ಬುಧವಾರ, ಮಾರ್ಚ್ 29, 2023
24 °C

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ| ಅರ್ಥಶಾಸ್ತ್ರ ಕ್ಷೇತ್ರದಲ್ಲಿ ಹಲವು ಅವಕಾಶ

ಪ್ರದೀಪ್‌ ಕುಮಾರ್‌ ವಿ. Updated:

ಅಕ್ಷರ ಗಾತ್ರ : | |

1. ಸರ್ ನಾನು ಪಿಯುಸಿ ಓದುತ್ತಿದ್ದು, ನನಗೆ ಮನೆಯಲ್ಲಿ ಮದುವೆ ಮಾಡಲು ನೋಡುತ್ತಿದ್ದಾರೆ. ಜೀವನದಲ್ಲಿ ಏನಾದರೂ ಸಾಧಿಸಲೇಬೇಕು ಎಂಬ ಗುರಿ ಇಟ್ಟುಕೊಂಡಿದ್ದೇನೆ. ರಾಜ್ಯಶಾಸ್ತ್ರ, ಇತಿಹಾಸ ಹಾಗೂ ಅರ್ಥಶಾಸ್ತ್ರ ವಿಷಯಗಳಲ್ಲಿ
ಆಸಕ್ತಿಯಿದೆ. ಮನೆಯಲ್ಲಿ ಬಡತನ ಹಾಗೂ ಕೀಳರಿಮೆ ಕಾರಣಕ್ಕೆ ಎಲ್ಲರೆದುರು ಮಾತನಾಡಲು ಹೆದರುತ್ತೇನೆ. ನನಗೆ ಒಳ್ಳೆಯ ಉದ್ಯೋಗ ಮಾಡಬೇಕೆಂಬ ಆಸಕ್ತಿ ಇದೆ. ಒಳ್ಳೆಯ ಕಾಲೇಜಿನಲ್ಲಿ ಓದಲು ಸ್ಕಾಲರ್‌ಶಿಪ್ ಎಲ್ಲಿ ಸಿಗುತ್ತದೆ? ಯಾರ ನೆರವು ಪಡೆಯಬಹುದು ತಿಳಿಸಿ.
ಹೆಸರು, ಊರು ತಿಳಿಸಿಲ್ಲ.

ಈಗಿನ ಪರಿಸ್ಥಿತಿಯಿಂದ ಎದೆಗುಂದದೆ, ನಿಮ್ಮ ದೀರ್ಘಾವಧಿ ಕನಸುಗಳನ್ನು ಸಾಕಾರಗೊಳಿಸುವ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಿ.

ಆರ್ಥಿಕ ಸಮಸ್ಯೆಯ ಕಾರಣದಿಂದ ನಿಮ್ಮ ಭವಿಷ್ಯದ ಕನಸುಗಳನ್ನು ಕಾಣದೆ ಮುಂದಿನ ಜೀವನದ
 ಬಗ್ಗೆ ರಾಜಿಯಾಗದಿರಿ; ಏಕೆಂದರೆ, ಆರ್ಥಿಕ ಸಮಸ್ಯೆಗಳು ತಾತ್ಕಾಲಿಕ. ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವೃತ್ತಿಯೋಜನೆಯನ್ನು ಮಾಡಿದರೆ ಮುಂದಿನ ಹಾದಿ ಸ್ಪಷ್ಟವಾಗುವುದರ ಜೊತೆಗೆ ಸ್ವಯಂ ಪ್ರೇರಣೆ ತಾನೇ ತಾನಾಗಿ ಮೂಡುತ್ತದೆ. ಅತ್ಯಂತ ಶಕ್ತಿಶಾಲಿಯಾದ ಆಂತರಿಕ ಪ್ರೇರಣೆಯಿಂದ ಜೀವನದ ಗುರಿಗಳನ್ನು
ಸಾಧಿಸುವ ಛಲ, ಆತ್ಮವಿಶ್ವಾಸವನ್ನು ಹುಟ್ಟುಹಾಕಿ, ಕೀಳರಿಮೆಯಿಂದ ಹೊರಬರಲು ಸಾಧ್ಯವಾಗುತ್ತದೆ.
ನಿಮಗೆ ಆಸಕ್ತಿಯಿರುವ ಅರ್ಥಶಾಸ್ತ್ರ ವಿಷಯಕ್ಕೆ ಹೆಚ್ಚಿನ ಬೇಡಿಕೆಯಿದೆ. ಹಾಗಾಗಿ, ಬಿಎ ಅಥವಾ ಬಿಎ (ಅರ್ಥಶಾಸ್ತç-ಆನರ್ಸ್) ಮಾಡಿ, ಬ್ಯಾಂಕಿಂಗ್, ಫೈನಾನ್ಸ್, ಇನ್ವೆಸ್ಟ್ಮೆಂಟ್, ಇನ್ಶೂರೆನ್ಸ್‌  ರೀಟೇಲ್ ಮುಂತಾದ ಕ್ಷೇತ್ರಗಳಲ್ಲಿ ವೃತ್ತಿಯನ್ನು
ಅರಸಬಹುದು ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಕೆಲಸಗಳನ್ನೂ ಪಡೆದುಕೊಳ್ಳಬಹುದು. ವೃತ್ತಿಯ ಜೊತೆಗೆ, ಹೆಚ್ಚಿನ ತಜ್ಞತೆಗಾಗಿ, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಎಂಬಿಎ ಕೋರ್ಸನ್ನು ಮಾಡಿ, ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಖಾಸಗಿ ಸಂಸ್ಥೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಅನೇಕ ಸ್ಕಾಲರ್‌ಶಿಪ್‌ಗಳ ಮಾಹಿತಿ ಅಂತರ್ಜಾಲದಲ್ಲಿ ಸುಲಭವಾಗಿ ಸಿಗುತ್ತದೆ. ವೃತ್ತಿಯೋಜನೆ, ವೈವಾಹಿಕ ಜೀವನದ ಆಲೋಚನೆಗಳು, ವೃತ್ತಿ ಮತ್ತು ವೈಯಕ್ತಿಕ ಜೀವನದ ಧ್ಯೇಯಗಳು ಮತ್ತು ಈ ನಿಟ್ಟಿನಲ್ಲಿ ನಿಮ್ಮ ಸನ್ನದ್ಧತೆಯ ಬಗ್ಗೆ ಮನೆಯವರಿಗೆ ಮನವರಿಕೆ ಮಾಡಿ, ಒಮ್ಮತದ ನಿರ್ಧಾರಕ್ಕೆ ಬರಲು ಪ್ರಯತ್ನಿಸಿ. ಏಕೆಂದರೆ, ನಿಮ್ಮ ಯೋಜನೆಗಳಿಗೆ ಕುಟುಂಬದ ಬೆಂಬಲವಿದ್ದರೆ, ಸಾಧನೆ ಸುಲಭವಾಗುತ್ತದೆ.
ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

2. ಸರ್, ನನಗೆ ಗಣಿತ ಬಹಳ ಆಸಕ್ತಿಕರ ವಿಷಯ.  ಅಪ್ಪ, ಅಮ್ಮನ ಒತ್ತಾಯಕ್ಕೆ ಎಂಜಿನಿಯರಿಂಗ್ (ಎಲೆಕ್ಟ್ರಾನಿಕ್ಸ್‌ ಅಂಡ್ ಟೆಲಿಕಮ್ಯುನಿಕೇಷನ್) ಮಾಡಿದೆ. ಉತ್ತಮ ಉದ್ಯೋಗವೂ ಸಿಗಲಿಲ್ಲ. ನನ್ನ ಆಸಕ್ತಿಕರ ಗಣಿತ ಕ್ಷೇತ್ರಕ್ಕೆ ಬದಲಾಯಿಸಿಕೊಳ್ಳಬಹುದೇ? ಆಗಬಹುದಾದರೆ, ಏನು ಮಾಡಬೇಕು?
ಹೆಸರು, ಊರು ತಿಳಿಸಿಲ್ಲ.

ಮೊದಲಿಗೆ, ಎಂಜಿನಿಯರಿಂಗ್ ಮಾಡಿದ ನಂತರವೂ ಉತ್ತಮ ಉದ್ಯೋಗ ಸಿಗದಿರಲು ಕಾರಣಗಳೇನು ಎಂದು ಮೌಲ್ಯಮಾಪನ ಮಾಡಬೇಕು. ಸಾಮಾನ್ಯವಾಗಿ, ಉದ್ಯೋಗದಲ್ಲಿ ಯಶಸ್ವಿಯಾಗಲು ಎಂಜಿನಿಯರಿಂಗ್ ಜ್ಞಾನದ ಜೊತೆಗೆ
ಪ್ರಾಥಮಿಕ ಮತ್ತು ವೃತ್ತಿ ಸಂಬಂಧಿತ ಕೌಶಲಗಳ ಅಗತ್ಯವಿರುತ್ತದೆ ಮತ್ತು ಉದ್ಯೋಗದ ಸಂದರ್ಶನಗಳಲ್ಲಿ ಇವುಗಳು ಅಭ್ಯರ್ಥಿಗಳಲ್ಲಿವೆಯೇ ಎಂದು ಪರೀಕ್ಷಿಸಲಾಗುತ್ತದೆ. ಉದಾಹರಣೆಗೆ, ಪ್ರಾಥಮಿಕ ಕೌಶಲಗಳಾದ ಸಮಯದ ನಿರ್ವಹಣೆ, ಸಂವಹನ ಕೌಶಲ, ಅಂತರ್-ವೈಯಕ್ತಿಕ ಕೌಶಲ ಮತ್ತು ನಾಯಕತ್ವದ ಕೌಶಲಗಳು
ಯಾವುದೇ ವೃತ್ತಿಯಲ್ಲಿ ಮುಖ್ಯವಾಗುತ್ತದೆ. ಹಾಗೂ, ವೃತ್ತಿ ಸಂಬಂಧಿತ ಕೌಶಲಗಳಾದ ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ, ವಿಶ್ಲೇಷಾತ್ಮಕ ಕೌಶಲ ಇತ್ಯಾದಿ ಕೌಶಲಗಳೂ ಎಂಜಿನಿಯರಿಂಗ್ ಉದ್ಯೋಗದ ಆಕಾಂಕ್ಷಿಗಳಲ್ಲಿರಬೇಕು.

ಹಾಗಾಗಿ, ನಿಮ್ಮ ಶಕ್ತಿ, ಸಾಮರ್ಥ್ಯ, ಕುಂದು ಕೊರತೆಗಳನ್ನರಿತು, ಪ್ರಾಮಾಣಿಕ ಪ್ರಯತ್ನಗಳಿಂದ ಈ ಕೌಶಲಗಳನ್ನು ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಳ್ಳಬೇಕು. ನಿಮಗಿರುವ ಗಣಿತದ ತಜ್ಞತೆ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಉಪಯುಕ್ತ. ಹಾಗಾಗಿ ನಮ್ಮ ಅಭಿಪ್ರಾಯದಂತೆ, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಮುಂದುವರಿಯುವುದು ನಿಮ್ಮ ಮೊದಲ ಆದ್ಯತೆಯಾಗಿರಲಿ.
ವ್ಯಕ್ತಿತ್ವ ಮತ್ತು ವೃತ್ತಿಗೆ ಸಂಬಂಧಿಸಿದ ಕೌಶಲಗಳನ್ನು ಕಲಿಯಲು ಇಂದು ವಿಭಿನ್ನವಾದ ಮತ್ತು ವಿಸ್ತಾರವಾದ ಅವಕಾಶಗಳಿವೆ. ವ್ಯಕ್ತಿತ್ವ ವೃದ್ಧಿಸುವ ಕೇಂದ್ರಗಳು, ಕೌಶಲ ತರಬೇತಿ ಕೇಂದ್ರಗಳು, ಕೌಶಲ ಆಯೋಗಗಳು, ಆನ್‌ಲೈನ್ ತರಗತಿಗಳು, ಸಾಧಕರ ಯಶಸ್ಸಿನ ಕಥೆಗಳು, ವಿಡಿಯೊಗಳು, ಪುಸ್ತಕಗಳು ಇತ್ಯಾದಿಗಳನ್ನು ಉಪಯೋಗಿಸಿಕೊಂಡು ವ್ಯಕ್ತಿತ್ವದ ಪರಿಪೂರ್ಣತೆಯನ್ನು ಗಳಿಸಿ, ವೃತ್ತಿ ಜೀವನವನ್ನು ಯಶಸ್ವಿಯಾಗಿ ರೂಪಿಸಿಕೊಳ್ಳಬಹುದು. ಸಂದರ್ಶನಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಮಾರ್ಗದರ್ಶನಕ್ಕಾಗಿ ಈ
ವಿಡಿಯೊ ವೀಕ್ಷಿಸಿ:

3. ಇಂಗ್ಲಿಷ್ ಜ್ಞಾನವನ್ನು ವೃದ್ಧಿಸಿಕೊಂಡು ಕೀಳರಿಮೆ ಇಲ್ಲದೆ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವುದು ಹೇಗೆ ಎಂದು ಕಲಿಸಿಕೊಡಿ ಸರ್.
ವಿಂಧ್ಯಾ ಬುಧ್ಯ, ಶಿರಸಿ.

ನಿಮ್ಮ ಅಗತ್ಯಕ್ಕೆ ತಕ್ಕಂತೆ ಸೂಕ್ತವಾದ ಕಾರ್ಯತಂತ್ರ ಮತ್ತು ಪರಿಶ್ರಮವಿದ್ದಲ್ಲಿ, ಇಂಗ್ಲಿಷ್ ಕಲಿಯಬಹುದು. ಮೊದಲಿಗೆ, ಈ ಸಲಹೆಗಳನ್ನು ಅನುಸರಿಸಿ:
-ಆತ್ಮವಿಶ್ವಾಸ: ಇಂಗ್ಲಿಷ್ ಭಾಷೆಯನ್ನು ಕಲಿಯುವಾಗ ಹಿಂಜರಿಕೆಯಿಲ್ಲದೆ, ಆತ್ಮವಿಶ್ವಾಸದಿಂದ ಪ್ರಾರಂಭಿಸಿ.
-ಓದುವುದು: ಇಂಗ್ಲಿಷ್ ವಾರ್ತಾಪತ್ರಿಕೆಗಳನ್ನು, ಪುಸ್ತಕಗಳನ್ನು, ಲೇಖನಗಳನ್ನು ದಿನನಿತ್ಯ ಓದಿ. ಪದಬಳಕೆ, ವಾಕ್ಯ ರಚನೆ, ವ್ಯಾಕರಣವನ್ನು ಗಮನಿಸಿ. ಸಾಧ್ಯವಾದರೆ, ಉಚ್ಛಾರಣೆಗೆ ಸಹಾಯವಾಗುವಂತೆ ಜೋರಾಗಿ ಓದಿ. ಅರ್ಥವಾಗದ ಪದಗಳನ್ನು ನಿಘಂಟಿನ ಮೂಲಕ ಅರ್ಥೈಸಿಕೊಳ್ಳಿ.
-ಮಾತನಾಡುವುದು: ಆತ್ಮೀಯರೊಂದಿಗೆ ಸರಳವಾದ ವಿಷಯಗಳನ್ನು ಮಾತನಾಡಲು ಪ್ರಯತ್ನಿಸಿ. ತಪ್ಪು-
ಒಪ್ಪುಗಳಾದಲ್ಲಿ, ಸಂಕೋಚವಿಲ್ಲದೆ ಪ್ರಯತ್ನವನ್ನು ಮುಂದುವರೆಸಿ. ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು, ಕನ್ನಡಿಯ ಮುಂದೆ ಆಂಗಿಕ ಭಾಷೆಯನ್ನು ಬಳಸಿ ಮಾತನಾಡಿ.
-ಬರೆಯುವುದು: ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ವಾಕ್ಯರಚನೆಯಲ್ಲಿರುವ ವ್ಯತ್ಯಾಸಗಳನ್ನು ಗಮನಿಸಿ,
ಕಂಪ್ಯೂಟರ್‌ನಲ್ಲಿಯೇ ಸರಳ ವಾಕ್ಯಗಳನ್ನು ರಚಿಸಿ. ಕಾಲಕ್ರಮೇಣ ಕ್ಲಿಷ್ಟವಾದ ವಾಕ್ಯಗಳನ್ನು ರಚಿಸಲು ಪ್ರಾರಂಭಿಸಿ. ನೀವು ರಚಿಸಿದ ವಾಕ್ಯಗಳ ವ್ಯಾಕರಣದಲ್ಲಿನ ಲೋಪದೋಷಗಳನ್ನು ಆ್ಯಪ್‌ (ಮೈಕ್ರೊಸಾಫ್ಟ್ ವರ್ಡ್, ಗ್ರಾಮರ್ಲಿ ಇತ್ಯಾದಿ) ಮೂಲಕ ಸರಿಪಡಿಸಿ. ನಿಮ್ಮ ಅಗತ್ಯಕ್ಕೆ ತಕ್ಕಂತೆ  ಆ್ಯಪ್‌ ಸೆಟಿಂಗ್ಸ್ ಅನ್ನು ಹೊಂದಿಸಿ.
-ವಿಡಿಯೊ, ಚಲನಚಿತ್ರಗಳ ವೀಕ್ಷಣೆ: ಉಪಶೀರ್ಷಿಕೆಗಳಿರುವ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು,
ಸಾಕ್ಷ್ಯಚಿತ್ರಗಳನ್ನು  ವೀಕ್ಷಿಸಿ. ಅದೇ ರೀತಿ, ಯೂಟ್ಯೂಬ್‌ನಲ್ಲಿ ಇಂಗ್ಲಿಷ್ ಕಲಿಕೆಗೆ ನೆರವಾಗುವ ವಿಡಿಯೋಗಳನ್ನು ವೀಕ್ಷಿಸಿ. ಹಾಗೆಯೇ, ಸಾಧಕರ ಭಾಷಣಗಳನ್ನು ಕೇಳುವುದರಿಂದ ಪ್ರೇರೇಪಿತರಾಗುವುದರ ಜೊತೆಗೆ ಇಂಗ್ಲಿಷ್ ಕಲಿಯುವಿಕೆಗೆ
ಸಹಾಯವಾಗುತ್ತದೆ.
-ಮೊಬೈಲ್ ಅಪ್ಲಿಕೇಶನ್ಸ್ ಬಳಕೆ: ಇಂಗ್ಲಿಷ್ ಕಲಿಕೆಗೆ ಅನುಕೂಲವಾಗುವ ಹಲವಾರು ಮೊಬೈಲ್ ಅಪ್ಲಿಕೇಶನ್ಸ್ಗಳನ್ನು (ಹೆಲೊ ಇಂಗ್ಲಿಷ್, ಡ್ಯುಯಲಿಂಗೊ, ಹೆಲೊ ಟಾಕ್ ಇತ್ಯಾದಿ) ಬಳಸಿ. ಈ ಸಲಹೆಗಳನ್ನು ನಿರಂತರವಾಗಿ ಕೆಲವು ತಿಂಗಳ ಕಾಲ ಅನುಸರಿಸಿದ ನಂತರ ಇಂಗ್ಲಿಷ್ ಕಲಿಕೆ ಒಂದು ಹಂತಕ್ಕೆ ತಲುಪುತ್ತದೆ. ಆಗ, ಅಗತ್ಯವಿದ್ದರೆ
ಹೆಚ್ಚುವರಿ ಕೋರ್ಸ್‌ಗಳ ಮೂಲಕ ಪರಿಣತಿಯನ್ನು ಗಳಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು