ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಿ ವಿಜ್ಞಾನ; ವ್ಯಾಸಂಗದ ಜೊತೆ ಬದ್ಧತೆಯೂ ಬೇಕು

Last Updated 2 ಮೇ 2021, 19:30 IST
ಅಕ್ಷರ ಗಾತ್ರ

ವಿಧಿ ವಿಜ್ಞಾನವು ಯಾವುದೇ ಅಪರಾಧ ತನಿಖೆಯ ಅಂಶಗಳಲ್ಲಿ ಪ್ರಮುಖ ಭಾಗ. ಇದರ ನೆರವಿನೊಂದಿಗೆ ಶಂಕಿತರನ್ನು ಸರಿಯಾಗಿ ಗುರುತಿಸಿ, ಆ ಅಪರಾಧ ಯಾವಾಗ ಮತ್ತು ಹೇಗೆ ಸಂಭವಿಸಿತು ಎಂಬುದನ್ನು ನಿಖರವಾಗಿ ನಿರ್ಧರಿಸಲು ಸಾಧ್ಯವಾಗುತ್ತದೆ.

ಜಗತ್ತಿನಲ್ಲಿ ಅಪರಾಧಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೀಗಾಗಿ ಈ ಕ್ಷೇತ್ರದಲ್ಲಿ ಬೇಕಾದಷ್ಟು ವೃತ್ತಿ ಅವಕಾಶಗಳಿವೆ. ಆದರೆ ನಿಮಗೆ ಅತ್ಯವಶ್ಯಕವಾಗಿರುವುದು ವೈಯಕ್ತಿಕ ಆಸಕ್ತಿ. ಈ ಕ್ಷೇತ್ರದಲ್ಲಿ ನಿಮಗೆ ಆಸಕ್ತಿ ಇದ್ದರೆ ನೀವು ಭಾರತದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಸಹ ಕೆಲಸ ಗಿಟ್ಟಿಸಿಕೊಳ್ಳಬಹುದು.

ವಿಧಿವಿಜ್ಞಾನ ವಿಜ್ಞಾನಿಗಳು ಕೆಲವೊಮ್ಮೆ ಅಪರಾಧದ ಸ್ಥಳಕ್ಕೆ ಭೇಟಿ ನೀಡಬೇಕಾಗಬಹುದು. ಅಲ್ಲಿ ಅವರು ಮೃತದೇಹದ ಪರೀಕ್ಷೆ ಹಾಗೂ ರಕ್ತ, ಇನ್ನಿತರ ಸಾಕ್ಷ್ಯಗಳ ಕಲೆ ಹಾಕಬೇಕಾಗುತ್ತದೆ. ಇದಲ್ಲದೆ ಕೆಲವೊಮ್ಮೆ ಪ್ರಯೋಗಾಲಯದಲ್ಲಿ ರಕ್ತಸಿಕ್ತ ಬಟ್ಟೆ ಹಾಗೂ ಮನಸ್ಸಿಗೆ ಯಾತನೆ ಉಂಟು ಮಾಡಬಹುದಾದಂತಹ ವಸ್ತುಗಳನ್ನು ವಿಶ್ಲೇಷಿಸುವ ಸಾಧ್ಯತೆ ಎದುರಾಗಬಹುದು. ಹೀಗಾಗಿ ಈ ರೀತಿಯ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಇವೆಲ್ಲವುಗಳನ್ನು ಎದುರಿಸಲು ನಾನು ಶಕ್ತನೇ ಎಂದು ವಿಶ್ಲೇಷಿಸಿಕೊಂಡರೆ ಒಳ್ಳೆಯದು.

ವಿಧಿವಿಜ್ಞಾನ ವಿಜ್ಞಾನಿಗಳನ್ನು ಸರ್ಕಾರಿ ವಲಯಗಳಲ್ಲಿಯೂ ನೇಮಿಸಿಕೊಳ್ಳುತ್ತಾರೆ. ಅವರು ವಿವಿಧ ಕಾನೂನು ಸಂಸ್ಥೆಗಳು, ಪೊಲೀಸ್ ಇಲಾಖೆ, ವಿಧಿ ವಿಜ್ಞಾನ ಪ್ರಯೋಗಾಲಯಗಳು, ಅಪರಾಧ ಶಾಖೆಗಳು, ಆಸ್ಪತ್ರೆಗಳು, ಭದ್ರತಾ ಸೇವಾ ಏಜೆನ್ಸಿಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ತನಿಖಾ ಸೇವೆಗಳು ಮತ್ತು ಕಾನೂನು-ವ್ಯವಸ್ಥೆಯ ತನಿಖಾ ವಿಭಾಗದಲ್ಲಿ ಕಾರ್ಯನಿರ್ವಹಿಸಬಹುದು. ಇದಲ್ಲದೆ ವಿಧಿವಿಜ್ಞಾನಿಯಾಗಿ ಅನುಭವ ಪಡೆದ ನಂತರ ಕಾನೂನು ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಬಹುದು.

ವಿಧಿ ವಿಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಅವಶ್ಯಕವಾದ ಕೌಶಲಗಳು

* ಏಕಾಗ್ರತೆ, ತಾಳ್ಮೆ ಹಾಗೂ ಭಾವನಾತ್ಮಕ ಸಂದರ್ಭಗಳನ್ನು ಎದುರಿಸುವ ಶಕ್ತಿ.

* ತಾರ್ಕಿಕ ಹಾಗೂ ಸ್ವತಂತ್ರವಾಗಿ ಯೋಚಿಸುವ ಶಕ್ತಿ.

* ನೀಡಿದ ವಿವರಗಳ ಕಡೆಗೆ ಸೂಕ್ಷ್ಮ ಗಮನ ಹರಿಸುವುದು.

* ಗೌಪ್ಯ ಮಾಹಿತಿಯೊಂದಿಗೆ ವ್ಯವಹರಿಸುವಾಗ ವಸ್ತುನಿಷ್ಠ ಹಾಗೂ ಸೂಕ್ಷ್ಮಅಂಶ ಕಾಪಾಡುವುದು.

* ಅತ್ಯುತ್ತಮ ಲಿಖಿತ ಹಾಗೂ ಮೌಖಿಕ ಸಂವಹನ ಕೌಶಲ.

* ಒತ್ತಡದಲ್ಲಿ ಹಾಗೂ ನಿಗದಿತ ಗಡುವಿನೊಳಗೆ ಕೆಲಸ ಮಾಡುವ ಸಾಮರ್ಥ್ಯ.

ವಿಧಿ ವಿಜ್ಞಾನದ ವಿವಿಧ ಕೋರ್ಸ್‌ಗಳು

1. ಫೊರೆನ್ಸಿಕ್‌ ಸೈನ್ಸ್‌ ಅ್ಯಂಡ್‌ ಕ್ರಿಮಿನಾಲಜಿ, 2. ಫೊರೆನ್ಸಿಕ್‌ ಸೈನ್ಸ್‌ ಅ್ಯಂಡ್‌ ಫಿಂಗರ್‌ಪ್ರಿಂಟ್‌, 3. ಫೊರೆನ್ಸಿಕ್‌ ಸೈನ್ಸ್‌ ಅ್ಯಂಡ್‌ ಡಾಕ್ಯುಮೆಂಟ್‌ ಎಕ್ಸಾಮಿನೇಶನ್‌, 4. ಫಿಂಗರ್‌ಪ್ರಿಂಟ್‌ ಎಕ್ಸ್‌ಪರ್ಟ್‌, 5. ಸೈಬರ್‌ ಫೊರೆನ್ಸಿಕ್‌, 6. ಡಿಎನ್‌ಎ ಫಿಂಗರ್‌ಪ್ರಿಂಟಿಂಗ್‌, 7. ಫೊರೆನ್ಸಿಕ್‌ ಆಡಿಯೊ ಅ್ಯಂಡ್‌ ವಿಡಿಯೊ ಅನಾಲಿಸಿಸ್‌, 8. ಫೊರೆನ್ಸಿಕ್‌ ಮೆಡಿಸಿನ್‌ ಅ್ಯಂಡ್‌ ಟಾಕ್ಸಿಕೊಲಜಿ,9. ಸೆಲ್‌ ಫೋನ್‌ ಫೊರೆನ್ಸಿಕ್‌, 10. ಪ್ರೈವೇಟ್‌ ಇನ್ವೆಸ್ಟಿಗೇಟರ್‌. ಇದರಲ್ಲಿ ಅಲ್ಪಾವಧಿ ಸರ್ಟಿಫಿಕೇಟ್‌, ಅಡ್ವಾನ್ಸಡ್‌ ಸರ್ಟಿಫಿಕೇಟ್‌, ಎಕ್ಸ್‌ಫರ್ಟ್‌, ಸ್ನಾತಕೋತ್ತರ ಸರ್ಟಿಫಿಕೇಟ್‌ ಮೊದಲಾದ ಕೋರ್ಸ್‌ಗಳು ಲಭ್ಯ.

ವಿಧಿವಿಜ್ಞಾನ ತಜ್ಞರನ್ನು ನೇಮಕ ಮಾಡಿಕೊಳ್ಳುವ ಉನ್ನತ ಕಂಪನಿಗಳು: ವಿಧಿವಿಜ್ಞಾನ ಸೇವೆಗಳ ನಿರ್ದೇಶನಾಲಯ (ಗೃಹ ಇಲಾಖೆ, ಕೇಂದ್ರ ಸರ್ಕಾರ), ಗುಪ್ತಚರ ಬ್ಯೂರೋ (ಗೃಹ ಸಚಿವಾಲಯ, ಕೇಂದ್ರ ಸರ್ಕಾರ), ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ), ಫೊರೆನ್ಸಿಕ್‌ ಸ್ಟ್ಯಾಂಡರ್ಡ್ & ರಿಸರ್ಚ್, ಇಂಟಲಿಜೆನ್ಸ್ ಬ್ಯೂರೋ.

ವಿಧಿವಿಜ್ಞಾನ ತಜ್ಞ ಆಗುವುದರ ಸಾಧಕ-ಬಾಧಕಗಳು

ಸಾಧಕಗಳು

* ವಿಧಿವಿಜ್ಞಾನ ತಜ್ಞರು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಯಲ್ಲಿ ಅತ್ಯುತ್ತಮ ವೃತ್ತಿಜೀವನದ ನಿರೀಕ್ಷೆಯೊಂದಿಗೆ ಸವಾಲಿನ ಕೆಲಸ ಮಾಡಬಹುದು.

* ಅಪರಾಧದ ಕೃತ್ಯಗಳು, ಸೈಬರ್ ಬೆದರಿಕೆಗಳನ್ನು ಪರಿಹರಿಸಲು ಮತ್ತು ಅಪರಾಧಿಗಳನ್ನು ಪರೀಕ್ಷಿಸಲು ವಿವಿಧ ಸಂಸ್ಥೆಗಳಲ್ಲಿ ನುರಿತ ವಿಧಿವಿಜ್ಞಾನ ವೃತ್ತಿಪರರ ಅಗತ್ಯವಿರುವುದರಿಂದ ಕೆಲವು ವರ್ಷಗಳ ಅನುಭವ ಹೊಂದಿದ ನಂತರ ಅಭ್ಯರ್ಥಿಗಳು ಉತ್ತಮ ವೇತನ ಪಡೆಯಬಹುದು ಹಾಗೂ ವೃತ್ತಿಜೀವನದಲ್ಲಿ ಬೆಳವಣಿಗೆ ಹೊಂದಬಹುದು.

ಬಾಧಕಗಳು

* ವಿಧಿವಿಜ್ಞಾನದಲ್ಲಿ ಉನ್ನತ ಶಿಕ್ಷಣ ಪಡೆದಾಗ ಮಾತ್ರ ಅಭ್ಯರ್ಥಿಗಳಿಗೆ ಉತ್ತಮ ಅವಕಾಶಗಳು ಲಭ್ಯ.

* ಕೆಲಸದ ಸಮಯವು ಒಂದೇ ರೀತಿ ಇರುವುದಿಲ್ಲ.

* ಸೂಕ್ಷ್ಮವಾದ ಕೆಲಸವಾಗಿದ್ದು, ಅಭ್ಯರ್ಥಿಗಳು ಹೆಚ್ಚು ಬದ್ಧರಾಗಿರಬೇಕು.

ಅರ್ಹತೆ: ಸ್ನಾತಕೋತ್ತರ ಕೋರ್ಸ್‌ಗೆ ಯಾವುದೇ ವಿಭಾಗದಲ್ಲಿ ಪದವಿ - ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ.

ಸುಧಾರಿತ ಪ್ರಮಾಣೀಕರಣ ಕೋರ್ಸ್: ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ಅಥವಾ ಡಿಪ್ಲೊಮಾದ ಯಾವುದೇ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT