ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆ | ಬೇಸಿಗೆ ರಜೆಯಲ್ಲಿ ತೆರೆಯಲಿ ಹೊಸ ಲೋಕ

Last Updated 27 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಪ್ರಶ್ನೆಗಳು ಹುಟ್ಟುವುದು ಹೇಗೆ? ಅನುಭವದ ಮೂಲಕವೇ ಅಲ್ಲವೇ? ಆದರೆ ಇಂದು ನಮ್ಮ ಶಿಕ್ಷಣ ವ್ಯವಸ್ಥೆ ಎಷ್ಟು ಅನುಭವ ಕೇಂದ್ರಿತವಾಗಿದೆ ಎಂಬ ಪ್ರಶ್ನೆಯನ್ನು ನಾವೇ ಕೇಳಿಕೊಳ್ಳಬೇಕು.

***

ಕಲಿಕೆಯ ಬಗ್ಗೆ ಮಾತನಾಡುವಾಗ ನಾವು ಸಾಮಾನ್ಯವಾಗಿ ಏನು ಕಲಿತೆ? ಎಷ್ಟು ಕಲಿತೆ? ಕಲಿತದ್ದರಿಂದ ಏನು ಉಪಯೋಗ? ಪರೀಕ್ಷೆಯಲ್ಲಿ ಬರೆಯಲು ಬರುವಂತಹ ಕಲಿಕೆಯೇ? ಎಂಬಂತಹ ಪ್ರಶ್ನೆಗಳನ್ನು ಮಕ್ಕಳಿಗೆ ಸಾಮಾನ್ಯವಾಗಿ ಕೇಳುತ್ತಿರುತ್ತೇವೆ, ಆದರೆ ಕಲಿಕೆ ಎನ್ನುವ ಪ್ರಕ್ರಿಯೆಯ ಕುರಿತು, ಆ ಪ್ರಕ್ರಿಯೆಯಲ್ಲಿ ಆಗುವ ಅನುಭವಗಳ ಕುರಿತು ಪರಸ್ಪರ ಮಾತನಾಡುವುದು ಕಡಿಮೆಯೇ. ಯಾವುದನ್ನು ಕಲಿಯುವುದರಲ್ಲಿ ಯಶಸ್ವಿಯಾದೆ ಎನ್ನುವ ಮಾತನ್ನಾಡುವುದೇ ಹೆಚ್ಚು, ಯಾವುದನ್ನು ಕಲಿಯುವುದರಲ್ಲಿ ಸೋತೆ ಎಂಬುದರ ಬಗ್ಗೆ ಹೇಳುವುದು ಕಡಿಮೆ.

ಏನನ್ನಾದರೂ ಕಲಿಯುವ ಮುಂಚೆ, ಕಲಿಯುವಾಗ, ಕಲಿತ ನಂತರ, ಕಲಿತದ್ದನ್ನು ಮರೆತು ಹೊಸದನ್ನು ಕಲಿತಾಗ ನಮ್ಮೊಳಗೇ ಆಗುವ ಅನುಭವವೆಂಥದ್ದು? ಕಲಿಕೆ ಎಂದರೆ ಅದು ಬುದ್ಧಿಗೆ ಮಾತ್ರ ಸಂಬಂಧಪಟ್ಟಿದ್ದೇ? ಕಲಿಕೆ ಎಂದರೆ ಕೌಶಲವೇ? ಕಲಿಕೆ ಎಂದರೆ ಪರಿವರ್ತನೆಯೇ? ನಾವು ಬಯಸಿದ್ದನ್ನೆಲ್ಲಾ ಕಲಿಯುವುದು ಸಾಧ್ಯವೇ? ಕಲಿಕೆಯೆಂದರೆ ಕಷ್ಟಪಟ್ಟು ಮಾಡಬೇಕಾದ್ದು ಎನ್ನುವ ಕಲ್ಪನೆಯಿರುವ ನಮಗೆ ಸಂತೋಷವಾಗಿರುವುದು, ಶಾಂತಿಯಿಂದ ಇರುವುದು, ಲವಲವಿಕೆಯಿಂದ ಬದುಕುವುದು ಕಲಿಕೆ ಎಂದು ಅನಿಸುವುದು ಸಾಧ್ಯವೇ?

ಕಲಿಕೆಯ ಅನುಭವಗಳ ಹರಹು ಅಗಾಧವಾದದ್ದು, ಕಲಿಕೆಯೆನ್ನುವ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವ ಪಯಣವೂ ರೋಚಕವಾದದ್ದು. ಆದರೆ, ಕಲಿಕೆಯ ಅನುಭವಗಳ ಬಗೆಗಿನ ಸಂವಾದ ನಮ್ಮ ಸಮಾಜದಲ್ಲಿ, ಶಿಕ್ಷಣ ವ್ಯವಸ್ಥೆಯಲ್ಲಿ ಅಷ್ಟೇನೂ ಪ್ರಚಲಿತವಿಲ್ಲ. ಮಕ್ಕಳೂ, ಶಿಕ್ಷಕರೂ, ಪೋಷಕರೂ ಮತ್ತು ಸಮಾಜದ ಎಲ್ಲರೂ ತಮ್ಮ ತಮ್ಮ ಕಲಿಕೆಯ ಅನುಭವಗಳ ಕುರಿತು ಹಂಚಿಕೊಳ್ಳುವ ಪ್ರಸಂಗಗಳು ಹೇರಳವಾಗೇನಿಲ್ಲ. ಈ ಬೇಸಿಗೆ ರಜೆಯ ಕಾಲವನ್ನು ನಾವು ಇಂತಹ ಅನೇಕ ಸಂವಾದಗಳಿಗೆ ವೇದಿಕೆಯಾಗಿಸಬಹುದು.

ನಮ್ಮ ಶಿಕ್ಷಣ ವ್ಯವಸ್ಥೆಯ ದುರಂತವೆಂದರೆ ಮಕ್ಕಳು ಪ್ರಶ್ನೆ ಕೇಳುವ ಮುಂಚೆಯೇ ಉತ್ತರಗಳನ್ನು ಅಭ್ಯಾಸಮಾಡಿಸಲು ಹೊರಡುವುದು. ನಾವು ಮಕ್ಕಳಾಗಿದ್ದಾಗ ಕೇಳಿಕೊಳ್ಳುತ್ತಿದ್ದ ಎಷ್ಟೋ ಪ್ರಶ್ನೆಗಳನ್ನು ಈಗ ಕೇಳಿಕೊಳ್ಳುವುದೇ ಇಲ್ಲ, ಕಾರಣ ಅವಕ್ಕೆಲ್ಲಾ ಉತ್ತರಗಳನ್ನು ಪಡೆದುಕೊಂಡಿದ್ದೇವೆ ಎನ್ನುವುದಲ್ಲ, ಪ್ರಶ್ನೆ ಕೇಳಿಕೊಳ್ಳುವ ಅಭ್ಯಾಸವನ್ನು ಕೈಬಿಟ್ಟಿದ್ದೇವೆ ಅಷ್ಟೇ!.

ಯಾವ ಪ್ರಶ್ನೆ ಕೇಳಿಕೊಳ್ಳುವುದು ಅನುಕೂಲವೋ ಅದನ್ನಷ್ಟೇ ಪ್ರೋತ್ಸಾಹಿಸುತ್ತೇವೆ, ಯಾವ ಪ್ರಶ್ನೆ ಮುಜುಗರವನ್ನು ತರುವುದೋ, ಯಾವುದರ ಉತ್ತರ ನಮ್ಮ ಅಸಮಾ ಧಾನಕ್ಕೆ ಕಾರಣವಾಗುವುದೋ ಅಂಥ ಪ್ರಶ್ನೆಗಳನ್ನೇ ಮರೆತಿದ್ದೇವೆ ಅಷ್ಟೇ!.

ಮಕ್ಕಳು ಎಂತೆಂತಹಾ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಾರಲ್ಲವೇ? ದೊಡ್ಡವರ ಲೋಕದ ನಿಯಮಗಳನ್ನು ಅವರಿಗೆ ಅರ್ಥಮಾಡಿಸುವುದು ಎಷ್ಟು ಕಷ್ಟವಲ್ಲವೇ? ಪ್ರಶ್ನೆಗಳು ಹುಟ್ಟುವುದು ಹೇಗೆ? ಅನುಭವದ ಮೂಲಕವೇ ಅಲ್ಲವೇ? ಆದರೆ ಇಂದು ನಮ್ಮ ಶಿಕ್ಷಣ ವ್ಯವಸ್ಥೆ ಎಷ್ಟು ಅನುಭವಕೇಂದ್ರಿತವಾಗಿದೆ ಎಂಬ ಪ್ರಶ್ನೆಯನ್ನು ನಾವೇ ಕೇಳಿಕೊಳ್ಳಬೇಕು. ಈ ಬೇಸಿಗೆ ರಜೆಯಲ್ಲಿ ಬಾಲ್ಯದ ಅನೇಕ ಮರೆತುಹೋದ ಪ್ರಶ್ನೆಗಳಿಗೆ ಜೀವವನ್ನು ಕೊಡಬಹುದು. ಇದಕ್ಕೆ ಮಕ್ಕಳ ಸಾಹಿತ್ಯ ಸಾಕಷ್ಟು ಪ್ರೇರಣೆಯನ್ನು ಒದಗಿಸುತ್ತದೆ.

ಬಾಲ್ಯದ ಪ್ರಪಂಚವೇ ಬೇರೆ, ಅದರ ರೀತಿ-ನೀತಿಗಳೇ ಬೇರೆ, ಬಾಲ್ಯದ ನಿಮ್ಮ ನೆಚ್ಚಿನ ಕಲ್ಪನೆಗಳು ಯಾವುವು, ಯಾವುದು ಅತ್ಯಂತ ನಿಗೂಢ ಎಂದು ನಿಮಗನ್ನಿಸುತ್ತಿತ್ತು, ಯಾಕೆ? ಇವುಗಳ ಬಗ್ಗೆ ಮಕ್ಕಳ ಜೊತೆ ಮಾತನಾಡಿ ಅವರ ಕಲ್ಪನಾಲೋಕದ ಬಗ್ಗೆ ತಿಳಿಯುವುದಕ್ಕೂ ಬೇಸಿಗೆ ರಜೆ ಸಕಾಲ. ಮಕ್ಕಳ ಸಿನಿಮಾಗಳನ್ನು ಪಟ್ಟಿ ಮಾಡಿಕೊಂಡು ದಿನವೂ ಒಂದೊಂದು ಸಿನಿಮಾ ಪೋಷಕರೂ, ಮಕ್ಕಳೂ ಒಟ್ಟಿಗೆ ನೋಡುವುದೂ ಆಹ್ಲಾದಕಾರಿ ಅನುಭವ.

ನಾವೀಗ ಮಕ್ಕಳ ಪ್ರಪಂಚವನ್ನು ತುಂಬಾ ಬುದ್ಧಿಕೇಂದ್ರಿತ ಮಾಡುತ್ತಿದ್ದೇವೆ. ಸುತ್ತಲಿನ ಪರಿಸರ ನೀಡುವ ಸಮೃದ್ಧ ಇಂದ್ರಿಯಾನುಭವಗಳನ್ನು, ಸಂವೇದನೆಗಳನ್ನು ಗುರುತಿಸುವ ಸಾಮರ್ಥ್ಯ ಅವರಲ್ಲಿ ಕಡಿಮೆಯಾಗುತ್ತಿರುವುದೂ ಸುಳ್ಳಲ್ಲ. ಎಷ್ಟೊಂದು ಬಗೆಯ ನೋಟಗಳು, ಶಬ್ದಗಳು, ರುಚಿಗಳು ಅವುಗಳ ನಡುವಿರುವ ನಾಜೂಕು ವೈವಿಧ್ಯಗಳು ಮನಸ್ಸಿಗೆ ಹೊಸ ಉಲ್ಲಾಸವನ್ನು ತರಬಲ್ಲವು. ಸ್ಮಾರ್ಟ್ ಫೋನ್/ಟ್ಯಾಬ್‌ಗಳಲ್ಲಿ ತಲ್ಲೀನರಾದ ಮಕ್ಕಳಿಗೆ ಪ್ರಪಂಚವನ್ನು ಆಸಕ್ತಿಯಿಂದ ಗಮನಿಸುವ ಅಭ್ಯಾಸವನ್ನು ಮಾಡಿಸೋಣ. ವಿವಿಧ ಸಸ್ಯಗಳು, ಹೂವುಗಳು, ಪಕ್ಷಿಗಳು, ಜಲಚರಗಳು, ಬಗೆಬಗೆಯ ಕಟ್ಟಡಗಳ ವಿನ್ಯಾಸಗಳು, ಅಡುಗೆಯಲ್ಲಿನ ವೈವಿಧ್ಯ, ಉಡುಗೆ, ತೊಡುಗೆಯಲ್ಲಿನ ವಿಶಿಷ್ಟ ವಿನ್ಯಾಸ; ಹೀಗೆ ವೈವಿಧ್ಯವನ್ನು ಗಮನಿಸಲು ಹೇಳೋಣ. ಬೇಸಿಗೆ ರಜೆಯಲ್ಲಿ ಪ್ರವಾಸವೆಂದರೆ ಎಲ್ಲೋ ದೂರದ ಊರುಗಳಿಗೆ ಹೊರಡುವ ದುಬಾರಿ ಸಂಚಾರವೇ ಆಗಬೇಕಿಲ್ಲ. ನಮ್ಮ ಊರುಗಳನ್ನು ಚೆನ್ನಾಗಿ ಅರಿಯುವ, ಅದರ ಇತಿಹಾಸ ತಿಳಿಯುವ ಕೆಲಸವಾಗಲಿ. ಒಟ್ಟಾರೆ ಆಯಾ ಊರಿನ ವೈಶಿಷ್ಟ್ಯಗಳೂ, ಸಮಸ್ಯೆಗಳ ಕುರಿತು ಪ್ರಾಯೋಗಿಕವಾಗಿ ಅರಿಯಬಹುದು.

ಪ್ರವಾಸಕ್ಕಾಗಿ ಯಾವ ಊರಿಗೇ ತೆರಳಲಿ, ಆ ಊರನ್ನು ನೋಡಿ ಸಂತಸಪಡುವುದರ ಜೊತೆಗೆ ತಮ್ಮ ಆಸಕ್ತಿಯ ಕ್ಷೇತ್ರವನ್ನು ಇನ್ನೊಂದಿಷ್ಟು ವಿಸ್ತರಿಸಿಕೊಳ್ಳುವುದು ಮಕ್ಕಳಿಗೆ ಸಾಧ್ಯವಾದರೆ ಆಗ ಪ್ರವಾಸ ನಿಜಕ್ಕೂ ಸಾರ್ಥಕವಾದಂತೆ. ನಮ್ಮ ದೇಶದ ಶಿಲ್ಪಕಲಾ ಪರಂಪರೆಯ ಬಗ್ಗೆ ಕುತೂಹಲವೋ, ಇತಿಹಾಸದಲ್ಲಿನ ಯಾವುದೋ ಒಂದು ಕಾಲಘಟ್ಟದ ಬಗೆಗೆ ವಿಶೇಷ ಆಸಕ್ತಿಯೋ, ಸಾಮಾಜಿಕ ವ್ಯವಸ್ಥೆಯೊಂದನ್ನು ಕುರಿತಾದ ಪ್ರಶ್ನೆಗಳೋ, ಜೀವನ ಶೈಲಿಯಲ್ಲಿನ ಆರೋಗ್ಯಕರ ಬದಲಾವಣೆಯೋ, ಅಧ್ಯಯನದ ಹೊಸ ಕ್ಷೇತ್ರವೊಂದರ ಪರಿಚಯವೋ; ಒಟ್ಟಿನಲ್ಲಿ ಮಕ್ಕಳ ಬದುಕು ಹೊಸಹೊಸದಾಗಿ ಚಿಗುರುತ್ತಲೇ ಇರಬೇಕು, ಬೇಸಿಗೆ ಸಿದ್ಧವಾಗಿದೆ, ರಜೆ ಬಾಗಿಲ ಬಳಿ ನಿಂತಿದೆ, ನಾವೂ ಮಕ್ಕಳೊಂದಿಗೆ ಕೂಡಿ ಹತ್ತಾರು ಲೋಕಗಳನ್ನು ಸುತ್ತೋಣ, ಅವರಂತೆ ನಾವೂ ಬೆಳೆಯುತ್ತಲೇ ಇರೋಣ!.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT