ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಮಾದರಿ ಗ್ರಾಮ ಯೋಜನೆ: ‘ಪ್ರಥಮ್’ ಪ್ರಯೋಗ

Last Updated 26 ಜೂನ್ 2022, 19:30 IST
ಅಕ್ಷರ ಗಾತ್ರ

ಮಕ್ಕಳಲ್ಲಿನ ಕಲಿಕಾ ನ್ಯೂನತೆಯನ್ನು ಸರಿಪಡಿಸುವುದಕ್ಕಾಗಿ ಪ್ರಥಮ್ ಮೈಸೂರ್‌ ಸ್ವಯಂ ಸೇವಾ ಸಂಸ್ಥೆ, ಮೈಸೂರು ಜಿಲ್ಲೆಯ ನಾಲ್ಕು ಹಳ್ಳಿಗಳಲ್ಲಿ ‘ಶೈಕ್ಷಣಿಕ ಮಾದರಿ ಗ್ರಾಮ ಯೋಜನೆ’ ಅನುಷ್ಠಾನ ಗೊಳಿಸಿದೆ. ಈ ಯೋಜನೆಯು ಶೈಕ್ಷಣಿಕ ದೃಷ್ಟಿಯಿಂದ ಬದಲಾವಣೆಯತ್ತ ಹೆಜ್ಜೆ ಹಾಕಲು ನೂರಾರು ಕುಟುಂಬಗಳಿಗೆ ದಾರಿ ತೋರಿದೆ.

ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದ ನಾಲ್ಕು ಹಳ್ಳಿಗಳಲ್ಲಿ ಶೈಕ್ಷಣಿಕ ದೃಷ್ಟಿಯಿಂದ ಸದ್ದಿಲ್ಲದ ಕ್ರಾಂತಿಯೊಂದು ಕಳೆದ ಐದು ವರ್ಷಗಳಿಂದ ನಡೆಯುತ್ತಿದೆ. ಇಂಥ ಒಂದು ಬದಲಾವಣೆಯ ಹಿಂದಿರುವುದು ‘ಪ್ರಥಮ್ ಮೈಸೂರ್’ ಎಂಬ ಸ್ವಯಂ ಸೇವಾ ಸಂಸ್ಥೆ.

ಟಿ.ನರಸೀಪುರದ ಮುತ್ತತ್ತಿ, ಹ್ಯಾಕನೂರು, ಮಾವಿನಹಳ್ಳಿ ಮತ್ತು ಸುಜ್ಜಲೂರು- ಈ ನಾಲ್ಕು ಹಳ್ಳಿಗಳಲ್ಲಿ ಪ್ರಥಮ್, ಶೈಕ್ಷಣಿಕ ಮಾದರಿ ಗ್ರಾಮ ಪ್ರಯೋಗವನ್ನು ಮಾಡುತ್ತಿದೆ. ಇದು ಮುಖ್ಯವಾಗಿ ಮಕ್ಕಳ ಶಿಕ್ಷಣವನ್ನು ಕೇಂದ್ರೀಕರಿಸಿ ಮಾಡುತ್ತಿರುವ ಪ್ರಯತ್ನ.

ಮನೆ ಮನೆ ಭೇಟಿ

ಈ ಯೋಜನೆಯಡಿಯಲ್ಲಿ ಹಳ್ಳಿಯ ಪ್ರಾಥಮಿಕ ಶಿಕ್ಷಣದ ನ್ಯೂನತೆಗಳನ್ನು ಸರಿಪರಿಸಲು ಹೊರಟ ಪ್ರಥಮ್ ಸಂಸ್ಥೆ ಮೂರು ಹಂತಗಳಲ್ಲಿ ಕೆಲಸಮಾಡಲು ನಿರ್ಧರಿಸಿತು. ಪ್ರಥಮ್‌ನ ಸ್ವಯಂಸೇವಕರು ಮನೆಮನೆಗೆ ಭೇಟಿ ನೀಡಿ ಮಕ್ಕಳ ಪಾಲಕರ ಸಂಪರ್ಕ ಬೆಳೆಸಿ ಪಾಲಕರು ಮಗುವಿನ ಶಿಕ್ಷಣದಲ್ಲಿ ಹೆಚ್ಚಿನ ಮುತುವರ್ಜಿವಹಿಸುವಂತೆ ಮಾಡಿದರು. ಮುಖ್ಯವಾಗಿ ಪಾಲಕರು ಮಕ್ಕಳಿಗೆ ಹೆಚ್ಚು ಸಮಯಕೊಡಬೇಕು, ಶಾಲೆಯಿಂದ ಬಂದಕೂಡಲೇ ಆದಿನ ಶಾಲೆಯಲ್ಲಿ ನಡೆದ ವಿಚಾರಗಳಿಗೆ ಮಕ್ಕಳು ಹೇಳುವಾಗ ಕಿವಿಗೊಡಬೇಕು, ಎರಡು ವಾರಕ್ಕೊಮ್ಮೆಯಾದರೂ ಶಾಲೆಗೆ ಬಂದು ಮಕ್ಕಳ ಓದಿನ ಬಗ್ಗೆ ವಿಚಾರಿಸಬೇಕು. ಹೀಗೆ ಪಾಲಕರು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಗಮನಕೊಡುವಂತೆ ರೂಢಿಮಾಡಿದ್ದು ದೊಡ್ಡ ಬದಲಾವಣೆ.

ಶಿಕ್ಷಕರ ನಿಯೋಜನೆ

ಎರಡನೆಯದಾಗಿ, ನಮ್ಮ ಹಳ್ಳಿಗಳಲ್ಲಿ ಶಿಕ್ಷಕರು ಹೆಚ್ಚಾಗಿ ಪಾಠದ ಮೇಲೆ ಗಮನ ಹರಿಸುವಂತೆ ಮಾಡುವುದರಲ್ಲಿ ಪ್ರಥಮ್ ಕಾರ್ಯಕರ್ತರ ಮೇಲೆ ದೊಡ್ಡ ಜವಬ್ದಾರಿ ಇತ್ತು. ಯಾಕೆಂದರೆ ಈಚಿನ ವರದಿಯೊಂದರ ಪ್ರಕಾರ ಶಿಕ್ಷಕರು ಶೇ 19ರಷ್ಟು ಮಾತ್ರ ತಮ್ಮ ಸಮಯವನ್ನು ಪಾಠಕ್ಕೆ ವಿನಿಯೋಗಿಸಲು ಸಾಧ್ಯವಾಗುತ್ತಿದೆ. ಉಳಿದ ಹೊತ್ತಲ್ಲಿ ಸರ್ಕಾರವಹಿಸುವ ಇತರ ಕೆಲಸಗಳಿಗೇ ಸಮಯ ಹೋಗುತ್ತದೆ. ಈ ಕಾರಣದಿಂದ ಎಲ್ಲೆಲ್ಲಿ ಶಿಕ್ಷಕರ ಕೊರತೆಯಿದೆಯೋ ಅಲ್ಲಿ ಪ್ರಥಮ್ ದಾನಿಗಳನ್ನು ಹಿಡಿದು ಹೆಚ್ಚಿನ ಶಿಕ್ಷಕರನ್ನು ನೇಮಿಸಿದೆ.

ಇನ್ನು, ಮಕ್ಕಳ ಶಿಕ್ಷಣವನ್ನು ಸುಧಾರಿಸಲು ಕೈಜೋಡಿಸ ಬೇಕಾದವರು ಶಾಲಾ ಅಭಿವೃದ್ಧಿ ಸಮಿತಿಯವರು ಹಾಗೂ ಗ್ರಾಮ ಪಂಚಾಯಿತಿಯವರು. ಶಾಲೆಗಳಲ್ಲಿ ಶೌಚಾಲಯ, ತರಗತಿ ಕೋಣೆ, ಆಟದ ಮೈದಾನ ಮುಂತಾಗಿ ಸೌಕರ್ಯಗಳ ಕೊರತೆಯಿದ್ದಾಗ ಗ್ರಾಮ ಪಂಚಾಯಿತಿಯಿಂದಇವನ್ನು ಮಾಡಿಸಿಕೊಳ್ಳಲು ಪ್ರಥಮ್‌ನವರು ಶ್ರಮವಹಿಸಿದರು. ಇದರಿಂದಾಗಿ ಮಕ್ಕಳ ಶಿಕ್ಷಣ ಸುಧಾರಿಸಿತು. ಶಿಕ್ಷಣಕ್ಕೆ ಸೀಮಿತವಾಗದ ಪ್ರಥಮ್, ಕೋವಿಡ್ ಸಮಯದಲ್ಲಿ ಮಕ್ಕಳು ಮನೆಯಲ್ಲೇ ಉಳಿದು ಶಿಕ್ಷಣದಿಂದ ವಂಚಿತರಾಗುವ ಸಂದರ್ಭಬಂದಾಗ ಅಸಾಂಪ್ರದಾಯಿಕ ಶಿಕ್ಷಣ ಕ್ರಮಕ್ಕೆ ಮೊರೆಹೋಯ್ತು.

ಪಠ್ಯೇತರ ಚಟುವಟಿಕೆ

ಗ್ರಾಮೀಣಮಟ್ಟದಲ್ಲಿ ನೈರ್ಮಲ್ಯಕ್ಕೆ ಒತ್ತು ಕೊಡಲು, ಕೆಟ್ಟ ಚಟಗಳಿಂದ ದೂರವಿರಿಸಲು, ಪೌಷ್ಠಿಕ ಆಹಾರ ಸೇವನೆ, ದುಂದು ವೆಚ್ಚ ಮಾಡದಂತೆ ಜನರಿಗೆ ತಿಳುವಳಿಕೆ ನೀಡಲು, ತಲಾ ನಾಲ್ಕು ನಿಮಿಷಗಳ ವಿಡಿಯೊ ಕಾಯ್ರಕ್ರಮ ಮಾಡಿ ಜನರಿಗೆ ತಲುಪಿಸಿತು. ಪ್ರತಿ ಊರಲ್ಲಿ ಒಂದು ಕಂಪ್ಯೂಟರ್ ಕೇಂದ್ರ ಸ್ಥಾಪಿಸಿ ಯಾರುಬೇಕಾದರೂ ಬಂದು ಜಗತ್ತಿನ ಯಾವುದೇ ವಿಷಯ ತಿಳಿಯಲು ಅನುವುಮಾಡಿಕೊಟ್ಟಿತು. ಈ ರೀತಿಯ ಕ್ರಮಗಳಿಂದ ಈ ನಾಲ್ಕು ಹಳ್ಳಿಗಳಲ್ಲಿ ಪ್ರಥಮ್ ಮನೆಮಾತಾಯಿತು.

ಈ ನಾಲ್ಕು ಹಳ್ಳಿಗಳಲ್ಲಿ ಪ್ರಥಮ್ ಚಟುವಟಿಕೆ ಶಾಲಾ ಶಿಕ್ಷಣಕ್ಕೆ ಸಿಮಿತವಾಗಿಲ್ಲ. ಮುಖ್ಯವಾಗಿ ಪಾಲಕರನ್ನು ಅದರಲ್ಲೂ ತಾಯಿಯರನ್ನು ಆರ್ಥಿಕವಾಗಿ ಸಶಕ್ತಗೊಳಿಸಲು, ಅವರ ಸಾಮರ್ಥ್ಯಾಭಿವೃದ್ಧಿಗೆ ಒತ್ತು ನೀಡಲು ಪ್ರಥಮ್ ಪಣತೊಟ್ಟಿದೆ. ಅವರಿಗೆ ಎರೆಹುಳು ಗೊಬ್ಬರ ತಯಾರಿಸಲು ಕಲಿಸಿದೆ. ಹೊಲಿಗೆ ಯಂತ್ರಗಳನ್ನು ನೀಡಿ ಬಟ್ಟೆ ಹೊಲಿಯುವುದನ್ನು ಕಲಿಸಿದೆ. ಸಸಿ ಮಡಿಗಳನ್ನು(ನರ್ಸರಿ) ಸ್ಥಾಪಿಸಿ ಸಸಿ ಬೆಳೆಸಲು ಪ್ರೋತ್ಸಾಹಿಸಿದೆ. ಕೆರೆ ಕಟ್ಟೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವು ದರತ್ತ ಗಮನ ಸೆಳೆದಿದೆ. ‘ಹೆಣ್ಣೊಂದು ಕಲಿತರೆ ಹಳ್ಳಿಯೊಂದು ಕಲಿತಂತೆ‘ ಎಂಬ ಮಾತನ್ನು ಪ್ರಥಮ್ ಕೃತಿಗಿಳಿಸಿದೆ.

‘ಮೆಂಟರಿಂಗ್’ ಯೋಜನೆ

ಮಕ್ಕಳಿಗೆ ಹಿರಿಯರು, ತಿಳಿದವರಿಂದ ನಿರಂತರ ಸಲಹೆಕೊಡಿಸುವ ‘ಮೆಂಟರಿಂಗ್’ ಯೋಜನೆ ಜಾರಿಗೆ ತಂದಿದ್ದು ಪ್ರಥಮ್ ಸಂಸ್ಥೆಯ ಇನ್ನೊಂದು ಮಹತ್ವದ ಹೆಜ್ಜೆ. ಬೇರೆ ಬೇರೆ ಕ್ಷೇತ್ರದಲ್ಲಿರುವ ಹಿರಿಯರನ್ನು, ಹುಡುಕಿ ಮೆಂಟರ್‌ಗಳನ್ನಾಗಿ(ಮಾರ್ಗದರ್ಶಕರನ್ನು) ನೇಮಿಸಿತು. ಒಂಬತ್ತು ಮತ್ತು ಹತ್ತನೆಯ ತರಗತಿಯ ಮಕ್ಕಳಿಗೆ ಈ ಮೆಂಟರ್‌ಗಳು ತರಗತಿಯ ಹಾಗೂ ಹೊರಗಿನ ವಿಷಯಗಳನ್ನು ತಿಳಿಸುತ್ತಿದ್ದರು. ಇದು ಇನ್ನೊಂದು ತರಗತಿಯಲ್ಲ. ಬದಲಾಗಿ ಕಲಿಕೆಗೆ ಒಂದು ಹೊಸ ಆಯಾಮ ಸೇರ್ಪಡೆ. ಇದು ನೂರಾರು ಮಕ್ಕಳಿಗೆ ಸಹಾಯವಾಯಿತು. ಇದೀಗ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಬಿ.ಇಡಿ ವಿದ್ಯಾರ್ಥಿಗಳು ಈ ಮೆಂಟರಿಂಗ್ ಯೋಜನೆಯಲ್ಲಿ ಪ್ರಥಮ್ ಸಂಸ್ಥೆಯೊಂದಿಗೆ ಕೈಜೋಡಿಸಿದ್ದು 80ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಈ ನಾಲ್ಕು ಹಳ್ಳಿಯ ವಿದ್ಯಾರ್ಥಿಗಳಿಗೆ ಸಲಹೆಗಾರರಾಗಿ ನಿಯೋಜನೆಗೊಂಡಿದ್ದಾರೆ.

ಪ್ರಥಮ್ ಮೈಸೂರಿನ ಶೈಕ್ಷಣಿಕ ಮಾದರಿ ಗ್ರಾಮದ ಈ ಯೋಜನೆ ನಾಲ್ಕು ಹಳ್ಳಿಗಳ ನಾನೂರಕ್ಕೂ ಹೆಚ್ಚು ಕುಟುಂಬಗಳು ಶೈಕ್ಷಣಿಕ ದೃಷ್ಟಿಯಿಂದ ಬದಲಾವಣೆಯತ್ತ ಹೆಜ್ಜೆ ಹಾಕಲು ದಾರಿ ತೋರಿದೆ. ಇನ್ನೂ ಹಲವು ಹಳ್ಳಿಗಳು ಈ ಭಾಗ್ಯಕ್ಕಾಗಿ ‘ಪ್ರಥಮ್ ಮೈಸೂರ್’ ತಮ್ಮೂರಿಗೂ ಬರುವುದನ್ನು ಕಾಯುತ್ತಿವೆ. ಯೋಜನೆಯ ಯಶಸ್ಸಿಗೆ ಇದೇ ಸಾಕ್ಷಿ.

****

ಗ್ರಾಮದ ಶೈಕ್ಷಣಿಕ ಅಭಿವೃದ್ಧಿ

ಪ್ರಥಮ್ ಸಂಸ್ಥೆಯ ನಾಲ್ವರು ಶಿಕ್ಷಕರು ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂಗನವಾಡಿ, ಶಾಲೆ, ಮತ್ತು ಗ್ರಾಮದಲ್ಲಿರುವ ವಿದ್ಯಾವಂತರ ನೆರವಿನಿಂದ ಬೀದಿಬೀದಿಯ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಬೀದಿ ನಾಟಕದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದಾರೆ. ಮಹಿಳೆಯರಿಗೆ ಹೊಲಿಗೆ ತರಬೇತಿ, ಮಕ್ಕಳಿಗೆ ಸಂಚಾರಿ ಗ್ರಂಥಾಲಯ ಕೊಡಿಸಿದ್ದಾರೆ. ಈ ಸಂಸ್ಥೆಯ ಚಟುವಟಿಕೆ ಯಿಂದ ಗ್ರಾಮಕ್ಕೆ ತುಂಬಾ ಸಹಾಯವಾಗಿದೆ.

- ಉಮೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸುಜ್ಜಲೂರು

ಉತ್ತಮ ಸೌಲಭ್ಯ

ಅಂಗನವಾಡಿಗೆ ಶಿಕ್ಷಕರನ್ನು ನೇಮಿಸಿರುವ ಪ್ರಥಮ್ ಸಂಸ್ಥೆ, ಮೂರರಿಂದ ಆರು ವರ್ಷದ ಮಕ್ಕಳ ಕಲಿಕೆಗೆ ನೆರವಾಗಿದೆ. ಶಿಕ್ಷಕರು ಕಂಪ್ಯೂಟರ್‌ ಮತ್ತು ಇಂಗ್ಲಿಷ್‌ ಕಲಿಸುತ್ತಿದ್ದಾರೆ. ‘ಪೋಷಣೆ’ ಕಾರ್ಯಕ್ರಮದ ಮೂಲಕ ಪೋಷಕರಿಗೆ ಆಹಾರ ಜಾಗೃತಿ ಮೂಡಿಸಿದ್ದಾರೆ. ಕೊರೊನಾ ಸಮಯದಲ್ಲಿ ಮಕ್ಕಳಿಗೆ ಪಾಠ ಮಾಡಿದ್ದಾರೆ. ಪ್ರತಿ ತಿಂಗಳು ಪೋಷಕರ ಸಭೆ ನಡೆಸಿ, ನಮ್ಮ ಸಮಸ್ಯೆಗಳನ್ನು ಕೇಳುತ್ತಾರೆ. ಒಟ್ಟಾರೆ ಗ್ರಾಮಕ್ಕೆ ಉತ್ತಮ ಸೌಲಭ್ಯಗಳು ದೊರೆತಿವೆ.

- ಸರಸ್ವತಿ, ಗ್ರಾಮ ಪಂಚಾಯಿತಿ ಸದಸ್ಯರು, ಮುತ್ತತ್ತಿ

ಜೀವನ ಕಲಿಸುವ ಯೋಜನೆ

ಪ್ರಥಮ್‌ ಸಂಸ್ಥೆಯ ಶೈಕ್ಷಣಿಕ ಮಾದರಿ ಗ್ರಾಮ ಯೋಜನೆ, ಮಗುವಿಗೆ ಕೇವಲ ಅಕ್ಷರವನ್ನಷ್ಟೇ ಕಲಿಸುವುದಿಲ್ಲ. ಯಶಸ್ವಿಯಾಗಿ ಜೀವಿಸುವುದು ಹೇಗೆಂಬುದನ್ನೂ ಕಲಿಸಿದೆ. ಇದು ತರಗತಿಯ ಶಿಕ್ಷಣವಲ್ಲ. ಬದಲಿಗೆ ಸಮುದಾಯವನ್ನೊಳಗೊಂಡ ಜೀವನದ ಕಲಿಕೆಯಾಗಿದೆ. ಈ ಯೋಜನೆ ಇಡೀ ಗ್ರಾಮವನ್ನು ಸಂವೇದನಾಶೀಲಗೊಳಿಸುತ್ತದೆ. ಸಮುದಾಯದ ಎಲ್ಲ ಘಟಕಗಳೂ ತಂತಮ್ಮ ಕರ್ತವ್ಯ ಮಾಡಲು ಪ್ರೇರೇಪಿಸುತ್ತದೆ.

-‌ ಅಶ್ವಿನಿ ರಂಜನ್, ಸ್ಥಾಪಕ ಟ್ರಸ್ಟಿ, ಪ್ರಥಮ್ ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT