ಸೋಮವಾರ, ಜುಲೈ 4, 2022
23 °C

ತಾಳ್ಮೆ, ಪರಿಶ್ರಮದಿಂದ ಸಾಧನೆ..

ಸಂದರ್ಶನ: ಶಿ.ಗು. ಹಿರೇಮಠ Updated:

ಅಕ್ಷರ ಗಾತ್ರ : | |


Caption

ಹುನಗುಂದ ತಾಲ್ಲೂಕಿನ ಕೂಡಲಸಂಗಮದ ಸಮೀಪದ ಕಟಗೂರ ಗ್ರಾಮದ ಮಮತಾ ಹೊಸಗೌಡರ ಅವರು ದಾವಣಗೇರಿ ಜಿಲ್ಲಾ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2014ರಲ್ಲಿ 17ನೇ ರ‍್ಯಾಂಕ್‌ನೊಂದಿಗೆ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆಲಮಟ್ಟಿ ಅಣೆಕಟ್ಟು ಪ್ರದೇಶದಲ್ಲಿರುವ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪೂರೈಸಿದ ಇವರು ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಾಹ್ಯವಾಗಿಯೇ ಪದವಿ ಪೂರೈಸಿದ್ದಾರೆ.

ಬೀಳಗಿ ತಾಲ್ಲೂಕಿನ ಮನ್ನಿಕೇರಿ ಗ್ರಾಮದಲ್ಲಿ ಹತ್ತು ವರ್ಷ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಒಂದು ಕಡೆ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತ, ಇನ್ನೊಂದೆಡೆ ಮನೆ, ಸಂಸಾರವನ್ನು ತೂಗಿಸುತ್ತ ಕೆಎಎಸ್ ಪರೀಕ್ಷೆಗೆ ಸಿದ್ಧರಾಗಿ ಯಶಸ್ವಿಯಾಗಿ ಇಂದಿನ ಯುವತಿಯರಿಗೆ ಮಾದರಿಯಾಗಿದ್ದಾರೆ.

*ನೀವು ಪಡೆದ ಶಿಕ್ಷಣದ ಬಗ್ಗೆ ಒಂದಿಷ್ಟು ವಿವರಿಸುತ್ತೀರಾ?

ನನ್ನ ಸ್ವಂತ ಊರು ಹುನಗುಂದ ತಾಲ್ಲೂಕಿನ ಕಟಗೂರು. ನಮ್ಮ ತಂದೆಯವರು ಆಲಮಟ್ಟಿಯ ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿ ನೌಕರಿ ಮಾಡುತ್ತಿದ್ದರು. ನಾನು ಒಂದನೇ ತರಗತಿಯಿಂದ ಏಳರವರೆಗೆ ಆಲಮಟ್ಟಿಯ (ಡ್ಯಾಂ) ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಹರ್ಡೇಕರ್ ಮಂಜಪ್ಪ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಓದಿದೆ. ಬಾಗಲಕೋಟೆಯ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪಿಯುಸಿ ಅಧ್ಯಯನದ ನಂತರ ಇಳಕಲ್ಲಿನ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಡಿಎಡ್ ಅಧ್ಯಯನ ಮಾಡಿದೆ. 2005ರಲ್ಲಿ ಬೀಳಗಿ ತಾಲ್ಲೂಕಿನ ಮನ್ನಿಕೇರಿ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ನೇಮಕವಾದೆ. ಬಿಎ ಪದವಿ ಮತ್ತು ಬಿಇಡಿ ಶಿಕ್ಷಣವನ್ನು ದೂರಶಿಕ್ಷಣದಲ್ಲೇ ಅಧ್ಯಯನ ಮಾಡಿದೆ.

*ಸ್ಪರ್ಧಾತ್ಮಕ ಪರೀಕ್ಷೆ ಕಡೆಗೆ ಯಾವಾಗ ಆಸಕ್ತಿ ಮೂಡಿತು?

ಪಿಯುಸಿಯಲ್ಲಿ ವಿಜ್ಞಾನ ಆಯ್ಕೆ ಮಾಡಿಕೊಂಡ ನಾನು ಎಂಜಿನಿಯರಿಂಗ್ ಅಥವಾ ಮೆಡಿಕಲ್ ಮಾಡುವ ಆಸೆಯಿದ್ದರೂ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡೆ. ನನ್ನ ಬಹಳಷ್ಟು ಸ್ನೇಹಿತರು ಎಂಜಿನಿಯರ್ ಮತ್ತು ಡಾಕ್ಟರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆಗ ನಾನು ಎಲ್ಲೋ ಎಡವಿದ್ದೇನೇನೋ ಅನಿಸುತ್ತಿತ್ತು. ಆಗ ನನಗೆ ಅಂಥ ಅವಕಾಶವಿಲ್ಲದಿದ್ದರೂ ಕೆಎಎಸ್ ಮತ್ತು ಐಎಎಸ್ ಪರೀಕ್ಷೆ ತೆಗೆದುಕೊಂಡು ಉನ್ನತ ಹುದ್ದೆಗೆ ಏರಬಹುದಲ್ಲ ಎಂದೆನಿಸಿತು. ಅದಲ್ಲದೇ ಸಮಾಜ ಸೇವೆ ಮಾಡಬೇಕೆಂಬ ತುಡಿತ ನನ್ನಲ್ಲಿತ್ತು. ನನ್ನಲ್ಲಿ ಇನ್ನೂ ಓದುವ ಸಾಮರ್ಥ್ಯವಿದೆ ಎಂದೆನಿಸಿತು. ಆಗ ನಾನು 2014ರಲ್ಲಿ ಕೆಎಎಸ್ ಪರೀಕ್ಷೆಗೆ ಸಿದ್ಧಳಾದೆ.

*ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಾ ಕೆಎಎಸ್ ಪರೀಕ್ಷೆ ಬರೆಯುವುದು ಕಷ್ಟವೆನಿಸಲಿಲ್ಲವೇ ?

ನಾನು ಕೆಎಎಸ್ ಪರೀಕ್ಷೆ ಬರೆಯಲೇಬೇಕೆಂಬ ಅದಮ್ಯ ಉತ್ಸಾಹದಲ್ಲಿದ್ದೆ. ಒಂದು ಕಡೆ ಮನೆಯ ಜವಾಬ್ದಾರಿ, ಇನ್ನೊಂದು ಕಡೆ ಶಾಲೆಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಬೇಕಿತ್ತು. ಓದಿನ ಜೊತೆಗೆ ನನ್ನ ನೌಕರಿಗೂ ನ್ಯಾಯ ಒದಗಿಸಬೇಕಾಗಿತ್ತು. ಮನೆ ಮತ್ತು ಶಾಲೆ ಎರಡನ್ನೂ ನಿಭಾಯಿಸಬೇಕೆಂದು ನಾನು ಎದೆಗುಂದಲಿಲ್ಲ. ನನ್ನ ಪತಿಯಾದ ಜಗದೀಶ ಪಾಟೀಲ ನನ್ನ ಬೆಂಬಲಕ್ಕೆ ನಿಂತರು. ನಿತ್ಯ ಅವರು ನನಗೆ ಅಧ್ಯಯನ ಮಾಡಲು ಸಹಾಯ ಮಾಡುತ್ತಿದ್ದರು. ಮನೆಯಲ್ಲಿ ನನ್ನ ಎರಡು ಮಕ್ಕಳನ್ನು ಸಂಭಾಳಿಸುತ್ತಾ ಶಾಲೆಯಲ್ಲಿರುವ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾ ಜೀವನ ಸಾಗಿಸಬೇಕಾಗಿತ್ತು. ನಾನು ಶಿಕ್ಷಕಿಯಾಗಿದ್ದರಿಂದ ಶನಿವಾರ, ಭಾನುವಾರ ರಜೆ ಸಿಗುತ್ತಿತ್ತು. ಅಲ್ಲದೆ ಅಕ್ಟೋಬರ್ ಮತ್ತು ಬೇಸಿಗೆ ರಜೆಗಳನ್ನು ಅಧ್ಯಯನಕ್ಕಾಗಿಯೇ ಮೀಸಲಿಡುತ್ತಿದ್ದೆ. ನನ್ನ ಸಹೋದರರಾದ ಮಹೇಶ, ಮಹಾಂತೇಶ, ರಮೇಶ ರೊಟ್ಟಿ ಅವರ ಸಹಕಾರವನ್ನು ನಾನು ಎಂದಿಗೂ ಮರೆಯಲಾರೆ.

*ಮೊದಲ ಪ್ರಯತ್ನದಲ್ಲೇ ಕೆಎಎಸ್ ಪರೀಕ್ಷೆ ಪಾಸಾಗಿದ್ದೀರಿ. ಅದು ಹೇಗೆ ಸಾಧ್ಯವಾಯಿತು?

ನನ್ನ ಪತಿಯವರು ಮೊದಮೊದಲು ನನಗೆ ಕೆಎಎಸ್ ಪರೀಕ್ಷೆಗೆ ಸಮ್ಮತಿಸಲಿಲ್ಲ. ‘ಶಿಕ್ಷಕಿಯಾಗಿದ್ದಿಯಾ. ಮತ್ತೇಕೆ ಬೇರೆ ಹುದ್ದೆ?’ ಎಂಬ ಪ್ರಶ್ನೆಯನ್ನು ನನ್ನ ಮುಂದಿಟ್ಟರು. ನನ್ನ ಮನದ ಇಂಗಿತ ಮತ್ತು ನನ್ನ ಗುರಿಯನ್ನು ತಿಳಿಸಿದಾಗ ಸಂತೋಷಪಟ್ಟು ಪ್ರೋತ್ಸಾಹಿಸಿದರು. ನನ್ನ ಸಹೋದರರು ನನಗೆ ಅಧ್ಯಯನಕ್ಕೆ ಬೇಕಾದ ಸಾಮಗ್ರಿಗಳನ್ನು ತಂದುಕೊಡುವಲ್ಲಿ ನೆರವಾದರು. ಸಮಯದ ಹೊಂದಾಣಿಕೆ ಮಾಡಿಕೊಂಡೆ. ನನ್ನ ವಿಷಯ ಗ್ರಾಮೀಣಾಭಿವೃದ್ಧಿ. ಆ ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಯನ ಪ್ರಾರಂಭಿಸಿದೆ. ಅನುಕ್ರಮವಾಗಿ ಓದುತ್ತಾ ಹೋದೆ. ಅಷ್ಟೇ ಅಲ್ಲದೆ ಪರೀಕ್ಷೆಗೆ ಮುಖ್ಯವಾಗಿ ಏನು ಬೇಕು ಎಂಬುದನ್ನು ಅರಿತೆ. ಪಠ್ಯಕ್ರಮವನ್ನು ಮುಂದಿಟ್ಟುಕೊಂಡು ನಿರಂತರ ಅಧ್ಯಯನ ನಡೆಸಿದೆ. ನಿತ್ಯ ಪ್ರಚಲಿತ ವಿದ್ಯಮಾನಗಳನ್ನು ಬರೆದಿಟ್ಟುಕೊಳ್ಳುತ್ತಿದ್ದೆ. ಎಷ್ಟು ಗಂಟೆ ಓದಿಕೊಳ್ಳಬೇಕು ಎಂಬುದಕ್ಕಿಂತ ಏನು ಮತ್ತು ಯಾವುದನ್ನು ಓದಿಕೊಳ್ಳಬೇಕು ಎಂಬುದು ಬಹಳ ಮುಖ್ಯ.

*ಒಂದು ಕಡೆ ನೌಕರಿ, ಇನ್ನೊಂದೆಡೆ ಸಂಸಾರದ ನೊಗ.. ನಿಮಗೆ ಕಷ್ಟವಾಗಲಿಲ್ಲವೆ ?

ಎರಡನ್ನೂ ನಿಭಾಯಿಸಿಲು ಮೊದಲಿಗೆ ಸ್ವಲ್ಪ ಕಷ್ಟವೆನಿಸಿತು. ಸಮಯದ ಹೊಂದಾಣಿಕೆ ಮಾಡಿಕೊಂಡೆ. ಮೊಬೈಲ್, ದೂರದರ್ಶನ, ಸಾಮಾಜಿಕ ಜಾಲತಾಣದಿಂದ ದೂರವಿದ್ದೆ. ಎಲ್ಲಕ್ಕಿಂತ ಮುಖ್ಯವಾಗಿ ನಾನು ಪಾಸಾಗಲೇಬೇಕೆಂದು ದೃಢನಿರ್ಧಾರ ಮಾಡಿದ್ದೆ. ಅದಕ್ಕೆ ತಕ್ಕಂತೆ ಪ್ರತಿಯೊಂದನ್ನು ನಿಭಾಯಿಸುತ್ತಾ ನಡೆದೆ. ಎಷ್ಟೇ ತೊಂದರೆ ಬಂದರೂ ಧೃತಿಗೆಡಲಿಲ್ಲ. ಮನೆಯವರ ಸಹಕಾರ ಮತ್ತು ಪ್ರೋತ್ಸಾಹವಿರದಿದ್ದರೆ ಖಂಡಿತ ನನಗೆ ನನ್ನ ಗುರಿ ತಲುಪಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ತಾಯಿಯವರು ನನ್ನ ಸಂಸಾರ ಜೊತೆ ಇದ್ದು ನನಗೆ ಓದಲು ಅವಕಾಶ ನೀಡಿದರು. ನನ್ನ ಮನೆಯ ಪ್ರತಿಯೊಬ್ಬರ ಸಹಕಾರವನ್ನು ಮನದುಂಬಿ ನೆನೆಯುತ್ತೇನೆ. ನಾನು ತಹಶೀಲ್ದಾರ್ ಆಗಬೇಕೆಂದಿದ್ದೆ. ಪ್ರಸ್ತುತ ದಾವಣಗೇರಿ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಸುತ್ತಿದ್ದೇನೆ. ಅದು ನನಗೆ ಹೆಮ್ಮೆ ಎನಿಸುತ್ತದೆ.

*ಇಂದಿನ ಸ್ಪರ್ಧಾರ್ಥಿಗಳಿಗೆ ನೀವು ಕೊಡುವ ಸಲಹೆ ಏನು ?

ಇಂದಿನ ವಿದ್ಯಾರ್ಥಿಗಳು ಕೆಎಎಸ್, ಐಎಎಸ್ ಮತ್ತು ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕೆಂಬ ಉತ್ಸಹದಲ್ಲಿರುತ್ತಾರೆ. ನಾವು ಕೈ ಇಟ್ಟ ತಕ್ಷಣ ದೊರೆಯಲಾರದು. ಅದಕ್ಕೆ ತಾಳ್ಮೆ ಮತ್ತು ಕಠಿಣ ಪರಿಶ್ರಮ ಅಗತ್ಯ. ಸ್ಪರ್ಧಾರ್ಥಿಗಳು ಆದಷ್ಟು ಸಾಮಾಜಿಕ ಜಾಲತಾಣಗಳಿಂದ ದೂರವಿರುವುದು ಒಳ್ಳೆಯದು. ಪರೀಕ್ಷೆ ದೃಷ್ಟಿಕೋನದಿಂದ ಮಾತ್ರ ಇಂಟರ್‌ನೆಟ್ ಬಳಸಬೇಕು. ಅನವಶ್ಯಕವಾಗಿ ನಾವು ನೆಟ್ ಬಳಸುತ್ತಾ ಕುಳಿತರೆ ಕಾಲಹರಣವಾಗುತ್ತದೆ. ಕೆಎಎಸ್ ಪಾಸಾಗಬೇಕೆಂಬ ಆಸೆಯಿದ್ದರೂ ಅದು ನೆರವೇರದಿದ್ದರೆ ನಿರಾಸೆಯಾಗಬಾರದು. ನಮ್ಮ ಅಧ್ಯಯನ ಎಂದಿಗೂ ವ್ಯರ್ಥವಾಗುವುದಿಲ್ಲ. ಉನ್ನತ ಗುರಿ ಹೊಂದಿರಬೇಕು. ಆದರೆ ಫಲಗೊಡದಿದ್ದರೆ ಸಿಕ್ಕ ಅವಕಾಶವನ್ನು ಕೈ ಚೆಲ್ಲದೆ ಸದುಪಯೋಗಪಡಿಸಿಕೊಳ್ಳಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು