ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಲಿತ ವಿದ್ಯಮಾನಗಳ ಕುರಿತ ನಾಲ್ಕು ಪ್ರಮುಖ ರಾಷ್ಟ್ರೀಯ ವಿದ್ಯಮಾನಗಳ ಮಾಹಿತಿಗಳು

Published 6 ಸೆಪ್ಟೆಂಬರ್ 2023, 23:25 IST
Last Updated 6 ಸೆಪ್ಟೆಂಬರ್ 2023, 23:25 IST
ಅಕ್ಷರ ಗಾತ್ರ

ಯಪಿಎಸ್‌ಸಿ -ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ- 2, ಕೆಪಿಎಸ್‌ಸಿ –ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-2 ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಕುರಿತ ನಾಲ್ಕು ಪ್ರಮುಖ ರಾಷ್ಟ್ರೀಯ ವಿದ್ಯಮಾನಗಳ ಮಾಹಿತಿಗಳು ಇಲ್ಲಿವೆ.

1. ಏರ್ ಇಂಡಿಯಾ ಮತ್ತು ವಿಸ್ತಾರ ವಿಮಾನಯಾನ ಸೇವಾ ಸಂಸ್ಥೆಗಳ ವಿಲೀನ :

ಇತ್ತೀಚೆಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ ಏರ್ ಇಂಡಿಯಾ ಮತ್ತು ವಿಸ್ತಾರ ನಾಗರಿಕ ವಿಮಾನಯಾನ ಸೇವಾ ಸಂಸ್ಥೆಗಳ ವಿಲೀನ ಪ್ರಕ್ರಿಯೆಗೆ ಅನುಮೋದನೆ ನೀಡಿದೆ.
ಟಾಟಾ ಆ್ಯಂಡ್‌ ಸನ್ಸ್ ಪ್ರೈವೇಟ್ ಸಂಸ್ಥೆಯ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಏರ್ ಇಂಡಿಯಾ ಸಂಸ್ಥೆಯು ವಿಸ್ತಾರ ವಿಮಾನಯಾನ ಸೇವಾ ಸಂಸ್ಥೆಯನ್ನು ತನ್ನ ಸಂಸ್ಥೆಯ ಅಡಿಯಲ್ಲಿ ವಿಲೀನ ಮಾಡಿಕೊಳ್ಳಲು ನಿರ್ಧರಿಸಿದೆ ಮತ್ತು ಮುಂದಿನ ದಿನಗಳಲ್ಲಿ ಏರ್ ಇಂಡಿಯಾ ಸಂಸ್ಥೆ ಅಡಿಯಲ್ಲಿಯೇ ಕಾರ್ಯನಿರ್ವಹಿಸಲಿದೆ.
ವಿಸ್ತಾರ ಕಂಪನಿಯು ಸಿಂಗಪುರ್ ಏರ್‌ಲೈನ್ಸ್‌ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯಾಗಿದ್ದು ವಿಲೀನ ಪ್ರಕ್ರಿಯೆ ನಂತರ ಟಾಟಾ ಸಮೂಹದ ಶೇ 51 ರಷ್ಟು ಶೇರುಗಳ ಮಾಲಿಕತ್ವವನ್ನು ಹೊಂದಿದ್ದರೆ, ಸಿಂಗಪುರ ಏರ್‌ಲೈನ್ಸ್‌ ಸಂಸ್ಥೆಯು ಉಳಿದ ಶೇರುಗಳ ಮಾಲೀಕತ್ವವನ್ನು ಹೊಂದಿರುತ್ತದೆ.
ವಿಶ್ಲೇಷಕರ ಪ್ರಕಾರ ವಿಲೀನ ಪ್ರಕ್ರಿಯೆ ನಂತರ ಭಾರತದ ವಿಮಾನಯಾನ ವಲಯದಲ್ಲಿ ಗಣನೀಯ ಬದಲಾವಣೆಗಳು ಜಾರಿಗೆ ಬರಲಿದ್ದು ಉನ್ನತ ಮಟ್ಟದ ಸೇವೆಗಳು ಲಭ್ಯವಾಗಲಿದೆ ಎಂದು ಅಂದಾಜಿಸಿದ್ದಾರೆ.

ಸೂಚನೆ : ವಿಲೀನ ಪ್ರಕ್ರಿಯೆ ಮಾರ್ಚ್ 2024 ರ ಒಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

2. ಅಖಿಲ ಭಾರತ ವಸತಿ ದರ ಸೂಚ್ಯಂಕ :

ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಅಖಿಲ ಭಾರತ ವಸತಿ ದರ ಸೂಚ್ಯಂಕವನ್ನು ಬಿಡುಗಡೆ ಮಾಡಿದ್ದು ಕಳೆದ ವರ್ಷದಿಂದ ಪ್ರಸ್ತುತ ವರ್ಷದಲ್ಲಿ ಜನವಸತಿಗಳ ದರ ಸರಾಸರಿ 5.1 ರಷ್ಟು ಹೆಚ್ಚಳವಾಗಿದೆ ಎಂದು ವರದಿಯನ್ನು ಬಿಡುಗಡೆ ಮಾಡಿದೆ.

ವಸತಿ ವಲಯದ ಬೇಡಿಕೆ ದೆಹಲಿಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದ್ದು, ವಸತಿ ವಲಯದ ಬೇಡಿಕೆ ಶೇ 14.9 ರಷ್ಟು ಹೆಚ್ಚಳವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತದ 10 ನಗರಗಳಲ್ಲಿ ವಸತಿ ದರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಲು ಈ ಸೂಚ್ಯಂಕವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮೂರು ತಿಂಗಳಿಗೊಮ್ಮೆ ಬಿಡುಗಡೆ ಮಾಡುತ್ತದೆ. ಹತ್ತು ನಗರಗಳು ಹೀಗಿವೆ; ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಜೈಪುರ, ಕಾನ್ಪುರ್, ಕೊಚ್ಚಿ, ಕೊಲ್ಕತ್ತಾ, ಲಖನೌ ಮತ್ತು ಮುಂಬೈ

3. ಒಡಿಶಾದ ಉತ್ಕಲ ವಿಮಾನ ನಿಲ್ದಾಣದ ಉದ್ಘಾಟನೆ

ಒಡಿಶಾದಲ್ಲಿ ಉಡಾನ್ ಯೋಜನೆಯ ಅಡಿಯಲ್ಲಿ ನಿರ್ಮಾಣವಾದ ಉತ್ಕಲ ವಿಮಾನ ನಿಲ್ದಾಣವನ್ನು ಇತ್ತೀಚೆಗೆ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಉದ್ಘಾಟಿಸಿದರು. ಭುವನೇಶ್ವರದಿಂದ ಉತ್ಕಲಗೆ ವಿಮಾನದಲ್ಲಿ ಪ್ರಯಾಣ ಬೆಳೆಸುವ ಮೂಲಕ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಲಾಯಿತು. ಉತ್ಕಲ ವಿಮಾನ ನಿಲ್ದಾಣದ ಸೇರ್ಪಡೆಯೊಂದಿಗೆ, ಒಡಿಶಾ ರಾಜ್ಯದಲ್ಲಿ ಐದು ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುವಂತಾಗಿದೆ.

4. ಸ್ವತಂತ್ರ ಭಾರತದ ಮೊದಲ ಹಣಕಾಸು ಸಚಿವರ ಪ್ರತಿಮೆಯ ಅನಾವರಣ 

ಇತ್ತೀಚೆಗೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಸ್ವತಂತ್ರ ಭಾರತದ ಮೊದಲ ಹಣಕಾಸು ಸಚಿವರಾಗಿದ್ದ ಷಣ್ಮುಗಂ ಶೆಟ್ಟಿ ಅವರ ಪ್ರತಿಮೆಯನ್ನು ಕೇಂದ್ರ ಸಚಿವ ಪಿಯುಶ್ ಗೋಯಲ್ ಅನಾವರಣಗೊಳಿಸಿದರು.

ದಕ್ಷಿಣ ಭಾರತದ ಪಂಚಾಯತ್ ಸಂಘಟನೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ದಕ್ಷಿಣ ಭಾರತದ ಪಂಚಾಯತ್ ಸಂಘಟನೆಯ ಸಂಕೀರ್ಣದಲ್ಲಿ ಈ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ.

ಷಣ್ಮುಗಂ ಚೆಟ್ಟಿ ಅವರು ಹಣಕಾಸು ಸಚಿವರು ಮಾತ್ರವಲ್ಲದೆ ಪ್ರಖ್ಯಾತ ವಕೀಲರು, ಅರ್ಥಶಾಸ್ತ್ರಜ್ಞರು ಮತ್ತು ರಾಜಕೀಯ ವಿಶ್ಲೇಷಕರು ಎನ್ನುವ ಹೆಗ್ಗಳಿಕೆಯನ್ನು ಹೊಂದಿದ್ದರು.

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರದ ಹಂತದಲ್ಲಿ ಮೊಟ್ಟಮೊದಲ ಮುಂಗಡಪತ್ರವನ್ನು ಜಾರಿಗೆ ತಂದ ಕೀರ್ತಿ ಇವರದ್ದಾಗಿತ್ತು ಇದಲ್ಲದೆ ಶಿಕ್ಷಣ ವಲಯಕ್ಕೂ ಕೂಡ ಇವರ ಕೊಡುಗೆ ಅಪಾರವಾಗಿದ್ದು ಅಣ್ಣಾಮಲೈ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಕಾರ್ಯನಿರ್ವಹಿಸಿದರು.

5. ಕಂಪಾಲ ಘೋಷಣೆ

ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದ ಕಾರಣದಿಂದ ಆಫ್ರಿಕಾದಲ್ಲಿ ವಲಸೆ ಪ್ರಕ್ರಿಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು ಈ ಪ್ರಕ್ರಿಯೆಯನ್ನು ಸಮರ್ಥವಾಗಿ ನಿರ್ವಹಿಸಲು ಹಾಗೂ ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಆಫ್ರಿಕಾ ಖಂಡದ 48 ರಾಷ್ಟ್ರಗಳು ಕಂಪಾಲ ಘೋಷಣೆಯನ್ನು ಮಾಡಿವೆ.

2022ರಲ್ಲಿ ಈ ಘೋಷಣೆಯ ಬಗ್ಗೆ ಮೊಟ್ಟಮೊದಲ ಬಾರಿಗೆ ಪ್ರಸ್ತಾಪಿಸಲಾಗಿತ್ತು. ಇದಾದ ನಂತರ ಆಫ್ರಿಕಾದ 15 ರಾಷ್ಟ್ರಗಳು ಈ ಘೋಷಣೆಗೆ ಸಹಿ ಹಾಕಿ ಬೆಂಬಲವನ್ನು ಸೂಚಿಸಿದ್ದವು. ಇದಾದ ನಂತರ ಎಲ್ಲಾ ರಾಷ್ಟ್ರಗಳ ನಡುವಿನ ಮಾತುಕತೆಯ ಮೂಲಕ ಆಫ್ರಿಕಾ ಖಂಡ ಎದುರಿಸುತ್ತಿರುವ ಸಮಸ್ಯೆಗಳನ್ನು ಸಮರ್ಥವಾಗಿ ಬಗೆಹರಿಸಲು ಕಂಪಾಲ ಘೋಷಣೆಯನ್ನು ಜಾರಿಗೆ ತರಲಾಗುತ್ತಿದೆ.

ವಿಶ್ವಸಂಸ್ಥೆಯ ಪ್ರಕಾರ ಕಳೆದ ಒಂದು ವರ್ಷದಲ್ಲಿಯೇ 7.5 ದಶಲಕ್ಷ ಜನರು ಆಫ್ರಿಕಾದಿಂದ ವಲಸೆ ಹೋಗಿದ್ದು ಇದೇ ಪ್ರಕ್ರಿಯೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ವಿವಿಧ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಆಫ್ರಿಕಾದ ರಾಷ್ಟ್ರಗಳು ೀ ಘೋಷಣೆಯನ್ನು ಬೆಂಬಲಿಸಿದೆ.

ಘೋಷಣೆಗೆ ಸಹಿ ಹಾಕುವ ಪ್ರತಿಯೊಂದು ಸದಸ್ಯ ರಾಷ್ಟ್ರಗಳಲ್ಲಿ ಹವಾಮಾನ ಬದಲಾವಣೆಯನ್ನು ನಿಯಂತ್ರಿಸಲು ಸೂಕ್ತ ಕಾರ್ಯಸೂಚಿ ಮತ್ತು ಯೋಜನೆಗಳನ್ನು ಹಮ್ಮಿಕೊಳ್ಳುವುದು ಕಡ್ಡಾಯವಾಗುತ್ತದೆ.

ಉದ್ಯೋಗ ಸೃಷ್ಟಿಯ ಮೂಲಕ ಹಾಗೂ ಸುಸ್ಥಿರ ಅಭಿವೃದ್ಧಿಯ ಮೂಲಕ ವಲಸೆ ಪ್ರಕ್ರಿಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರಗಳು ಯೋಜನೆಗಳನ್ನು ಹಮ್ಮಿಕೊಳ್ಳಲು ನಿರ್ದೇಶನಗಳನ್ನು ಘೋಷಣೆಯಲ್ಲಿ ನೀಡಲಾಗಿದೆ.

ಶೋಷಿತ ವರ್ಗಗಳಿಗೆ, ಯುವಕರಿಗೆ ಮತ್ತು ಮಹಿಳೆಯರಿಗೆ ಬೇಕಾದ ಅವಶ್ಯಕ ಸವಲತ್ತುಗಳನ್ನು ಕಲ್ಪಿಸುವ ಮೂಲಕ ಸ್ವಾವಲಂಬಿ ಜೀವನವನ್ನು ಸಾಗಿಸಲು ಸಹಕಾರವನ್ನು ಕಲ್ಪಿಸತಕ್ಕದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT