ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರವಣ ದೋಷ: ಸಿಇಟಿ ವಿದ್ಯಾರ್ಥಿಗೆ ಸಿಗದ ರ್‍ಯಾಂಕ್‌

Last Updated 4 ಆಗಸ್ಟ್ 2022, 21:08 IST
ಅಕ್ಷರ ಗಾತ್ರ

ಬೆಂಗಳೂರು: ಎಸ್ಸೆಸ್ಸೆಲ್ಸಿ, ಪಿಯುನಲ್ಲಿ ಶ್ರವಣದೋಷವಿರುವ ಮಕ್ಕಳಿಗೆ ನೀಡುವ ಭಾಷಾ ಪರೀಕ್ಷೆಯ ವಿನಾಯಿತಿಯನ್ನು ಸಿಇಟಿಯಲ್ಲಿ ನೀಡದ ಕಾರಣ ಅಂತಹ ದೋಷವಿರುವ ಮಕ್ಕಳು ರ್‍ಯಾಂಕ್‌ನಿಂದ ವಂಚಿತರಾಗಿದ್ದಾರೆ.

ಮಂಡ್ಯ ಜಿಲ್ಲೆ ಬೇವಿನಹಳ್ಳಿಯ ಹೇಮಲತಾ–ಜವರಯ್ಯ ಅವರ ಪುತ್ರ ರಕ್ಷಿತ್‌ ಬಾಲ್ಯದಿಂದಲೂ ಶ್ರವಣ ದೋಷದ ಸಮಸ್ಯೆ ಎದುರಿಸುತ್ತಿದ್ದರು. ಮಂಡ್ಯದ ಅಭಿನವ ಭಾರತಿ ಪ್ರೌಢಶಾಲೆ ಮತ್ತು ಅದೇ ಸಂಸ್ಥೆಯ ಪಿಯು ಕಾಲೇಜಿನಲ್ಲಿಎಸ್ಸೆಸ್ಸೆಲ್ಸಿ, ವಿಜ್ಞಾನ ವಿಷಯದಲ್ಲಿ (ಪಿಸಿಎಂಬಿ) ಪಿಯು ಪೂರೈಸಿದ್ದಾರೆ. ಅಲ್ಲಿ ಕನ್ನಡ ಹೊರತುಪಡಿಸಿ, ಇತರೆ ದ್ವಿತೀಯ, ತೃತೀಯ ಭಾಷೆಗಳ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿತ್ತು. ಕನ್ನಡ ಮಾಧ್ಯಮದಲ್ಲೇ ಓದಿರುವ ಅವರು 2022ರ ಸಿಇಟಿ ಪರೀಕ್ಷೆಯಲ್ಲೂ ಇಂಗ್ಲಿಷ್‌ ಬಿಟ್ಟು ಕನ್ನಡ ಭಾಷಾ ಪರೀಕ್ಷೆ ಮಾತ್ರ ಬರೆದಿದ್ದರು. ಆದರೆ, ಸಿಇಟಿ ಅವರ ಫಲಿತಾಂಶವನ್ನು ಮಾನ್ಯ ಮಾಡಿಲ್ಲ.

‘ಪಿಯು ಹಾಗೂ ಸಿಇಟಿ ಕೀ ಉತ್ತರಗಳಲ್ಲಿ ಉತ್ತಮ ಅಂಕಗಳು ಬಂದಿದ್ದರೂ, ಈಚೆಗೆ ಪ್ರಕಟವಾದ ಸಿಇಟಿ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ರಕ್ಷಿತ್‌ ಹೆಸರು ಇರಲಿಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತಂದೆವು. ಸಿಇಟಿಯಲ್ಲಿ ಇಂಗ್ಲಿಷ್‌ ಭಾಷಾ ಪರೀಕ್ಷೆ ಬರೆಯುವುದು ಕಡ್ಡಾಯ. ಹಾಗಾಗಿ, ರ್‍ಯಾಂಕ್‌ ನೀಡಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಕಷ್ಟಪಟ್ಟು ಓದಿದ್ದಾನೆ. ಈ ಬೆಳವಣಿಗೆಗಳಿಂದ ನೊಂದಿದ್ದಾನೆ’ ಎಂದು
ರಕ್ಷಿತ್‌ ಪೋಷಕರು ಅಳಲು ತೋಡಿಕೊಂಡರು.

ಸಿಇಟಿಗೆ ವಿನಾಯಿತಿ ಅನ್ವಯಿಸದು: ಕೆಇಎ

ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಯು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿಯ (ಎಐಸಿಟಿಇ) ನಿಯಮಗಳಿಗೆ ಒಳಪಟ್ಟಿರುತ್ತದೆ. ಹಾಗಾಗಿ, ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳು ಇಂಗ್ಲಿಷ್‌ ಭಾಷಾ ವಿಷಯದ ಪರೀಕ್ಷೆ ಬರೆಯುವುದು ಕಡ್ಡಾಯ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌.ರಮ್ಯಾ ಮಾಹಿತಿ ನೀಡಿದರು.

ಸಿಇಟಿಗೆ ಸ್ಥಳೀಯ ನಿಯಮಗಳು ಅನ್ವಯಿಸುವುದಿಲ್ಲ. ಹಾಗಾಗಿ, ಎಸ್ಸೆಸ್ಸೆಲ್ಸಿ, ಪಿಯುನಲ್ಲಿ ದೊರೆತ ಭಾಷಾ ವಿಷಯಗಳ ಪರೀಕ್ಷೆಯ ವಿನಾಯಿತಿ ರಕ್ಷಿತ್‌ಗೆ ನೀಡಲು ಬರುವುದಿಲ್ಲ. ಮಾನವೀಯತೆ ದೃಷ್ಟಿಯಿಂದ ರ್‍ಯಾಂಕ್‌ ಪಟ್ಟಿಗೆ ಪರಿಗಣಿಸಲು ಅನುಮತಿ ಕೋರಿಎಐಸಿಟಿಇಗೆ ಪತ್ರ ಬರೆಯಲಾಗುವುದು. ಅಧಿಕಾರಿಗಳ ಜತೆ ಚರ್ಚಿಸಲಾಗುವುದು. ಅನುಮತಿ ಸಿಕ್ಕರೆ ಪಟ್ಟಿ ಪ್ರಕಟಿಸಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT