ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಬ್ಯಾಂಕ್‌ ಪರೀಕ್ಷೆಗೆ ಏನನ್ನು ಓದಬೇಕು?

Last Updated 16 ಜೂನ್ 2021, 19:30 IST
ಅಕ್ಷರ ಗಾತ್ರ

ಸದ್ಯ ಗ್ರಾಮೀಣ ಬ್ಯಾಂಕ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಸ್ಪರ್ಧಾರ್ಥಿಗಳು ಯಾವ ರೀತಿ ಸಿದ್ಧತೆ ನಡೆಸಬೇಕು ಎಂಬುದರ ವಿವರ ಇಲ್ಲಿದೆ.

ವಿವಿಧ ಗ್ರಾಮೀಣ ಬ್ಯಾಂಕ್‌ಗಳು ತಮ್ಮಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿವೆ. ನಮ್ಮ ರಾಜ್ಯದ ಕರ್ನಾಟಕ ಗ್ರಾಮೀಣ ಬ್ಯಾಂಕ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸಹಿತ ದೇಶದಾದ್ಯಂತ ಇರುವ ವಿವಿಧ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 10,710 ಹುದ್ದೆಗಳನ್ನು ನೇಮಿಸಿಕೊಳ್ಳಲು ಐಬಿಪಿಎಸ್ ಅರ್ಜಿ ಅಹ್ವಾನಿಸಿದೆ. ಪದವೀಧರ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ತಿಂಗಳ 28 ಅರ್ಜಿ ಸಲ್ಲಿಸಲು (ಜೂನ್ 28, 2021) ಕೊನೆಯ ದಿನ.

ಯಾವೆಲ್ಲ ವಿಷಯದ ಜ್ಞಾನ ಪಡೆದಿರಬೇಕು?
ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಹೊರಟ ಎಲ್ಲಾ ವಿದ್ಯಾರ್ಥಿಗಳ ಎದುರಿರುವ ಬಹು ಮುಖ್ಯ ಪ್ರಶ್ನೆಯಿದು. (1) ಅಂಕಗಣಿತ, (2) ರೀಸನಿಂಗ್, (3) ಸಾಮಾನ್ಯ ಜ್ಞಾನ (ಜಿಕೆ), (4) ಕಂಪ್ಯೂಟರ್ ನಾಲೆಜ್‌, (5) ಜನರಲ್ ಇಂಗ್ಲಿಷನ್ನೊಳಗೊಂಡ ಬಹು ಆಯ್ಕೆ ಪ್ರಶ್ನೆಗಳ ಒಂದು ಪ್ರಶ್ನೆ ಪತ್ರಿಕೆ ಇರುತ್ತದೆ. ಇದನ್ನು ಎದುರಿಸಲು ಸೂಕ್ತ ಜ್ಞಾನ ಹೊಂದಿರಬೇಕು.

ಏನನ್ನು ಓದಬೇಕು?
ಹೌದು! ಏನನ್ನು ಓದಬೇಕು? ಈ ಪ್ರಶ್ನೆ ಬಿಡಿಸಲು ನಾವು ಒಮ್ಮೆ ಹಿಂದಿನ ವಿವಿಧ ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ತಿರುವಿ ಹಾಕಿದರೆ ಅದರ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಬಹುದು. ಹಾಗೆ ಮಾಡಿದಾಗ ನಮಗೆ ಗೊತ್ತಾಗುವ ಅಂಶವೆಂದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆಗಳು ನೇರವಾಗಿರದೇ ಸ್ವಲ್ಪ ಸಂಕೀರ್ಣವಾಗಿರುವುದು ಕಂಡುಬರುತ್ತದೆ. ಆದ್ದರಿಂದ `ಪ್ರತಿಯೋಗಿತಾ ದರ್ಪಣ’ವನ್ನು ಉಪಯೋಗಿಸಬಹುದು.

ಅಂಕಗಣಿತಕ್ಕೆ ಆರ್.ಎಸ್. ಅಗರ್‌ವಾಲರ ಸಬ್ಜೆಕ್ಟಿವ್ & ಒಬ್ಜೆಕ್ಟಿವ್ ಅಂಕಗಣಿತವನ್ನು ಹಾಗೂ ಹಳೆಯ ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳನ್ನು ಒಳಗೊಂಡ ಕ್ರಾನಿಕಲ್ ಪ್ರಕಾಶನದ ಜನರಲ್ ಅರ್ಥ್‌ಮೆಟಿಕ್ಸ್‌ ಅನ್ನು ಉಪಯೋಗಿಸಬಹುದು. ಅರ್ಥಮೆಟಿಕ್ಸ್‌ನಲ್ಲಿ ಮೂಲ ಜ್ಞಾನದಿಂದ ಹಿಡಿದು ಉದ್ದುದ್ದ ಸಮಸ್ಯೆಯ ತನಕ ತರಾವರಿ ಲೆಕ್ಕಗಳನ್ನು ಕೇಳುತ್ತಾರೆ. ಬಹುತೇಕ ಅಭ್ಯರ್ಥಿಗಳು ಕಷ್ಟವೆಂದು ಭಾವಿಸುತ್ತಾರೆ. ಆದರೆ ವಾಸ್ತವ ಅದಲ್ಲ, ಆಸಕ್ತಿಯಿದ್ದರೆ ಎಲ್ಲರೂ ಬಿಡಿಸಬಹುದು, ಪರೀಕ್ಷೆಯಲ್ಲಿ ನೀಡುವ ಪ್ರಶ್ನೆಗಳು ಕಷ್ಟ ಎನ್ನುವುದಕ್ಕಿಂತಲೂ ಅವು ಉದ್ದುದ್ದವಾಗಿರುತ್ತವೆ. ಅನೇಕ ಸಲ ಪ್ರಶ್ನೆಗಳನ್ನು ಓದುವಷ್ಟರಲ್ಲಿಯೇ ಸಮಯ ಮುಗಿದು ಹೋಗುವ ಸಂಭವ ಹೆಚ್ಚು, ಆದರಿಂದ ಮನೆಯಲ್ಲಿಯೇ ನಾವು ಹೆಚ್ಚು ಹೆಚ್ಚು ಆ ಮಾದರಿಯ ಪ್ರಶ್ನೆಗಳನ್ನು ಬಿಡಿಸಿ ಅಭ್ಯಾಸ ಮಾಡಿಕೊಂಡಿದ್ದರೆ ಪರೀಕ್ಷಾ ಕೊಠಡಿಯಲ್ಲಿ ಪರದಾಡುವುದು ತಪ್ಪುತ್ತದೆ. ಒಂದಿಷ್ಟು ಶಾರ್ಟ್‌ಕಟ್‌ಗಳನ್ನು ಹಾಗೂ ವೇದಿಕ್ ಗಣಿತದ ಅಭ್ಯಾಸ ಕೂಡಾ ಇದಕ್ಕೆ ಪೂರಕವಾದೀತು. ಎಂ ಟೈರಾ ಅವರು ಬರೆದಿರುವ ‘ಕ್ವಿಕರ್ ಮ್ಯಾಥ್ಸ್’ ಪುಸ್ತಕವು ಶಾರ್ಟ್‌ಕಟ್‌ಗಳ ಅಧ್ಯಯನಕ್ಕೆ ಪೂರಕವಾದ ಪುಸ್ತಕಗಳಲ್ಲಿ ಒಂದು.

ರೀಸನಿಂಗ್‌
ರೀಸನಿಂಗ್‌ನಲ್ಲಿ ಎರಡು ಬಗೆ - ವರ್ಬಲ್ ರೀಸನಿಂಗ್ ಮತ್ತು ನಾನ್ ವರ್ಬಲ್ ರೀಸನಿಂಗ್. ಈ ವಿಭಾಗಗಳಿಂದ ಪ್ರಶ್ನೆಗಳು ಬರುತ್ತವೆ. ಇದಕ್ಕೂ ಸಹಾ ಅಗರ್‌ವಾಲರ ವರ್ಬಲ್ & ನಾನ್ ವರ್ಬಲ್ ರೀಸನಿಂಗ್ ಪುಸ್ತಕ ಬಳಸಬಹುದು.

ರೀಸನಿಂಗ್‌ನಲ್ಲಿ ಸಹ ಉದ್ದುದ್ದ ಸಮಸ್ಯೆಗಳನ್ನು ನೀಡಿರುತ್ತಾರೆ, ಹೆಚ್ಚು ತಾರ್ಕಿಕವಾದ ಮತ್ತು ಅನಾಲೆಟಿಕ್‌ ಸ್ವರೂಪದ ಪ್ರಶ್ನೆಗಳಿರುತ್ತವೆ. ಚಿತ್ರಗಳ ಸಹಾಯದಿಂದ ನಾವು ಯೋಗ್ಯ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾದ ಸಮಸ್ಯೆಗಳಿರುವ ಪ್ರಶ್ನೆಗಳನ್ನು ನೀಡಲಾಗುತ್ತದೆ. ಇಂತಹ ತಾರ್ಕಿಕವಾದ ಸಮಸ್ಯೆಗಳನ್ನು ಬಿಡಿಸಲು ಭಯಪಡಬೇಕಾಗಿಲ್ಲ. ಬದಲಾಗಿ ಪ್ರತಿದಿನ ನಿಗದಿತ ಸಮಯದಲ್ಲಿ ನಿರ್ದಿಷ್ಟ ಅಭ್ಯಾಸ ಮಾಡಿದರೆ ಸಾಕು.

ಸಾಮಾನ್ಯ ಜ್ಞಾನ (ಜನರಲ್ ನಾಲೆಜ್‌) ಪ್ರಶ್ನೆಪತ್ರಿಕೆಯು ಸಾಗರವಿದ್ದಂತೆ, ಪ್ರಚಲಿತ ಘಟನೆಗಳಿಂದ ಹೆಚ್ಚು ಪ್ರಶ್ನೆಗಳು ಬರುತ್ತವೆ. ಅದರಲ್ಲೂ ಆರ್ಥಿಕರಂಗಕ್ಕೆ ಸಂಬಂಧಿಸಿದ ಪ್ರಶ್ನೆಗಳೇ ಬಹುಪಾಲು ಇರುತ್ತವೆ. ಆದ್ದರಿಂದ ಅದರತ್ತ ಗಮನ ಹರಿಸಿ. ಹಾಗೆಂದು ಅದೇ ಪ್ರಧಾನವಾಗಿರುತ್ತದೆ ಎಂದಲ್ಲ, ಸುದ್ದಿಯಲ್ಲಿರುವ ಪ್ರಮುಖ ವ್ಯಕ್ತಿಗಳು, ಸುದ್ದಿಯಲ್ಲಿರುವ ಪ್ರಮುಖ ಸ್ಥಳಗಳ ಮಾಹಿತಿಯನ್ನು ತಿಳಿದಿಟ್ಟುಕೊಳ್ಳಬೇಕು, ಪ್ರಚಲಿತ ವಿಷಯ (ಉದಾ: ಬ್ಯಾಂಕುಗಳ ವಿಲೀನದಿಂದ ದೊಡ್ಡ ಬ್ಯಾಂಕ್ ನಿರ್ಮಾಣ, ಕೊರೊನಾ ಸಂಕಷ್ಟ ಮತ್ತು ಅದರಿಂದಾದ ಆರ್ಥಿಕ ಹಾನಿ, ಆರ್ಥಿಕ ಬೆಳವಣಿಗೆಯ ಮೇಲೆ ಕೊರೊನಾ ಸಂಕಷ್ಟದಿಂದ ಆದ ದುಷ್ಪರಿಣಾಮ, ಇಸ್ರೊ ಸಾಧನೆ. ನೆರೆ ಪರಿಹಾರ, ಚಂಡಮಾರುತದಿಂದಾದ ಆರ್ಥಿಕ ಹಾನಿ, ಆರ್ಥಿಕ ಮಹಾ ಕುಸಿತ ಇತ್ಯಾದಿ)ಗಳ ಬಗ್ಗೆ ಒಂದಿಷ್ಟು ನಿಮಗೆ ತಿಳಿದಿರಲಿ. ದಿನವೂ ವಾರ್ತೆಗಳನ್ನು ನೋಡಲು ಮರೆಯದಿರಿ. ದಿನ ಪತ್ರಿಕೆಯನ್ನು ಓದುವುದು ನಿತ್ಯದ ಅಭ್ಯಾಸವಾಗಿಟ್ಟುಕೊಂಡರೆ ಉತ್ತಮ. ಜೊತೆಗೆ ಯಾವುದಾದರೂ ಉತ್ತಮ ವಾರ್ಷಿಕ ಕೋಶ (ಮನೋರಮ ಈಯರ್ ಬುಕ್‌ನಂತಹ) ಓದಬಹುದು.

ಪ್ರಬಂಧ ರೂಪದಲ್ಲಿ ಬರೆಯುವ ಉತ್ತರಗಳಿಗೆ ನಿಯಮವಿಲ್ಲದಿದ್ದರೂ, ಪ್ರಬಂಧದಲ್ಲಿ ಪೀಠಿಕೆ, ವಿಷಯ ವಸ್ತು ಮತ್ತು ಸಮಾರೋಪಗಳನ್ನು ಬಳಸುವುದು ವಾಡಿಕೆ. ಆದರೆ ಇಂತಹ ಪರೀಕ್ಷೆಗಳಲ್ಲಿ ಅದರ ಅಗತ್ಯ ಅನೇಕ ಸಲ ಕಂಡುಬರುವುದಿಲ್ಲ. ಪ್ರಶ್ನೆಗಳನ್ನು ಗಮನಿಸಿ ಉತ್ತರಿಸಲು ಅಗತ್ಯವಾದ ಜಾಗವನ್ನು ಎಷ್ಟು ಕೊಟ್ಟಿದ್ದಾರೆ ಎಂಬುದನ್ನು ನೋಡಿಕೊಂಡು ನೇರವಾಗಿ ವಿಷಯವಸ್ತುವನ್ನು ಪ್ರವೇಶಿಸಬಹುದು.

(ಲೇಖಕ: ನಿರ್ದೇಶಕರು, ಜ್ಞಾನಭಾರತಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT