ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CET 2024 ಫಲಿತಾಂಶ ಪ್ರಕಟ; ಅಂಕಗಳ ವಿವರ ಪಡೆಯುವುದು ಹೇಗೆ?

ನಾಲ್ಕು ವಿಭಾಗಗಳಲ್ಲಿ ವಿ. ಕಲ್ಯಾಣ್ ಪ್ರಥಮ
Published 1 ಜೂನ್ 2024, 12:15 IST
Last Updated 1 ಜೂನ್ 2024, 23:10 IST
ಅಕ್ಷರ ಗಾತ್ರ

ಬೆಂಗಳೂರು: 2024–24ನೇ ಸಾಲಿನ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಎಲ್ಲ ಏಳು ವಿಭಾಗಗಳಲ್ಲೂ ಮೊದಲ 10 ರ‍್ಯಾಂಕ್‌ ವಿಜೇತರಲ್ಲಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಕಲಿತ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.

ಎಂಜಿನಿಯರಿಂಗ್, ಯೋಗ ಮತ್ತು ನ್ಯಾಚುರೋಪಥಿ, ಪಶು ವೈದ್ಯಕೀಯ, ಕೃಷಿ ವಿಜ್ಞಾನ, ಬಿ. ಫಾರ್ಮಸಿ, ಫಾರ್ಮಾ ಡಿ ಮತ್ತು ಬಿ.ಎಸ್ಸಿ (ನರ್ಸಿಂಗ್) ಕೋರ್ಸುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಏಪ್ರಿಲ್ 18 ಮತ್ತು 19ರಂದು ಸಿಇಟಿ ನಡೆಸಿತ್ತು. 

ಎಂಜಿನಿಯರಿಂಗ್‌ನಲ್ಲಿ ಬೆಂಗಳೂರಿನ ಸಹಕಾರ ನಗರದಲ್ಲಿರುವ ನಾರಾಯಣ ಒಲಿಂಪಿಯಾಡ್ ಸ್ಕೂಲ್‌ನ ಹರ್ಷ ಕಾರ್ತಿಕೇಯ ವುಟುಕುರಿ, ಯೋಗ ಮತ್ತು ನ್ಯಾಚುರೋಪಥಿ ಮತ್ತು ಬಿ.ಎಸ್ಸಿ (ಕೃಷಿ) ವಿಭಾಗದಲ್ಲಿ ಮಂಗಳೂರಿನ ಕೊಡಿಯಾಲಬೈಲ್‌ನಲ್ಲಿರುವ ಎಕ್ಸ್‌ಪರ್ಟ್ ಪಿಯು ಸೈನ್ಸ್‌ ಕಾಲೇಜಿನ ಎಸ್‌.ಆರ್‌. ನಿಹಾರ್, ಪಶು ವೈದ್ಯಕೀಯ (ಬಿ.ವಿ.ಎಸ್ಸಿ), ಬಿ.ಫಾರ್ಮಾ (ಫಾರ್ಮಸಿ), ಫಾರ್ಮಾ ಡಿ (ಫಾರ್ಮಸಿ) ಮತ್ತು ಬಿ.ಎಸ್ಸಿ ನರ್ಸಿಂಗ್‌ನಲ್ಲಿ ಬೆಂಗಳೂರಿನ ಮಾರತ್‌ಹಳ್ಳಿಯಲ್ಲಿರುವ ಶ್ರೀ ಚೈತನ್ಯ ಟೆಕ್ನೊ ಸ್ಕೂಲ್‌ನ ವಿ. ಕಲ್ಯಾಣ್ ಪ್ರಥಮ ರ‍್ಯಾಂಕ್‌ ಪಡೆದಿದ್ದಾರೆ.

ನಾನು ಸಿಇಟಿಗಾಗಿ ಓದಲು ಹೆಚ್ಚುವರಿ ಸಮಯ ವ್ಯಯಿಸಿಲ್ಲ. ಚೈತನ್ಯ ಟೆಕ್ನೊ ಸ್ಕೂಲ್‌ನಲ್ಲಿ ಸಿಇಟಿಗಾಗಿ ಪ್ರತ್ಯೇಕ ಕೋರ್ಸ್ ಇದೆ. ಅಲ್ಲೇ ಕಲಿತಿದ್ದು ಬಿಟ್ಟು ಬೇರೆ ಕೋಚಿಂಗ್‌ಗೆ ಹೋಗಿಲ್ಲ. ನೀಟ್‌ ಪರೀಕ್ಷೆ ಬರೆದಿದ್ದೇನೆ. ಅದರ ಫಲಿತಾಂಶಕ್ಕೆ ಕಾಯುತ್ತಿದ್ದೇನೆ. ದೆಹಲಿಯ ಏಮ್ಸ್‌ನಲ್ಲಿ ವೈದ್ಯಕೀಯ ಶಿಕ್ಷಣ ಕಲಿಯುವ ಗುರಿ ಇಟ್ಟುಕೊಂಡಿದ್ದೇನೆ.
ಕಲ್ಯಾಣ್‌ ವಿ., ಶ್ರೀ ಚೈತನ್ಯ ಟೆಕ್ನೊ ಸ್ಕೂಲ್‌, ಮಾರತ್‌ಹಳ್ಳಿ, ನರ್ಸಿಂಗ್‌, ಬಿ. ಫಾರ್ಮಾ, ಫಾರ್ಮಾ–ಡಿ, ಪಶುವೈದ್ಯಕೀಯ ಈ ನಾಲ್ಕು ವಿಭಾಗದಲ್ಲಿ ಪ್ರಥಮ ರ‍್ಯಾಂಕ್‌ ಪಡೆದ ವಿದ್ಯಾರ್ಥಿ

ಸಿಇಟಿಯಲ್ಲಿ ಭೌತವಿಜ್ಞಾನದಲ್ಲಿ 9, ರಸಾಯನ ವಿಜ್ಞಾನ ಮತ್ತು ಗಣಿತದಲ್ಲಿ ತಲಾ 15, ಜೀವವಿಜ್ಞಾನದಲ್ಲಿ 11 ಪಠ್ಯಕ್ಕೆ ಹೊರತಾದ ಪ್ರಶ್ನೆಗಳನ್ನು ಕೇಳಲಾಗಿತ್ತು. ವಿಷಯ ತಜ್ಞರ ನಿರ್ದೇಶನದ ಮೇರೆಗೆ ಈ ಪ್ರಶ್ನೆಗಳನ್ನು ಮೌಲ್ಯಮಾಪನದ ಸಂದರ್ಭದಲ್ಲಿ ಕೈಬಿಡಲಾಗಿತ್ತು. ಜತೆಗೆ ಭೌತವಿಜ್ಞಾನ ಮತ್ತು ಗಣಿತದಲ್ಲಿ ತಲಾ ಒಂದು ಕೃಪಾಂಕ ನೀಡಲಾಗಿದೆ. ಪರಿಷ್ಕೃತ ಸರಿ ಉತ್ತರಗಳ ಆಧಾರದಲ್ಲಿ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗಿದೆ. ಈ ಬಾರಿ ಎರಡು ಬಾರಿ ಪಿಯುಸಿ ಪರೀಕ್ಷೆ ನಡೆಸಲಾಗಿದ್ದು, ಈ ಪರೀಕ್ಷೆಗಳ ಪೈಕಿ ಅತೀ ಹೆಚ್ಚು ಅಂಕಗಳನ್ನು ಪಡೆದಿರುವುದನ್ನೇ ಪರಿಗಣಿಸಲಾಗಿದೆ. ಅಭ್ಯರ್ಥಿಗಳು ವಿಷಯವಾರು ಅಂಕಗಳ ವಿವರಗಳನ್ನು ಜಾಲತಾಣದಿಂದ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ಸಿಇಟಿಗೆ ತಯಾರಿ ನಡೆಸಲು ನಿತ್ಯ ಒಂದು ಗಂಟೆ ಮೀಸಲಿಟ್ಟಿದ್ದೆ. ಸಿಇಟಿ ಅಲ್ಲದೇ ಬೇರೆ ಬೇರೆ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಹೇಗಿರುತ್ತವೆ ಎಂದು ನೋಡಿ ಸಿದ್ಧತೆ ಮಾಡಿಕೊಂಡಿದ್ದೆ. ಎಂಜಿನಿಯರಿಂಗ್‌ನಲ್ಲಿ ಮೊದಲ ರ‍್ಯಾಂಕ್‌ ಬಂದಿರುವುದು ಖುಷಿಯಾಗಿದೆ. ಮುಂಬೈ ಅಥವಾ ಚೆನ್ನೈ ಐಐಟಿಯಲ್ಲಿ ಕಂಪ್ಯೂಟರ್‌ ಸೈನ್ಸ್‌ ಮಾಡಬೇಕು.
ಹರ್ಷ ಕಾರ್ತಿಕೇಯ, ವುಟುಕುರಿ ನಾರಾಯಣ ಒಲಿಂಪಿಯಾಡ್‌ ಸ್ಕೂಲ್, ಸಹಕಾರ ನಗರ, ಎಂಜಿನಿಯರಿಂಗ್‌ನಲ್ಲಿ ಪ್ರಥಮ ರ‍್ಯಾಂಕ್‌, ಬಿ.ಫಾರ್ಮಾ ಮತ್ತು ಫಾರ್ಮಾ–ಡಿಯಲ್ಲಿ ಎರಡನೇ ರ‍್ಯಾಂಕ್‌ ಪಡೆದವರು

‘ಅಭ್ಯರ್ಥಿಗಳ ಮೂಲ ಪ್ರಮಾಣಪತ್ರಗಳ ಪರಿಶೀಲನೆ ಮುಗಿಯುವವರೆಗೂ ಈ ಅರ್ಹತೆ ತಾತ್ಕಾಲಿಕ ಸ್ವರೂಪದ್ದಾಗಿರುತ್ತದೆ. ಯುಜಿ ನೀಟ್ ಪರೀಕ್ಷೆಯ ಫಲಿತಾಂಶ ಮತ್ತು ಎಂಸಿಸಿ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಗಣನೆಗೆ ತೆಗೆದುಕೊಂಡು, ಬಳಿಕ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಜಂಟಿ ಕೌನ್ಸೆಲಿಂಗ್ ನಡೆಸಲಿರುವ ದಿನಾಂಕಗಳನ್ನು ಪ್ರಕಟಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದ್ದಾರೆ.

ಆರ್ಕಿಟೆಕ್ಚರ್ ಕೋರ್ಸ್‌ಗೆ ಪ್ರವೇಶ ಬಯಸಿರುವ ಅಭ್ಯರ್ಥಿಗಳಿಗೆ ‘ನಾಟಾ’ (ಎನ್ಎಟಿಎ) ಪರೀಕ್ಷೆಯಲ್ಲಿ ಅವರು ಗಳಿಸಲಿರುವ ಅಂಕಗಳನ್ನು ಪರಿಗಣಿಸಿ ರ‍್ಯಾಂಕ್‌ ಘೋಷಿಸಲಾಗುವುದು. ಬಿಪಿಟಿ, ಬಿಪಿಒ, ಬಿ.ಎಸ್ಸಿ (ಅಲೈಡ್ ಹೆಲ್ತ್ ಸೈನ್ಸ್) ಕೋರ್ಸ್‌ಗಳಿಗೆ ಸಂಬಂಧಿಸಿದ ಫಲಿತಾಂಶಕ್ಕೂ ಇದೇ ಸೂತ್ರ ಅನುಸರಿಸಲಾಗುವುದು ಎಂದು ಕೆಇಎ ಪ್ರಕಟಣೆ ತಿಳಿಸಿದೆ.

ಅಭ್ಯರ್ಥಿಗಳು ಒಎಂಆರ್ ಉತ್ತರ ಪತ್ರಿಕೆಯಲ್ಲಿ ನಮೂದಿಸಿರುವ ಉತ್ತರಗಳನ್ನು ಮತ್ತು ಸರಿಯಾದ ಉತ್ತರಗಳನ್ನು ಕೂಡ ಪ್ರಾಧಿಕಾರದ ಜಾಲತಾಣದಲ್ಲಿ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ಅವುಗಳನ್ನು ತಮಗೆ ಪರೀಕ್ಷಾ ದಿನದಂದೇ ನೀಡಿರುವ ಒಎಂಆರ್ ಉತ್ತರ ಪತ್ರಿಕೆಗಳ ಜತೆ ತಾಳೆ ಮಾಡಿ ನೋಡಿಕೊಳ್ಳಬಹುದು. ವಿವಿಧ ಮೀಸಲಾತಿ ಪ್ರವರ್ಗಗಳ ಅಡಿ ಬರುವ ಅರ್ಹ ಅಭ್ಯರ್ಥಿಗಳ ವಿವರಗಳನ್ನು ಮತ್ತು ಜಿಲ್ಲಾವಾರು ಅಭ್ಯರ್ಥಿಗಳ ವಿವರಗಳನ್ನು ಕೂಡ ಈಗಾಗಲೇ ಪ್ರಕಟಿಸಲಾಗಿದೆ. http://kea.kar.nic.in ಕ್ಲಿಕ್ಕಿಸಿ ಫಲಿತಾಂಶ ನೋಡಬಹುದು.

ವಿವರ ತುಂಬಿದ್ದರಷ್ಟೇ ಫಲಿತಾಂಶ

‘ಕೆಲವು ಅಭ್ಯರ್ಥಿಗಳು ತಮ್ಮ ಸಿಇಟಿ ಅರ್ಜಿಯಲ್ಲಿ ಜನ್ಮ ದಿನಾಂಕ, ದ್ವಿತೀಯ ಪಿಯುಸಿ ಅಂಕಗಳನ್ನು ನಮೂದಿಸಿಲ್ಲ. ಅಂಥವರ ಫಲಿತಾಂಶವನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ಅಂತಹ ಅಭ್ಯರ್ಥಿಗಳು ಪ್ರಾಧಿಕಾರದ ಪೋರ್ಟಲ್‌ನಲ್ಲಿ ಅಗತ್ಯ ವಿವರಗಳನ್ನು ತುಂಬಿದ ತಕ್ಷಣ ಫಲಿತಾಂಶವನ್ನು ಪ್ರಕಟಿಸಲಾಗುವುದು. ಆದ್ದರಿಂದ ಈ ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ಸಿಇಟಿ: ರ್‍ಯಾಂಕ್‌ ವಿದ್ಯಾರ್ಥಿಗಳ ಅನಿಸಿಕೆ

ಸಿಇಟಿ ಎಂಜಿನಿಯರಿಂಗ್‌ನಲ್ಲಿ 3ನೇ ರ‍್ಯಾಂಕ್‌ ಬಂದಿರುವು ದನ್ನು ಕಂಡು ಖುಷಿಯಾಯಿತು. ನನಗೆ ಶಿಕ್ಷಕರು ನೀಡು ತ್ತಿದ್ದ ಸಲಹೆ, ಬೋಧನೆಯಿಂದ ಪರೀಕ್ಷೆ ಬರೆಯಲು ಸುಲಭವಾಯಿತು. ಅವರಿಗೆ ಮತ್ತು ಮನೆಯಲ್ಲಿ ಪ್ರೋತ್ಸಾಹ ನೀಡಿದ ಹೆತ್ತವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ - ಅಭಿನವ್ ಪಿ.ಜೆ., ನೆಹರೂ ಸ್ಮಾರಕ ವಿದ್ಯಾಲಯ, 7ನೇ ಬ್ಲಾಕ್, ಜಯನಗರ, ಬೆಂಗಳೂರು (ಎಂಜಿನಿಯರಿಂಗ್‌ನಲ್ಲಿ ಮೂರನೇ ರ‍್ಯಾಂಕ್‌ ಪಡೆದ ವಿದ್ಯಾರ್ಥಿ)

ಕಾಲೇಜಿನಲ್ಲಿಯೇ ಸಿಇಟಿಗೆ ತಯಾರಿ ನಡೆಸುತ್ತಿದ್ದೆ. ಅದನ್ನು ಹೊರತುಪಡಿಸಿ ಯಾವುದೇ ಕೋಚಿಂಗ್‌ ಕ್ಲಾಸ್‌ಗಳಿಗೆ ಹೋಗಿಲ್ಲ. ಶ್ರದ್ಧೆಯಿಂದ ಓದಿದರೆ ಕೋಚಿಂಗ್‌ ಬೇಕಾಗಿಲ್ಲ. ಇದೇ ರೀತಿ ಓದಿ ಎಸ್ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿಯೂ ರ‍್ಯಾಂಕ್‌ ಪಡೆದಿದ್ದೆ. ಮುಂದೆ ವೈದ್ಯಕೀಯ ಶಿಕ್ಷಣ ಪಡೆಯಬೇಕು ಎಂಬುದು ನನ್ನ ಗುರಿ - ಪ್ರೀತಮ್ ರಾವಲಪ್ಪ ಪಣಸುಧಾಕರ್‌, ಶೇಷಾದ್ರಿಪುರಂ ಪಿ.ಯು. ಕಾಲೇಜು, ಬಿಎನ್‌ವೈಎಸ್‌ (ಬ್ಯಾಚುಲರ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್)ನಲ್ಲಿ 3ನೇ ರ‍್ಯಾಂಕ್‌ ಪಡೆದ ವಿದ್ಯಾರ್ಥಿ.

ಬೇರೆ ಪರೀಕ್ಷೆಗಳಿಗೆ ಹೋಲಿಸಿದರೆ ಈ ಪರೀಕ್ಷೆ ಸುಲಭವಾ ಗಿತ್ತು. ವಿದ್ಯಾರ್ಥಿಗಳು ಸಮಯದ ಸರಿಯಾದ ಬಳಕೆ ಕಲಿತರೆ ಯಾವ ಪರೀಕ್ಷೆಯೂ ಕಷ್ಟವಲ್ಲ. ಸಿಇಟಿ ಪರೀಕ್ಷೆಗೆ ಸಮಯ ನಿಗದಿಪಡಿಸಿದ್ದೆ. ಅದೇ ಸಮಯದಲ್ಲಿ ಓದುತ್ತಿದ್ದೆ - ಅನಿಮೇಶ್ ಸಿಂಗ್ ರಾಥೋರ್, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್‌, ಬಿ.ಎಸ್‌.ಸಿ(ಕೃಷಿ)ಯಲ್ಲಿ ಮೂರನೇ ರ‍್ಯಾಂಕ್‌ ಪಡೆದ ವಿದ್ಯಾರ್ಥಿ.

ನಾನು ಬೆಳಿಗ್ಗೆ 8 ರಿಂದ ರಾತ್ರಿ 8ರ ತನಕ ಕೋಚಿಂಗ್‌ ತೆಗೆದುಕೊಳ್ಳುತ್ತಿದ್ದೆ. ಓದಿಗೆ ಹೆಚ್ಚು ಗಮನ ನೀಡಿದ್ದರಿಂದ ಈ ಫಲಿತಾಂಶ ಪಡೆಯಲು ಸಾಧ್ಯವಾಯಿತು. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟರೆ ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ. ಮುಂದೆ ವೈದ್ಯನಾಗುವ ಗುರಿ ಇಟ್ಟುಕೊಂಡಿದ್ದೇನೆ – ಡಿ.ಎನ್. ನಿತಿನ್‌, ನಾರಾಯಣ ಇ., ಟೆಕ್ನೋ ಪಾರ್ಕ್ ಸ್ಕೂಲ್‌, ದೊಡ್ಡಬೆಟ್ಟಹಳ್ಳಿ, ಯಲಹಂಕ, ಪಶು ವೈದ್ಯಕೀಯ ಪರೀಕ್ಷೆಯಲ್ಲಿ 2ನೇ ಹಾಗೂ ಬಿ.ಫಾರ್ಮಾದಲ್ಲಿ 3ನೇ ರ‍್ಯಾಂಕ್‌ ಗಳಿಸಿರುವ ವಿದ್ಯಾರ್ಥಿ.

‘ಈ ಬಾರಿ ಸಿಇಟಿ ಪ್ರಶ್ನೆಪತ್ರಿಕೆ ಕಠಿಣವಾಗಿದ್ದ ಕಾರಣ ರ್‍ಯಾಂಕ್ ನಿರೀಕ್ಷಿಸಿರಲಿಲ್ಲ. ತರಗತಿಯ ಪಾಠ ಗಂಭೀರವಾಗಿ ಮನನ ಮಾಡುವುದರ ಜೊತೆಗೆ ಕಾಲೇಜಿನಿಂದ ಬಂದ ಮೇಲೆ 3–4 ತಾಸು ಅಭ್ಯಾಸ ಮಾಡುತ್ತಿದ್ದೆ. ದೈನಂದಿನ ಅಧ್ಯಯನ ಅಂಕ ಗಳಿಕೆಗೆ ಸಹಕಾರಿಯಾಯಿತು. ಸಿಇಟಿಗಿಂತ ನೀಟ್‌ ಪರೀಕ್ಷೆ ಸಿದ್ಧತೆಗೆ ಹೆಚ್ಚು ಆದ್ಯತೆ ನೀಡಿದ್ದೆ. ನೀಟ್ ಫಲಿತಾಂಶ ಪ್ರಕಟಗೊಂಡ ಮೇಲೆ ಯಾವ ಕೋರ್ಸ್ ಮಾಡಬೇಕೆಂದು ನಿರ್ಧರಿಸುತ್ತೇನೆ’– ನಿಹಾರ್ ಎಸ್.ಆರ್., ಮಂಗಳೂರು ವಳಚ್ಚಿಲ್ ಎಕ್ಸ್‌ಪರ್ಟ್ ಪಿಯು ಕಾಲೇಜು, ಬಿಎನ್‌ವೈಎಸ್‌ ಮತ್ತು ಬಿಎಸ್ಸಿ (ಕೃಷಿ)ಯಲ್ಲಿ ಪ್ರಥಮ, ಬಿವಿಎಸ್ಸಿ (ಪಶುವೈದ್ಯಕೀಯ), ಬಿಎಸ್ಸಿ ನರ್ಸಿಂಗ್‌ನಲ್ಲಿ ತೃತೀಯ, ಬಿ ಫಾರ್ಮಾ ಮತ್ತು ಡಿ ಫಾರ್ಮಾದಲ್ಲಿ ತೃತೀಯ ರ್‍ಯಾಂಕ್

‘ಸಿಇಟಿಯಲ್ಲಿ ರ್‍ಯಾಂಕ್ ನಿರೀಕ್ಷೆ ಮಾಡಿರಲಿಲ್ಲ. ಕಠಿಣ ಪರಿಶ್ರಮ, ನಿರಂತರ ಅಭ್ಯಾಸದಿಂದ ಸಾಧನೆ ಆಗಿದೆ. ವೈದ್ಯಕೀಯ ಶಿಕ್ಷಣ ಒಲವಿನ ಕ್ಷೇತ್ರವಾಗಿದ್ದು, ನೀಟ್ ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ – ಸಂಜನಾ ಸಂತೋಷ್ ಕಟ್ಟಿ, ಮಂಗಳೂರು ವಳಚ್ಚಿಲ್ ಎಕ್ಸ್‌ಪರ್ಟ್ ಪಿಯು ಕಾಲೇಜು, ಬಿಎನ್‌ವೈಎಸ್‌ನಲ್ಲಿ ಎರಡನೇ ರ್‍ಯಾಂಕ್, ಬಿಎಸ್ಸಿ ಕೃಷಿಯಲ್ಲಿ ನಾಲ್ಕನೇ ರ್‍ಯಾಂಕ್

‘ಉತ್ತಮ ಅಂಕದ ನಿರೀಕ್ಷೆ ಇತ್ತು. ರ್‍ಯಾಂಕ್ ನಿಜಕ್ಕೂ ಅನಿರೀಕ್ಷಿತ. ನೀಟ್‌ ಪರೀಕ್ಷೆಯ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದ್ದೆ. ಮೆಡಿಕಲ್ ಓದಬೇಕೆಂಬ ಕನಸಿದೆ. ನೀಟ್ ಫಲಿತಾಂಶ ಆಧರಿಸಿ, ಮುಂದಿನ ಕೋರ್ಸ್ ನಿರ್ಧರಿಸುತ್ತೇನೆ’ – ಮಿಹಿರ್ ಗಿರೀಶ್ ಕಾಮತ್, ಮಂಗಳೂರು ವಳಚ್ಚಿಲ್ ಎಕ್ಸ್‌ಪರ್ಟ್ ಪಿಯು ಕಾಲೇಜು, ಬಿಎಸ್ಸಿ ಕೃಷಿಯಲ್ಲಿ ದ್ವಿತೀಯ ರ್‍ಯಾಂಕ್‌

ವಿವಿಧ ಕೋರ್ಸ್‌ಗಳಿಗೆ ಅರ್ಹತೆ ಪಡೆದ ಅಭ್ಯರ್ಥಿಗಳ ವಿವರ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT