ಮಂಗಳವಾರ, ಮೇ 11, 2021
25 °C

ಅಕ್ಷರದತ್ತ ಅಕ್ಕರೆ ಕಥೆಯಿಂದಲೇ ಶುರು!

ಟಿ.ಎಂ. ಮನೋಜ್‌ Updated:

ಅಕ್ಷರ ಗಾತ್ರ : | |

Prajavani

ಮಕ್ಕಳಿಗೆ ಚಿಕ್ಕಂದಿನಿಂದಲೇ ಅಕ್ಷರದ ಪರಿಚಯ ಮಾಡಿಸಿದರೆ ಮುಂದೆ ಪುಸ್ತಕಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಕಲಿಕೆಯನ್ನು ಖುಷಿಯಿಂದ ಮುಂದುವರಿಸಲು ಸಹಾಯಕ. ಕಲಿಕೆಯ ಚಟುವಟಿಕೆಗಳಲ್ಲಿ ಒಂದಾದ ಕಥೆ ಓದಿ ಹೇಳಿದರೆ ಮಕ್ಕಳು ಅದನ್ನು ತಮಾಷೆಯಾಗಿ ಅನುಭವಿಸಿ, ಕಲಿಯುವುದರಲ್ಲೂ ಆಸಕ್ತಿ ತೋರುತ್ತಾರೆ.

ಚಿಕ್ಕಮಕ್ಕಳಿಗೆ ಪ್ಲೇ ಹೋಂ, ನಂತರ ಕಿಂಡರ್‌ಗಾರ್ಟನ್‌... ಹೀಗೆ ಶಿಕ್ಷಣದ ಒಂದೊಂದೇ ಮಜಲಿಗೆ ದೂಡುತ್ತ ಹೋಗುತ್ತೇವೆ. ಅಷ್ಟು ಬೇಗ ಶಿಸ್ತುಬದ್ಧ ಶಿಕ್ಷಣ ಕೊಡಬೇಕೇ ಬೇಡವೇ ಎಂಬ ಚರ್ಚೆ ಯಾವತ್ತಿನಿಂದಲೂ ಇದೆ. ಆದರೆ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಅಕ್ಷರದ ರುಚಿ ಹತ್ತಿಸಿದರೆ ಮುಂದೆ ಶಾಲೆಯಲ್ಲಿ ಒಳ್ಳೆಯ ಬೆಳವಣಿಗೆ, ಕೌಶಲ ತೋರುತ್ತವೆ ಎಂಬುದು ಶಿಕ್ಷಣ ತಜ್ಞರ ಅಭಿಮತ. ಈ ವಯಸ್ಸಿನಲ್ಲೇ ಓದಿಸಿ, ಬರೆಸಲು ಶುರು ಮಾಡಬೇಕು ಎಂಬುದು ಇದರರ್ಥವಲ್ಲ. ನಿತ್ಯ ಇಪ್ಪತ್ತು ನಿಮಿಷ ಅಥವಾ ಅರ್ಧ ತಾಸು ಅದಕ್ಕೆ ಅರ್ಥವಾಗುವ ಯಾವುದಾದರೂ ಪುಸ್ತಕ ಓದಿ ಹೇಳಿದರೆ ಮಗು ಅಕ್ಷರದ ಬಗ್ಗೆ ಅಕ್ಕರೆ ಬೆಳೆಸಿಕೊಳ್ಳುತ್ತದೆ.

ಪುಟ್ಟ ಮಕ್ಕಳೆಂದರೆ ಹೆಚ್ಚಾಗಿ ಕಥೆ ಪುಸ್ತಕ ಓದಿ ಹೇಳುವುದು ಅಭ್ಯಾಸ. ಈ ಚಟುವಟಿಕೆಯಲ್ಲಿ ಕೆಲವೊಂದು ವಿಧಾನಗಳನ್ನು ಅನುಸರಿಸಿದರೆ ಮಗು ಚೆನ್ನಾಗಿ ಅರ್ಥ ಮಾಡಿಕೊಂಡು ಸೂಕ್ತವಾಗಿ ಸ್ಪಂದಿಸುತ್ತದೆ.

*ಪುಸ್ತಕವನ್ನು ಓದಿ ಹೇಳುವಾಗ ಪ್ರತಿಯೊಂದು ಶಬ್ದದ ಕೆಳಗೂ ಬೆರಳಿಡುವ ಕ್ರಮ ಅನುಸರಿಸಿ. ಎಡದಿಂದ ಬಲಕ್ಕೆ ಅಥವಾ ಮೇಲಿನಿಂದ ಕೆಳಗೆ ಓದುವ ಅಭ್ಯಾಸ ಚಿಕ್ಕ ಮಕ್ಕಳಿಗೆ ಸುಲಭವಾಗಿ ಬರುವುದಿಲ್ಲ. ಹೀಗಾಗಿ ಶಬ್ದದ ಕೆಳಗೆ ಬೆರಳಿಟ್ಟು ಓದಿದರೆ ಮಕ್ಕಳಿಗೆ ಕೂಡ ಒಂದು ರೀತಿಯ ಪುನರಾವರ್ತನೆಯಾದಂತಾಗುತ್ತದೆ. ಶಬ್ದಗಳ ಅರ್ಥ ಗ್ರಹಿಸಲು ಸಹಾಯವಾಗುತ್ತದೆ. ಎರಡು ಶಬ್ದಗಳ ನಡುವೆ ಇರುವ ಅಂತರವನ್ನು ಅರ್ಥ ಮಾಡಿಕೊಳ್ಳಲು ಆರಂಭಿಸುತ್ತದೆ. ಮಗು ತಾನೂ ನಿಮ್ಮನ್ನು ಅನುಕರಿಸಿ ಓದುವಂತೆ ನಟಿಸುತ್ತದೆ.

*ಶಬ್ದಗಳ ಮೇಲೆ ಗಮನವಿಡಿ: ಮಗುವಿನ ಶಬ್ದ ಭಂಡಾರ ಹೆಚ್ಚಿಸಲು ಓದುವುದು ಹೇಗೆ ಎಂಬುದನ್ನು ಕಲಿಸಬೇಕಾಗಿಲ್ಲ. ಓದಲು ಆರಂಭಿಸುವುದಕ್ಕಿಂತ ಮುನ್ನವೇ ಅದು ಸಾಕಷ್ಟು ಶಬ್ದಗಳನ್ನು ಪೋಷಕರ ಜೊತೆ ಮಾತನಾಡುವಾಗ ಕಲಿತಿರುತ್ತದೆ. ಹೇಗೆ ಓದಬೇಕೆಂಬುದಕ್ಕೆ ಹಿನ್ನೆಲೆಯಾಗಿ ಈ ಶಬ್ದಗಳು ಸಾಥ್‌ ನೀಡುತ್ತವೆ. ಇದರಿಂದ ಮಕ್ಕಳಿಗೆ ಒಳ್ಳೆಯ ಜ್ಞಾನ ಲಭಿಸುತ್ತದೆ. ಮಕ್ಕಳಿಗೆ ಹಳೆಯ ವಿಷಯದ ಜೊತೆ ಹೊಸ ವಿಷಯವನ್ನು ಸೇರಿಸಿ ಹೇಳುವುದರಿಂದ ಅವು ಬೇಗ ಅರ್ಥ ಮಾಡಿಕೊಳ್ಳುತ್ತವೆ. ಶಾಲೆಗೆ ಸೇರಿಸಿದಾಗ ಅಂತಹ ಮಗು ದಿನಕ್ಕೆ 8–10 ಹೊಸ ಶಬ್ದಗಳನ್ನು ಕಲಿಯುತ್ತ ಹೋಗುತ್ತದೆ. ಇದರಿಂದ ಓದಿದ್ದನ್ನು ಗ್ರಹಿಸುವುದು ಸುಲಭ.

*ಕಥೆ ಓದುವಾಗ ಚಿತ್ರಗಳು ಹೆಚ್ಚಿರುವ ಪುಸ್ತಕ ಆಯ್ಕೆ ಮಾಡಿಕೊಳ್ಳಿ. ಶಬ್ದಗಳು ಹಾಗೂ ಚಿತ್ರಗಳನ್ನು ಪರಸ್ಪರ ಬೆಸೆದು ಅವುಗಳ ಅರ್ಥ ಮನದಟ್ಟಾಗುವಂತೆ ಮಾಡಬಹುದು. ಓದುವಾಗ ಮುಖ್ಯವಾದ ಶಬ್ದಗಳನ್ನು ಮಕ್ಕಳ ಜೊತೆ ಚರ್ಚಿಸಿ. ಮಗುವಿಗೆ ಗೊತ್ತಿರುವ ಶಬ್ದಗಳ ಬಗ್ಗೆ ತನ್ನದೇ ಆದ ರೀತಿಯಲ್ಲಿ ವಿವರಿಸಲು ಪ್ರೇರೇಪಿಸಿ.

*ಮಗುವಿಗೆ ಚಿಹ್ನೆಗಳ ಬಗ್ಗೆ ಹೇಳಿ: ಚಿಕ್ಕ ಮಗುವಿಗೆ ಚಿಹ್ನೆಗಳ ಬಗ್ಗೆ ವಿವರಿಸಿ ಹೇಳುವುದು ಕಷ್ಟ. ಅವುಗಳನ್ನು ಹೇಗೆ ಬಳಸಬೇಕು ಎಂದು ಕಲಿಸಲು ಹೋಗಬೇಡಿ. ಆದರೆ ಓದುವಾಗ ಪ್ರಶ್ನಾರ್ಥಕ, ಆಶ್ಚರ್ಯಸೂಚಕ, ಪೂರ್ಣವಿರಾಮದಂತಹ ಸರಳ ಚಿಹ್ನೆಗಳತ್ತ ಗಮನ ಸೆಳೆಯಬಹುದು. ಉದಾಹರಣೆಗೆ ಪ್ರಶ್ನಾರ್ಥಕ ಚಿಹ್ನೆ ಬಂದಾಗ ಪ್ರಶ್ನೆಗೆ ಉತ್ತರಿಸುವಂತೆ ಮಗುವಿಗೆ ಪ್ರೇರೇಪಿಸಿ. ಅಂತಹ ಚಿಹ್ನೆಗಳಿರುವ ವಾಕ್ಯಗಳನ್ನು ಓದುವಾಗ ದನಿಯಲ್ಲೂ ಏರಿಳಿತ ತನ್ನಿ. ಇದರಿಂದ ಮುಂದೆ ಆ ಮಗು ಸರಾಗವಾಗಿ ಇಂತಹ ಚಿಹ್ನೆಗಳನ್ನು ಬಳಸುವುದನ್ನು ತಾನಾಗೇ ಕಲಿಯುತ್ತದೆ.

*ದನಿಯಲ್ಲಿ ಏರಿಳಿತವಿರಲಿ: ಶೇ 90ರಷ್ಟು ಸಂವಹನ ದೇಹದ ಹಾವಭಾವಗಳಿಂದ ನಡೆಯುತ್ತದಂತೆ. ಹೀಗಾಗಿ ಶಬ್ದಗಳನ್ನು ಉಚ್ಚರಿಸುವಾಗ ದನಿಯಲ್ಲಿ ಏರಿಳಿತ ತಂದು ಮುಖದಲ್ಲಿ ಭಾವನೆಗಳನ್ನು ಮೂಡಿಸಬಹುದು. ಆಂಗಿಕ ಅಭಿನಯ ಮಗುವಿನ ಮನಸ್ಸಿನಲ್ಲಿ ಆಳವಾಗಿ ಅಚ್ಚೊತ್ತುತ್ತದೆ. ಹಾಗೆಯೇ ಓದಿನ ಬಗ್ಗೆ ಮಗುವಿನಲ್ಲಿ ಆಸಕ್ತಿ ಮೂಡುತ್ತದೆ. ಪ್ರತಿಯೊಂದು ಶಬ್ದವನ್ನೂ ನಾಟಕೀಯವಾಗಿ ಹೇಳುವ ಅವಶ್ಯಕತೆ ಇಲ್ಲ. ಆದರೆ ಧ್ವನಿಯಲ್ಲೇ ಅದು ಅರ್ಥವನ್ನು ಗ್ರಹಿಸಲು ಕಲಿಯುತ್ತದೆ.

*ಗ್ರಹಿಸಿ ಓದುವುದು: ಮಕ್ಕಳಿಗೆ ಈ ಕೌಶಲವನ್ನು ಚಿಕ್ಕಂದಿನಿಂದಲೇ ಅಭ್ಯಾಸ ಮಾಡಿಸಬಹುದು. ಏಕೆಂದರೆ ಶಾಲೆಗೆ ಹೋಗುವ ಮಕ್ಕಳು, ಹೈಸ್ಕೂಲ್‌ ಮೆಟ್ಟಿಲೇರಿದರೂ ಈ ವಿಭಾಗದಲ್ಲಿ ಕಷ್ಟಪಡಬಹುದು. ಹೀಗಾಗಿ ಕಥೆ ಓದಿದ ನಂತರ ಮಕ್ಕಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿ. ನೀಡಿದ ಉತ್ತರದ ಮೇಲೆ ಆ ಮಕ್ಕಳು ಅದನ್ನು ಎಷ್ಟರ ಮಟ್ಟಿಗೆ ಗ್ರಹಿಸಿದ್ದಾರೆ ಎಂದು ವಿಶ್ಲೇಷಿಸಬಹುದು. ಉತ್ತರಿಸಲು ಕಷ್ಟಪಟ್ಟರೆ ಆ ಉತ್ತರ ಇರುವ ಪುಟ ತೆರೆದು ಮತ್ತೆ ಓದಿ ಹೇಳಿ.

*ಪುನರಾವರ್ತನೆ: ಮಗುವಿಗೆ ಒಂದು ಪುಸ್ತಕ ಇಷ್ಟವಾದರೆ ಮತ್ತೆ ಮತ್ತೆ ಓದಿ ಹೇಳಿ. ಈ ರೀತಿ ಪುನರಾವರ್ತನೆ ಅಭ್ಯಾಸ ಕಲಿಕೆಗೆ ಉತ್ತಮ. ಶಬ್ದಗಳನ್ನು ಗ್ರಹಿಸಿ, ಅದರ ಅರ್ಥವನ್ನೂ ಕಲಿಯುತ್ತದೆ. ಜೊತೆಗೆ ನೀವೇನಾದರೂ ತಪ್ಪು ಮಾಡಿದರೆ ಕಂಡು ಹಿಡಿದು ಸರಿಪಡಿಸುವಷ್ಟು ಜಾಣ್ಮೆಯನ್ನು ಮಕ್ಕಳು ತೋರಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು