10, 12 ನೇ ತರಗತಿ ಫಲಿತಾಂಶ ಸಿದ್ಧಪಡಿಸುವ ಶಾಲೆಗಳಲ್ಲಿ ಸಿಬಿಎಸ್‌ಇ ಹಠಾತ್ ತಪಾಸಣೆ

ನವದೆಹಲಿ: 10 ಮತ್ತು 12 ನೇ ತರಗತಿಗಳ ಫಲಿತಾಂಶ ಸಿದ್ಧಪಡಿಸುವ ಶಾಲೆಗಳಲ್ಲಿ ಹಠಾತ್ ತಪಾಸಣೆ ನಡೆಸುವಂತೆ ತನ್ನ ಪ್ರಾದೇಶಿಕ ಕಚೇರಿಗಳಿಗೆ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯು ನಿರ್ದೇಶನ ನೀಡಿದೆ. ಮೌಲ್ಯಮಾಪನ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಪ್ರಕ್ರಿಯೆ ಖಚಿತಪಡಿಸಿಕೊಳ್ಳುವಂತೆ ಅದು ಸೂಚಿಸಿದೆ.
ಕೋವಿಡ್ ಎರಡನೇ ಅಲೆ ತೀವ್ರವಾಗಿದ್ದರಿಂದ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿತ್ತು. ಸಿಬಿಎಸ್‌ಇ ಘೋಷಿಸಿದ ಪ್ರತ್ಯೇಕ ಪರ್ಯಾಯ ಮೌಲ್ಯಮಾಪನ ನೀತಿಯನ್ನು ಬಳಸಿಕೊಂಡು ಫಲಿತಾಂಶಗಳ ಪಟ್ಟಿಯನ್ನು ಪ್ರಕಟಿಸುವಂತೆ ಶಾಲೆಗಳಿಗೆ ಸೂಚಿಸಲಾಗಿತ್ತು.
‘ಸಿಬಿಎಸ್‌ಇ ಹೊರಡಿಸಿದ ನೀತಿಯನ್ನು ಶಾಲೆಗಳು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು, ತಮ್ಮ ವ್ಯಾಪ್ತಿಗೆ ಒಳಪಡುವ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಲು ಪ್ರಾದೇಶಿಕ ಕಚೇರಿಗಳ ಅಧಿಕಾರಿಗಳಿಗೆ ಪತ್ರ ಬರೆದು ಸೂಚಿಸಲಾಗಿದೆ’ ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸನ್ಯಂ ಭಾರದ್ವಾಜ್ ತಿಳಿಸಿದ್ದಾರೆ.
‘ಶಾಲೆಗಳ ಫಲಿತಾಂಶ ಕೆಲಸದ ನೈಜ ಮಾಹಿತಿಯನ್ನು ಪಡೆಯಲು, ಶಾಲೆಗಳಿಗೆ ಭೇಟಿ ನೀಡುವಾಗ, ಶಾಲೆಗಳಿಗೆ ಯಾವುದೇ ಪೂರ್ವಭಾವಿ ಮಾಹಿತಿ ನೀಡಲಾಗುವುದಿಲ್ಲ ಮತ್ತು ಹಠಾತ್ ತಪಾಸಣೆ ಮಾತ್ರ ನಡೆಸಲಾಗುತ್ತದೆ. ಈ ಜವಾಬ್ದಾರಿಯನ್ನು ಪೂರೈಸಲು, ಈ ಕೆಲಸದಲ್ಲಿ ಭಾಗಿಯಾಗಿರುವ ಎಲ್ಲ ಅಧಿಕಾರಿಗಳು ಮಂಡಳಿಯ ನೀತಿಯನ್ನು ಸಂಪೂರ್ಣವಾಗಿ ಅರಿತುಕೊಳ್ಳಬೇಕು’ ಎಂದು ಅವರು ಹೇಳಿದರು.
ಖಾಸಗಿ, ಸರ್ಕಾರಿ, ಕೆವಿಎಸ್ (ಕೇಂದ್ರ ವಿದ್ಯಾ ಸಮಿತಿ) ಮತ್ತು ಎನ್‌ವಿಎಸ್ (ನವೋದಯ ವಿದ್ಯಾಲಯ ಸಮಿತಿ) ಪ್ರತಿಯೊಂದು ವರ್ಗದ ಶಾಲೆಗಳೂ ಒಳಗೊಳ್ಳುವ ರೀತಿಯಲ್ಲಿ ಪರಿಶೀಲಿಸುವಂತೆ ಮಂಡಳಿ ನಿರ್ದೇಶಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.