ಶನಿವಾರ, ಸೆಪ್ಟೆಂಬರ್ 25, 2021
29 °C
ಕೋವಿಡ್‌–19ನಿಂದ ತಂದೆ– ತಾಯಿ ಕಳೆದುಕೊಂಡವರಿಗೆ ಉಚಿತ ಶಿಕ್ಷಣ

ಗ್ರಾಮೀಣಾಭಿವೃದ್ಧಿ ವಿ.ವಿಯಲ್ಲಿ ಪದವಿ ಶಿಕ್ಷಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ಯುಜಿಸಿ ಮಾರ್ಗಸೂಚಿ, ರಾಜ್ಯ ಸರ್ಕಾರದ ನೀತಿ ಮತ್ತು ಕೇಂದ್ರ ಸರ್ಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಈ ಶೈಕ್ಷಣಿಕ ವರ್ಷದಿಂದ ವಿಶ್ವವಿದ್ಯಾಲಯದಲ್ಲಿ ಯುಜಿ (ಪದವಿ) ತರಗತಿಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುಕಾಂತ ಎಸ್‌. ಚಟಪಲ್ಲಿ ತಿಳಿಸಿದ್ದಾರೆ.

ಶನಿವಾರ ವಿಶ್ವವಿದ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ‘ಪದವಿ ಶಿಕ್ಷಣದ ಗುಣಮಟ್ಟ ಅತ್ಯುತ್ಕೃಷ್ಟವಾಗಿರಬೇಕು ಎಂಬುದೇ ಹೊಸ ಶಿಕ್ಷಣ ನೀತಿಯ ಮೂಲ ಉದ್ದೇಶ. ಜಾರಿಗೆ ತರಲು ರಾಜ್ಯ ಸರ್ಕಾರ ಈ ಸಂಬಂಧ ಟಾಸ್ಕ್‌ಫೋರ್ಸ್‌ ರಚಿಸಿದೆ’ ಎಂದು  ಹೇಳಿದರು.

‘ಪದವಿ ಶಿಕ್ಷಣ ಸಾಮಾನ್ಯವಾಗಿ ಕಾಲೇಜುಗಳಲ್ಲಿ ನಡೆಯುತ್ತದೆ. ವಿಶ್ವವಿದ್ಯಾಲದಯಲ್ಲಿ ಪದವಿ ಶಿಕ್ಷಣ ನೀಡುವ ವ್ಯವಸ್ಥೆ ಇರುವುದು ಬಹಳ ಕಡಿಮೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕಲೆ, ವಿಜ್ಞಾನ, ವಾಣಿಜ್ಯ ಎಂಬ ವಿಭಾಗಗಳು ಇರುವುದಿಲ್ಲ. ಇವೆಲ್ಲವನ್ನೂ ಒಳಗೊಂಡಿರುವ ಬಹು ವಿಸ್ತೀರ್ಣ ವಿಭಾಗಗಳು ಇರಲಿದ್ದು, ಪದವಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಇದು ಸಹಕಾರಿಯಾಗಲಿದೆ’ ಎಂದರು.

‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ನಾಲ್ಕು ವರ್ಷಗಳ ಪದವಿ ವಿದ್ಯಾಭ್ಯಾಸದ ವೇಳೆ ಓದುವ ಅಥವಾ ಹೊರನಡೆಯುವ ಆಯ್ಕೆ ವಿದ್ಯಾರ್ಥಿಗಳಿಗೆ ಇರಲಿದೆ. ಅಂದರೆ ಒಬ್ಬ ಪದವಿ ವಿದ್ಯಾರ್ಥಿ ಒಂದು ವರ್ಷ ಓದಿದ ನಂತರ ಎರಡನೇ ವರ್ಷಕ್ಕೆ ದಾಖಲಾಗಬೇಕು ಎಂಬ ನಿಯಮವಿಲ್ಲ. ಒಂದು ವರ್ಷ ಓದಿಕ್ಕಕ್ಕೆ ಆ ವಿದ್ಯಾರ್ಥಿಗೆ ಸರ್ಟಿಫಿಕೇಟ್‌ ಸಿಗಲಿದೆ. ಎರಡು ವರ್ಷ ಓದಿದರೆ ಡಿಪ್ಲೊಮಾ ಸರ್ಟಿಫಿಕೇಟ್‌, ಮೂರು ವರ್ಷ ಓದಿದರೆ ಪದವಿ ಪ್ರಮಾಣಪತ್ರ ಹಾಗೂ ನಾಲ್ಕು ವರ್ಷ ಪೂರ್ಣಗೊಳಿಸಿದರೆ ಹಾನರ್ಸ್‌ ಪದವಿ ಸಿಗಲಿದೆ’ ಎಂದು ಮಾಹಿತಿ ನೀಡಿದರು.

ಉಚಿತ ಶಿಕ್ಷಣ

‘ಕೋವಿಡ್‌–19ನಿಂದ ತಂದೆ ತಾಯಿಗಳನ್ನು ಕಳೆದುಕೊಂಡಿರುವ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಲು ಬಯಸಿದರೆ ಅವರಿಗೆ ಉಚಿತ ಶಿಕ್ಷಣ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ ತಿಳಿಸಿದರು.

ತಂದೆ ಅಥವಾ ತಾಯಿ ಇಬ್ಬರಲ್ಲಿ ಒಬ್ಬರನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ಪರೀಕ್ಷಾ ಶುಲ್ಕ ವಿನಾಯಿತಿ ಮಾಡಿಕೊಡಲಾಗುವುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.