ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈವೆಂಟ್ ಮ್ಯಾನೇಜ್ಮೆಂಟ್: ಏನಿದು ಕೋರ್ಸ್? ಎಲ್ಲೆಲ್ಲಿ ಲಭ್ಯ?

ಸಿಬಂತಿ ಪದ್ಮನಾಭ ಕೆ.ವಿ ಅವರ ಲೇಖನ
Published 5 ಜೂನ್ 2023, 0:34 IST
Last Updated 5 ಜೂನ್ 2023, 0:34 IST
ಅಕ್ಷರ ಗಾತ್ರ

ಬೃಹತ್ ಸಮಾರಂಭಗಳ ಕಾಲ ಇದು. ಮದುವೆಯೂ ಆಗಿರಬಹುದು, ವಸ್ತುಪ್ರದರ್ಶನ-ಮಾರಾಟವೂ ಆಗಿರಬಹುದು; ಸಾವಿರಾರು ಜನರು ಭಾಗವಹಿಸುವ ಕಾರ್ಯಕ್ರಮಗಳು ಸಾಮಾನ್ಯ ಪಟ್ಟಣಗಳಿಂದ ತೊಡಗಿ ಮಹಾನಗರಗಳವರೆಗೆ ಎಲ್ಲೆಡೆ ನಡೆಯುತ್ತಲೇ ಇರುತ್ತವೆ. ದೊಡ್ಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಸಾಲದು, ಅವು ಅಚ್ಚುಕಟ್ಟಾಗಿ ನಡೆಯಬೇಕು- ಇದು ಆಯೋಜಕರ ಆದ್ಯತೆ. ಅವರಿಗೆ ಖರ್ಚಿನ ಬಗ್ಗೆ ಚಿಂತೆಯಿಲ್ಲ; ಯಾವುದೇ ಕೊರತೆಯಿಲ್ಲದಂತೆ ಎಲ್ಲವೂ ಸುಸೂತ್ರವಾಗಿ ಸಾಗಿದರೆ ಆಯಿತು. 

ಮೊದಲೆಲ್ಲ ಊಟೋಪಚಾರದ ಬಗ್ಗೆ ಮಾತ್ರ ಆಯೋಜಕರು ತಲೆಕೆಡಿಸಿಕೊಳ್ಳುತ್ತಿದ್ದರು. ಅದಕ್ಕಾಗಿ ಕ್ಯಾಟರಿಂಗ್ ಸೇವೆ ಒದಗಿಸುವವರು ಬಂದರು. ಈಗ ಅಷ್ಟೇ ಸಾಲದು, ಕಾರ್ಯಕ್ರಮ ಎಲ್ಲಿ ನಡೆಸಬೇಕು, ಹೇಗೆ ನಡೆಸಬೇಕು, ಎಷ್ಟರಮಟ್ಟಿನ ಅಲಂಕಾರ ಬೇಕು, ಭದ್ರತಾ ವ್ಯವಸ್ಥೆ ಹೇಗೆ, ಪಾರ್ಕಿಂಗ್ ಎಲ್ಲಿ, ಆಮಂತ್ರಣ ಪತ್ರಿಕೆ ಹೇಗಿರಬೇಕು, ನೋಂದಣಿ ಯಾವ ರೀತಿ, ಧ್ವನಿವರ್ಧಕ ಯಾವ ಗುಣಮಟ್ಟದ್ದು, ಏನೆಲ್ಲ ಮನರಂಜನಾ ಕಾರ್ಯಕ್ರಮಗಳಿರ ಬೇಕು, ಕಲಾವಿದರು ಯಾರು... ಪ್ರತಿಯೊಂದೂ ಹೀಗೆಯೇ ಇರಬೇಕು ಎಂದು ಬಯಸುವವರು ಇದ್ದಾರೆ. ಇದು ಕಾರ್ಪೋರೇಟ್ ಶೈಲಿ. 

ಹೀಗಾಗಿ ಕಾರ್ಯಕ್ರಮ ನಿರ್ವಹಣೆ (ಈವೆಂಟ್ ಮ್ಯಾನೇಜ್‌ಮೆಂಟ್‌) ಎಂಬ ಶಾಖೆ ಈಗ ಜನಪ್ರಿಯ. ಇಲ್ಲಿ ಎಲ್ಲವೂ ಶೈಲೀಕೃತ. ಪ್ರತಿಯೊಂದರ ಹಿಂದೆಯೂ ಯೋಜನೆ, ಅದಕ್ಕೆ ತಕ್ಕ ನಿರ್ವಹಣೆ. ಈವೆಂಟ್ ಮ್ಯಾನೇಜ್‌ಮೆಂಟ್‌ ಕಂಪನಿಗಳೇ ಬೆಳೆದು ನಿಂತಿವೆ. ಇವರಿಗೆ ಈವೆಂಟ್ ಪ್ಲಾನರ್‌ಗಳು, ಈವೆಂಟ್ ಮ್ಯಾನೇಜರ್‌ಗಳು ಎಷ್ಟಿದ್ದರೂ ಸಾಲದು. ಇವರು ಅಡಾವುಡಿ ಮಾಡಿಕೊಂಡರೆ ಆಗದು, ಪ್ರತಿಯೊಂದರಲ್ಲೂ ಶಿಸ್ತು, ವ್ಯವಸ್ಥೆ, ಅಚ್ಚುಕಟ್ಟುತನ, ವೃತ್ತಿಪರತೆ ಬೇಕು. ಈ ಬೇಡಿಕೆಯನ್ನು ಪೂರೈಸುವುದಕ್ಕೆ ಪದವಿ, ಸ್ನಾತಕೋತ್ತರ ಹಂತದಲ್ಲಿ ಹಲವು ಕೋರ್ಸುಗಳು ಕಾಣಿಸಿಕೊಂಡಿವೆ. ಆದರೆ ಔಪಚಾರಿಕ ಪದವಿಗಳ ಭಾರ ಇಲ್ಲದೆಯೂ ಉತ್ತಮ ಈವೆಂಟ್ ಮ್ಯಾನೇಜರುಗಳನ್ನು ರೂಪಿಸುವುದಕ್ಕೆ ಸಾಕಷ್ಟು ಆನ್‌ಲೈನ್‌ ಸಂಪನ್ಮೂಲಗಳಿವೆ.

ಏನಿದು ಕೋರ್ಸ್?

ಈವೆಂಟ್ ಮ್ಯಾನೇಜ್ಮೆಂಟ್ ಬಯಸುವುದು ಉತ್ತಮ ಸಂವಹನ ಕಲೆ, ನಾಯಕತ್ವ, ವ್ಯವಸ್ಥಿತ ಯೋಜನೆ, ಸಮರ್ಥ ಅನುಷ್ಠಾನ, ಒತ್ತಡ ನಿರ್ವಹಣೆ, ಸಾರ್ವಜನಿಕ ಸಂಪರ್ಕ ಇತ್ಯಾದಿ ಕೌಶಲಗಳನ್ನು. ಇವುಗಳನ್ನು ಕರಗತ ಮಾಡಿಕೊಂಡವರು ಈವೆಂಟ್ ಮ್ಯಾನೇಜ್‌ಮೆಂಟ್‌ ಕಂಪನಿಗಳ ಭಾಗವಾಗದೆಯೂ ಒಳ್ಳೆಯ ಸೇವೆ ನೀಡಬಹುದು. ತಾವೇ ಸ್ವತಃ ಈವೆಂಟ್ ಮ್ಯಾನೇಜ್ಮೆಂಟ್ ಉದ್ಯಮವನ್ನು ಸ್ಥಾಪಿಸಿ ಯಶಸ್ಸು ಪಡೆಯಬಹುದು.
ಆದರೆ ಕಾರ್ಪೋರೇಟ್ ಯುಗಕ್ಕೆ ತಕ್ಕಂತೆ ತಮ್ಮ ಕೌಶಲಗಳನ್ನು ಮರುರೂಪಿಸಿಕೊಳ್ಳಲು ಆನ್‌ಲೈನ್‌ ಕೋರ್ಸುಗಳು ನೆರವಾಗಬಹುದು. ಒಂದು ಕಾರ್ಯಕ್ರಮದ ಹೊಣೆಗಾರಿಕೆ ಸಿಕ್ಕಕೂಡಲೇ ಯಾವ ರೀತಿ ಸಿದ್ಧತೆ ನಡೆಸಬೇಕು, ಅದರ ಬಜೆಟ್, ವೇಳಾಪಟ್ಟಿ, ಸ್ಥಳ ನಿಗದಿ, ಅಲಂಕಾರ, ಸ್ಥಳೀಯ ಆಡಳಿತದ ಅನುಮತಿ, ವಾಹನ ನಿಲುಗಡೆ, ಅತಿಥಿಗಳ ಪ್ರಯಾಣ, ತಂಗುವಿಕೆ, ಭದ್ರತೆ, ಧ್ವನಿವರ್ಧಕ, ಊಟೋಪಚಾರ, ಮನರಂಜನೆ- ಇವುಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಈ ಕೋರ್ಸುಗಳು ವ್ಯವಸ್ಥಿತವಾಗಿ ಹೇಳಿಕೊಡುತ್ತವೆ. 

ಯಾರು ಕಲಿಯಬಹುದು?
ತೀರಾ ತಾಂತ್ರಿಕ ವಿಷಯಗಳ ಅಭ್ಯಾಸವನ್ನು ಒಳಗೊಳ್ಳದ ಶಾಖೆ ಇದಾಗಿರುವುದರಿಂದ ಈ ಕೋರ್ಸ್ ಎಲ್ಲರಿಗೂ ಮುಕ್ತ. ನಿರ್ದಿಷ್ಟ ವಿದ್ಯಾರ್ಹತೆಯ ಹಿನ್ನೆಲೆಯೂ ಬೇಕಾಗಿಲ್ಲ. ಒಳ್ಳೆಯ ಸಂವಹನ ಕಲೆ ಮತ್ತು ನಿರ್ವಹಣೆಯ ಕೌಶಲ ಉಳ್ಳವರಿಗೆ ಇದೊಂದು ಅದ್ಭುತ ಆಯ್ಕೆ ಆಗಬಲ್ಲದು. ಪಿಯುಸಿ ಮೇಲ್ಪಟ್ಟವರು ಬೇರೆ ಔಪಚಾರಿಕ ಕೋರ್ಸುಗಳ ಜತೆಗೆ ಈ ಕೋರ್ಸ್ ಅನ್ನು ತೆಗೆದುಕೊಂಡರೂ ಯಶಸ್ವೀ ವೃತ್ತಿಜೀವನಕ್ಕೆ ಬೆಂಬಲವಾದೀತು.

ಎಲ್ಲಿ ಲಭ್ಯ?
ಮ್ಯಾನೇಜ್‌ಮೆಂಟ್‌ ಕೋರ್ಸುಗಳನ್ನು ಒದಗಿಸುವ ಕಾಲೇಜುಗಳಲ್ಲಿ ಈವೆಂಟ್ ಮ್ಯಾನೇಜ್ಮೆಂಟ್ ಅಥವಾ ಅದಕ್ಕೆ ಸಂಬಂಧಿಸಿದ ಪಬ್ಲಿಕ್ ರಿಲೇಶನ್ಸ್, ಕಾರ್ಪೋರೇಟ್ ಕಮ್ಯೂನಿಕೇಶನ್ಸ್ ಮುಂತಾದ ವಿಷಯಗಳಲ್ಲಿ ಬಿಬಿಎ/ಎಂಬಿಎ ಕೋರ್ಸುಗಳಿವೆ. ಇವುಗಳ ಹೊರತಾಗಿ ಸಾಕಷ್ಟು ಆನ್‌ಲೈನ್‌  ಕೋರ್ಸುಗಳು ಈಗ ಲಭ್ಯ:

 ಶಿಕ್ಷಣ ಸಚಿವಾಲಯದ ‘ಸ್ವಯಂ’ ತಾಣದಲ್ಲಿ ‘ಈವೆಂಟ್ ಕೋಆರ್ಡಿನೇಶನ್’, ‘ಈವೆಂಟ್ ಪ್ಲಾನಿಂಗ್’ ಎಂಬ ತಲಾ 16 ವಾರಗಳ ಕೋರ್ಸ್, ‘ಬೇಸಿಕ್ಸ್ ಆಫ್ ಈವೆಂಟ್ ಮ್ಯಾನೇಜ್ಮೆಂಟ್’ ಎಂಬ 12 ವಾರಗಳ ಕೋರ್ಸ್ ಉಚಿತವಾಗಿ ಲಭ್ಯವಿದೆ. ಇವನ್ನು ದೆಹಲಿಯ ಇಗ್ನೋ ರೂಪಿಸಿದ್ದು, ಮುಂದಿನ ಕೊಂಡಿಯ ಮೂಲಕ ಪಡೆಯಬಹುದು: https://www.udemy.com/topic/event-planning/

 ಯುಡೆಮಿ ಜಾಲತಾಣದಲ್ಲಿ ‘ಈವೆಂಟ್ ಪ್ಲಾನಿಂಗ್’ಗೆ ಸಂಬಂಧಿಸಿದ ಅನೇಕ ಉಚಿತ ಹಾಗೂ ಸಾಧಾರಣ ಶುಲ್ಕ ಬಯಸುವ ಕೋರ್ಸುಗಳು ಲಭ್ಯವಿವೆ. ಇಲ್ಲಿ ನೋಡಿ: §  https://www.udemy.com/topic/event-planning/

 ಪ್ರಾರಂಭಿಕ ಹಂತದ ಅಭ್ಯಾಸಿಗಳಿಗೆ ಗ್ರೇಟ್ ಲರ್ನಿಂಗ್ ಅಕಾಡೆಮಿಯು ಉಚಿತ ಹಾಗೂ ಪಾವತಿ ಕೋರ್ಸುಗಳನ್ನು ನೀಡುತ್ತಿದೆ. ಗಮನಿಸಿ: https://www.mygreatlearning.com/

(ಮುಂದಿನ ವಾರ: ಡೇಟಾ ಅನಲಿಟಿಕ್ಸ್)

(ಲೇಖಕರು: ಸಹಾಯಕ ಪ್ರಾಧ್ಯಾಪಕ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ತುಮಕೂರು ವಿಶ್ವವಿದ್ಯಾನಿಲಯ )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT