ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐ: ತಂತ್ರಜ್ಞಾನ ಕ್ಷೇತ್ರದ ಭವಿಷ್ಯತ್ತೇ?

Last Updated 2 ಸೆಪ್ಟೆಂಬರ್ 2020, 20:44 IST
ಅಕ್ಷರ ಗಾತ್ರ

ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಶೀನ್ ಲರ್ನಿಂಗ್ ವಿಷಯಗಳು ಭವಿಷ್ಯ ನಿರ್ಧರಿಸಬಲ್ಲ ಆಯ್ಕೆಗಳು. ಸದ್ಯಕ್ಕೆ ಬಹು ಬೇಡಿಕೆಯ ಈ ಕೋರ್ಸ್‌ಗಳ ಆಯ್ಕೆ ಹೇಗೆ ಮತ್ತು ಉದ್ಯೋಗಾವಕಾಶಗಳು ಎಷ್ಟಿವೆ ಎಂಬುದರ ಕುರಿತು ವಿವರಗಳು ಇಲ್ಲಿವೆ.

ಇತ್ತೀಚಿನ ದಿನಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ), ಮಷೀನ್ ಲರ್ನಿಂಗ್ ಎಂಬ ಎರಡು ಪದಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಮೇಳೈಸುತ್ತಿವೆ. ಎರಡೂ ವಿಚಾರಗಳನ್ನು ಸರಿಯಾಗಿ ಅರಿತವರಿಗೆ ಐಟಿ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯವಿದೆ ಎಂಬುದನ್ನೂ ಕೇಳಿರಬಹುದು. ಬೆಳಗ್ಗೆ ಕಾಲಿಟ್ಟ ತಂತ್ರಜ್ಞಾನ ಸಂಜೆಯೊಳಗೆ ಹಳತಾಗುವ ಈ ಕಾಲಘಟ್ಟದಲ್ಲಿ ಇವೆರಡೂ ಕ್ಷೇತ್ರಗಳೇ ನಾಳೆಯನ್ನು ನಿರ್ಧರಿಸಲಿರುವುದು ಎಂದು ತಂತ್ರಜ್ಞರು ಹೇಳುತ್ತಿರುವುದಕ್ಕೆ ನಿಖರ ಕಾರಣವೂ ಇಲ್ಲದೇ ಇಲ್ಲ.

ಏನು ಈ ಎಐ ಮತ್ತು ಎಂಎಲ್?

ಪ್ರೋಗ್ರಾಮ್‌ ಮಾಡಿಟ್ಟ ಹಾಗೆ ಅದಕ್ಕೆ ತಕ್ಕಂತೆ ವರ್ತಿಸುವ ಪ್ರಕ್ರಿಯೆಯನ್ನು ಕೃತಕ ಬುದ್ಧಿಮತ್ತೆ ಎನ್ನಲಾಗುತ್ತದೆ. ಎಐಗೆ ಉತ್ತಮ ಉದಾಹರಣೆಯಿದ್ದರೆ ಅದು ರೋಬೊಟ್ ತಂತ್ರಜ್ಞಾನ. ಯಾವ ಪ್ರಶ್ನೆಗೆ ಹೇಗೆ ಉತ್ತರಿಸಬೇಕು, ಯಾವ ಆಜ್ಞೆಗೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬುದನ್ನು ಪೂರ್ವನಿರ್ಧರಿತವಾಗಿ ರೋಬೊಟ್‌ನಲ್ಲಿ ಅಳವಡಿಸಿರುವುದು ತಿಳಿದಿರುವ ಸಂಗತಿಯೇ. ಎಐ ನಿಖರತೆಗಿಂತ ಒಟ್ಟಾರೆಯ ಫಲಿತಾಂಶಕ್ಕೆ ಹೆಚ್ಚು ಒತ್ತು ನೀಡುತ್ತದೆ. ಇನ್ನು ಮಷೀನ್ ಲರ್ನಿಂಗ್ ಎಂದರೆ ಕೊಟ್ಟಿರುವ ದತ್ತಾಂಶಗಳನ್ನೇ ಬಳಸಿಕೊಂಡು ಖುದ್ದು ಯಂತ್ರವೇ ನಿರ್ಧಾರ ಕೈಗೊಳ್ಳುವಂತೆ ಮಾಡುವುದು. ಇಲ್ಲಿ ಮೊದಲೇ ಮಾಡಿಟ್ಟ ಪ್ರೋಗ್ರಾಮ್‌ಗಳು ಹೆಚ್ಚೇನೂ ನೆರವಾಗುವುದಿಲ್ಲ. ಪ್ರೊಗ್ರಾಮರ್‌ಗಳಿಗೂ ಬರೆಯಲಾಗದ ಕ್ಲಿಷ್ಟ ಸಮಸ್ಯೆಗಳಿಗೆ ಖುದ್ದು ಯಂತ್ರವೇ ಪ್ರತಿಕ್ರಿಯೆ ನೀಡುವಂತೆ ಮಾಡುವುದು ಇದರ ವೈಶಿಷ್ಟ್ಯ. ಆದ್ದರಿಂದ ಮಷೀನ್ ಲರ್ನಿಂಗ್ ಫಲಿತಾಂಶಕ್ಕಿಂತ ಹೆಚ್ಚಾಗಿ ನಿಖರತೆಗೆ ಆದ್ಯತೆ ನೀಡುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಮಷೀನ್ ಲರ್ನಿಂಗ್ ಎನ್ನುವುದು ಕೃತಕ ಬುದ್ಧಿಮತ್ತೆಯ ವಿಶಾಲವಾದ ಒಂದು ಭಾಗವಷ್ಟೆ.

ಶಿಕ್ಷಣದಲ್ಲಿ ಆಯ್ಕೆ ಹೇಗೆ?

ಶೈಕ್ಷಣಿಕವಾಗಿ ಎಐ ಈಗ ಇತರ ಕೋರ್ಸ್‌ಗಳಂತೆ ಲಭ್ಯವಿದೆ. ಪ್ರಮುಖವಾಗಿ ಸರ್ಟಿಫಿಕೇಟ್, ಡಿಪ್ಲೋಮಾ, ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಎಐ ಕೋರ್ಸನ್ನು ಅಭ್ಯಸಿಸಬಹುದು. ಇತ್ತೀಚಿನ ಕೆಲವು ವರ್ಷಗಳಲ್ಲಿ ಕಂಪ್ಯೂಟರ್ ಸೈನ್ಸ್‌ ಜೊತೆಗೆ ಎಐನಲ್ಲಿ ಎಂಜಿನಿಯರಿಂಗ್ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇತರ ಪದವಿಗಳಿಗಿಂತ ತುಸು ಶುಲ್ಕ ಹೆಚ್ಚಿದ್ದರೂ ಸಹ ಅಂತಹ ದುಬಾರಿಯಂತೂ ಅಲ್ಲ. ಎನ್‌ಪಿಟಿಇಎಲ್‌ನಂತಹ ಆನ್‌ಲೈನ್ ಶಿಕ್ಷಣ ವ್ಯವಸ್ಥೆಯಲ್ಲಿ ಎರಡು– ಮೂರು ತಿಂಗಳವಧಿಯ ಪುಟ್ಟ ಕೋರ್ಸ್‌ಗಳನ್ನು ಅತೀ ಕಡಿಮೆ ಶುಲ್ಕದಲ್ಲಿ ಮಾಡಬಹುದು. ಕೆಲವೊಂದು ಶಿಕ್ಷಣ ಸಂಸ್ಥೆಗಳು ಒಂದು ವರ್ಷದ ಪಿಜಿ ಡಿಪ್ಲೋಮಾ ಕೋರ್ಸ್‌ಗಳನ್ನು ಕೂಡ ಹಮ್ಮಿಕೊಳ್ಳುತ್ತವೆ. ಪಿಜಿ ಡಿಪ್ಲೋಮಾ ಕೋರ್ಸ್‌ಗಳನ್ನು ಮಾಡಬೇಕಾದರೆ ಪದವಿ ಕಡ್ಡಾಯ.

ಉದ್ಯೋಗಾವಕಾಶ ಹೇಗಿದೆ?

ತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗ ಕೇವಲ ಪಡೆದ ಪದವಿ ಅಥವಾ ಸರ್ಟಿಫಿಕೇಟ್‌ನ ಮೇಲೆ ಅವಲಂಬನೆಯಾಗಿರುವುದಿಲ್ಲ. ಬದಲಿಗೆ ಕೌಶಲ ಮತ್ತು ವಿಷಯ ಜ್ಞಾನವನ್ನು ಆಧರಿಸಿರುತ್ತದೆ. ಎಐ ಕ್ಷೇತ್ರಕ್ಕೆ ಸಾಕಷ್ಟು ಬೇಡಿಕೆಯಿದೆ. ಕೆಲವೊಂದು ವರದಿಯ ಪ್ರಕಾರ ತಂತ್ರಾಂಶಗಳ ಅಭಿವೃದ್ಧಿಯಲ್ಲಿ ಭಾರತ ಮುಂಚೂಣಿಯಲ್ಲಿದ್ದರೂ
ಸಹ ಎಐ ಕ್ಷೇತ್ರಕ್ಕೆ ಬೇಕಾಗುವ ನಿಪುಣರ ಸಂಖ್ಯೆ ತೀರ ಕಡಿಮೆಯಿದೆ. ಆಸಕ್ತಿಯ ಜೊತೆಗೆ ಪ್ರತಿದಿನವೂ ಅಪ್‌ಡೇಟ್ ಆಗುವ ಚಾಕಚಕ್ಯತೆಯಿದ್ದರೆ ಎಐನ ಕೆಲಸಕ್ಕಿಂತ ಉತ್ತಮ ಅವಕಾಶ ಬೇರೆ ಇಲ್ಲ.

ಯಾವ ವಿಷಯ ಜ್ಞಾನ ಅಗತ್ಯ?

ಎಐ ಕ್ಷೇತ್ರದಲ್ಲಿ ವೃತ್ತಿ ಬದುಕನ್ನು ನಡೆಸಲಿಚ್ಛಿಸುವವರು ಗಣಿತ ಮತ್ತು ಭೌತಶಾಸ್ತ್ರದಲ್ಲಿ ಉನ್ನತ ಜ್ಞಾನ ಹೊಂದಿರಬೇಕು. ರೋಬೊಟಿಕ್ಸ್, ಕಂಪ್ಯೂಟರ್ ವಿಜ್ಞಾನ, ವಿವಿಧ ಪ್ರೋಗ್ರಾಮಿಂಗ್ ಭಾಷೆಗಳ ಆಳವಾದ ಜ್ಞಾನವೂ ಅಗತ್ಯ.

ಕೇವಲ ಎಐನಲ್ಲಿ ಪದವಿ ಪಡೆಯುವುದಷ್ಟೇ ಅಲ್ಲ, ಆ ಕ್ಷೇತ್ರ ಬೇಡುವ ವಿವಿಧ ಕೌಶಲದ ಜ್ಞಾನವನ್ನು ಸಮಯಕ್ಕೆ ಸರಿಯಾಗಿ ಅಧ್ಯಯನ ಮಾಡುವುದೂ ಅತ್ಯಗತ್ಯ.

ಕಾಲೇಜು ಆಯ್ಕೆಯಲ್ಲಿ ಬಹಳ ಜಾಗರೂಕತೆಯಿಂದ ಇರುವುದು ಉತ್ತಮ. ಪೂರ್ಣಾವಧಿಯ ಕೋರ್ಸ್‌ಗಳಿಗಿಂತ ಸರ್ಟಿಫಿಕೇಟ್ ಮತ್ತು ಆನ್‌ಲೈನ್ ಕೋರ್ಸ್‌ಗಳ ಸಂಖ್ಯೆಯೇ ಅಧಿಕ.

ಭಾರತದಲ್ಲಿನ ಕೆಲವು ಉತ್ತಮ ಕಾಲೇಜುಗಳ ಪಟ್ಟಿ ಇಂತಿದೆ

ಐಐಟಿ ಹೈದರಾಬಾದ್

ಚಂಡೀಗಢ ವಿಶ್ವವಿದ್ಯಾಲಯ

ಇಂದ್ರಪ್ರಸ್ಥ ಕಾಲೇಜು, ದೆಹಲಿ

ಜೈನ್ ವಿಶ್ವವಿದ್ಯಾಲಯ, ಬೆಂಗಳೂರು

ಶಾರದಾ ವಿಶ್ವವಿದ್ಯಾಲಯ, ನೋಯ್ಡಾ

ಅಮೃತ ವಿಶ್ವವಿದ್ಯಾಪೀಠಂ, ತಮಿಳುನಾಡು

ಐಐಐಟಿ ನಯಾ ರಾಯ್ಪರ್

ಎಐ ಮತ್ತು ಎಂಎಲ್ : ಇವೆರಡರ ಮಹತ್ವವೇನು?

ತಜ್ಞರೊಬ್ಬರ ಪ್ರಕಾರ ಶೇ 49ರಷ್ಟು ಐಟಿ ಕಂಪನಿಗಳು ಭವಿಷ್ಯದಲ್ಲಿ ಎಐಯನ್ನು ಆಳವಡಿಸಲು ಇಚ್ಛಿಸುತ್ತಿವೆ. ಎಐ ಕೌಶಲದ ಅಗತ್ಯವಿರುವ ಉದ್ಯೋಗದ ಪ್ರಮಾಣವು 2013ರಿಂದ ಈವರೆಗೆ ನಾಲ್ಕೂವರೆ ಪಟ್ಟು ಹೆಚ್ಚಾಗಿದೆ. ಅಷ್ಟೇ ಅಲ್ಲ, ಉದ್ಯೋಗಸ್ಥರಲ್ಲಿ ಅತಿ ಕಡಿಮೆ ಜ್ಞಾನ ಇರುವುದು ಇದೇ ವಿಷಯದಲ್ಲಿ. ಆದ್ದರಿಂದ ಈ ವಿಚಾರಕ್ಕೆ ಭವಿಷ್ಯದಲ್ಲಿ ಬಹಳ ಬೇಡಿಕೆ ಇರುವುದನ್ನು ಊಹಿಸಬಹುದು. ಮುಂಬರುವ ದಿನಗಳಲ್ಲಿ ಸಣ್ಣಸಣ್ಣ ದಿನಬಳಕೆಯ ಯಂತ್ರಗಳಲ್ಲೂ ಎಐ ತಂತ್ರಜ್ಞಾನ ಕಾಣಿಸಿದರೆ ಅಚ್ಚರಿಯೇನಿಲ್ಲ. ಆ ಕಾರಣದಿಂದಲೂ ನುರಿತವರ ಅವಶ್ಯಕತೆ ಹೆಚ್ಚಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT