ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾದರಿ ಪ್ರಶ್ನೋತ್ತರ | ಇತಿಹಾಸ: ಭಾರತಕ್ಕೆ ಯುರೋಪಿಯನ್ನರ ಆಗಮನ

Published : 17 ಸೆಪ್ಟೆಂಬರ್ 2023, 23:30 IST
Last Updated : 17 ಸೆಪ್ಟೆಂಬರ್ 2023, 23:30 IST
ಫಾಲೋ ಮಾಡಿ
Comments

15) ಭಾರತದಲ್ಲಿ ಪೋರ್ಚುಗೀಸರ ಏಕಸ್ವಾಮ್ಯತೆಯು ಯಾವಾಗ ಶಿಥಿಲಗೊಂಡಿತು?

ಉತ್ತರ:- 17ನೇ ಶತಮಾನದವರೆಗೂ ಪೋರ್ಚುಗೀಸರು ವ್ಯಾಪಾರಿ ಏಕಸ್ವಾಮ್ಯತೆಯನ್ನು ಹೊಂದಿದ್ದರು. ಭಾರತದೊಳಗೆ ಡಚ್ ಮತ್ತು ಇಂಗ್ಲಿಷರ ಪ್ರವೇಶದೊಂದಿಗೆ ಪೋರ್ಚುಗೀಸರ ಏಕಸ್ವಾಮ್ಯತೆಯು ಶಿಥಿಲಗೊಂಡಿತು.

16) ಡಚ್ ಈಸ್ಟ್ ಇಂಡಿಯಾ ಕಂಪನಿ ಯಾವಾಗ ವ್ಯಾಪಾರಕ್ಕಾಗಿ ಭಾರತಕ್ಕೆ ಬಂತು?

ಉತ್ತರ:-1602ರಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪನಿಯು ಭಾರತಕ್ಕೆ ವ್ಯಾಪಾರಕ್ಕಾಗಿ ಬಂತು.

17) ಡಚ್ಚರ ವ್ಯಾಪಾರಿ ಕೇಂದ್ರಗಳು ಯಾವುವು?

ಉತ್ತರ:- ಸೂರತ್, ಬ್ರೋಚ್, ಕಾಂಬೆ, ಕೊಚ್ಚಿನ್, ನಾಗಪಟ್ಟಣ, ಮಚಲೀಪಟ್ಟಣ ಹಾಗೂ ಚಿನ್ಸೂರ

18) ಕರಿಮೆಣಸಿನ ಆಸೆಯಿಂದ ವಿದೇಶಿಯರು ನಡೆಸಿದ್ದ ನಿರಂತರ ಆಕ್ರಮಣವನ್ನು ಮತ್ತು ಸಾಮ್ರಾಜ್ಯದಾಹವನ್ನು ಮೆಟ್ಟಿನಿಂತ ವೈನಾಡ್ ಅರಸ ಯಾರು?

ಉತ್ತರ:- ಮಾರ್ತಾಂಡ ವರ್ಮ

19) ರಾಜಧಾನಿಯನ್ನು ಪದ್ಮನಾಭಪುರದಿಂದ ತಿರುವನಂತಪುರಕ್ಕೆ ಸ್ಥಳಾಂತರಿಸಿ ತನ್ನ ಸಂಸ್ಥಾನವನ್ನು ವಿಶ್ವ ತಿರುವಾಂಕೂರು ಸಂಸ್ಥಾನ ಎಂದು ಹೆಸರಾಗುವಂತೆ ಮಾಡಿದವ ಯಾರು?

ಉತ್ತರ:- ಮಾರ್ತಾಂಡ ವರ್ಮ

20) `ಡಚ್ಚರ ವಿರುದ್ಧ ರಣತಂತ್ರ ರೂಪಿಸಿದ ಮಹಾರಾಜ, ಡಚ್ಚರ ಏಕಸ್ವಾಮ್ಯ ಮುರಿದು ಅವರ ಏಕಸ್ವಾಮ್ಯಕ್ಕೆ ಕೊಳ್ಳಿ ಇಟ್ಟ ಮಾರ್ತಾಂಡ ವರ್ಮ’ ಈ ಹೇಳಿಕೆಯನ್ನು ಹೇಗೆ ಸಮರ್ಥಿಸುವಿರಿ?

ಉತ್ತರ:- ರಾಮವರ್ಮನ ನಂತರ ತನ್ನ 24ನೇ ವಯಸ್ಸಿನಲ್ಲಿ ಮಾರ್ತಾಂಡ ವರ್ಮ ಪಟ್ಟಕ್ಕೆ ಬಂದನು. ವೈನಾಡ್ ಸಂಸ್ಥಾನದ ಗಡಿಯನ್ನು ವಿಸ್ತರಿಸಲು 50 ಸಾವಿರ ಸೈನಿಕರ ಸೈನ್ಯವನ್ನು ಕಟ್ಟಿದನು. ಮೆಣಸು ಬೆಳೆಯುವ ಪ್ರದೇಶಗಳನ್ನು ತನ್ನ ಕೈವಶ ಮಾಡಿಕೊಂಡನು. ಅದಾಗಲೇ ಕರಿಮೆಣಸಿನ ವ್ಯಾಪಾರದಲ್ಲಿ ಹಿಡಿತ ಸಾಧಿಸುತ್ತಿದ್ದ ಡಚ್ಚರನ್ನು ಸದೆಬಡಿಯಲು ಅನೇಕ ರಣತಂತ್ರಗಳನ್ನು ಮಾರ್ತಾಂಡ ವರ್ಮನು ಹೆಣೆದನು. ಸುತ್ತಮುತ್ತಲಿನ ಪಾಳೇಗಾರರು ಮತ್ತು ಸಂಸ್ಥಾನಿಕರನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಅವರನ್ನು ಡಚ್ಚರ ವಿರುದ್ಧ ನಿಲ್ಲಿಸಿದನು. ಕಾಯಂಕುಳಂ, ಕೊಚ್ಚಿ, ಪುರಕ್ಕಾಡ್ ಮತ್ತು ವಡಕ್ಕುಂಕೂರ್ ಸಂಸ್ಥಾನಗಳ ಜೊತೆಗೂಡಿ ಡಚ್ ಸೇನೆಯು ತಿರುವಾಂಕೂರಿನ ಮೇಲೆ ಆಕ್ರಮಣ ಮಾಡಿದಾಗ ಮಾರ್ತಾಂಡ ವರ್ಮನ ಪಡೆ ಡಚ್ ಕೂಟವನ್ನು ಸೋಲಿಸಿ ನೆಡುಮಂಗಡ ಮತ್ತು ಕೊಟ್ಟಾರಕರ ಎಂಬ ವ್ಯಾಪಾರಿ ಕೇಂದ್ರವನ್ನು ವಶಪಡಿಸಿಕೊಂಡಿತು. ಅಲ್ಲದೆ ಮಾರ್ತಾಂಡ ವರ್ಮನು ‘ನಾವೆಂದೂ ಮೆಣಸಿನ ವ್ಯಾಪಾರದ ಹಕ್ಕನ್ನು ಪರಕೀಯರಿಗೆ ಬಿಟ್ಟು ಕೊಡೆವು’ ಎಂದು ಡಚ್ಚರಿಗೆ ಖಾರವಾಗಿ ಪತ್ರ ಬರೆದನು.

1741ರಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪನಿ ಕೊಟ್ಟಾರಕರ ಸಂಸ್ಥಾನವನ್ನು ಮುಂದಿಟ್ಟುಕೊಂಡು ತಿರುವಾಂಕೂರಿನ ಮೇಲೆ ಯುದ್ಧವನ್ನು ಸಾರಿತು. ಡಚ್ಚರ ಜೊತೆಗೆ ಸ್ಥಳೀಯ ಸಂಸ್ಥಾನಗಳೂ ಸೇರಿಕೊಂಡಿದ್ದರು. ಆದರೆ ಮಾರ್ತಾಂಡ ವರ್ಮನ ಸೈನ್ಯ ಆ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿತು. ಡಚ್ ಪಡೆಗಳು ಕೊಚ್ಚಿನ್‌ಗೆ ಹಿಂತಿರುಗಿದವು. ಆದರೆ ಡಚ್ಚರು ಸಿಲೋನಿನಿಂದ ಮತ್ತಷ್ಟು ಪಡೆಗಳನ್ನು ಕರೆಸಿಕೊಂಡು ಮಾರ್ತಾಂಡ ವರ್ಮನ ಮೇಲೆ ದಂಡೆತ್ತಿ ಬಂದರು.

1741ರ ಆಗಸ್ಟ್ 10ರಂದು ಕೊಳಚ್ಚಲ್ ಎಂಬಲ್ಲಿ ಮಾರ್ತಾಂಡ ವರ್ಮ ಮತ್ತು ಡಚ್ಚರ ನಡುವೆ ನಾಲ್ಕು ದಿನಗಳ ಕಾಲ ಭೀಕರ ಕದನ ನಡೆಯಿತು. ಅಂತಿಮವಾಗಿ ತಿರುವಾಂಕೂರು ಸೈನ್ಯ ಯುದ್ಧದಲ್ಲಿ ಮೇಲುಗೈ ಸಾಧಿಸಿತು. 24 ಪ್ರಮುಖ ಡಚ್ ಅಧಿಕಾರಿಗಳು ಯುದ್ಧ ಖೈದಿಗಳಾದರು. ಡಚ್ಚರು ಅಪಾರ ಪ್ರಮಾಣದಲ್ಲಿ ನಷ್ಟವನ್ನು ಅನುಭವಿಸಿದರು. ಈ ಯುದ್ಧದ ನಂತರ ಮಾರ್ತಾಂಡ ವರ್ಮ ಸುಮ್ಮನೆ ಕೂರಲಿಲ್ಲ. ಇಡೀ ದಕ್ಷಿಣ ಭಾರತದಿಂದ ಡಚ್ಚರನ್ನು ಕಿತ್ತೊಗೆಯಬೇಕೆಂದು ಪಣತೊಟ್ಟ. ಕೇರಳ ಮತ್ತು ತಮಿಳುನಾಡಿನಲ್ಲಿ ಮೆಣಸಿನ ವ್ಯಾಪಾರದಲ್ಲಿ ಹಕ್ಕನ್ನು ಸ್ಥಾಪಿಸಿದ. ಡಚ್ಚರ ಹಿಡಿತದಲ್ಲಿದ್ದ ಬಂದರುಗಳನ್ನು ಮರಳಿ ಪಡೆದ.

ಅಂತಿಮವಾಗಿ 1753ರ ಆಗಸ್ಟ್ 15ರಂದು ನಡೆದ ಒಪ್ಪಂದದಲ್ಲಿ ಡಚ್ ಪಡೆಗಳು ತಮ್ಮ ಸಂಪೂರ್ಣ ಅಧಿಕಾರವನ್ನು ತಿರುವಾಂಕೂರಿಗೆ ಒಪ್ಪಿಸಿ ಶರಣಾದವು. ಈ ರೀತಿ ಡಚ್ಚರ ವಿರುದ್ಧ ರಣತಂತ್ರ ರೂಪಿಸಿದ ಮಹಾರಾಜ, ಡಚ್ಚರ ಏಕಸ್ವಾಮ್ಯ ಮುರಿದು ಅವರ ಏಕಸ್ವಾಮ್ಯಕ್ಕೆ ಕೊಳ್ಳಿ ಇಟ್ಟ ಮಾರ್ತಾಂಡ ವರ್ಮ ಎಂದು ಪ್ರಸಿದ್ಧನಾದ.

21) ಯಾವ ವರ್ಷ ಬ್ರಿಟನ್ ರಾಣಿ ಈಸ್ಟ್ ಇಂಡಿಯಾ ಕಂಪನಿಗೆ ವ್ಯಾಪಾರ ನಡೆಸಲು ಪರವಾನಗಿ ನೀಡಿದಳು? ಈ ಪರವಾನಗಿ ಎಷ್ಟು ವರ್ಷಗಳಿಗಾಗಿ ನೀಡಲಾಗಿತ್ತು?

ಉತ್ತರ:- ಇಂಗ್ಲೆಂಡಿನ ಎಲಿಜಬೆತ್ ರಾಣಿಯು ಸಾ. ಶ. 1600 ಡಿಸೆಂಬರ್ 31ರಂದು ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಗೆ ಪೂರ್ವ ದೇಶಗಳೊಂದಿಗೆ ವ್ಯಾಪಾರ ನಡೆಸಲು 15 ವರ್ಷಗಳ ಪರವಾನಗಿ ನೀಡಿದಳು.

22) ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಗೆ ಭಾರತದಲ್ಲಿ ವ್ಯಾಪಾರಿ ದಾಸ್ತಾನು ಮಳಿಗೆ ಆರಂಭಿಸಿಲು ಅನುಮತಿ ಕೊಟ್ಟವರು ಯಾರು?

ಉತ್ತರ:- ಮೊಘಲ್ ಸಾಮ್ರಾಟ ಜಹಾಂಗೀರ

23) ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ ಮೊದಲ ವ್ಯಾಪಾರಿ ದಾಸ್ತಾನು ಮಳಿಗೆ ಎಲ್ಲಿ ಆರಂಭಿಸಿತು?

ಉತ್ತರ:- ಸೂರತ್

24) 1617ರಲ್ಲಿ ಇಂಗ್ಲೆಂಡಿನ ರಾಜ ಒಂದನೆಯ ಜೇಮ್ಸ್‌ ರಾಯಭಾರಿಯಾಗಿ ಜಹಾಂಗೀರನ ಆಸ್ಥಾನಕ್ಕೆ ಯಾರು ಬಂದನು?

ಉತ್ತರ:- ಸರ್. ಥಾಮಸ್ ರೋ

25) ಇಂಗ್ಲಿಷರು ಎಲ್ಲಿ ಸೇಂಟ್‌ ಜಾರ್ಜ್ ಫೋರ್ಟ್ ಎಂಬ ಬಲಿಷ್ಠ ಕೋಟೆಯನ್ನು ಕಟ್ಟಿದರು.?

ಉತ್ತರ:- ಮದ್ರಾಸ್

26) ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಗೆ ಮುಂಬೈಯನ್ನು ಕೊಟ್ಟವರು ಯಾರು? ಅದಕ್ಕೆ ಎಷ್ಟು ಬಾಡಿಗೆ ಕಟ್ಟುತ್ತಿದ್ದರು?

ಉತ್ತರ:- ಇಂಗ್ಲೆಂಡಿನ ರಾಜಕುಮಾರ ಎರಡನೇ ಚಾರ್ಲ್ಸ್‌ ಬಾಂಬೆಯನ್ನು 1668ರಲ್ಲಿ ಕಂಪನಿಗೆ ವಾರ್ಷಿಕ 10 ಪೌಂಡುಗಳ ಬಾಡಿಗೆಗೆ ವಹಿಸಿಕೊಟ್ಟನು.

27) ಕೋಲ್ಕತ್ತಾ ನಗರವಾಗಿ ಬೆಳೆಯಲು ಕಾರಣವಾದುದು ಯಾವುದು?

ಉತ್ತರ:- ಬ್ರಿಟಿಷರು 1690ರ ದಶಕದಲ್ಲಿ ಬಂಗಾಳದ ರಾಜ್ಯಪಾಲನಿಂದ ಹೂಗ್ಲಿ ನದಿ ದಂಡೆಯ ಮೇಲೆ ಸುತನುತಿ, ಕಲ್ಕತ್ತ ಮತ್ತು ಗೋವಿಂದಪುರ ಎಂಬ ಮೂರು ಹಳ್ಳಿಗಳನ್ನು ಖರೀದಿಸಿ ಫೋರ್ಟ್ ವಿಲಿಯಂ ಎಂಬ ಕೋಟೆಯನ್ನು ಕಟ್ಟಿದರು. ಇದರ ಸುತ್ತ ಕಲ್ಕತ್ತಾ ನಗರ ಬೆಳೆಯಿತು.

(ಮುಂದುವರಿಯುವುದು….)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT