ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಚ್‌.ಡಿ ತಯಾರಿ ಹೇಗೆ?

Last Updated 27 ಮಾರ್ಚ್ 2023, 0:22 IST
ಅಕ್ಷರ ಗಾತ್ರ

1. ಸರ್, ನಾನು ಅಂತಿಮ ವರ್ಷದ ಎಂಎ (ಸಮಾಜಶಾಸ್ತ್ರ) ವಿದ್ಯಾರ್ಥಿಯಾಗಿದ್ದು, ಪಿ.ಎಚ್‌ಡಿ ಮಾಡಬಯಸಿದ್ದೇನೆ. ಮುಂದಿನ ತಯಾರಿಯ ಬಗ್ಗೆ ಕೂಲಂಕಶವಾಗಿ ತಿಳಿಸಿ.
ಶಿವು, ಸಿರಾವರ, ರಾಯಚೂರು ಜಿಲ್ಲೆ.
ಸಾಮಾನ್ಯವಾಗಿ, ಪಿಎಚ್‌ಡಿ ಮಾಡಲು ಈ ಕೆಳಗೆ ತಿಳಿಸಿರುವ ಪ್ರಕ್ರಿಯೆ ಇರುತ್ತದೆ:
 ಪಿಎಚ್‌ಡಿ ಕೋರ್ಸಿಗೆ ಅಗತ್ಯವಾದ ಸಂಶೋಧನೆಯ ವಿಷಯವನ್ನು ನಿರ್ಧರಿಸುವುದು ಸುಲಭವಲ್ಲ. ವಿಷಯದ ಪ್ರಸ್ತುತತೆ, ವಿಷಯದ ಕುರಿತು ಸ್ವಾಭಾವಿಕವಾದ ಒಲವು ಮತ್ತು ಪ್ರೇರಣೆಯ ಜೊತೆಗೆ ಮಾರ್ಗದರ್ಶಕರ ಸಕಾರಾತ್ಮಕ ಅಭಿಪ್ರಾಯ ಮತ್ತು ಬೆಂಬಲವಿರಬೇಕು. ಹಾಗಾಗಿ, ವಿಷಯದ ಕುರಿತು ಪ್ರಾಥಮಿಕ ಸಂಶೋಧನೆ ಅಗತ್ಯ.
 ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿಯ ನಂತರ (ಅಥವಾ ನಾಲ್ಕು ವರ್ಷದ ಸಂಶೋಧನಾತ್ಮಕ ಪದವಿಯ ನಂತರ) ಪಿಎಚ್‌ಡಿ ಕೋರ್ಸ್ ಮಾಡಲು ಅರ್ಹತೆ ಸಿಗುತ್ತದೆ. ಪಿಎಚ್‌ಡಿ ಕೋರ್ಸಿನಲ್ಲಿ ನೀವು
ಮಾಡುವ ಸಂಶೋಧನೆ ಕುರಿತ ಸುದೀರ್ಘವಾದ ಪ್ರಸ್ತಾವನೆಯನ್ನು ತಯಾರಿಸಬೇಕು. ಇದರ ಆಧಾರದ ಮೇಲೆ ವಿಶ್ವವಿದ್ಯಾಲಯದ ಅನುಮತಿ ಸಿಗುತ್ತದೆ.
 ವಿಶ್ವವಿದ್ಯಾಲಯಗಳು ಪ್ರತಿ ವರ್ಷದ ಪಿಎಚ್‌ಡಿ ಕಾರ್ಯಕ್ರಮಗಳಲ್ಲಿ ನಿರ್ದಿಷ್ಟ ಸಂಖ್ಯೆಯ ಅವಕಾಶಗಳನ್ನು ಹೊಂದಿರುತ್ತವೆ. ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪ್ರವೇಶ ಪರೀಕ್ಷೆಗಳು, ಸಂದರ್ಶನಗಳು ಮತ್ತು ಸಂಶೋಧನಾ ಪ್ರಸ್ತಾವನೆಯ ಮೌಲ್ಯಮಾಪನ ಇತ್ಯಾದಿ ಪ್ರಕ್ರಿಯೆಗಳಿರುತ್ತದೆ.
 ಪಿಎಚ್‌ಡಿ ಕೋರ್ಸಿಗೆ ಆಯ್ಕೆಯಾದ ನಂತರ ಸಂಶೋಧನೆಯನ್ನು ಪೂರ್ಣಗೊಳಿಸಿ ಮಹಾಪ್ರಬಂಧವನ್ನು (ಥೀಸಿಸ್) ಬರೆದು ವಿಶ್ವವಿದ್ಯಾಲಯಕ್ಕೆ ಸಲ್ಲಿಸಬೇಕು. ಇದಲ್ಲದೆ, ವಿಶ್ವವಿದ್ಯಾಲಯದ ನಿಯಮಾವಳಿಗಳಂತೆ ಪ್ರತಿಷ್ಠಿತ ಪತ್ರಿಕೆಗಳಲ್ಲಿ
ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಬೇಕು.
 ನೀವು ಸಲ್ಲಿಸಿದ ಮಹಾಪ್ರಬಂಧವನ್ನು ವಿಷಯ ತಜ್ಞರ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ.
 ಮಹಾಪ್ರಬಂಧವನ್ನು ವಿಶ್ವವಿದ್ಯಾಲಯ ಸ್ವೀಕಾರ ಮಾಡಿದ ನಂತರ ಪಿಎಚ್‌ಡಿ ಪದವಿಯನ್ನು ನೀಡಲಾಗುತ್ತದೆ. ಈ ಇಡೀ ಪ್ರಕ್ರಿಯೆಗೆ 3-5 ವರ್ಷ ಬೇಕಾಗಬಹುದು. ಪ್ರತಿ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ನಿಯಮಾವಳಿಗಳು, ಶುಲ್ಕಗಳು,
ವಿದ್ಯಾರ್ಥಿ ವೇತನ, ಅನುದಾನ ಇತ್ಯಾದಿಗಳು ವಿಭಿನ್ನವಾಗಿರುತ್ತದೆ.

2. ನಾನು ಸಿವಿಲ್ ಎಂಜಿನಿಯರಿಂಗ್ ಮಾಡಿದ್ದೇನೆ. ನಾನು ಸಿಎ ಕೋರ್ಸ್ ಮಾಡಬಹುದೇ?
ಹೆಸರು, ಊರು ತಿಳಿಸಿಲ್ಲ.
ಎಂಜಿನಿಯರಿಂಗ್ ಪದವಿ ಪರೀಕ್ಷೆಯಲ್ಲಿ ಕನಿಷ್ಠ ಶೇ 60 ಗಳಿಸಿದ್ದರೆ ಸಿಎ (ಇಂಟರ್‌ಮೀಡಿಯೆಟ್) ಕೋರ್ಸಿಗೆ ನೋಂದಾಯಿಸಿಕೊಳ್ಳಬಹುದು. ಇಂಟರ್‌ಮೀಡಿಯೆಟ್ ನಂತರ ಫೈನಲ್‌ಗೆ ನೋಂದಾಯಿಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ನಾಲ್ಕು ವರ್ಷದ ಎಂಜಿನಿಯರಿಂಗ್ ಕೋರ್ಸ್ ನಂತರ ಸಿಎ ಕೋರ್ಸ್ ಮಾಡಲು ಇನ್ನೂ
ನಾಲ್ಕು ವರ್ಷ ಬೇಕಾಗುತ್ತದೆ. ಇದಲ್ಲದೆ, ಎಂಜಿನಿಯರಿಂಗ್ ಕ್ಷೇತ್ರಕ್ಕೂ, ಹಣಕಾಸು ನಿರ್ವಹಣೆಯ ಕ್ಷೇತ್ರಕ್ಕೂ ಅಗತ್ಯವಾದ ಜ್ಞಾನ ಮತ್ತು ಕೌಶಲಗಳು ವಿಭಿನ್ನವಾಗಿದೆ. ಬಹುಶಃ, ಎಂಜಿನಿಯರಿಂಗ್ ಕೋರ್ಸನ್ನು ಮಾಡುವ ಮುಂಚೆ ನಿಮ್ಮ ಆಸಕ್ತಿ, ಅಭಿರುಚಿಯಂತೆ ವೃತ್ತಿಯೋಜನೆಯನ್ನು ಮಾಡಿರಲಿಲ್ಲವೆನಿಸುತ್ತದೆ. ಈಗಲೂ, ಕಾಲ ಮಿಂಚಿಲ್ಲ. ನಿಮ್ಮ ಭವಿಷ್ಯವನ್ನು
ರೂಪಿಸಿಕೊಳ್ಳಲು ವೃತ್ತಿಯೋಜನೆಯನ್ನು ಮಾಡಿ ಮುಂದಿನ ನಿರ್ಧಾರವನ್ನು ಮಾಡುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:
https://www.youtube.com/watch?v=oyUMPrEKPPU3. ನಾನು ಬಿ.ಎಸ್ಸಿ ದ್ವಿತೀಯ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ಕೆಎಎಸ್ ಮಾಡುವ ಆಸೆಯಿದೆ. ನನಗೆ ಸಂಗೀತದಲ್ಲೂ ಆಸಕ್ತಿ ಇದ್ದು, ಮುಂದೆ ಗಾಯಕಿಯಾಗುವ ಬಯಕೆಯೂ ಇದೆ. ಆದರೆ, ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಬೇಕು ಎನ್ನುವ ಛಲವೂ ಇದೆ. ದಯವಿಟ್ಟು ಪರೀಕ್ಷೆಗೆ ಹೇಗೆ ಓದಬೇಕು ಮತ್ತು ಯಾವ ವಿಷಯಗಳು ಇವೆ ಎಂದು ತಿಳಿಸಿ. ನನಗೆ
ಅರ್ಥವಾಗುತ್ತಿಲ್ಲ.
ಹೆಸರು, ಊರು ತಿಳಿಸಿಲ್ಲ.
ಸರ್ಕಾರಿ ವಲಯದ ಅನೇಕ ಉನ್ನತ ಹುದ್ದೆಗಳಿಗೆ ಕೆಎಎಸ್ ಏಕರೂಪದ ಪರೀಕ್ಷೆ. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ ಸೇರಿದಂತೆ ಮೂರು ಹಂತದ ಪರೀಕ್ಷೆಯಿರುತ್ತದೆ. ಒಬ್ಬ ದಕ್ಷ ಆಡಳಿತಾಧಿಕಾರಿಗೆ ಇರಬೇಕಾದ ಪರಿಪೂರ್ಣ ಜ್ಞಾನ, ನಾಯಕತ್ವದ ಸಾಮರ್ಥ್ಯ, ಮನೋಧೋರಣೆ, ನೈತಿಕತೆ, ಪಾರದರ್ಶಕತೆ, ಸಮಯದ ನಿರ್ವಹಣೆ, ಶಿಸ್ತು, ಬದ್ಧತೆ, ಸಂವಹನಾ ಸಾಮರ್ಥ್ಯ, ತಾರ್ಕಿಕ ಯೋಚನಾ ಸಾಮರ್ಥ್ಯ, ಪ್ರೇರಣಾ ಕೌಶಲ ಇತ್ಯಾದಿಗಳನ್ನು ಕೂಲಂಕಶವಾಗಿ ಪರೀಕ್ಷಿಸಲಾಗುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಕಡ್ಡಾಯವಾದ ಮತ್ತು ಐಚ್ಛಿಕ ವಿಷಯಗಳಿರುತ್ತದೆ. ಪ್ರಶ್ನೆಗಳು ಪದವಿಯ ಮಟ್ಟದ್ದಾಗಿರುತ್ತದೆ ಮತ್ತು ವಿವರಣಾತ್ಮಕ ಮಾದರಿಯಲ್ಲಿರುವುದರಿಂದ ನಿಮ್ಮ ಬರವಣಿಗೆ ಉತ್ಕೃಷ್ಟವಾದ ಗುಣಮಟ್ಟದ್ದಾಗಿರಬೇಕು. ಈ ಎಲ್ಲಾ ಪರೀಕ್ಷೆಗಳ ಮಾದರಿ, ಪಠ್ಯಕ್ರಮ, ವಿಷಯದ ಅನುಸಾರ ಶಿಫಾರಸು ಮಾಡಿರುವ
ಪುಸ್ತಕಗಳನ್ನು ತಿಳಿದುಕೊಂಡು ನಿಮ್ಮ ವೃತ್ತಿ ಯೋಜನೆಯ ಅನುಗುಣವಾಗಿ ಕಾರ್ಯತಂತ್ರವನ್ನು ರೂಪಿಸಬೇಕು. ಅಗತ್ಯವಾದ
ಪುಸ್ತಕಗಳನ್ನು ಖರೀದಿಸಿ, ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಿ ಮಾಡಬಹುದು. ಯೂಟ್ಯೂಬಿನಲ್ಲಿ ತಯಾರಿ ಕುರಿತ ಮಾಹಿತಿಯುಳ್ಳ ಉಪಯುಕ್ತ ವಿಡಿಯೋಗಳನ್ನು ವೀಕ್ಷಿಸಿ. ಈ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಮಗ್ರವಾದ ಮತ್ತು ಆಳವಾದ ಓದುವಿಕೆ ಇರಬೇಕು. ಜೊತೆಗೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ
ಅತ್ಯಗತ್ಯ. ಇವೆಲ್ಲವನ್ನು ನಿಭಾಯಿಸುವ ಆತ್ಮವಿಶ್ವಾಸವಿಲ್ಲದಿದ್ದರೆ, ಕೋಚಿಂಗ್ ಸೇರಬಹುದು. ಸಂಗೀತದಲ್ಲಿ ನಿಮಗಿರುವ ಆಸಕ್ತಿಯನ್ನು ಪೋಷಿಸಿ, ಉತ್ತಮಗಾಯಕಿಯಾಗಲು ಪ್ರಯತ್ನಿಸಿ. ವೃತ್ತಿಯಲ್ಲಿನ ಒತ್ತಡವನ್ನು ನಿರ್ವಹಿಸಿ,ನಿಮ್ಮ ಕಾರ್ಯಕ್ಷಮತೆಯನ್ನು ವೃದ್ಧಿಸಲು, ಇಂತಹ ಹವ್ಯಾಸಗಳು ಸಹಾಯಕಾರಿ.
ಹೆಚ್ಚಿನ ವಿವರಗಳಿಗಾಗಿ ಗಮನಿಸಿ: https://testbook.com/kpsc-kas/syllabus
4. ನಾನು ದ್ವೀತಿಯ ಪಿಯುಸಿ ಕಾಮರ್ಸ್ ವಿಭಾಗದ ಇಂಗ್ಲಿಷ್‌ನಲ್ಲಿ ಮಾತ್ರ ಪಾಸಾಗಿ, ಉಳಿದ 5 ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದೇನೆ. ಓದನ್ನು ಮುಂದುವರಿಸಲು ಏನು ಮಾಡಲಿ? 2023ನೇ ಸಾಲಿನಲ್ಲಿ ಮರು ಪರೀಕ್ಷೆ ಬರೆಯುವುದಕ್ಕೆ ಏನನ್ನು ಮಾಡಬೇಕು? ಯಾವ ಕೋಚಿಂಗ್ ಸೆಂಟರ್ ಸೇರಲಿ?
ಹೆಸರು, ಊರು ತಿಳಿಸಿಲ್ಲ.
ನಿಮ್ಮ ಕಾಲೇಜಿನ ಮುಖಾಂತರ ಮುಂದಿನ ಪರೀಕ್ಷೆಗೆ ನೋಂದಾಯಿಸಿಕೊಂಡು ಪರಿಶ್ರಮ, ಬದ್ಧತೆ, ಆತ್ಮ ವಿಶ್ವಾಸ ಮತ್ತು ಸಮಯದ ನಿರ್ವಹಣೆಯಿಂದ ತಯಾರಾಗಬಹುದು. ಎಲ್ಲಾ ವಿಷಯಗಳಿಗೂ ಕೋಚಿಂಗ್ ಕಡ್ಡಾಯವಲ್ಲ; ನಿಮಗೆ ನಿಭಾಯಿಸಲಾಗದ ವಿಷಯಗಳಿಗೆ ಮಾತ್ರ ಕೋಚಿಂಗ್ ಸೇರಬಹುದು. ಯಾವುದೇ ವೈಫಲ್ಯವು ಮಾರಕವಲ್ಲ ಅಥವಾ ಯಶಸ್ಸು ಅಂತಿಮವಲ್ಲವೆನ್ನುವುದು ನಿಮ್ಮ ನೆನಪಿನಲ್ಲಿರಲಿ. ಆದರೆ, ನಮ್ಮ ತಪ್ಪುಗಳಿಂದ ಪಾಠ ಕಲಿಯದಿರುವುದೇ ನಿಜವಾದ ವೈಫಲ್ಯ. ಹಾಗಾಗಿ, ಸ್ವಯಂ ಮೌಲ್ಯಮಾಪನದಿಂದ ಪರೀಕ್ಷೆಯ ವೈಫಲ್ಯದ ಕಾರಣಗಳನ್ನು ಗುರುತಿಸಿ, ಮುಂದೆ ಅಂತಹ ತಪ್ಪುಗಳು ಮರುಕಳಿಸದಂತೆ ಕಾಳಜಿ ವಹಿಸಿ. ಪ್ರಮುಖವಾಗಿ ಪಿಯುಸಿ ನಂತರ ಮುಂದೇನು ಎನ್ನುವುದರ ಬಗ್ಗೆ ಸ್ಪಷ್ಟತೆಯಿರಬೇಕು. ಹೆಚ್ಚಿನ ಮಾರ್ಗದರ್ಶನಕ್ಕಾಗಿ, ಈ ವಿಡಿಯೊ ವೀಕ್ಷಿಸಿ:
https://www.youtube.com/@ExpertCareerConsultantAuthor

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT