ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಎಸ್‌ ಸಾಧಕ ಚಂದ್ರಶೇಖರ ಸಂದರ್ಶನ: ಓದಿದರೆ ಸಾಲದು ಬರೆದಿಟ್ಟುಕೊಳ್ಳಿ..

Last Updated 17 ನವೆಂಬರ್ 2021, 19:30 IST
ಅಕ್ಷರ ಗಾತ್ರ

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮಲ್ಲಿನಾಯಕನದೊಡ್ಡಿ ಗ್ರಾಮದ ಚಂದ್ರಶೇಖರ ಅವರು ಬೆಂಗಳೂರಿನಲ್ಲಿ ವಾಣಿಜ್ಯ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿ ಸದ್ಯ ರಾಯಚೂರು ಜಿಲ್ಲೆಯ ವಾಣಿಜ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಪ್ಪ ಮತ್ತು ಅಮ್ಮ ಅನಕ್ಷಸ್ಥರು. ಆದರೆ ಇದು ಓದಿಗೆ ತೊಡಕಾಗಲಿಲ್ಲ. ಯಾವುದೇ ಸರ್ಕಾರಿ ನೌಕರಿ ಹಿಡಿಯಬೇಕು, ಉನ್ನತ ಸಾಧನೆ ಮಾಡಬೇಕು ಎಂಬ ಕನಸನ್ನು ಹೊಂದಿರದ ಒಬ್ಬ ವಿದ್ಯಾರ್ಥಿ ಕೆಎಎಸ್‌ ಪಾಸ್‌ ಮಾಡಿದ್ದು ಹೇಗೆ?

l ನಿಮ್ಮ ಪ್ರಾಥಮಿಕ ಶಿಕ್ಷಣದ ಬಗ್ಗೆ ಹೇಳುತ್ತೀರಾ?

ಮಲ್ಲಿನಾಯಕನದೊಡ್ಡಿ ಶೈಕ್ಷಣಿಕವಾಗಿ ತುಂಬಾ ಹಿಂದುಳಿದ ಗ್ರಾಮ. ಮನೆಯಲ್ಲಿಯೂ ಕೂಡ ಶೈಕ್ಷಣಿಕವಾಗಿ ಪೂರಕ ವಾತಾವರಣವಿರಲಿಲ್ಲ. ಹೀಗಾಗಿ ದನ– ಕರು, ಹೊಲಗದ್ದೆ ಇವುಗಳ ಮಧ್ಯೆ ಶಾಲೆಗೆ ಹೋಗಬೇಕಿತ್ತು. ಪೂರ್ವ ಪ್ರಾಥಮಿಕ ಶಿಕ್ಷಣ ಮಲ್ಲಿನಾಯಕನದೊಡ್ಡಿಯಲ್ಲಿ ಆಯಿತು. ನಮ್ಮದು ಏಕೋಪಾಧ್ಯಾಯ ಶಾಲೆ. ಅರಕೇರಾ ಗ್ರಾಮದಲ್ಲಿ 5ನೇ ತರಗತಿಗೆ ಪ್ರವೇಶ ಪಡೆದ ಮೇಲೆ ಸರ್ಕಾರಿ ವಸತಿ ನಿಲಯಕ್ಕೆ ಸೇರಿದೆ. ಉಚಿತ ಹಾಸ್ಟೆಲ್ ಸೌಲಭ್ಯ ದೊರೆತಿದ್ದರಿಂದ 10ನೇ ತರಗತಿಯವರೆಗೆ ಅಧ್ಯಯನ ಮುಂದುವರೆಸಲು ಸಹಾಯವಾಯಿತು. ಹಾಸ್ಟೆಲ್ ಸೌಕರ್ಯ ಇಲ್ಲದೇ ಹೋಗಿದ್ದರೆ ಅಧ್ಯಯನ ಅಪೂರ್ಣವಾಗುತ್ತಿತ್ತು.

ಮುಂದೆ ದೇವದುರ್ಗದಲ್ಲಿ ಬಸವ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪಿಯುಸಿ ಮತ್ತು ರಾಯಚೂರಿನ ಎಲ್.ಯು.ಡಿ ಪದವಿ ಮಹಾವಿದ್ಯಾಲಯದಲ್ಲಿ ಬಿ.ಎಸ್‌ಸಿ ಪದವಿ ಪೂರೈಸಿದೆ.

l ಸ್ಪರ್ಧಾತ್ಮಕ ಪರೀಕ್ಷೆಗೆ ಓದಬೇಕು ಎಂದು ಅನಿಸಿದ್ದು ಯಾವಾಗ?

ನಾನು ಸರ್ಕಾರಿ ನೌಕರಿ ಪಡೆಯಬೇಕೆಂಬ ಅಥವಾ ಉನ್ನತ ಹುದ್ದೆ ಅಲಂಕರಿಸಬೇಕೆಂಬ ಕನಸೇ ಇಟ್ಟಕೊಂಡಿರಲಿಲ್ಲ. ಪ್ರೌಢಶಾಲೆಯ ವಾರ್ಷಿಕೋತ್ಸವ ನಡೆದಾಗ ಅಂದಿನ ರಾಯಚೂರು ಜಿಲ್ಲಾ ಎಸ್‌ಪಿಯಾಗಿದ್ದ ಅರುಣ ಚಕ್ರವರ್ತಿ ಅವರ ಭಾಷಣ ನನ್ನ ಮನ ತಟ್ಟಿತು. ಮುಂದೆ ಪಿಯುಸಿ ಅಧ್ಯಯನ ಮಾಡುವಾಗ ದೇಶದ ಐಎಎಸ್ ಟಾಪರ್ ವಿಜಯಲಕ್ಷ್ಮಿ ಬಿದರಿ ಅವರ ಸಂದರ್ಶನವನ್ನು ಓದಿದೆ. ಅದು ನನಗೆ ತುಂಬಾ ಹಿಡಿಸಿತಲ್ಲದೆ ಓದುವ ಆಸಕ್ತಿ ಕೆರಳಿಸಿತು. ಆಗಲೇ ನನಗೆ ಸ್ಪರ್ಧಾ ಮನೋಭಾವನೆ ಟಿಸಿಲೊಡೆಯಿತು.

l ತಾವು ಪದವಿ ಪೂರೈಸಿದ ನಂತರ ವಿವಿಧ ಹುದ್ದೆ ನಿಭಾಯಿಸಿದಿರಿ. ಅವುಗಳ ಮಧ್ಯೆ ಕೆಎಎಸ್ ತಯಾರಿ ಹೇಗೆ ನಡೆಯಿತು ?

2011ರಲ್ಲಿ ನಾನು ಮೊದಲ ಬಾರಿ ಕೆಎಎಸ್ ಪರೀಕ್ಷೆ ಬರೆದೆ. ನಿರಂತರ ಅಧ್ಯಯನ, ದಿನ ಪತ್ರಿಕೆ, ನಿಯತಕಾಲಿಕೆಗಳನ್ನು ಕೊಂಡು ಓದಲು ಶುರು ಮಾಡಿದೆ. ಆದರೆ 2011ರ ಪರೀಕ್ಷೆಯಲ್ಲಿ ನಾನು ಆಯ್ಕೆಯಾಗಲಿಲ್ಲ. 2014ರಲ್ಲಿ ಎರಡನೇ ಪಯತ್ನಕ್ಕೆ ಕೈ ಹಾಕಿದೆ. 2008ರಲ್ಲಿ ಪದವಿ ಮುಗಿದ ನಂತರ ಮೂರು ತಿಂಗಳು ಕಾಲ ರಿಸರ್ವ್‌ ಪೊಲೀಸ್ ಕೆಲಸ ಮಾಡಿದೆ. ಓದನ್ನು ಮುಂದುವರೆಸಬೇಕೆಂದು ಪೊಲೀಸ್ ಹುದ್ದೆ ತೊರೆದೆ. ಮುಂದೆ ಏನು ಮಾಡಬೇಕೆಂಬ ಗೊಂದಲ ಉಂಟಾಯಿತು. ಆಗ ಬಿಎಡ್‌ ಪೂರೈಸಿದೆ. ತರುವಾಯ ಸಿವಿಲ್ ಪೊಲೀಸ್‌ ಹುದ್ದೆಗೆ ಆಯ್ಕೆಯಾದೆ. ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಪೊಲೀಸ್‌ ಕಾರ್ಯ; ನಂತರ ಮೊರಾರ್ಜಿ ಶಾಲಾ ಶಿಕ್ಷಕನಾಗಿ ಅಲ್ಲಿ ಒಂದು ವರ್ಷ ಸೇವೆ. 2013 ರಲ್ಲಿ ಗಂಗಾವತಿ ತಾಲ್ಲೂಕಿನ ಗುಂಡೂರ ಗ್ರಾಮದಲ್ಲಿ ಪ್ರೌಢಶಾಲಾ ಶಿಕ್ಷಕನಾಗಿ ಆಯ್ಕೆಯಾದೆ. ಜೊತೆಯಲ್ಲೇ ಅಧ್ಯಯನವೂ ಸಾಗಿತು.

lಎರಡನೇ ಪ್ರಯತ್ನದಲ್ಲಿ ತಾವು ಕೆಎಎಸ್ ಉತ್ತೀರ್ಣರಾದಿರಿ. ತಯಾರಿ ಹೇಗಿತ್ತು ?

ಓದಿನ ಪೂರಕ ವಾತಾವರಣವನ್ನು ನಾನೇ ಕಲ್ಲಿಸಿಕೊಂಡೆ. ನಾನು 2010ರ ಕೆಎಎಸ್ ಆಧಿಕಾರಿ ಕೃಷ್ಣ ಶಾವಂತಗೇರ ಸರ್ ಅವರನ್ನು ಭೇಟಿಯಾದೆ. ಅವರಿಂದ ಸಾಕಷ್ಟು ಕಲಿತೆ. ನನ್ನಲ್ಲಿರುವ ದೋಷಗಳನ್ನು ಅವರು ತೊಡೆದು ಹಾಕಿದರು. ಕೆಎಎಸ್ ಪರೀಕ್ಷೆಗೆ ಅಣಿಯಾಗಲು ತುಂಬಾ ನೆರವಾದರು. ಅವರ ಮಾರ್ಗದರ್ಶನ ನನಗೆ ಮಹತ್ವದ ಮೈಲಿಗಲ್ಲಾಯಿತು.

l ನೀವು ವಿಜ್ಞಾನ ಪದವೀಧರರು. ಕನ್ನಡ ಸಾಹಿತ್ಯ ಓದಲು ಹೇಗೆ ಸಾಧ್ಯವಾಯಿತು ?

ನಾನು 6ನೇ ತರಗತಿ ಓದುವಾಗ ಕನ್ನಡ ಮೇಷ್ಟ್ರು ಶೇಖರಗೌಡ ಅವರ ಕನ್ನಡ ಪಾಠ ನನಗೆ ಮಾದರಿಯಾಯಿತು. ನಾನು ಒಂದು ಬಾರಿ ಕೆಎಎಸ್ ಪರೀಕ್ಷೆ ಬರೆದಿದ್ದರಿಂದ ಪೂರ್ವಭಾವಿ ಪರೀಕ್ಷೆಗೆ ಹೆಚ್ಚು ಒತ್ತು ಕೊಡದೇ ಮುಖ್ಯ ಪರೀಕ್ಷೆಗೆ ಸಿದ್ಧತೆ ನಡೆಸಿದೆ. ಪ್ರಚಲಿತ ವಿದ್ಯಮಾನಕ್ಕೆ ನಿತ್ಯ ದಿನಪತ್ರಿಕೆ ಓದುವುದು ನನ್ನ ಹವ್ಯಾಸವಾಗಿತ್ತು. ಮುಖ್ಯ ಪರೀಕ್ಷೆಯಲ್ಲಿ ನಾನು ಕನ್ನಡ ಸಾಹಿತ್ಯ ಆಯ್ಕೆ ಮಾಡಿಕೊಂಡೆ. ನಾನು ವಿಜ್ಞಾನ ಓದಿದ್ದರೂ ಕನ್ನಡ ಸಾಹಿತ್ಯ ಆಯ್ಕೆ ಮಾಡಿಕೊಂಡಾಗ ನನಗೆ ಅಳುಕಿತ್ತು. ಆದರೆ ಸಾಹಿತ್ಯ ಓದುತ್ತಾ ಹೋದಂತೆ ನನಗೆ ತುಂಬಾ ರುಚಿ ಹತ್ತಿತು. ಕನ್ನಡ ಸಾಹಿತ್ಯದಲ್ಲಿ ವಚನಗಳು, ದಾಸ ಸಾಹಿತ್ಯ, ಸಣ್ಣಕಥೆ, ಜಾನಪದ, ಕವಿ ಪರಿಚಯ ನನಗೆ ತುಂಬಾ ಹಿಡಿಸಿತು. ಕನ್ನಡ ಮಾಧ್ಯಮದಲ್ಲಿ ಓದಿದ್ದರಿಂದ ಮತ್ತಷ್ಟು ಅನುಕೂಲವಾಯಿತು. ಸಾಹಿತ್ಯ ಓದಿದ ನಂತರ ಟಿಪ್ಪಣೆ ಮಾಡಿ, ಅದೇ ಓದಿಕೊಳ್ಳುತ್ತಿದ್ದೆ.

l ಸ್ಪರ್ಧಾರ್ಥಿಗಳಿಗೆ ನೀವು ಕೊಡುವ ಸಲಹೆ ಏನು ?

ವಿದ್ಯಾರ್ಥಿಗಳಲ್ಲಿ ಓದು ಕಡಿಮೆಯಾದರೂ ನಿರಂತರತೆ ಕಾಪಾಡಿಕೊಳ್ಳಬೇಕು. ನಾಲ್ಕಾರು ಪುಸ್ತಕ ಓದಿಕೊಳ್ಳುವುದಕ್ಕಿಂತ ಒಂದೇ ಪುಸ್ತಕವನ್ನು ನಾಲ್ಕಾರು ಬಾರಿ ಓದಿಕೊಳ್ಳಬೇಕು. ಪುಸ್ತಕಗಳೆಲ್ಲವೂ ಮೌಲಿಕವಾದವು. ಇದನ್ನೇ ಓದಿಕೊಳ್ಳಬೇಕು ಎಂಬ ಮಾನದಂಡ ಬೇಕಿಲ್ಲ. ತರಬೇತಿ ಪಡೆಯಬೇಕು, ರಜೆ ಹಾಕಬೇಕು ಅಂತೇನಿಲ್ಲ. ಆತ್ಮವಿಶ್ವಾಸ ಮತ್ತು ಓದುವ ಪ್ರಜ್ಞೆಯನ್ನು ಜೀವಂತವಾಗಿಟ್ಟುಕೊಳ್ಳಬೇಕು. ಎಷ್ಟು ಗಂಟೆ ಓದಿದೆ ಎನ್ನುವುದಕ್ಕಿಂತ ಎಷ್ಟೊಂದು ಅರ್ಥ ಮಾಡಿಕೊಂಡೆ ಎಂಬುದನ್ನು ಮನಗಾಣಬೇಕು. ಬರಿ ಓದುವುದಕ್ಕಿಂತ ಬರೆದಿಟ್ಟುಕೊಳ್ಳುತ್ತಾ ಹೋದರೆ ಪರಿಪೂರ್ಣತೆ ಉಂಟಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT