ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಬರಲ್ ಸೈನ್ಸ್: ವಿಜ್ಞಾನ, ಕಲೆಯ ಸಮ್ಮಿಲನ

Last Updated 16 ಮೇ 2021, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಭಾರತದಲ್ಲಿ ಜನಪ್ರಿಯವಾಗಿರುವ ಲಿಬರಲ್‌ ಸೈನ್ಸ್‌ ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನ, ಕಲಾ ವಿಷಯಗಳನ್ನು ಒಟ್ಟುಗೂಡಿಸಿ ಕಲಿಯುವ ಒಂದು ವಿಶಿಷ್ಟ ಮಾದರಿ. ಇದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲೂ ನೆರವಿಗೆ ಬರುತ್ತದೆ.

ಸ್ವಾತಂತ್ರ್ಯ ಬಂದಾಗಿನಿಂದಲೂ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ಆಗುತ್ತಲೇ ಬಂದಿವೆ. ಪ್ರತೀ ದಶಕದಲ್ಲೂ ಆಯಾ ಸಾಮಾಜಿಕ ಬದಲಾವಣೆಗಳಿಗೆ ಅನುಗುಣವಾಗಿ ಕಲಿಕೆ, ಕಲಿಕಾ ವಿಧಾನಗಳು ಮಾರ್ಪಾಡಾಗುತ್ತಿವೆ. 21ನೇ ಶತಮಾನದಲ್ಲಂತೂ ವಿಜ್ಞಾನ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ, ಸಾಧನೆ ಕಂಡುಬರುತ್ತಿದೆ. ಇಂತಹ ಸಾಧನೆಗೆ ಅಂತ್ಯವಿಲ್ಲವೇನೋ ಅನ್ನುವಷ್ಟರ ಮಟ್ಟಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಗಮನ ಸೆಳೆಯುತ್ತಿವೆ. ಇಂತಹ ಸಂಧರ್ಭದಲ್ಲಿ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳದೇ, ಸಾಧನೆಯನ್ನೂ ಬಿಡದೆ, ಇವೆರಡನ್ನೂ ಸರಿದೂಗಿಸಿಕೊಂಡು ಹೋಗುವ ಮನೋಸ್ಥೈರ್ಯ ಹಾಗೂ ಉನ್ನತ ಶಿಕ್ಷಣವನ್ನು ನಮ್ಮ ಮುಂದಿನ ಪೀಳಿಗೆಗೆ ನೀಡಬೇಕಿದೆ. ಇದು ಲಿಬರಲ್ ಸೈನ್ಸ್‌ ಶಿಕ್ಷಣದಿಂದ ಸಾಧ್ಯವಾಗುತ್ತಿದೆ ಎನ್ನಬಹುದು.

ಏನಿದು ಲಿಬರಲ್ ಸೈನ್ಸ್?

ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನ, ಕಲಾ ವಿಷಯಗಳನ್ನು ಒಟ್ಟುಗೂಡಿಸಿ ಕಲಿಯುವ ಒಂದು ವಿಶಿಷ್ಟ ಮಾದರಿ ಈ ಲಿಬರಲ್ ಸೈನ್ಸ್. ವಿಜ್ಞಾನದ ವಿಷಯಗಳನ್ನು ಸಾಮಾಜಿಕ ವಿಜ್ಞಾನ ವಿಷಯಗಳೊಂದಿಗೆ ಸೇರಿಸಿ, ಒಂದು ವಿಷಯದಿಂದ ಇನ್ನೊಂದು ವಿಷಯಕ್ಕೆ ಇರುವ ಕೊಡು ಕೊಳ್ಳುವಿಕೆಯನ್ನು ಅರಿತು, ಉತ್ತಮ ಭಾಷಾ ಪ್ರಾವೀಣ್ಯತೆ, ವಿಮರ್ಶಾತ್ಮಕ ಚಿಂತನೆ, ವಿಶ್ಲೇಷಣಾತ್ಮಕ ತಾರ್ಕಿಕತೆ, ಉತ್ತಮ ಬರಹ ಹೀಗೆ ಜೀವನಕ್ಕೆ ಅಗತ್ಯವಿರುವ ಎಲ್ಲಾ ಕೌಶಲಗಳನ್ನು ಬೆಳೆಸಿಕೊಳ್ಳಲು ಬಲವಾದ ಅಡಿಪಾಯವನ್ನು ನೀಡುವ ಶಿಕ್ಷಣವೇ ಈ ಲಿಬರಲ್ ಸೈನ್ಸ್‌.

ಒಂದು ಕಾಲದಲ್ಲಿ ಮೂಲೆಗುಂಪಾಗಿ ಉಳಿದ ಲಿಬರಲ್ ಶಿಕ್ಷಣ ಇಂದು ಮುಖ್ಯವಾಗಿ ವಿಜ್ಞಾನ ಕ್ಷೇತ್ರದಲ್ಲಿ ಎಲ್ಲಿಲ್ಲದ ಬೇಡಿಕೆ ಪಡೆದಿದೆ. 2009 ರಿಂದ ಈಚೆಗೆ ಎಂಜಿನಿಯರಿಂಗ್ ಓದಿರುವ ಕೋಡಿಂಗ್, ಪ್ರೋಗ್ರಾಮಿಂಗ್.. ಹೀಗೆ ಟೆಕ್ನಾಲಜಿ ಓದಿರುವವರಿಗೆ ಮಾತ್ರ ಬೇಡಿಕೆ ಹೆಚ್ಚಿತ್ತು, ಆದರೀಗ ಕೆಲಸ ಮಾಡಲು ಕೇವಲ ಮಷೀನ್‌ನಂತೆ ಕೇಳುವ ಅಥವಾ ಕೋಡ್ ಬರೆಯುವ ಕೌಶಲವಿದ್ದರೆ ಸಾಲದು, ಜೊತೆಗೆ ಉತ್ಪಾದಿಸುವ ಉತ್ಪನ್ನ ಅಥವಾ ಎಂಡ್ ಪ್ರಾಡಕ್ಟ್‌ ಜನರಿಗೆ ಅನುಕೂಲವೋ ಅಥವಾ ಅನಾನುಕೂಲವೋ ಎಂದು 360 ಕೋನದಲ್ಲಿ ವಿಮರ್ಶಿಸುವ ನಿಪುಣರು ಬೇಕು ಎನ್ನುವುದು ಖ್ಯಾತ ಕಂಪನಿಗಳ ಸಿಇಒ ಗಳ ಅಭಿಪ್ರಾಯ. ಇದು ಸಾಧ್ಯವಾಗುವುದು ಲಿಬರಲ್ ಸೈನ್ಸ್‌ ಶಿಕ್ಷಣದಿಂದ.

ಕೃತಕ ಬುದ್ಧಿಮತ್ತೆ ಅಳವಡಿಕೆಯಲ್ಲಿ ಲಿಬರಲ್‌ ಸೈನ್ಸ್‌

‘ಹೇ ಗೂಗಲ್, ಹೇ ಅಲೆಕ್ಸಾ...’ ಇವೆಲ್ಲ ಚಿಕ್ಕ ಮಗುವಿಗೂ ಚಿರಪರಿಚಿತ. ಕೂತಲ್ಲೇ ಎಲ್ಲಾ ಕಾರ್ಯಗಳನ್ನು ಮಾಡುವ ಈ ಯಂತ್ರಗಳು ನಡೆಯುವುದೇ ಕೃತಕ ಬುದ್ಧಿಮತ್ತೆಯಿಂದ. ಇದು ನಮ್ಮ ಜೀವನದ ಪ್ರತಿಯೊಂದರಲ್ಲೂ ಹಾಸುಹೊಕ್ಕಾಗಲು ಸಿದ್ಧಗೊಳ್ಳುತ್ತಿದೆ. ಇದಕ್ಕೆ ಗಣಿತ ಮತ್ತು ಎಂಜಿನಿಯರಿಂಗ್ ಓದಿದ ನಿಪುಣರ ಜೊತೆಗೆ ಲಿಬರಲ್ ಸೈನ್ಸ್ ಅಂಡ್ ಆರ್ಟ್ಸ್ ಓದಿಕೊಂಡಿರುವ ಪದವೀಧರರೂ ಅಗತ್ಯವಿದ್ದಾರೆ ಎನ್ನುವುದು ಮೈಕ್ರೊಸಾಫ್ಟ್‌ ಸೇರಿ ಹಲವು ಕಂಪನಿಗಳ ಸಿಇಒಗಳ ಅಭಿಪ್ರಾಯ.

ಇನ್ನು ಈಗಾಗಲೇ ಜನಪ್ರಿಯವಾಗಿರುವ ಸ್ವಯಂ ಚಾಲಿತ ಕಾರ್‌ಗಳು ತಂತ್ರಜ್ಞಾನದ ಜೊತೆಗೆ, ಕಾರ್ ಓಡುವಾಗ ಪ್ರಯಾಣಿಕರ ಅಥವಾ ಪಾದಚಾರಿಗಳ ಜೀವನ ಮುಖ್ಯವೋ ಎಂಬಂತಹ ನೈತಿಕ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಅಂತಹ ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿಪಡಿಸುವಲ್ಲಿ ನೈತಿಕ ಸಿದ್ಧಾಂತಗಳ ಜ್ಞಾನ ಅತ್ಯಗತ್ಯ. ಆದರೆ ತತ್ವ– ಚಿಂತನೆಗಳನ್ನು ಕಾರ್ಯಗತಗೊಳಿಸಲು ಕಂಪ್ಯೂಟರ್ ವಿಜ್ಞಾನದ ಜ್ಞಾನದ ಅಗತ್ಯವಿದೆ ಎಂಬುದು ಏಟ್ರಿಯಾ ಲಿಬರಲ್ ಸೈನ್ಸ್ ವಿಶ್ವವಿದ್ಯಾಲಯದ ಸಿಇಒ ಶಹೀಮ್ ರಹಿಮಾನ್ ಅಭಿಪ್ರಾಯ.

ಭಾಷೆ, ಕಲೆ, ಇತಿಹಾಸ, ಅರ್ಥಶಾಸ್ತ್ರ, ನೀತಿಶಾಸ್ತ್ರ, ತತ್ವಶಾಸ್ತ್ರ, ಮನೋವಿಜ್ಞಾನ ಮತ್ತು ಮಾನವ ಅಭಿವೃದ್ಧಿ ಕೋರ್ಸ್‌ಗಳು, ವಿಮರ್ಶಾತ್ಮಕ, ತಾತ್ವಿಕ ಮತ್ತು ನೈತಿಕತೆ ಆಧಾರಿತ ಕೌಶಲಗಳು ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರ, ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಹಕಾರಿಯಾಗಬಲ್ಲವು ಎಂದು ‘ದಿ ಫ್ಯೂಚರ್ ಕಂಪ್ಯೂಟೆಡ್’ ಎಂಬ ಪುಸ್ತಕದಲ್ಲಿ ಉಲ್ಲೇಖವಾಗಿದೆ.

ಕೇವಲ ಎಐ ಮಾತ್ರವಲ್ಲದೆ ಐಒಟಿ, ನ್ಯಾನೋ ಟೆಕ್ನಾಲಜಿ, ಎಆರ್/ವಿಆರ್‌, ರೊಬೊಟಿಕ್ಸ್‌... ಹೀಗೆ ಪ್ರತೀ ತಂತ್ರಜ್ಞಾನವನ್ನೂ ಗ್ರಾಹಕರಿಗೆ ಅನುಗುಣವಾಗುವಂತೆ ನಿರ್ಮಿಸಿದಾಗ ಮಾತ್ರ ಸಮಾಜದಲ್ಲಿರುವ ಸಮಸ್ಯೆಗಳು ಬಗೆಹರಿಯಲು ಸಾಧ್ಯ. ಹೀಗಾಗಿ ವಿಜ್ಞಾನ ಹಾಗೂ ವಿಜ್ಞಾನೇತರ ವಿಷಯಗಳ ಸಮ್ಮಿಲನ ಈಗಿನ ಅಗತ್ಯವಾಗಿದೆ.

ಲಿಬರಲ್‌ ಸೈನ್ಸ್‌ನಲ್ಲಿ ಮುಖ್ಯವಾಗಿ ಸಾಹಿತ್ಯ, ಇತಿಹಾಸ, ಭಾಷೆ, ಫಿಲಾಸಫಿ, ಗಣಿತ ಮತ್ತು ಜನರಲ್‌ ಸೈನ್ಸ್‌ ವಿಷಯಗಳಿರುತ್ತವೆ. ಇದರ ಜೊತೆ ಕೆಲವು ಕಡೆ ಮನಶ್ಶಾಸ್ತ್ರ, ಖಗೋಳ ಶಾಸ್ತ್ರ, ಸಂಗೀತವನ್ನೂ ಸೇರಿಸಲಾಗಿದೆ. ಮುಖ್ಯವಾಗಿ ವಿದ್ಯಾರ್ಥಿಗೆ ತನಗೆ ಬೇಕಾದ ವಿಷಯಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವಿರುತ್ತದೆ. ಅಂದರೆ ಬಯಾಲಜಿಕಲ್‌ ಸೈನ್ಸ್‌, ಫಿಸಿಕಲ್‌ ಸೈನ್ಸ್‌, ಸೋಷಿಯಲ್‌ ಸೈನ್ಸ್‌ ಅಲ್ಲದೇ ಹ್ಯೂಮಾನಿಟೀಸ್‌ನಲ್ಲಿರುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ವಿದೇಶಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿದ್ದ ಈ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳು ಈಗ ಬೆಂಗಳೂರು ಸೇರಿದಂತೆ ದೇಶದ ವಿವಿಧ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕೂಡ ಲಭ್ಯ.

ಲಿಬರಲ್‌ ಸೈನ್ಸ್‌ನಲ್ಲಿ ಪದವಿ ಪಡೆದವರು ಪತ್ರಕರ್ತ, ಕಾಪಿ ರೈಟರ್‌, ಮ್ಯಾನೇಜರ್‌, ಎಚ್‌ಆರ್‌, ಗ್ರಂಥಾಲಯ ಅಧಿಕಾರಿಯಾಗಿಯಲ್ಲದೇ, ಜಾಹೀರಾತು ಕಂಪನಿಯಲ್ಲಿ, ತಂತ್ರಜ್ಞಾನ ಕಂಪನಿಯಲ್ಲಿ ಉದ್ಯೋಗಿಯಾಗಿ, ಕಾಲೇಜು ಶಿಕ್ಷಕರಾಗಿ ವೃತ್ತಿಗೆ ಸೇರಬಹುದು.

( ಲೇಖಕಿ: ಸಹಾಯಕ ನಿರ್ದೇಶಕಿ, ಅಕಾಡೆಮಿಕ್‌ ವಿಭಾಗ, ಏಟ್ರಿಯಾ ವಿಶ್ವವಿದ್ಯಾಲಯ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT