ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಸ್ತುಬದ್ಧ ಅಧ್ಯಯನಕ್ಕೆ ವೇಳಾಪಟ್ಟಿ ಹೀಗಿರಲಿ..

Published 14 ಜನವರಿ 2024, 23:30 IST
Last Updated 14 ಜನವರಿ 2024, 23:30 IST
ಅಕ್ಷರ ಗಾತ್ರ

ಪರೀಕ್ಷಾ ತಯಾರಿಗೆ ಸಮಯದ ಅಭಾವವಿದೆ ಎಂದು ಧೃತಿಗೆಡದೇ ಇಂದಿನಿಂದ, ಈ ಕೂಡಲೇ ವೇಳಾಪಟ್ಟಿಗೆ ಅನುಗುಣವಾಗಿ ಪರೀಕ್ಷಾ ಸಿದ್ಧತೆ ಆರಂಭಿಸಿ. ಪ್ರತಿದಿನ ಅಧ್ಯಯನಕ್ಕಾಗಿ ಮೀಸಲಿಡಬೇಕಾದ ಅವಧಿ, ಯಾವ ವಿಷಯಕ್ಕೆ ಎಷ್ಟು ಆದ್ಯತೆ ನೀಡಬೇಕು ಎಂಬುದನ್ನು ನಿರ್ಧರಿಸಿ ಅದಕ್ಕೆ ಅನುಗುಣವಾಗಿ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಿ. ಬೇರೆಯವರ ವೇಳಾಪಟ್ಟಿಯನ್ನು ನಕಲು ಮಾಡದೇ ನಿಮ್ಮ ಆದ್ಯತೆ, ಭಿನ್ನತೆಗೆ ಅನುಗುಣವಾದ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಿ.

ಈ ಸಮಯದಲ್ಲಿ ಏನು ಓದಬೇಕು? ಎಷ್ಟು ಓದಬೇಕು? ಪ್ರಶ್ನೆಗಳ ಸ್ವರೂಪ ಹೇಗಿರುತ್ತದೆ? ಎಂಬುದನ್ನು ಗಮನಿಸಿ.


ಶಾಲಾ ಅವಧಿಯ ದಿನಗಳಲ್ಲಿ ಪ್ರತಿದಿನ ಕನಿಷ್ಠ 6 ಗಂಟೆ ಅಧ್ಯಯನ ಅಗತ್ಯ:

ನಿರ್ಣಾಯಕವಾದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಭಾಷಾ ವಿಷಯಗಳೂ ಸೇರಿ ಆರು ವಿಷಯಗಳ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಹೀಗಾಗಿ, ಆ ಆರೂ ವಿಷಯಗಳ ಅಧ್ಯಯನಕ್ಕೆ ಸಂಬಂಧಿಸಿ ವೇಳಾಪಟ್ಟಿ ಹಾಕಿಕೊಳ್ಳಿ. ತಜ್ಞರ ಅಭಿಪ್ರಾಯದಂತೆ ಶಾಲಾ ಅವಧಿಯ ದಿನಗಳಲ್ಲಿ  ಬೆಳಗ್ಗೆ ಕನಿಷ್ಠ 3 ಗಂಟೆ, ಸಂಜೆ ಕನಿಷ್ಠ 3 ಗಂಟೆ ಅಧ್ಯಯನಕ್ಕೆ ಮೀಸಲಿಡುವುದು ಅಗತ್ಯ. ನಿಮ್ಮ ಆಸಕ್ತಿಗೆ ಅನುಗುಣವಾಗಿ ಒಂದು ದಿನಕ್ಕೆ ಒಂದೇ ವಿಷಯವನ್ನು ಅಧ್ಯಯನ ಮಾಡಿ ಅಥವಾ ಪ್ರತಿ ವಿಷಯಕ್ಕೂ ಪ್ರತಿದಿನ ನಿಗದಿತ ಸಮಯವನ್ನು ಮೀಸಲಿಡಿ. ರಜಾ ದಿನಗಳಲ್ಲಿ ಹೆಚ್ಚಿನ ಅಧ್ಯಯನ ಅವಶ್ಯವಿರುವ ಅಥವಾ ಕ್ಲಿಷ್ಟ ವಿಷಯಗಳ ಅಧ್ಯಯನಕ್ಕೆ ಮೀಸಲಿಡಿ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಒಂದು ಪರೀಕ್ಷೆ ಮುಗಿದ ನಂತರ ಸಾಮಾನ್ಯವಾಗಿ 2-3 ದಿನ ರಜೆ ಇರುತ್ತದೆ. ಈ ಅವಧಿಯಲ್ಲಿ ಮುಂಬರುವ ಪರೀಕ್ಷಾ ವಿಷಯದ ಸಿದ್ಧತೆಗೆ ಆದ್ಯತೆ ನೀಡಿ. ಆ ವಿಷಯ ನಿಮಗೆ ಸುಲಭವಾಗಿದ್ದರೆ ಇತರ ವಿಷಯಗಳ ಮೇಲೂ ನೀವು ಕಣ್ಣಾಡಿಸಿ.

ಅಧ್ಯಯನದ ನಡುವೆ ಅಲ್ಪವಿರಾಮವಿರಲಿ:
ಯಾವುದೇ ಕಾರಣಕ್ಕೂ ಹಲವು ಗಂಟೆಗಳ ಸತತ ಅಧ್ಯಯನ ಮಾಡದಿರಿ. ಇದರಿಂದ ಏಕತಾನತೆ, ಒತ್ತಡ ಹೆಚ್ಚಿ, ಏಕಾಗ್ರತೆಗೆ ಭಂಗವಾಗುತ್ತದೆ. ಒಂದು ಗಂಟೆಯ ಅಧ್ಯಯನದ ನಂತರ ಕನಿಷ್ಠ ಐದು ನಿಮಿಷ ವಿರಾಮ ಪಡೆದುಕೊಳ್ಳಿ. ಸಣ್ಣಪುಟ್ಟ ವ್ಯಾಯಾಮ ಮಾಡಿ, ಕೆಲ ಹೊತ್ತು ಓಡಾಡಿ. ಇಷ್ಟವಾದ ಸಂಗೀತ ಕೇಳಿ, ನೀರು ಕುಡಿದು ನಿರಮ್ಮಳರಾಗಿ. ರಾತ್ರಿ ನಿದ್ದೆಗೆಟ್ಟು ಓದುವುದಕ್ಕಿಂತ, ಬೆಳಗ್ಗೆ ಬೇಗ ಎದ್ದು ಓದುವುದು ಉತ್ತಮ. ಪರೀಕ್ಷೆ ಸಮೀಪಿಸುತ್ತಿದ್ದಂತೆ ನಿಮ್ಮ ದೇಹಕ್ಕೆ, ವಿಶೇಷವಾಗಿ ಮೆದುಳಿಗೆ ವಿಶ್ರಾಂತಿ ಅಗತ್ಯ. ನಿಮ್ಮ ವಯಸ್ಸಿಗೆ ಕನಿಷ್ಠ ಆರು ಗಂಟೆ ನಿದ್ರೆ ಅವಶ್ಯ.

ಹೀಗಿರಲಿ ಅಧ್ಯಯನ ಕೊಠಡಿ...

l ಅಧ್ಯಯನಕ್ಕೆ ಸಾಕಷ್ಟು ಗಾಳಿ, ಬೆಳಕು, ಕೂರಲು ಸಮರ್ಪಕ ಸ್ಥಳ ಇರುವ ಜಾಗ / ಕೊಠಡಿಯನ್ನು ಆಯ್ದುಕೊಳ್ಳಿ.

l ವೇಳಾಪಟ್ಟಿಯನ್ನು ನಿಮ್ಮ ಅಧ್ಯಯನ ಕೊಠಡಿಯಲ್ಲಿ ನಿಮ್ಮ ಕಣ್ಣಿಗೆ ಬೀಳುವಂತೆ ತೂಗಿಹಾಕಿಕೊಳ್ಳಿ.

l ಅಗತ್ಯವಾಗಿರುವ ಪಠ್ಯಪುಸ್ತಕ, ತರಗತಿಯಲ್ಲಿ ಬರೆದುಕೊಂಡ ಟಿಪ್ಪಣಿ, ಪೂರಕ ಅಧ್ಯಯನ ಸಾಮಗ್ರಿ ಇವೆಲ್ಲವುಗಳನ್ನೂ ಸುಲಭವಾಗಿ ಸಿಗುವಂತೆ ನಿಮ್ಮ ಅಧ್ಯಯನ ಸ್ಥಳದಲ್ಲಿ ವಿಷಯವಾರು ಜೋಡಿಸಿಟ್ಟುಕೊಳ್ಳಿ.

l ಮಹತ್ವದ ಪ್ರಮೇಯಗಳು, ಸೂತ್ರಗಳು, ವಿಜ್ಞಾನದ ಪ್ರಯೋಗಗಳು, ಜೀವಶಾಸ್ತ್ರದ ಚಿತ್ರಗಳು, ನಕ್ಷೆಗಳನ್ನು ಒಳಗೊಂಡ ಚಾರ್ಟ್‌ಗಳನ್ನು ನಿಮ್ಮ ಅಧ್ಯಯನ ಸ್ಥಳದ ಗೋಡೆಗಳಿಗೆ ನೇತುಹಾಕಿ. ಆಗಾಗ ಅವುಗಳ ಮೇಲೆ ಕಣ್ಣಾಡಿಸಿ.
 
 

ಪರೀಕ್ಷೆಯ ದಿನಗಳು ಹತ್ತಿರ ಬಂದಂತೆ ಓದಿನ ಸಮಯವನ್ನು ದಿಢೀರ್‌ ಹೆಚ್ಚಿಸುವುದು ಖಂಡಿತ ಒಳ್ಳೆಯದಲ್ಲ. ಅಧ್ಯಯನ ರಜೆಯ ಸಮಯದಲ್ಲಿ ದಿನದ 24 ಗಂಟೆಗಳನ್ನೂ ಸರಿಯಾದ ರೀತಿಯಲ್ಲಿ ವಿಭಾಗಿಸಿಕೊಳ್ಳಿ. ಉದಾಹರಣೆಗೆ: 12 ಗಂಟೆ ಓದು, ಏಳು ಗಂಟೆ ನಿದ್ರೆ, ಊಟಕ್ಕೆ ಒಂದು ಗಂಟೆ, ಮನರಂಜನೆಗೆ ಒಂದು ಗಂಟೆ, ದಿನ ನಿತ್ಯದ ಕೆಲಸಗಳಿಗೆ ಒಂದು ಗಂಟೆ, ಇನ್ನುಳಿದ ಎರಡು ಗಂಟೆಯನ್ನು ಕುಟುಂಬದ ಸದಸ್ಯರ ಜೊತೆ ಕಳೆಯಲು ನಿಗದಿಪಡಿಸಿಕೊಳ್ಳಿ. ಓದಿನ ಹನ್ನೆರಡು ಗಂಟೆಗಳನ್ನು ಸಮನಾಗಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಎಂದು ನಾಲ್ಕು ಭಾಗಗಳಲ್ಲಿ ವಿಭಾಗಿಸಿಕೊಳ್ಳಿ. ಅದರಲ್ಲಿ ಆಯಾ ವಿಷಯವಾರು ಓದು, ಬರವಣಿಗೆ ಮತ್ತು ಪುನಾರಾವರ್ತನೆಗೆ ಸಮಯ ಮೀಸಲಿಡಿ. ನೀವು ಹಾಕಿಕೊಂಡ ವೇಳಾಪಟ್ಟಿಯನ್ನು ಪ್ರಾಮಾಣಿಕವಾಗಿ ಪಾಲಿಸಿ.
- ಮೋಹನ ದಂಡಿನ, ಕ್ಷೇತ್ರ ಶಿಕ್ಷಣಾಧಿಕಾರಿ, ಸವದತ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT