ಬುಧವಾರ, ಜೂನ್ 29, 2022
24 °C

ಎಸ್ಸೆಸ್ಸೆಲ್ಸಿ ನಂತರ ಮುಂದೇನು; ಕೋರ್ಸ್‌ ಆಯ್ಕೆಗೆ ಮುನ್ನ...

ವಿ. ಪ್ರದೀಪ್ ಕುಮಾರ್ Updated:

ಅಕ್ಷರ ಗಾತ್ರ : | |

ಈಗಷ್ಟೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಬಂದಿದೆ. ಬಹುತೇಕ ಪೋಷಕರು, ಮಕ್ಕಳಿಗೆ ಪಿಯುಸಿಯಲ್ಲಿ ಯಾವ ಕೋರ್ಸ್‌ ತೆಗೆದುಕೊಳ್ಳಬೇಕು? ಭವಿಷ್ಯದ ಬೆಳವಣಿಗೆಯ ದೃಷ್ಟಿಯಿಂದ ಯಾವ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬೇಕು ಎಂಬ ಪ್ರಶ್ನೆಗಳು ಕಾಡುತ್ತಿವೆ.

ಬಹಳ ವರ್ಷಗಳಿಂದ ಸಾಮಾನ್ಯವಾಗಿ ಒಂದು ರೂಢಿಯಲ್ಲಿರುವ ಕ್ರಮ ಏನೆಂದರೆ, ‘ಹೆಚ್ಚಿಗೆ ಅಂಕಗಳು ಬಂದರೆ ವಿಜ್ಞಾನ, ಕಡಿಮೆ ಅಂಕ ಬಂದರೆ ‘ಕಲಾ ವಿಭಾಗ’ ಆಯ್ಕೆ ಮಾಡಿಕೊಳ್ಳಲು ನಿರ್ಧಾರ ಮಾಡುವುದು. ಆದರೆ, ಇದೊಂದು ಅವೈಜ್ಞಾನಿಕ ಕ್ರಮ. ಮಾತ್ರವಲ್ಲ, ವಿದ್ಯಾರ್ಥಿಗಳ ಭವಿಷ್ಯಕ್ಕೂ ಮಾರಕವಾಗುವಂತಹ ಕ್ರಮ.

ಯೋಚನೆಗಳು ಬದಲಾಗಬೇಕು
ಶಿಕ್ಷಣ, ಔದ್ಯೋಗಿಕ ಕ್ಷೇತ್ರಗಳಲ್ಲಾಗುತ್ತಿರುವ ಬೆಳವಣಿಗೆಗೆ ಅನುಸಾರವಾಗಿ ನಮ್ಮ ಯೋಚನೆಗಳೂ ಬದಲಾಗಬೇಕಿದೆ. ಈಗ ‘ಮೊದಲು ಕೋರ್ಸ್, ನಂತರ ವೃತ್ತಿಯ ಆಯ್ಕೆ’ ಎಂದು ಯೋಚಿಸುತ್ತಿದ್ದೇವೆ. ಆದರೆ, ಈಗಿನ ಸನ್ನಿವೇಶದಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಕೋರ್ಸ್‌ ಮುಗಿಸಿದ ನಂತರ ಯಾವ ವೃತ್ತಿ ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲದಲ್ಲಿದ್ದಾರೆ. ಅದರಲ್ಲೂ, ಸ್ನಾತಕೋತ್ತರ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಲ್ಲೂ ಇಂತಹ ಗೊಂದಲವಿರುವುದನ್ನು ನಾವು ಗಮನಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ‘ಮೊದಲು ವೃತ್ತಿಯ ಆಯ್ಕೆ, ನಂತರ ಕೋರ್ಸ್ ಆಯ್ಕೆ’ ಎಂಬ ಪದ್ಧತಿಯನ್ನು ಅನುಸರಿಸುವುದು ಒಳ್ಳೆಯದು. ಅದು ಈ ಎಸ್ಸೆಸ್ಸೆಲ್ಸಿ ನಂತರದ ಕೋರ್ಸ್ ಆಯ್ಕೆಯಿಂದಲೇ ಆರಂಭವಾಗಬೇಕು.

ಈ ಸಂದರ್ಭದಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಘಟನೆಯೊಂದು ನೆನಪಾಗುತ್ತಿದೆ. ಅದು ಪ್ರತಿಷ್ಠಿತ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದ ಸಮಯ. ಅಲ್ಲಿದ್ದ ಪೋಷಕರೊಬ್ಬರು ತಮ್ಮ ಮಗ ಅರುಣ್‌ಗೆ ಎಂಜಿನಿಯರಿಂಗ್‌ಗೆ ಸೇರಿಸಬೇಕು ಅಂತ ಯೋಚಿಸಿದ್ದೇವೆ ಎಂದರು. ಆದರೆ, ಆ ಹುಡುಗನಿಗೆ ಪಾಕಶಾಸ್ತ್ರಜ್ಞ (ಶೆಫ್‌) ಆಗುವ ಕನಸು. ನಾನು ‘ನಿಮ್ಮ ಮಗನ ಆಸಕ್ತಿ ಪ್ರಕಾರ ಓದಿಸಿ’ ಎಂದು ಸಲಹೆ ನೀಡಿದೆ.  ಆದರೆ ಪೋಷಕರು, ಸಲಹೆಗೆ ವಿರುದ್ಧವಾಗಿ ಆತನನ್ನು ಎಂಜಿನಿಯರಿಂಗ್‌ಗೆ ಸೇರಿಸಿದರು. ತನ್ನ ಕನಸೆಲ್ಲಾ ನುಚ್ಚುನೂರಾಗಿ ತೀವ್ರವಾದ ಖಿನ್ನತೆಗೆ ಒಳಗಾದ ಅರುಣ್‌, ಎಂಜಿನಿಯರಿಂಗ್ ಕೋರ್ಸ್‌ನ ಮೊದಲೆರಡು ಸೆಮಿಸ್ಟರ್‌ಗಳಲ್ಲಿ ಅನುತ್ತೀರ್ಣನಾದ. ನಂತರ ಎಚ್ಚೆತ್ತ ಪೋಷಕರು, ಅರುಣ್‌ನನ್ನು ಪಾಕಶಾಸ್ತ್ರದ ಕೋರ್ಸ್‌ಗೆ ಸೇರಿಸಿದರು. ಈಗ ಅರುಣ್, ಒಂದು ಪ್ರತಿಷ್ಠಿತ ಹೋಟೆಲ್‌ನ ಸಂತೃಪ್ತ ಉದ್ಯೋಗಿ.

ಮೇಲಿನ ಘಟನೆಯನ್ನು ಉಲ್ಲೇಖಿಸಿ ಹೇಳುವುದಾದರೆ; ಬದುಕಿನ ಪಾಠಶಾಲೆಯಲ್ಲಿ ಯಶಸ್ಸು ಗಳಿಸಲು ಇಂಥದ್ದೇ ಕೋರ್ಸ್ ಅಥವಾ ವೃತ್ತಿಯನ್ನು ಅನುಸರಿಸಬೇಕೆಂಬ ನಿಯಮವೇನಿಲ್ಲ. ಆದರೆ, ತಮಗೆ ಆಸಕ್ತಿಯಿರುವ, ಒಲವಿರುವ, ಸ್ವಾಭಾವಿಕ ಪ್ರತಿಭೆಯಿರುವ ವೃತ್ತಿಯನ್ನು ಅನುಸರಿಸಿದರೆ ಯಶಸ್ಸು ಸುಲಭವೆನ್ನುವುದು ನಿರ್ವಿವಾದ.  

ವೃತ್ತಿ ಯೋಜನೆ: ಏನು? ಹೇಗೆ?
ವಿದ್ಯಾಭ್ಯಾಸದ ನಂತರ ಯಾವ ವೃತ್ತಿಗೆ ಸೇರಬೇಕು ಎಂಬುದನ್ನು ಗುರುತಿಸಿ, ಅದಕ್ಕೆ ಅನುಗುಣವಾಗಿ ಯಾವ ಕೋರ್ಸ್‌ಗಳನ್ನು ಮಾಡಬೇಕು ಎಂಬ ಪರಿಕಲ್ಪನೆಯೇ ವೃತ್ತಿ ಯೋಜನೆ. ಎಸ್‌ಎಸ್‌ಎಲ್‌ಸಿ ಮುಗಿಸಿ ಮುಂದಿನ ಹಂತಕ್ಕೆ ಹೋಗಬಯಸುವ ಎಲ್ಲಾ ವಿದ್ಯಾರ್ಥಿಗಳಿಗೆ, ಈ ಕೆಳಗೆ ವಿವರಿಸಿರುವ ಕ್ರಮದಲ್ಲಿ ವೃತ್ತಿ ಯೋಜನೆಯನ್ನು ಮಾಡ ಬಹುದು(ವೃತ್ತಿಯೋಜನೆಯ ಪ್ರಮುಖ 9 ಹಂತಗಳನ್ನು ಪಟ್ಟಿಯಲ್ಲಿ ನೀಡಿದೆ. ಅದನ್ನು ಗಮನಿಸಿ).

* ವಿದ್ಯಾರ್ಥಿಯ ಆಸಕ್ತಿ, ಒಲವು, ಪ್ರತಿಭೆ, ಕೌಶಲಗಳನ್ನು ಗುರುತಿಸಿ, ಸ್ವಯಂ-ಮೌಲ್ಯಮಾಪನ ಮಾಡಬೇಕು.

* ವೈಯಕ್ತಿಕ/ಕುಟುಂಬದ ಮೌಲ್ಯಗಳು, ಸವಾಲುಗಳು, ಅಗತ್ಯಗಳನ್ನು ಗುರುತಿಸಿ.

* ಯಾವ ವೃತ್ತಿ ಸರಿಹೊಂದಬಹುದು ಎಂದು ಅಂದಾಜು ಮಾಡಿ, ದೀರ್ಘಾವಧಿಯಲ್ಲೂ ಆ ವೃತ್ತಿಗೆ ಬೇಡಿಕೆ ಇರುತ್ತದೆಯೇ ಎಂದು ಖಚಿತ ಪಡಿಸಿಕೊಳ್ಳಿ.

* ವೃತ್ತಿಯ ಮತ್ತು ವೈಯಕ್ತಿಕ ಬದುಕಿನ ಧ್ಯೇಯಗಳನ್ನು ನಿಶ್ಚಯಿಸಿ, ಶಿಕ್ಷಣದ ವಿವಿಧ ಹಂತಗಳ ಅವಶ್ಯಕತೆಗಳನ್ನು ತೀರ್ಮಾನಿಸಿ.

* ಅವಶ್ಯಕತೆಗಳಿಗೆ ತಕ್ಕಂತೆ ಮಾಡಬೇಕಾದ ಕೋರ್ಸ್‌ಗಳು, ಪ್ರವೇಶ ಪರೀಕ್ಷೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗುರುತಿಸಿ.

* ಅಲ್ಪಾವಧಿ ಮತ್ತು ದೀರ್ಘಾವಧಿ ಮೈಲಿಗಲ್ಲುಗಳೊಂದಿಗೆ, ವೃತ್ತಿ ಯೋಜನೆಯನ್ನು ರೂಪಿಸಿ.

ಈ ರೀತಿ, ಸುದೀರ್ಘವಾದ ವೃತ್ತಿಯೋಜನೆಯ ರೂಪುರೇಷೆಗಳನ್ನು, ಡೈರಿಯಲ್ಲಿ ಅಥವಾ ಕಂಪ್ಯೂಟರ್‌ನಲ್ಲಿ ದಾಖಲಿಸಿ, ಆಗಿಂದಾಗ್ಗೆ ಪರಿಶೀಲಿಸಿ, ಪರಿಷ್ಕರಿಸುತ್ತಿರಬೇಕು.

ವೃತ್ತಿಯ ಪ್ರಾಮುಖ್ಯವನ್ನೂ, ಶಿಕ್ಷಣದ ಅಗತ್ಯಗಳನ್ನೂ, ವಿಧ್ಯಾರ್ಥಿಗಳು ಮತ್ತು ಪೋಷಕರು ಅರಿತು, ಮುಕ್ತ ಮನಸ್ಸಿನಿಂದ ಚರ್ಚಿಸಿ, ಸೂಕ್ತವಾದ ಮತ್ತು ಸಾಧಿಸಬಹುದಾದ ವೃತ್ತಿಯೋಜನೆ ರೂಪಿಸಿ, ಅದರಂತೆ ಅನುಷ್ಠಾನ ಮಾಡಬೇಕು. ಅಗತ್ಯವಿದ್ದರೆ, ವೃತ್ತಿ ಸಮಾಲೋಚಕರ ಮಾರ್ಗದರ್ಶನವನ್ನು ಪಡೆಯಿರಿ.

(ಲೇಖಕರು ಶಿಕ್ಷಣ ತಜ್ಞರು ಮತ್ತು ವೃತ್ತಿ ಸಲಹೆಗಾರರು)

ಮುಂದಿನ ವಾರ: ವೃತ್ತಿಶಿಕ್ಷಣದ ಕುರಿತ ಮಾಹಿತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು