ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಇ-ವಿಧಾನ್: ಕಾಗದರಹಿತ ಸಂಸದೀಯ ವ್ಯವಹಾರಗಳತ್ತ ಒಂದು ಮಹತ್ವದ ಹೆಜ್ಜೆ

Published 31 ಮೇ 2023, 23:31 IST
Last Updated 31 ಮೇ 2023, 23:31 IST
ಅಕ್ಷರ ಗಾತ್ರ

–ಯು.ಟಿ. ಆಯಿಶ ಫರ್ಝಾನ

ಯಪಿಎಸ್‌ಸಿ -ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ- 2, ಕೆಪಿಎಸ್‌ಸಿ –ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-2 ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ಮಾಹಿತಿ ಇಲ್ಲಿದೆ.

ಸಂಸದೀಯ ವ್ಯವಹಾರಗಳ ಸಚಿವಾಲಯವು 2023ರ ಮೇ 24 ಮತ್ತು 25 ರಂದು ನವದೆಹಲಿಯ ಹೋಟೆಲ್ ಅಶೋಕ್‌ದ  ಕನ್ವೆನ್ಷನ್ ಹಾಲ್‌ನಲ್ಲಿ ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಶನ್ – ’ನೇವಾ’ (National e Vidhan Application– NeVA) ಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಿತ್ತು.

ಈ ಕಾರ್ಯಾಗಾರದ ಉದ್ದೇಶ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗದಲ್ಲಿ NeVA ಪ್ಲಾಟ್‌ಫಾರ್ಮ್‌  ಬಳಸಲು ಪ್ರೋತ್ಸಾಹಿಸುವುದು ಮತ್ತು ತಂತ್ರಜ್ಞಾನದ ಸಶಕ್ತ ಬಳಕೆಯ ಮೂಲಕ ವಿಧಾನಮಂಡಲಗಳು ಹಾಗೂ ಸಂಸತ್ತಿನ ವ್ಯವಹಾರಗಳಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ತ್ವರಿತ ಸ್ಪಂದಿಸುವಿಕೆಯನ್ನು ತರಲು ಪ್ರೇರೇಪಿಸುವುದಾಗಿತ್ತು.

ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಶನ್ 

* ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಶನ್ (NeVA) ಎನ್ನುವುದು ಭಾರತ ಸರ್ಕಾರದ ‘ಡಿಜಿಟಲ್ ಇಂಡಿಯಾ ಪ್ರೋಗ್ರಾಂ’ ಅಡಿಯಲ್ಲಿ ಬರುವ 44 ಮಿಷನ್ ಮೋಡ್ ಯೋಜನೆಗಳಲ್ಲಿ (MMPs) ಒಂದಾಗಿದೆ.

* ಇದು ಎಲ್ಲಾ ರಾಜ್ಯಗಳ ಶಾಸಕಾಂಗ ಹಾಗೂ ಸಂಸತ್ತಿನ ಪತ್ರವ್ಯವಹಾರಗಳ ಕಾರ್ಯನಿರ್ವಹಣೆಯನ್ನು 'ಡಿಜಿಟಲ್ ಹೌಸ್' ಆಗಿ ಪರಿವರ್ತಿ ಸುವ ಮೂಲಕ ಕಾಗದರಹಿತ ಕಚೇರಿಯನ್ನಾಗಿಸುವ ಗುರಿಯನ್ನು ಹೊಂದಿದೆ.

* NeVA ಎನ್ನುವುದು ಎನ್‌ಐಸಿ (NIC) ಕ್ಲೌಡ್ ಮೇಘರಾಜ್‌ನಲ್ಲಿ ನಿಯೋಜಿಸಲಾದ ಕಾರ್ಯವ್ಯವಸ್ಥೆ. ಇದು ಸದನದ ಕಲಾಪಗಳನ್ನು ಸುಗಮವಾಗಿ ನಡೆಸಲು ಸದನದ ಅಧ್ಯಕ್ಷರಿಗೆ ಸಹಾಯ ಮಾಡುತ್ತದೆ. ಜೊತೆಗೆ, ಶಾಸಕಾಂಗದ ಸದಸ್ಯರು ಸದನದಲ್ಲಿ ತಮ್ಮ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ಶಾಸಕಾಂಗದ ವ್ಯವಹಾರಗಳನ್ನು ಕಾಗದ ರಹಿತ ಮಾದರಿಯಲ್ಲಿ ನಡೆಸಲು ಅನುಕೂಲಕಾರಿಯಾಗಿದೆ.

* NeVA ಯುನಿಕೋಡ್ ಬೆಂಬಲಿತ ಸಾಫ್ಟ್‌ವೇರ್ ಆಗಿದ್ದು, ಪ್ರಶ್ನೆಗಳ ಪಟ್ಟಿ, ವ್ಯವಹಾರದ ಪಟ್ಟಿ, ವರದಿಗಳು ಇತ್ಯಾದಿಗಳನ್ನು ಇಲ್ಲೇ ಸುಲಭವಾಗಿ ಪಡೆಯಬಹುದು. ಇಂಗ್ಲಿಷ್ ಮತ್ತು ಯಾವುದೇ ಪ್ರಾದೇಶಿಕ ಭಾಷೆಗಳಲ್ಲಿ ಈ ದಾಖಲೆಗಳನ್ನು ಪಡೆಯಬಹುದಾಗಿದೆ.

* ಈ ಅಪ್ಲಿಕೇಶನ್ ಅನ್ನು ಕ್ಲೌಡ್ ಫಸ್ಟ್ ಮತ್ತು ಮೊಬೈಲ್ ಫಸ್ಟ್ ಎಂಬ ತತ್ವದೊಂದಿಗೆ ‘ಒನ್ ನೇಷನ್-ಒನ್ ಅಪ್ಲಿಕೇಶನ್’ ಪರಿಕಲ್ಪನೆಯೊಂದಿಗೆ ಪರಿಚಯಿಸಲಾಗಿದೆ.

* NeVA ಎನ್ನುವುದು ಶಾಸಕಾಂಗದ ಸದಸ್ಯರ ದೂರವಾಣಿ ಸಂಖ್ಯೆ, ವಿಳಾಸ, ಕಾರ್ಯವಿಧಾನದ ನಿಯಮಗಳು, ವ್ಯವಹಾರದ ಪಟ್ಟಿ, ಸೂಚನೆಗಳು, ಬುಲೆಟಿನ್‌ಗಳು, ಬಿಲ್‌ಗಳು, ಚುಕ್ಕೆ ಗುರುತಿನ ಪ್ರಶ್ನೆಗಳು, ಚುಕ್ಕೆ ಹಾಕದ ಪ್ರಶ್ನೆಗಳು ಮತ್ತು ಉತ್ತರಗಳು, ಇತರ ಪತ್ರವ್ಯವಹಾರಗಳು ಮತ್ತು ಸಮಿತಿಯ ವರದಿಗಳು ಮುಂತಾದವುಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಹಾಕುವ ಮೂಲಕ ಎಲ್ಲಾ ಕಲಾಪಗಳು ಹಾಗೂ ವ್ಯವಹಾರಗಳನ್ನು ಅಚ್ಚುಕಟ್ಟಾಗಿ ಸುಲಭಮಾದರಿಯಲ್ಲಿ ನಿರ್ವಹಿಸಲು ರಚಿಸಲಾದ ಅಪ್ಲಿಕೇಶನ್ ಆಗಿದೆ.

* ಮೊಬೈಲ್ ಅಥವಾ ಟ್ಯಾಬ್ಲೆಟ್‌ಗಳ ಮೂಲಕವೇ ಶಾಸಕಾಂಗದ ಸದಸ್ಯರು ಹಾಗೂ ಇತರ ಸಂಬಂಧಿತ ಇಲಾಖೆಗಳ ಕಾರ್ಯನಿರ್ವಹಣೆಯ ಬಗ್ಗೆ ಅಪ್ ಡೇಟ್ ಆಗಿರಲು ಸಹಾಯಕವಾಗಿದೆ. ಮಾಹಿತಿ ಸಂಗ್ರಹಣೆಗಾಗಿ ಸೂಚನೆ ಕಳಿಸುವ, ವಿನಂತಿಯನ್ನು ಕಳುಹಿಸುವ, ಸುತ್ತೋಲೆ ಹೊರಡಿಸುವ ಕ್ಲಿಷ್ಟ ಪ್ರಕ್ರಿಯೆಯನ್ನು NeVA ಸಂಪೂರ್ಣವಾಗಿ ತೆಗೆದುಹಾಕುತ್ತದೆ.

* ಸದನದ ಸದಸ್ಯರು ಪ್ರಶ್ನೆಗಳು ಮತ್ತು ಇತರ ಸೂಚನೆಗಳನ್ನು ಈ ಅಪ್ಲಿಕೇಶನ್ ಮೂಲಕವೇ ಸಲ್ಲಿಸಬಹುದಾಗಿದೆ.

* ದೇಶದ ಎಲ್ಲಾ ಶಾಸಕಾಂಗಗಳನ್ನು ಒಂದೇ ವೇದಿಕೆಯಡಿಯಲ್ಲಿ ತಂದು ಆ ಮೂಲಕ ಬೃಹತ್ ಮತ್ತು ನಿಖರವಾದ ಡೇಟಾ ಶೇಖರಣೆಯನ್ನು ರಚಿಸುವುದು ಹಾಗೂ ಅದರ ಸಲುವಾಗಿ ಬಹು ಅಪ್ಲಿಕೇಶನ್‌ಗಳನ್ನು ಹೊಂದುವ ಗೋಜಲುಗಳಿಗೆ ಕಡಿವಾಣ ಹಾಕುವುದು ಈ ಯೋಜನೆಯ ಉದ್ದೇಶವಾಗಿದೆ.

* 25ನೇ ನವೆಂಬರ್ 2021 ರಂದು ಸಂಪೂರ್ಣವಾಗಿ ’ನೇವಾ’ ಪ್ಲಾಟ್‌ಫಾರ್ಮ್‌ ಅನ್ನು ಬಳಸಿದ ದೇಶದ ಮೊದಲ ಸದನ ಎಂಬ ಹೆಗ್ಗಳಿಕೆಗೆ ಬಿಹಾರ ವಿಧಾನ ಪರಿಷತ್ತು ಪಾತ್ರವಾಗಿದೆ.

* ಇಲ್ಲಿಯವರೆಗೆ 21 ರಾಜ್ಯ ಶಾಸಕಾಂಗಗಳು ’ನೇವಾ’ ಅನುಷ್ಠಾನಕ್ಕಾಗಿ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿವೆ. ಈ ಯೋಜನೆಯನ್ನು 17 ಶಾಸಕಾಂಗಗಳಿಗೆ ಮಂಜೂರು ಮಾಡಲಾಗಿದ್ದು ಯೋಜನೆಯ ಅನುಷ್ಠಾನಕ್ಕಾಗಿ ಅದಾಗಲೇ ಹಣವನ್ನು ಬಿಡುಗಡೆ ಮಾಡಲಾಗಿದೆ.

* ಅವುಗಳಲ್ಲಿ 9 ಶಾಸಕಾಂಗಗಳು ಈಗಾಗಲೇ ಸಂಪೂರ್ಣ ಡಿಜಿಟಲ್ ಆಗಿದ್ದು ’ನೇವಾ’ (NeVA) ಪ್ಲಾಟ್‌ಫಾರ್ಮ್‌ನಲ್ಲಿ ಲೈವ್ ಆಗಿವೆ. ಈ ಶಾಸಕಾಂಗಗಳು ತಮ್ಮ ಎಲ್ಲಾ ವ್ಯವಹಾರವನ್ನು ಡಿಜಿಟಲ್ ಮತ್ತು ಕಾಗದರಹಿತ ಮಾದರಿಯಲ್ಲಿ ನಡೆಸುತ್ತಿವೆ.

* NeVA ಅಪ್ಲಿಕೇಷನ್ ಅನ್ನು ಬಳಸುವುದರ ಮೂಲಕ ಸಾವಿರಾರು ಟನ್ ಪೇಪರ್‌ಗಳನ್ನು ಉಳಿಸಲಾಗುತ್ತಿದೆ. ಈ‌ ಮೂಲಕ ವಾರ್ಷಿಕವಾಗಿ ಲಕ್ಷಗಟ್ಟಲೆ ಮರಗಳನ್ನು ಉಳಿಸಲು ಸಹಾಯವಾಗುತ್ತಿದೆ. ಈ ಉಪಕ್ರಮವು ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮಗಳ(ಯುಎನ್‌ಡಿಪಿ) ಸುಸ್ಥಿರ ಅಭಿವೃದ್ಧಿ ಗುರಿಗಳನ್ನು(ಎಸ್‌ಡಿಜಿ) ತಲುಪುವತ್ತ ಪೂರಕವಾಗಿದ್ದು ಪರಿಸರ ರಕ್ಷಣೆಯತ್ತ ಮತ್ತೊಂದು ಹೆಜ್ಜೆ ಎನ್ನಬಹುದು.

* mNeVA ಎಂಬುದು NeVA ದ ಬಳಕೆದಾರ ಸ್ನೇಹಿ ಮೊಬೈಲ್ ಅಪ್ಲಿಕೇಶನ್ ಆಗಿದ್ದು Android ಮತ್ತು iOS ನಲ್ಲಿ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT