಜ್‌’ ಅನ್ನು ಅಭ್ಯರ್ಥಿಗಳು ಹೊಂದಿರಬೇಕು. ಇದನ್ನು ಸಂಕ್ಷಿಪ್ತವಾಗಿ ಕಂಡಕ್ಟರ್ ಲೈಸನ್ಸ್ ಎನ್ನುವರು. ಇದನ್ನು ಪೂರಕ ದಾಖಲೆಗಳನ್ನು ಒದಗಿಸಿ ನಿಮ್ಮ ಸನಿಹದ ಆರ್‌ಟಿಒ ಕಚೇರಿಯಲ್ಲಿ ಪಡೆಯಬಹುದು.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT