ಬುಧವಾರ, ಮಾರ್ಚ್ 22, 2023
19 °C

ವಿದೇಶದಲ್ಲಿ ಎಂ.ಎಸ್‌: ಪ್ರವೇಶ, ಸ್ಕಾಲರ್‌ಶಿಪ್‌ ಹೇಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

*ನಾನು ಅಂತಿಮ ವರ್ಷದ ಸಿವಿಲ್ ಎಂಜಿನಿಯರಿಂಗ್ ಮಾಡುತ್ತಿದ್ದೇನೆ. ಜರ್ಮನಿಯ ವಿಶ್ವವಿದ್ಯಾಲಯದಲ್ಲಿ ಎಂಎಸ್ ಸಿವಿಲ್ ಎಂಜಿನಿಯರಿಂಗ್ ಮಾಡಲು ಯೋಜಿಸಿದ್ದೇನೆ. ಪ್ರವೇಶ ನಿಯಮಾವಳಿಗಳಲ್ಲದೆ, ಹಿಂದುಳಿದ ಜಾತಿಗೆ ಲಭ್ಯವಿರುವ ಸ್ಕಾಲರ್‌ಶಿಪ್ ಬಗ್ಗೆ ತಿಳಿಸಿ.

-ಪುಷ್ಯ ಶ್ರೀ ಕೆ.ಜೆ., ಊರು ತಿಳಿಸಿಲ್ಲ

ಸಾಮಾನ್ಯವಾಗಿ ಜರ್ಮನಿಯ ಸ್ನಾತಕೋತ್ತರ ಸಿವಿಲ್ ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ನಾಲ್ಕು ಸೆಮಿಸ್ಟರ್‌ಗಳಿರುತ್ತವೆ. ಆನ್‌ಲೈನ್ ಅರ್ಜಿ ಸಲ್ಲಿಸಿದ ನಂತರ ನಿಮ್ಮ ಅರ್ಹತೆಯ ಆಧಾರದ ಮೇಲೆ ಮುಂದಿನ ಪ್ರಕ್ರಿಯೆ ಅಂದರೆ ಸಂದರ್ಶನ, ಆ್ಯಪ್ಟಿಟ್ಯೂಡ್ ಟೆಸ್ಟ್ ಮಾಡಲಾಗುತ್ತದೆ. ಇಂಗ್ಲೀಷ್ ಭಾಷಾ ಪರಿಣತಿಗೆ ಐಇಎಲ್‌ಟಿಎಸ್‌ನಂತಹ ಪರೀಕ್ಷೆಯಲ್ಲಿ ಪಾಸಾಗಿರಬೇಕು.

ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಅರ್ಹತೆ ಮತ್ತು ಆದಾಯವನ್ನು ಪರಿಗಣಿಸಿ ಸ್ಕಾಲರ್‌ಶಿಪ್ ಸೌಲಭ್ಯಗಳು ಲಭ್ಯವಿರುತ್ತವೆ. ಜೊತೆಗೆ ಸಹಾಯಧನ, ಅರೆಕಾಲಿಕ ನೌಕರಿಗಳಂತಹ ಸೌಲಭ್ಯಗಳೂ ಇವೆ. ಅನೇಕ ಖಾಸಗಿ ಸಂಸ್ಥೆಗಳೂ ವಿದ್ಯಾರ್ಥಿಗಳಿಗೆ ನೆರವಾಗುವ ಕಾರ್ಯದಲ್ಲಿ ವಿಶ್ವವಿದ್ಯಾಲಯಗಳ ಜೊತೆ ಕೈಗೂಡಿಸಿವೆ. ಹೆಚ್ಚಿನ ವಿವರಗಳಿಗಾಗಿ ನೀವು ಸೇರ ಬಯಸುವ ವಿಶ್ವವಿದ್ಯಾಲಯದ ವೆಬ್‌ಸೈಟ್‌ ಅನ್ನು ಪರಿಶೀಲಿಸಿ.

ಇದಲ್ಲದೆ, ಕೇಂದ್ರ ಸರ್ಕಾರದ ನ್ಯಾಷನಲ್ ಓವರ್‌ಸೀಸ್ ಸ್ಕಾಲರ್‌ಶಿಪ್ ಸ್ಕೀಮ್ ಅಡಿಯಲ್ಲಿಯೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಸೌಲಭ್ಯವಿದೆ. ಹೆಚ್ಚಿನ ವಿವರಗಳಿಗಾಗಿ ಕೇಂದ್ರ ಸರ್ಕಾರದ ಸೋಷಿಯಲ್ ಜಸ್ಟೀಸ್ ಅಂಡ್ ಎಂಪವರ್‌ಮೆಂಟ್ ಇಲಾಖೆಯ ವೆಬ್‌ಸೈಟ್ ಅನ್ನು ಪರಿಶೀಲಿಸಿ.

*ಬಿಟೆಕ್ (ಎಐ ಮತ್ತು ಮಷಿನ್ ಲರ್ನಿಂಗ್) ಮತ್ತು ಬಿಟೆಕ್ (ಡೇಟಾ ಸೈನ್ಸ್) ಕೋರ್ಸ್‌ಗಳ ಬಗ್ಗೆ ಮಾಹಿತಿಯನ್ನು ತಿಳಿಸಿ. 

-ಹೆಸರು, ಊರು ತಿಳಿಸಿಲ್ಲ

ಇತ್ತೀಚಿನ ವರ್ಷಗಳಲ್ಲಿ ಎಐ, ಮಷಿನ್ ಲರ್ನಿಂಗ್, ಡೇಟಾ ಸೈನ್ಸ್ ತಂತ್ರಜ್ಞಾನಗಳ ಬಳಕೆ ಉದ್ಯಮಗಳಲ್ಲಿ ಹೆಚ್ಚಾಗಿವೆ. ಏಕೆಂದರೆ, ಗ್ರಾಹಕರ ಅನುಭವವನ್ನು ಬದಲಾಯಿಸಿ ಅಥವಾ ಹೆಚ್ಚಿಸಿ, ಉದ್ಯಮಗಳು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಈ ತಂತ್ರಜ್ಞಾನಗಳು ನೆರವಾಗುತ್ತವೆ. ವಿಶೇಷವಾಗಿ, ಈಗ ಕ್ಷಿಪ್ರವಾಗಿ ಅಭಿವೃದ್ಧಿಯಾಗುತ್ತಿರುವ ಬ್ಯಾಂಕಿಂಗ್, ಫೈನಾನ್ಸ್, ಇನ್ಶೂರೆನ್ಸ್, ಇ-ಕಾಮರ್ಸ್, ಆರೋಗ್ಯ, ಮನರಂಜನೆ, ರಿಟೇಲ್, ಒಟಿಟಿ ಕ್ಷೇತ್ರಗಳಲ್ಲಿ ಇದರ ಬಳಕೆ ಮತ್ತು ವ್ಯಾಪ್ತಿ ಹೆಚ್ಚುತ್ತಿದೆ. ಹಾಗಾಗಿ ಈ ವಿಷಯಗಳಿಗೆ ಸಂಬಂಧಿತ ಕೋರ್ಸ್‌ಗಳ ಪದವೀಧರರಿಗೆ ಸ್ವಾಭಾವಿಕವಾಗಿಯೇ ಬೇಡಿಕೆ ಹೆಚ್ಚಾಗಿದೆ. ಈ ಕ್ಷೇತ್ರದಲ್ಲಿನ ಉದ್ಯೋಗಿಗಳು ತಮ್ಮ ವೃತ್ತಿ ಸಂಬಂಧಿತ ಜ್ಞಾನ ಮತ್ತು ಕೌಶಲಗಳನ್ನು ಆಗಾಗ ಪರಿಷ್ಕರಿಸುತ್ತಿರಬೇಕು.

*ನಾನು ಬಿಎಸ್‌ಸಿ (ಸಿಬಿಝಡ್‌) ಆದ ಮೇಲೆ ಎಂಎ ಮಾಡಬಹುದೆ?

-ಹೆಸರು, ಊರು ತಿಳಿಸಿಲ್ಲ

ಸಾಮಾನ್ಯವಾಗಿ ಪದವಿಯಲ್ಲಿ ಓದಿರುವ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಮಾಡಬಹುದು. ಹಾಗಾಗಿ ಆಯಾ ವಿಷಯಗಳಿಗೆ ಸಂಬಂಧಿಸಿದಂತೆ ನಿಯಮಾವಳಿಗಳಿವೆ. ಆದರೂ, ಬಿಎಸ್‌ಸಿ (ಸಿಬಿಝಡ್‌) ಆದ ಮೇಲೆ ಕೆಲವು ನಿಯಮಿತ ವಿಷಯಗಳಲ್ಲಿ ಮಾತ್ರ ಎಂಎ ಮಾಡುವ ಅವಕಾಶಗಳಿವೆ. ಉದಾಹರಣೆಗೆ, ಮೈಸೂರು ವಿಶ್ವವಿದ್ಯಾಲಯದಲ್ಲಿ ಅನೇಕ ವಿಷಯಗಳಲ್ಲಿ ನೀವು ಎಂಎ ಮಾಡುವ ಸಾಧ್ಯತೆಯಿದೆ.

ಈಗ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ (2020) ಯಂತೆ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಪದವಿಗಳ ಉದ್ದೇಶ, ನಿಯಮ ಮತ್ತು ಪ್ರವೇಶ ಪ್ರಕ್ರಿಯೆಯಲ್ಲಿ ತೀವ್ರವಾದ ಬದಲಾವಣೆಗಳಿವೆ. ಆದರೆ, ಅನುಷ್ಠಾನದ ಪ್ರಕ್ರಿಯೆ ಈಗಷ್ಟೇ ಶುರುವಾಗುತ್ತಿದೆ. ಹಾಗಾಗಿ, ಯಾವ ವಿಷಯದಲ್ಲಿ ನೀವು ಎಂಎ ಮಾಡಬೇಕೆಂದು ನಿರ್ಧರಿಸಿ, ನಿಖರವಾದ ಮಾಹಿತಿಗಾಗಿ ನೀವು ಇಚ್ಛಿಸಿರುವ ವಿಶ್ವವಿದ್ಯಾಲಯದಲ್ಲಿ ವಿಚಾರಿಸಿ.

***

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣ ತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು