ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟೆಕ್: ಆಹಾರ ತಂತ್ರಜ್ಞಾನ ಕೋರ್ಸ್- ಅವಕಾಶಗಳೇನು?

Last Updated 10 ಜನವರಿ 2022, 2:50 IST
ಅಕ್ಷರ ಗಾತ್ರ

1. ಸರ್, ಬಿಟೆಕ್ (ಆಹಾರ ತಂತ್ರಜ್ಞಾನ) ಕೋರ್ಸ್ ಅವಕಾಶಗಳೇನು?

-ಹೆಸರು, ಊರು ತಿಳಿಸಿಲ್ಲ.

ಬೆಳೆಯುತ್ತಿರುವ ಜನಸಂಖ್ಯೆ, ಹೆಚ್ಚುತ್ತಿರುವ ನಗರೀಕರಣ, ಬದಲಾಗುತ್ತಿರುವ ಜೀವನ ಶೈಲಿ ಇತ್ಯಾದಿ ಕಾರಣಗಳಿಂದ ಆಹಾರ ಸಂಸ್ಕರಣಾ ಕ್ಷೇತ್ರ ಅಭಿವೃದ್ಧಿಯ ಪಥದಲ್ಲಿದೆ. ಕಚ್ಛಾ ಧಾನ್ಯಗಳು ಮತ್ತು ಇನ್ನಿತರ ಆಹಾರ ಪದಾರ್ಥಗಳ ಸಂಗ್ರಹಣೆ, ಶುದ್ಧೀಕರಣ, ಸಂಸ್ಕರಣೆ, ಸುರಕ್ಷತೆ ಮತ್ತು ಸೂಕ್ತ ಪ್ಯಾಕಿಂಗ್ ನಂತರ ಬಳಕೆಗೆ ಯೋಗ್ಯ ರೀತಿಯಲ್ಲಿ ಸಿದ್ದಪಡಿಸುವ ಕಾರ್ಯ ಗಳಲ್ಲಿ ಆಹಾರ ತಂತ್ರಜ್ಞಾನ ಪ್ರಮುಖ ಪಾತ್ರವಹಿಸುತ್ತದೆ. ಆದ್ದರಿಂದ, ಆಹಾರ ತಂತ್ರಜ್ಞಾನ ಕ್ಷೇತ್ರದ ಪದವೀಧರರಿಗೂ ಹೆಚ್ಚಿನ ಬೇಡಿಕೆಯಿದೆ. ಹಾಗಾಗಿ, ಈ ಕ್ಷೇತ್ರದಲ್ಲಿ ಆಸಕ್ತಿಯಿದ್ದರೆ, ಬಿಟೆಕ್ (ಆಹಾರ ತಂತ್ರಜ್ಞಾನ) ಕೋರ್ಸ್ ಮಾಡಿ, ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು.

ಈ ಕೋರ್ಸ್ ನಂತರ, ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಆಹಾರ ಪದಾರ್ಥ ಮತ್ತು ಪಾನೀಯ ತಯಾರಿಕಾ ಉದ್ದಿಮೆಗಳು, ಆಹಾರ ಸಂಬಂಧಿತ (ಕೃತಕ ಮತ್ತು ನೈಸರ್ಗಿಕ ಸಂರಕ್ಷಕಗಳು, ಬಣ್ಣಗಳು, ಸ್ವಾದಗಳು ಇತ್ಯಾದಿ) ಉದ್ದಿಮೆಗಳು, ಕೃಷಿ ಉದ್ದಿಮೆಗಳು, ಸಾವಯವ ಉದ್ದಿಮೆಗಳು, ಹೋಟೆಲ್ಸ್ ಮತ್ತು ರೆಸ್ಟೊರೆಂಟ್ಸ್, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಫಾರ್ಮಾ ಉದ್ದಿಮೆಗಳು, ಸಂಶೋಧನಾ ಸಂಸ್ಥೆಗಳು, ಆಹಾರ ಪರೀಕ್ಷಾ ಪ್ರಯೋಗಾಲಯಗಳು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ವಿಪುಲವಾದ ಉದ್ಯೋಗಾವಕಾಶಗಳಿವೆ. ಬಿಟೆಕ್ ನಂತರ ಎಂ.ಟೆಕ್ ಮಾಡಿ, ಈ ಕ್ಷೇತ್ರದಲ್ಲಿ ಹೆಚ್ಚಿನ ತಜ್ಞತೆಯನ್ನು ಪಡೆಯಬಹುದು. ವೃತ್ತಿಯ ಅನುಭವದ ನಂತರ ಸ್ವಂತ ಉದ್ದಿಮೆಯನ್ನೂ ಪ್ರಾರಂಭಿಸಬಹುದು.

2. ನಾನು ಬಿಸಿಎ ಮುಗಿಸಿದ್ದೇನೆ. ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕು ಎಂದುಕೊಂಡಿದ್ದೇನೆ. ಆದರೆ, ಎಂಸಿಎ ಕೋರ್ಸ್ ಸೇರುವುದೋ ಅಥವಾ ಕೆಲಸಕ್ಕೆ ಸೇರಿ ಪರೀಕ್ಷೆಗೆ ಸಿದ್ದತೆ ನಡೆಸುವುದೋ ಎನ್ನುವ ಗೊಂದಲದಲ್ಲಿದ್ದೇನೆ. ಸಲಹೆ ನೀಡಿ.

-ನಾಗರಕ್ಷಿತಾ ಕೆ. ಆರ್., ಊರು ತಿಳಿಸಿಲ್ಲ.

ನೀವು ತಿಳಿಸಿರುವ ಎರಡೂ ವೃತ್ತಿಯ ಆಯ್ಕೆಗಳಿಗೆ ಉಜ್ವಲ ಭವಿಷ್ಯವಿದೆ. ಹಾಗಾಗಿ, ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಿ.

3. ನಾನು ಡಿಪ್ಲೊಮಾ (ಸಿವಿಲ್) ವಿದ್ಯಾರ್ಥಿ. ಈಗಾಗಲೇ ಡಿಸಿಇಟಿ ಪರೀಕ್ಷೆ ಬರೆದು ಮುಂದಿನ ಹಂತದ ಸೀಟು ಹಂಚಿಕೆಯಲ್ಲಿ ಭಾಗವಹಿಸಿದ್ದೇನೆ. ಆದರೆ, ಡಿಪ್ಲೊಮಾ ನಂತರ ಮುಂದೇನು ಮಾಡಬೇಕು ಎಂಬ ಗೊಂದಲವಿದೆ. ಬಿಇ ಮಾಡಿದರೆ 3 ವರ್ಷ ಆಗುತ್ತದೆ. ಅತಿ ಕಡಿಮೆ ಸಮಯದಲ್ಲಿ ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಸೇರಬೇಕು. ಡಿಪ್ಲೊಮಾ ನಂತರ ಬಿಇ ಕೋರ್ಸ್ ಆಯ್ಕೆಗಳ ಮಾಹಿತಿ ನೀಡಿ

-ಪಿ. ಕರೀಶ್ಮಾ, ಹಾವೇರಿ

ಡಿಪ್ಲೊಮಾ (ಸಿವಿಲ್) ನಂತರ ಸಂಬಂಧಿತ ವಿಷಯಗಳಲ್ಲಿ ಎಂಜಿನಿಯರಿಂಗ್ ಕೋರ್ಸ್ (ಸಿವಿಲ್, ಟ್ರಾನ್ಸ್‌ಪೋರ್ಟೆಷನ್, ಎನ್ವಿರಾನ್ಮೆಂಟ್, ಕನ್‌ಸ್ಟ್ರಕ್ಷನ್ ಇತ್ಯಾದಿ) ಮಾಡಬಹುದು. ಅಥವಾ, ಸಿವಿಲ್ ಎಂಜಿನಿಯರಿಂಗ್ ಸಂಬಂಧಿತ ಕೆಲಸಕ್ಕೆ ಸೇರಿ ಎರಡು ವರ್ಷದ ಅನುಭವದ ನಂತರ ಎಂಜಿನಿಯರಿಂಗ್ ಕೋರ್ಸ್ ಅನ್ನು ಸಂಜೆ ಕಾಲೇಜಿನ ಮುಖಾಂತರ ಮಾಡಬಹುದು.

4. ನಾನು ಅಂತಿಮ ವರ್ಷದ ಪದವಿ (ವಿಜ್ಞಾನ) ವಿದ್ಯಾರ್ಥಿಯಾಗಿದ್ದು, ಪದವಿಯ ನಂತರ ಯಾವ ಕೋರ್ಸ್‌ಗೆ ಹೋಗಬೇಕೆಂಬ ಗೊಂದಲದಲ್ಲಿದ್ದೇನೆ. ಎಂಎಸ್‌ಸಿ ಮಾಡಬೇಕೇ ಅಥವಾ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದೋ ತಿಳಿಯುತ್ತಿಲ್ಲ. ಆದರೆ, ಇನ್ನು ಮೂರು ವರ್ಷದ ಒಳಗೆ ನಾನು ದುಡಿಮೆ ಆರಂಭಿಸಬೇಕು. ಈ ಎರಡರಲ್ಲಿ, ಯಾವ ದಾರಿ ಸೂಕ್ತ ತಿಳಿಸಿ.

-ಶಾಂತೇಗೌಡ, ಊರು ತಿಳಿಸಿಲ್ಲ.

ಎಂಎಸ್‌ಸಿ ನಂತರದ ವೃತ್ತಿಯ ಅವಕಾಶಗಳಿಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಇರುವ ವೃತ್ತಿಯ ಅವಕಾಶಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಯಾವುದನ್ನೇ ಆಯ್ಕೆ ಮಾಡಿದರೂ ಸಹ, ಮೂರು ವರ್ಷದೊಳಗೆ ದುಡಿಮೆಯನ್ನು ಪ್ರಾರಂಭಿಸಬಹುದು. ಹಾಗಾಗಿ, ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿಯಂತೆ ನಿಮಗೆ ಸರಿಹೊಂದುವ ವೃತ್ತಿಯೋಜನೆಯನ್ನು ತಯಾರಿಸಿ.

ವೃತ್ತಿಯೋಜನೆ ಮಾಡುವ ಮಾರ್ಗದರ್ಶನಕ್ಕಾಗಿ ಈ ವೀಡಿಯೋ ವೀಕ್ಷಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT