ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಠ ಸಾಧನೆಯೇ ಗೆಲುವಿನ ಗುಟ್ಟು

Last Updated 26 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ರೋಸಿ ಮರಿಯಾ ಮತ್ತು ರಫರ್ಟ್ ಡಿಸಿಲ್ವ ದಂಪತಿ ಪುತ್ರಿ ರುತ್, ನಂದಗೋಪಾಲ ಅವರ ಬಳಿ, ಸಿಎ ಓಲ್ಡ್‌ ಕೋರ್ಸ್ ಪರೀಕ್ಷೆ ಬರೆಯಲು ಮಾರ್ಗದರ್ಶನ ಪಡೆದಿದ್ದರು. ಮೂರನೇ ಬಾರಿ ಬರೆದ ಪರೀಕ್ಷೆ ಅವರ ಜೀವನದ ಮೈಲುಗಲ್ಲಾಗಿದ್ದು, ಅವರು ತಮ್ಮ ಸಾಧನೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.

‘ಕಬ್ಬಿಣದ ಕಡಲೆ’ ಎನ್ನುವ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಅಂತಿಮ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಗಳಿಸಿರುವ ಮಂಗಳೂರು ಮಲ್ಲಿಕಟ್ಟೆಯ ರುತ್ ಕ್ಲಾರ್ ಡಿಸಿಲ್ವ ಅವರು ಸಾಧನೆಯ ಹಠವಿದ್ದರೆ, ಕಠಿಣವೆಂಬ ಭಾವವನ್ನು ಸುಲಭಕ್ಕಿಳಿಸಬಹುದು ಎಂಬುದನ್ನು ನಿರೂಪಿಸಿದ್ದಾರೆ.

ರೋಸಿ ಮರಿಯಾ ಮತ್ತು ರಫರ್ಟ್ ಡಿಸಿಲ್ವ ದಂಪತಿ ಪುತ್ರಿ ರುತ್, ನಂದಗೋಪಾಲ ಅವರ ಬಳಿ, ಸಿಎ ಓಲ್ಡ್‌ ಕೋರ್ಸ್ ಪರೀಕ್ಷೆ ಬರೆಯಲು ಮಾರ್ಗದರ್ಶನ ಪಡೆದಿದ್ದರು. ಮೂರನೇ ಬಾರಿ ಬರೆದ ಪರೀಕ್ಷೆ ಅವರ ಜೀವನದ ಮೈಲುಗಲ್ಲಾಗಿದ್ದು, ಅವರು ತಮ್ಮ ಸಾಧನೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.

* ಸಿಎ ಮಾಡುವ ಯೋಚನೆ ಬಂದಿದ್ದು ಹೇಗೆ?

ನನ್ನೆದುರು ಸಿಎ ಮತ್ತು ಕಾನೂನು ಪದವಿ ಎರಡು ಆಯ್ಕೆಗಳಿದ್ದವು. ಎಲ್ಲರೂ ಸಿಎ ಪರೀಕ್ಷೆ ತುಂಬಾ ಕಠಿಣ ಎನ್ನುತ್ತಿದ್ದರು. ‘ಕಠಿಣ’ವನ್ನೇ ಗೆಲ್ಲಬೇಕೆಂಬ ಛಲ ನನ್ನದು. ಹೀಗಾಗಿ, ಪಿಯುಸಿಯಲ್ಲಿರುವಾಗಲೇ ಸಿಎ ಪರೀಕ್ಷೆ ಬರೆಯಲು ನಿರ್ಧರಿಸಿ, ಬಿ.ಕಾಂ ಪ್ರಥಮ ವರ್ಷದಿಂದ ಸಿದ್ಧತೆ ಆರಂಭಿಸಿದೆ. ಸಿಎ ಪರೀಕ್ಷೆ ಪಠ್ಯಕ್ರಮ ಅಧ್ಯಯನ ಮಾಡಿದರೆ, ಬಿ.ಕಾಂ ಪದವಿ ಪರೀಕ್ಷೆಗೆ ವಿಶೇಷ ತಯಾರಿ ಬೇಕಾಗುವುದಿಲ್ಲ.

* ಅಧ್ಯಯನದ ಆರಂಭಿಕ ಹಂತ ಹೇಗಿರಬೇಕು?

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಆದರೂ ಸರಿ, ಮೊದಲು ಮನಸ್ಸನ್ನು ಅಣಿಗೊಳಿಸಿಕೊಳ್ಳಬೇಕು. ನನ್ನ ಮನಸ್ಸಿಗೆ ನಾನೇ ವಿಶ್ವಾಸ ತುಂಬಿ, ಇದು ನನ್ನಿಂದ ಸಾಧ್ಯ ಎಂಬುದನ್ನು ಮನದಟ್ಟು ಮಾಡಿಕೊಂಡರೆ, ಅಲ್ಲಿಂದ ಯಶಸ್ಸಿನ ಮೊದಲ ಮೆಟ್ಟಿಲು ಆರಂಭವಾಗುತ್ತದೆ.

* ಮೊದಲ ಎರಡು ಬಾರಿ ಸಿಎ ಪರೀಕ್ಷೆಯಲ್ಲಿ ಹಿನ್ನಡೆ ಆದಾಗ ಏನನ್ನಿಸಿತು?

ನಾನು ಅದನ್ನು ಹಿನ್ನಡೆ ಎಂದು ಭಾವಿಸಲೇ ಇಲ್ಲ. ಇನ್ನಷ್ಟು ಅಭ್ಯಾಸ ಮಾಡಬೇಕು. ಸಾಧನೆಯೇ ನನ್ನ ಗುರಿಯಾಗಬೇಕು ಎಂದು ನಿರ್ಧರಿಸಿದೆ. ವೈಫಲ್ಯ ನನ್ನನ್ನು ಇನ್ನಷ್ಟು ಸದೃಢಳನ್ನಾಗಿಸಿತು.

* ಅಧ್ಯಯನ ಕ್ರಮ ಹೇಗಿತ್ತು?

ಎಲ್ಲ ಟಾಪಿಕ್‌ಗಳನ್ನು ಮೊದಲು ಅರ್ಥೈಸಿಕೊಳ್ಳುತ್ತಿದ್ದೆ. ಕಾನ್ಸೆಪ್ಟ್‌ಗಳನ್ನು ಗ್ರಹಿಸಿಕೊಂಡು, ನಿರಂತರ ಅಭ್ಯಾಸ ಮಾಡುತ್ತಿದ್ದೆ. ಪರೀಕ್ಷೆಗೆ ಆರು ತಿಂಗಳು ಇರುವಾಗ ದಿನಕ್ಕೆ 8–10 ತಾಸು ಅಭ್ಯಾಸದಲ್ಲಿ ತೊಡಗುತ್ತಿದ್ದೆ. ಇದಕ್ಕಾಗಿ ಪ್ರತ್ಯೇಕ ವೇಳಾಪಟ್ಟಿ ಸಿದ್ಧಪಡಿಸಿದ್ದೆ. ಯೂಟ್ಯೂಬ್‌ ವಿಡಿಯೊಗಳು ಕೂಡ ನೆರವಿಗೆ ಬಂದವು.

* ಬ್ಯಾಹ್ಯ ಆಕರ್ಷಣೆಗಳು, ಸ್ನೇಹಿತೆಯರೆಲ್ಲ ಮೋಜು ಮಾಡುವಾಗ ಮನಸ್ಸು ಅತ್ತ ಹೊರಳುವುದು ಸಹಜ ಅಲ್ಲವೆ?

ಇಲ್ಲ, ನಾನು ಎಲ್ಲವನ್ನೂ ತ್ಯಾಗ ಮಾಡಿರಲಿಲ್ಲ. ಕೆಲವೊಮ್ಮೆ ಸ್ನೇಹಿತೆಯರ ಜೊತೆ ಸುತ್ತಾಟಕ್ಕೆ ಹೋಗುತ್ತಿದ್ದೆ. ಆದರೆ, ಸಾಧನೆಯಲ್ಲಿ ಸಿಗುವ ಖುಷಿ ಮೋಜಿನಲ್ಲಿ ಸಿಗದು. ಹೀಗಾಗಿ, ನಾನು ಅವುಗಳಿಗೆ ಆಕರ್ಷಿತಳಾಗಲಿಲ್ಲ. ಕೊನೆಯ ಆರು ತಿಂಗಳು ವಾಟ್ಸ್‌ಆ್ಯಪ್ ಸೇರಿದಂತೆ ಹರಟೆಯ ಎಲ್ಲ ಸಾಮಾಜಿಕ ಜಾಲತಾಣಗಳು ನನ್ನ ಮೊಬೈಲ್‌ನಿಂದ ಡಿಲೀಟ್ ಆಗಿದ್ದವು.

* ಪರೀಕ್ಷೆಯ ಕೊನೆಯ ಒಂದು ವಾರ ಹೇಗಿರಬೇಕು ?

ಪೂರ್ವ ಅಧ್ಯಯನ ಇದ್ದರೆ, ಕೊನೆಯ ಕ್ಷಣದಲ್ಲಿ ಆತ್ಮವಿಶ್ವಾಸ ಕುಗ್ಗುವುದಿಲ್ಲ. ಓದಿದ ವಿಷಯಗಳನ್ನು ಮನನ ಮಾಡಿಕೊಳ್ಳಬೇಕು. ನಿದ್ದೆ, ಆಹಾರದ ಬಗ್ಗೆ ಹೆಚ್ಚು ಗಮನಕೊಡಬೇಕು. ಕೊನೆ ಕ್ಷಣದಲ್ಲಿ ಎಲ್ಲವನ್ನೂ ಓದಿಕೊಳ್ಳುವ ಮನಸ್ಥಿತಿ ಪರೀಕ್ಷೆ ಬರೆಯುವ ಯಾರಲ್ಲೂ ಇರಬಾರದು. ಮೊದಲ ಬಾರಿ ಪರೀಕ್ಷೆಗೆ ಹೋಗುವಾಗ ನಾನು ಆತಂಕಕ್ಕೆ ಒಳಗಾಗಿದ್ದೆ. ಅನುಭವದಿಂದ ಪಾಠ ಕಲಿಯಬೇಕು. ನಾನು ಸಮರ್ಥವಾಗಿ ಪರೀಕ್ಷೆ ಎದುರಿಸಬಲ್ಲೆ ಎಂಬ ವಿಶ್ವಾಸ ಬೆಳೆಸಿಕೊಂಡು, ಮನಸ್ಸನ್ನು ಸನ್ನದ್ಧಗೊಳಿಸಬೇಕು.

* ನಿರಂತರ ಓದು, ಮಾನಸಿಕ ಒತ್ತಡಕ್ಕೆ ಕೌನ್ಸೆಲಿಂಗ್ ಬೇಕಾಗಬಹುದೆ?

ಕೌನ್ಸೆಲಿಂಗ್ ಅನ್ನುವುದಕ್ಕಿಂತ ಗೊಂದಲ ಆದಾಗ, ಹೇಳಿಕೊಳ್ಳಲು, ಹಂಚಿಕೊಳ್ಳಲು ಒಬ್ಬರು ಅನುಭವಿ ಇದ್ದರೆ ಉತ್ತಮ. 10 ಜನರ ಬಳಿ ಕೇಳುವುದಕ್ಕಿಂತ ಒಬ್ಬರ ಬಳಿ ನಿರಂತರ ಸಂಪರ್ಕ ಇಟ್ಟುಕೊಂಡು, ಚರ್ಚಿಸಿದರೆ, ಗೊಂದಲಗಳು ಬಗೆಹರಿಯುತ್ತವೆ. ಹಲವರ ಬಳಿ ಚರ್ಚಿಸಿದರೆ, ವಿಷಯ ಇನ್ನಷ್ಟು ಜಡಕಾಗುವ ಸಾಧ್ಯತೆ ಇರುತ್ತದೆ.

* ವಾಣಿಜ್ಯ ಬದುಕಿನ ಅವಿಭಾಜ್ಯ ಆಗಿದ್ದರೂ, ಬಹಳಷ್ಟು ಜನರಿಗೆ ಆದಾಯ ತೆರಿಗೆಯಂತಹ ಸಾಮಾನ್ಯ ಕಾಯ್ದೆಯ ಜ್ಞಾನವೂ ಇರುವುದಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸುವ ಕನಸು ಇದೆಯಾ?

ಪ್ರಾಥಮಿಕದಿಂದ ಪ್ರೌಢ ಶಿಕ್ಷಣದವರೆಗಿನ ಪಠ್ಯದಲ್ಲಿ ಬೇರೆ ಎಲ್ಲ ವಿಷಯಗಳ ಪ್ರಾಥಮಿಕ ಜ್ಞಾನ ಸಿಗುತ್ತದೆ. ಆದರೆ, ವಾಣಿಜ್ಯ ವಿಷಯಕ್ಕೆ ಅಷ್ಟು ಒತ್ತು ಇಲ್ಲದ ಕಾರಣ, ಜನರಿಗೆ ಈ ಸಾಮಾನ್ಯ ಕಾಯ್ದೆಗಳ ಜ್ಞಾನ ಇರುವುದಿಲ್ಲ. ನನಗೆ ಅವಕಾಶ ಸಿಕ್ಕರೆ, ಭವಿಷ್ಯದಲ್ಲಿ ವಾಣಿಜ್ಯ ವಿಷಯದ ಬಗ್ಗೆ ಜಾಗೃತಿ ಮೂಡಿಸುವ ಹಂಬಲ ಇದೆ. ಭವಿಷ್ಯದಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆಯುವ ಕನಸು ಕೂಡ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT