ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Results | ಮತ್ತೆ ಬಾಲಕಿಯರದೇ ಪಾರಮ್ಯ, ಫಲಿತಾಂಶ ಶೇ 10.49 ಕುಸಿತ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ 10.49 ಕುಸಿತ l ವೆಬ್‌ಕಾಸ್ಟಿಂಗ್‌ ಪರಿಣಾಮ– ಪರೀಕ್ಷಾ ಮಂಡಳಿ
Published 10 ಮೇ 2024, 0:18 IST
Last Updated 10 ಮೇ 2024, 0:18 IST
ಅಕ್ಷರ ಗಾತ್ರ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಕಳೆದ ಬಾರಿಗಿಂತ ಶೇ 10.49ರಷ್ಟು ಕುಸಿತದ ಮಧ್ಯೆಯೂ ಬಾಲಕಿಯರು ಉತ್ತಮ ಸಾಧನೆ ಮಾಡಿದ್ದಾರೆ. ಹಳ್ಳಿ ಮಕ್ಕಳು ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ.

ಇದೇ ಮೊದಲ ಬಾರಿ ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ. ಟಿ.ವಿ ಕ್ಯಾಮೆರಾ ಮೂಲಕ ವೆಬ್‌ಕಾಸ್ಟಿಂಗ್ ಅಳವಡಿಸಿ
ದ್ದರಿಂದ ಪರೀಕ್ಷಾ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಬಿದ್ದಿದ್ದು, ಫಲಿತಾಂಶ ಕುಸಿತ ಕಂಡಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಮರ್ಥಿಸಿಕೊಂಡಿದೆ. 

2023ನೇ ಸಾಲಿನಲ್ಲಿ ಶೇ 83.89 ಬಂದಿತ್ತು. ಈ ಬಾರಿ ಶೇ 73.40 ಫಲಿತಾಂಶ ಬಂದಿದೆ.

ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕು ಮೆಳ್ಳಿಗೇರಿಯ ಸರ್ಕಾರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರ 625ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. ಏಳು ವಿದ್ಯಾರ್ಥಿಗಳು 624 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. 14 ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದಿದ್ದಾರೆ. 785 ಸರ್ಕಾರಿ ಶಾಲೆಗಳು ಸೇರಿದಂತೆ 2,288 ಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದಿವೆ. 62 ಖಾಸಗಿ ಶಾಲೆಗಳು ಸೇರಿದಂತೆ 78 ಶಾಲೆಗಳಿಗೆ ಶೂನ್ಯ ಫಲಿತಾಂಶ
ಬಂದಿದೆ.

ಫಲಿತಾಂಶದಲ್ಲಿ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳು ಕ್ರಮವಾಗಿ ಒಂದು, ಎರಡು ಮತ್ತು ಮೂರನೇ ಸ್ಥಾನ ಪಡೆದರೆ, ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆಗಳು ಮೊದಲ 10ರ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. 

ಬಾಲಕಿಯರಿಗೆ ಮೆರುಗು:

ಒಟ್ಟಾರೆ ಫಲಿತಾಂಶದ ಪ್ರಮಾಣಕ್ಕಿಂತ ಬಾಲಕಿಯರು ಶೇ 7.71ರಷ್ಟು ಹೆಚ್ಚು ತೇರ್ಗಡೆಯಾಗಿದ್ದಾರೆ. ಬಾಲಕರ ತೇರ್ಗಡೆ ಪ್ರಮಾಣ ಶೇ 65.90 ಇದ್ದರೆ, ಬಾಲಕಿಯರು ಶೇ 81.11 ಫಲಿತಾಂಶ ಪಡೆದಿದ್ದಾರೆ. ಈ ಬಾರಿಯೂ ಗ್ರಾಮೀಣ ವಿದ್ಯಾರ್ಥಿಗಳೇ ಮುಂದಿದ್ದರೂ, ಕಳೆದ ಬಾರಿಗೆ ಹೋಲಿಸಿದರೆ ಅಂತರ ಕಡಿಮೆಯಾಗಿದೆ. ಶೇ 72.83 ನಗರ ಪ್ರದೇಶದ, ಶೇ 74.17 ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ದೃಷ್ಟಿ, ಶ್ರವಣ ದೋಷ, ಮಂದಗತಿಯ ಕಲಿಕೆಯ ಸಾಮರ್ಥ್ಯ ಸೇರಿದಂತೆ ವಿವಿಧ ನ್ಯೂನತೆ ಇರುವ 4,660 ಮಕ್ಕಳು ಪರೀಕ್ಷೆ ಬರೆದಿದ್ದು, 2,960 ಮಕ್ಕಳು ಉತ್ತೀರ್ಣರಾಗಿದ್ದಾರೆ.

ಜೂನ್‌ 7ರಿಂದ 14ರವರೆಗೆ ಎಸ್‌ಎಸ್‌ಎಲ್‌ಸಿ ಎರಡನೇ ಪರೀಕ್ಷೆ ನಡೆಯಲಿದೆ. ನೋಂದಣಿಗೆ ಮೇ 16 ಕೊನೆಯ ದಿನ. ಫಲಿತಾಂಶ ವೃದ್ಧಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಒಂದು ತಿಂಗಳು ಪರಿಹಾರ ಬೋಧನೆಯ ವ್ಯವಸ್ಥೆ
ಮಾಡಲಾಗಿದೆ. 

ಕೃಪಾಂಕ ಕಳೆದರೆ ಶೇ 53ರಷ್ಟೇ ಫಲಿತಾಂಶ

ಮೌಲ್ಯಮಾಪನದ ನಂತರ ಫಲಿತಾಂಶ ಶೇ 53ರಷ್ಟಿತ್ತು. ಇದು ದಶಕದ ಇತಿಹಾಸದಲ್ಲೇ ಅತ್ಯಂತ ಕಡಿಮೆ ಫಲಿತಾಂಶ. ಫಲಿತಾಂಶ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂದು ಮನಗಂಡ ಶಾಲಾ ಶಿಕ್ಷಣ ಇಲಾಖೆ, ಕೃಪಾಂಕ ನಿಯಮದಲ್ಲಿ ಸಡಿಲಿಕೆ ಮಾಡಲು ಪರೀಕ್ಷಾ ಮಂಡಳಿಗೆ ಸೂಚಿಸಿತ್ತು. ಹಿಂದೆ ಮೂರು ವಿಷಯಗಳಲ್ಲಿ 35 ಅಂಕ ಪಡೆದಿದ್ದು, ಉಳಿದ ಮೂರು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರೆ ಪ್ರತಿ ವಿಷಯದಲ್ಲೂ ಗರಿಷ್ಠ 10 ಕೃಪಾಂಕ ನೀಡಿ ತೇರ್ಗಡೆ ಮಾಡಲಾಗುತ್ತಿತ್ತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೃಪಾಂಕ ಪಡೆಯಲು ಇದ್ದ ಶೇ 35 ಅರ್ಹ ಅಂಕಗಳನ್ನು 25ಕ್ಕೆ ಇಳಿಸಿ, ಗರಿಷ್ಠ 20 ಕೃಪಾಂಕ ನೀಡಲಾಗಿದೆ. ಇದರಿಂದ ಒಟ್ಟಾರೆ ಫಲಿತಾಂಶ ಶೇ 73.40ಕ್ಕೆ ಹಿಗ್ಗಿದೆ. ಕೃಪಾಂಕ ನೀಡದೇ ಇದ್ದಿದ್ದರೆ ಕಳೆದ ಬಾರಿಗಿಂತಲೂ (2023ರ ಫಲಿತಾಂಶ ಶೇ 83.89) ಶೇ 30ರಷ್ಟು ಫಲಿತಾಂಶ ಕುಸಿತವಾಗುತ್ತಿತ್ತು. ಪರೀಕ್ಷೆ ಬರೆದಿದ್ದ 8.59 ಲಕ್ಷ ವಿದ್ಯಾರ್ಥಿಗಳಲ್ಲಿ 1.69 ಲಕ್ಷ ವಿದ್ಯಾರ್ಥಿಗಳು ಕೃಪಾಂಕದ ಆಧಾರದಲ್ಲಿ ಉತ್ತೀರ್ಣರಾಗಿದ್ದಾರೆ. 

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಾಡಿಗೆ ಪ್ರಥಮ ಸ್ಥಾನ ಗಳಿಸಿರುವ ಅಂಕಿತಾಗೆ ತುಂಬು ಹೃದಯದ ಅಭಿನಂದನೆಗಳು. ಅವಳ ಶೈಕ್ಷಣಿಕ ಬದುಕು ಮುಂದೆಯೂ ಸಾಧನೆಗಳಿಂದ ಕೂಡಿರಲಿ
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಸರ್ಕಾರಿ ಶಾಲೆಯಲ್ಲಿ ಓದಿದರೆ ಏನೂ ಆಗಲ್ಲ ಎಂಬುದು ತಪ್ಪು ಕಲ್ಪನೆ. ಆ ಶಾಲೆಯಲ್ಲೂ ಸಾಧನೆ ಮಾಡಬಹುದು ಎಂಬುದಕ್ಕೆ ನಾನೇ ಉದಾಹರಣೆ
-ಅಂಕಿತಾ ಬಸಪ್ಪ ಕೊಣ್ಣೂರ, ಮೊದಲ ಸ್ಥಾನ ಪಡೆದ ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT