ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಬಿಎಗೆ ಪ್ರವೇಶಕ್ಕೆ ಸಿಇಟಿ ಕಡ್ಡಾಯವೇ ?

Published 21 ಮೇ 2023, 23:30 IST
Last Updated 21 ಮೇ 2023, 23:30 IST
ಅಕ್ಷರ ಗಾತ್ರ

ಪ್ರದೀಪ್‌ ಕುಮಾರ್‌ ವಿ

1. ನಾನು ಅಂತಿಮ ವರ್ಷದ ಬಿಕಾಂ ಮಾಡುತ್ತಿದ್ದೇನೆ. ಎಂಬಿಎ (ದೂರಶಿಕ್ಷಣ) ಮಾಡಲು ಸಿಇಟಿ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಬೇಕೇ?

ಹೆಸರು, ಊರು ತಿಳಿಸಿಲ್ಲ.

ಎಂಬಿಎ (ದೂರಶಿಕ್ಷಣ) ಮಾಡಲು ಪಿಜಿಸಿಇಟಿ ಪರೀಕ್ಷೆಯ ಅಗತ್ಯವಿಲ್ಲ. ಆದರೆ, ಕೆಲವು ಪ್ರತಿಷ್ಟಿತ ವಿಶ್ವವಿದ್ಯಾಲಯಗಳು ಅಭ್ಯರ್ಥಿಗಳಿಗೆ ಮ್ಯಾನೇಜ್‌ಮೆಂಟ್ ಶಿಕ್ಷಣಕ್ಕೆ ಬೇಕಾಗುವ ಆಸಕ್ತಿ, ಅಭಿರುಚಿ ಇದೆಯೇ ಎಂದು ತಿಳಿಯಲು ಆಪ್ಟಿಟ್ಯೂಡ್ ಟೆಸ್ಟ್ ಆಯೋಜಿಸುತ್ತವೆ. ಹಾಗಾಗಿ, ಪ್ರವೇಶ ಪ್ರಕ್ರಿಯೆ, ನೀವು ಸೇರಲು ಬಯಸುವ ವಿಶ್ವವಿದ್ಯಾಲಯದ ನಿಯಮಾವಳಿಗಳನ್ನು ಅವಲಂಬಿತವಾಗಿರುತ್ತದೆ.

2. ನಾನು ದ್ವಿತೀಯ ಪಿಯುಸಿಯಲ್ಲಿ 2015ರಲ್ಲಿ ಅನುತ್ತೀರ್ಣವಾಗಿ 2020ರಲ್ಲಿ ಉತ್ತೀರ್ಣನಾಗಿದ್ದೇನೆ. ಈಗ ಬಿ.ಎಸ್ಸಿ ಮಾಡಬಹುದೇ?
ಹೆಸರು, ಊರು ತಿಳಿಸಿಲ್ಲ.

ನಮಗಿರುವ ಮಾಹಿತಿಯಂತೆ ನೀವು ಬಿ.ಎಸ್ಸಿ ಕೋರ್ಸ್ ಮಾಡಬಹುದು. ಆದರೆ, ನಿಮ್ಮ ಸ್ವಾಭಾವಿಕ ಆಸಕ್ತಿ, ಅಭಿರುಚಿಯಂತೆ ಯಾವ ವೃತ್ತಿ ನಿಮಗೆ ಸರಿಹೊಂದುತ್ತದೆ ಎಂದು ಪರಿಶೀಲಿಸಿ, ಅದರಂತೆ ವೃತ್ತಿಯೋಜನೆಯನ್ನು ಮಾಡಿ, ನಂತರ ಕೋರ್ಸ್ ಆಯ್ಕೆ ಮಾಡುವುದು ಸೂಕ್ತ.

3. ನನಗೀಗ 33 ವರ್ಷಗಳಾಗಿದ್ದು, ಎಂಬಿಎ ಮಾಡಿ ಕಳೆದ 7 ವರ್ಷಗಳಿಂದ ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ, ಗುತ್ತಿಗೆ ಆಧಾರಿತ ಕೆಲಸಗಳಷ್ಟೇ ಸಿಗುತ್ತಿದ್ದು, ಕಳೆದ ಜನವರಿಯಿಂದ ಕೆಲಸವಿಲ್ಲ. ಈ ಕಾರಣದಿಂದ ಖಿನ್ನತೆಗೆ ಒಳಗಾಗಿದ್ದೇನೆ. ಸರ್ಕಾರಿ ಅಥವಾ ಖಾಸಗಿ ವೃತ್ತಿಯನ್ನು ಅರಸಲು, ನಿಮ್ಮ ಮಾರ್ಗದರ್ಶನ ಬೇಕಾಗಿದೆ.

ಉದಯ್, ಬೆಂಗಳೂರು.

ಉದ್ಯೋಗಾರ್ಹತೆಯನ್ನು ವೃದ್ಧಿಸುವ ಎಂಬಿಎ ಪದವಿಯ ನಂತರವೂ ನೀವು ಸೂಕ್ತವಾದ ವೃತ್ತಿಯಲ್ಲಿ ತೊಡಗಿಸಿಕೊಳ್ಳದಿರುವುದಕ್ಕೆ ಕಾರಣಗಳೇನು ಎಂದು ವಿಶ್ಲೇಷಿಸಬೇಕು. ನೀವು ನೀಡಿರುವ ಕಿರುಮಾಹಿತಿಯಿಂದ ಇದು ಸಾಧ್ಯವಿಲ್ಲ; ಮೇಲ್ನೋಟಕ್ಕೆ, ಸರಿಯಾದ ಯೋಜನೆಯನ್ನು ಮಾಡದಿರುವುದು ಕಾರಣವಾಗಿರಬಹುದು.

ನಿಮ್ಮ ಈವರೆಗಿನ ಅನುಭವ ಯಾವ ಕ್ಷೇತ್ರದಲ್ಲಿದೆ ಎಂದು ತಿಳಿಸಿಲ್ಲ. ಸದ್ಯಕ್ಕೆ, ಹಲವಾರು ಉದ್ದಿಮೆಗಳ (ಐಟಿ, ಐಟಿಇಎಸ್, ಸಾಮಾಜಿಕ ಮಾಧ್ಯಮ, ಇ-ಕಾಮರ್ಸ್, ನವೋದ್ಯಮಗಳು ಇತ್ಯಾದಿ ) ಆರ್ಥಿಕ ಹಿನ್ನಡೆಯಿಂದ ಉದ್ಯೋಗ ಮಾರುಕಟ್ಟೆ ಸಂಕಷ್ಟದಲ್ಲಿದೆ. ಹಾಗಾಗಿ, ಖಾಸಗಿ ವಲಯದ ಈ ಕ್ಷೇತ್ರಗಳನ್ನು ಬಿಟ್ಟು ಇನ್ನಿತರ ಕ್ಷೇತ್ರಗಳಲ್ಲಿ (ಮೂಲಭೂತ ಸೌಕರ್ಯಗಳು, ಆರೋಗ್ಯ, ಫಾರ್ಮ, ಬ್ಯಾಂಕಿಂಗ್, ಇನ್ವೆಸ್ಟ್‌ಮೆಂಟ್, ರೀಟೈಲ್, ಎಫ್‌ಎಂಜಿಸಿ ಇತ್ಯಾದಿ) ಪ್ರಯತ್ನಿಸಬಹುದು.

ಸರ್ಕಾರಿ ವಲಯದ ಕೆಪಿಎಸ್‌ಸಿ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇನ್ನೂ ನಿಮಗೆ ಅವಕಾಶವಿದೆ. ಯುಪಿಎಸ್‌ಸಿ ಪರೀಕ್ಷೆಗೆ, ಕೆಲವು ಜಾತಿ, ಪಂಗಡದವರಿಗೆ ವಯೋಮಿತಿಯಲ್ಲಿ ರಿಯಾಯಿತಿಯಿದೆ (ಗರಿಷ್ಟ ವಯೋಮಿತಿ 37 ವರ್ಷಗಳು) ಎನ್ನುವುದು ನಿಮ್ಮ ಗಮನದಲ್ಲಿರಲಿ. ನಿಮಗೆ ಆಸಕ್ತಿಯಿರುವ ಸರ್ಕಾರಿ ವಲಯದ ಇನ್ನಿತರ ಅವಕಾಶಗಳ ಮಾಹಿತಿಯನ್ನು ಕಲೆಹಾಕಿ, ಸಾಧ್ಯತೆಗಳನ್ನು ಪರಿಶೀಲಿಸಿ.

ಪ್ರಮುಖವಾಗಿ, ಎಂಬಿಎ ಪದವಿಯಲ್ಲಿ ಜೀವನಕ್ಕೂ, ವೃತ್ತಿಗೂ ಅಗತ್ಯವಾದ ಅನೇಕ ಮೂಲಭೂತ ಮೌಲ್ಯಗಳು, ಸೂತ್ರಗಳ ಮನದಟ್ಟಾಗುತ್ತದೆ. ಉದಾಹರಣೆಗೆ, ತರ್ಕಬದ್ಧ ಆಲೋಚನೆ, ಯೋಜನಾ ಶಕ್ತಿ, ಶಿಸ್ತು, ಸಮಯ ಪ್ರಜ್ಞೆ, ಸಕಾರಾತ್ಮಕ ಧೋರಣೆ, ಸ್ವಯ-ಪ್ರೇರಣೆ ಇತ್ಯಾದಿಗಳ ಸದುಪಯೋಗದಿಂದ ಖಿನ್ನತೆಯಿಂದ ಹೊರಬಂದು, ಸೂಕ್ತವಾದ ವೃತ್ತಿಯೋಜನೆಯಿಂದ, ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಹೆಚ್ಚಿನ ಮಾರ್ಗದರ್ಶನ ಅಥವಾ ವೈಯಕ್ತಿಕ ಸಂದರ್ಶನ ಅಗತ್ಯವೆನಿಸಿದರೆ, ಈ ಅಂಕಣದ ಮೂಲಕ ಸಂಪರ್ಕಿಸಿ. ನಿಮ್ಮ ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ ಹೊರಹೊಮ್ಮುವ ಬಯೋಡೇಟಾ ರಚಿಸಿ ಮತ್ತು ಆತ್ಮವಿಶ್ವಾಸದಿಂದ ವೃತ್ತಿಯ ಸಂದರ್ಶನವನ್ನು ಎದುರಿಸಿ.

4. ನಾನು ಪದವಿಯನ್ನು ಮುಗಿಸಿ ಯುಪಿಎಸ್‌ಸಿ ಪರೀಕ್ಷೆಯನ್ನು ಬರೆಯಬೇಕು. ಮೊದಲ ಹಂತದಿಂದ ಕೊನೆಯವರೆಗೂ ತಯಾರಿ ಮಾಡುವುದು ಹೇಗೆ? ಕೌಶಲಾಭಿವೃದ್ಧಿ ಮಾಡಿಕೊಳ್ಳುವುದು ಹೇಗೆ? ಕೋಚಿಂಗ್ ಕಡ್ಡಾಯವೇ?

ಪುರುಷೋತ್ತಮ, ಚಿತ್ರದುರ್ಗ.

ಯುಪಿಎಸ್‌ಸಿ ಪರೀಕ್ಷೆಯ ಪ್ರಕ್ರಿಯೆಯಲ್ಲಿ ಮೂರು ಹಂತಗಳಿವೆ.
1. ಪೂರ್ವಭಾವಿ ಪರೀಕ್ಷೆ (ಬಹು ಆಯ್ಕೆ ಮಾದರಿ).
2. ಮುಖ್ಯ ಪರೀಕ್ಷೆ (ಪ್ರಬಂಧ ರೂಪದ ಲಿಖಿತ ಪರೀಕ್ಷೆ).
3. ಸಂದರ್ಶನ/ವ್ಯಕ್ತಿತ್ವ ಪರೀಕ್ಷೆ.

ಈ ಸಲಹೆಗಳನ್ನು ಗಮನಿಸಿ:
• ಯುಪಿಎಸ್‌ಸಿಯ ಮುಖ್ಯ ಪರೀಕ್ಷೆ ಅತ್ಯಂತ ಸ್ಪರ್ಧಾತ್ಮಕವಾಗಿರುತ್ತದೆ. ಹಾಗಾಗಿ, ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.
• ಮುಖ್ಯ ಪರೀಕ್ಷೆಯಲ್ಲಿರುವ ವಿಷಯಗಳ ಪಠ್ಯಕ್ರಮವನ್ನು ತಿಳಿದುಕೊಂಡು, ಅಗತ್ಯವಾದ ಪುಸ್ತಕಗಳು ಮತ್ತು ಇನ್ನಿತರ ಅಧ್ಯಯನದ ಮಾಹಿತಿಯನ್ನು ಸಂಗ್ರಹಿಸಿ.
• ಕಳೆದ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಗಮನಿಸಿ ಅಣಕು-ಪರೀಕ್ಷೆ ಆಧಾರಿತ ತಯಾರಿಯನ್ನು ಮಾಡುತ್ತಿರಬೇಕು.
• ಪರೀಕ್ಷೆಯಲ್ಲಿ ಯಶಸ್ವಿಯಾಗಲು ನಿಗದಿತ ವೇಳಾಪಟ್ಟಿಯಂತೆ ಸಮಗ್ರವಾದ ಮತ್ತು ಆಳವಾದ ಓದುವಿಕೆ, ಪುನರಾವರ್ತನೆ ಮತ್ತು ಉತ್ಕೃಷ್ಟವಾದ ಬರವಣಿಗೆ ಇರಬೇಕು. ನಿಮ್ಮ ಬರವಣಿಗೆ ಕಾಗುಣಿತ, ವ್ಯಾಕರಣ ದೋಷ ಮುಕ್ತವಾಗಿರಲಿ; ಓದಲು ಸುಲಭವಾಗಿರಲಿ.
• ಜೊತೆಗೆ, ಸಮಯದ ನಿರ್ವಹಣೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ.
• ಯೂಟ್ಯೂಬಿನಲ್ಲಿ ತಯಾರಿ ಕುರಿತ ಮಾಹಿತಿಯುಳ್ಳ ವಿಡಿಯೋಗಳನ್ನು ವೀಕ್ಷಿಸಿ. ಸಾಮಾಜಿಕ ತಾಲತಾಣದಿಂದ ದೂರವಿದ್ದರೆ ಏಕಾಗ್ರತೆ ಸುಲಭ.
ಖುದ್ದಾಗಿ ತಯಾರಿಯಾಗಿ ಯಶಸ್ವಿಯಾಗಿರುವ ಅನೇಕ ಉದಾಹರಣೆಗಳಿವೆ; ಹಾಗಾಗಿ, ಕೋಚಿಂಗ್ ಕಡ್ದಾಯವಲ್ಲ. ಆದರೂ, ಕೋಚಿಂಗ್ ಸೆಂಟರ್‌ಗಳು ನೀಡುವ ಮಾರ್ಗದರ್ಶನ ಉಪಯುಕ್ತ. ಅಂತಿಮ ಆಯ್ಕೆ ನಿಮ್ಮದು.

5. ನಾನು ಪಿಯುಸಿ ಮುಗಿಸಿದ್ದೇನೆ. ಫೊರೆನ್ಸಿಕ್ ಸೈನ್ಸ್ ಕ್ಷೇತ್ರದ ಅವಕಾಶಗಳು ಮತ್ತು ಕಾಲೇಜುಗಳ ಬಗ್ಗೆ ಮಾಹಿತಿ ನೀಡಿ.
ಹೆಸರು, ಊರು ತಿಳಿಸಿಲ್ಲ.

ವಿಧಿ ವಿಜ್ಞಾನ (ಫೊರೆನ್ಸಿಕ್ ಸೈನ್ಸ್) ಬೇಡಿಕೆಯಲ್ಲಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಆಸಕ್ತಿಯಿದ್ದರೆ, ಬಿ.ಎಸ್ಸಿ (ವಿಧಿ ವಿಜ್ಞಾನ) ಕೋರ್ಸ್ ಮಾಡಬಹುದು.

ಈ ಕ್ಷೇತ್ರದಲ್ಲಿ ವೃತ್ತಿಯ ಯಶಸ್ಸಿಗೆ ಬೇಕಾಗುವ ಕೌಶಲಗಳೆಂದರೆ ತಾರ್ಕಿಕ ಯೋಚನಾ ಶಕ್ತಿ, ವಿಶ್ಲೇಷಣಾ ಮತ್ತು ಸಂಶೋಧನಾ ಕೌಶಲ, ವಿವರಗಳ ಕಡೆ ಗಮನ, ಒತ್ತಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ, ಸಮಯದ ನಿರ್ವಹಣೆ ಇತ್ಯಾದಿ. ಹೆಚ್ಚಿನ ತಜ್ಞತೆಗಾಗಿ, ಎಂ.ಎಸ್ಸಿ ಮಾಡಬಹುದು. ವಿದ್ಯಾಭ್ಯಾಸದ ನಂತರ ಸಂಶೋಧನಾ ಸಂಸ್ಥೆಗಳು, ಖಾಸಗಿ ಮತ್ತು ಸರ್ಕಾರಿ ಪತ್ತೇದಾರಿ ಸಂಸ್ಥೆಗಳು, ಪೊಲೀಸ್ ಇಲಾಖೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಕಾಲೇಜುಗಳಲ್ಲಿ ವೃತ್ತಿಯನ್ನು ಅರಸಬಹುದು.

6. ನಾನು ಎಂಜಿನಿಯರಿಂಗ್ (ಮೆಕ್ಯಾನಿಕಲ್) ಮುಗಿಸಿ ಕೆಪಿಎಸ್‌ಸಿ ಪರೀಕ್ಷೆಗೆ ತಯಾರಾಗುತ್ತಿದ್ದೇನೆ. ನಾನು ಈಗ ಎಂಎ ಪದವಿ ಮಾಡಬಹುದೇ?

ಹೆಸರು, ಊರು ತಿಳಿಸಿಲ್ಲ.

ಕೆಪಿಎಸ್‌ಸಿ ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆ. ಪರೀಕ್ಷೆಯ ಹಂತಗಳು, ಮಾದರಿ, ವಿಷಯಗಳು, ಪಠ್ಯಕ್ರಮ ಇತ್ಯಾದಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಸಂಬಂಧಪಟ್ಟ ಮತ್ತು ನಿಮಗಿಷ್ಟವಿರುವ ವಿಷಯದಲ್ಲಿ ಎಂಎ (ದೂರಶಿಕ್ಷಣ) ಮಾಡುವುದರಿಂದ, ಕೆಪಿಎಸ್‌ಸಿ ಪರೀಕ್ಷೆಗೆ ಅನುಕೂಲವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT