ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಸ್‌ ಆಯ್ಕೆಯಲ್ಲಿ ಗೊಂದಲ ಬೇಡ

Last Updated 27 ನವೆಂಬರ್ 2022, 20:15 IST
ಅಕ್ಷರ ಗಾತ್ರ

1. ನಾನು ಪಿಯುಸಿ ನಂತರ ನೀಟ್ ಪರೀಕ್ಷೆಯಲ್ಲಿ 413 ಅಂಕಗಳನ್ನು ಪಡೆದಿದ್ದೇನೆ. ಕೆಸಿಇಟಿ ಪರೀಕ್ಷೆಯಲ್ಲಿ ಕೃಷಿ ವಿಜ್ಞಾನದಲ್ಲಿ 4001 ಮತ್ತು ಪಶುವೈದ್ಯಕೀಯ ವಿಜ್ಞಾನದಲ್ಲಿ 3408 ರ‍್ಯಾಂಕ್ ಪಡೆದಿದ್ದೇನೆ. ನನಗೆ ಎಂಜಿನಿಯರಿಂಗ್‌ನಲ್ಲೂ ಆಸಕ್ತಿಯಿದೆ. ಈಗ ಕೃಷಿ ಪದವಿಗೆ ಸೀಟ್ ಸಿಕ್ಕಿದ್ದರೂ, ಅದನ್ನು ಓದಲು ಸಿದ್ಧನಿಲ್ಲ. ದಂತವೈದ್ಯಕೀಯ ಸೀಟು ಸಿಕ್ಕಿದ್ದರೂ, ಅದು ಬೇಡ, ಆಯುರ್ವೇದ ತೆಗೆದುಕೋ ಎಂದು ತಂದೆಯವರು ಹೇಳುತ್ತಿದ್ದಾರೆ. ಹಾಗಾಗಿ, ಆಯುರ್ವೇದ ಮತ್ತು ದಂತವೈದ್ಯಕೀಯ ಆಯ್ಕೆಗಳ ಮದ್ಯೆ ಗೊಂದಲಕ್ಕೊಳಗಾಗಿದ್ದೇನೆ. ಉತ್ತಮ ಆಯ್ಕೆ ಯಾವುದು ಸೂಚಿಸಿ.

ಹೆಸರು, ಊರು ತಿಳಿಸಿಲ್ಲ.

ನೀವು ಇಷ್ಟೊಂದು ವಿಭಿನ್ನವಾದ ಆಯ್ಕೆಗಳನ್ನು (ದಂತವೈದ್ಯಕೀಯ, ಪಶುವೈದ್ಯಕೀಯ, ಕೃಷಿ, ಆಯುರ್ವೇದ, ಎಂಜಿನಿಯರಿಂಗ್) ಈಗಲೂ ಪರಿಶೀಲಿಸುತ್ತಿದ್ದರೆ ಗೊಂದಲವಾಗುವುದು ಸಹಜ. ಈ ಗೊಂದಲಗಳ ಪರಿಹಾರಕ್ಕೆ ಈ ಸೂಚನೆಗಳನ್ನು ಗಮನಿಸಿ:

• ನಿಮ್ಮ ಪ್ರತಿಭೆ, ಆಸಕ್ತಿ, ಅಭಿರುಚಿ ಯಾವ ಕ್ಷೇತ್ರದಲ್ಲಿದೆ ಎಂದು ಅರಿಯಬೇಕು. ಇದನ್ನು ಆಪ್ಟಿಟ್ಯೂಡ್ ಟೆಸ್ಟ್ ಅಥವಾ ಸ್ವಯಂ ಮೌಲ್ಯಮಾಪನದಿಂದ ಅರಿಯಬಹುದು.

• ನಿಮ್ಮ ಭವಿಷ್ಯದ ಆಸೆ, ಆಕಾಂಕ್ಷೆಗಳಿಗೂ ನಿಮ್ಮ ಪ್ರತಿಭೆ, ಆಸಕ್ತಿ, ಅಭಿರುಚಿಗೂ ಹೊಂದಾಣಿಕೆಯಿರಬೇಕು.
• ಈ ಅಂಶಗಳನ್ನು ಗಮನಿಸಿ ವೃತ್ತಿಯೋಜನೆಯನ್ನು ಮಾಡಿದರೆ ಯಾವ ವೃತ್ತಿ/ಕೋರ್ಸ್ ಸೂಕ್ತವೆಂದು ತಿಳಿಯುತ್ತದೆ.

ಆಯುರ್ವೇದ ಮತ್ತು ದಂತವೈದ್ಯಕೀಯಗಳೆರಡೂ ಬೇಡಿಕೆಯಲ್ಲಿರುವ ಕ್ಷೇತ್ರಗಳು. ಮೇಲ್ನೋಟಕ್ಕೆ, ದಂತವೈದ್ಯಕೀಯಕ್ಕೆ ಹೆಚ್ಚಿನ ಬೇಡಿಕೆಯಿದೆ ಎಂದೆನಿಸಿದರೂ, ವೃತ್ತಿಯೋಜನೆ ಮಾಡಿದ ನಂತರವೇ ನಿರ್ಧರಿಸುವುದು ಸೂಕ್ತ. ವೃತ್ತಿಯೋಜನೆಯನ್ನು ಮಾಡುವ ಪ್ರಕ್ರಿಯೆಯ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/@ExpertCareerConsultantAuthor

2. ನಾನು ಬಿ.ಎ 2ನೇ ವರ್ಷದಲ್ಲಿದ್ದು, ಪದವಿ ನಂತರ ಯಾವ ಕೋರ್ಸ್ ಮಾಡಿದರೆ ಉದ್ಯೋಗ ಲಭಿಸುತ್ತದೆ? ಎಂಎಸ್‌ಡಬ್ಲ್ಯು ಮಾಡಬೇಕೆಂದಿರುವೆ. ಇದರ ಬಗ್ಗೆ ಮಾಹಿತಿ ಕೊಡಿ ಸರ್.

ಮಹಂತೇಶ್, ಕಲಬುರುಗಿ.

ನೀವು ಬಿಎ ಕೋರ್ಸನ್ನು ಯಾವ ವಿಷಯದಲ್ಲಿ ಮಾಡುತ್ತಿದ್ದೀರೆಂದು ತಿಳಿಸಿಲ್ಲ. ಬಿಎ ನಂತರದ ಆಯ್ಕೆಗಳಲ್ಲಿ ವಿಪುಲ ಹಾಗೂ ವೈವಿಧ್ಯಮಯ ಅವಕಾಶಗಳಿವೆ. ನೀವು ಬಿ.ಎ ನಂತರ ಮಾಡಬಹುದಾದ ಕೋರ್ಸ್‌ಗಳೆಂದರೆ ಐಎಎಸ್, ಕೆಎಎಸ್, ಎಂಎ, ಎಂಬಿಎ, ಎಲ್‌ಎಲ್‌ಬಿ, ಸಿಎ, ಎಸಿಎಸ್, ಬಿ.ಇಡಿ, ಬಿಪಿಇಡಿ, ಎಂಎಸ್‌ಡಬ್ಲ್ಯು, ಜರ್ನಲಿಸಮ್, ಫೈನ್ ಆರ್ಟ್ಸ್, ಡಿಸೈನ್ ಕೋರ್ಸ್‌ಗಳು (ಗ್ರಾಫಿಕ್ಸ್, ವಿಎಫ್‌ಎಕ್ಸ್, ಗೇಮ್ಸ್, ಫ್ಯಾಷನ್ ಇತ್ಯಾದಿ), ವಿದೇಶಿ ಮತ್ತು ಭಾರತೀಯ ಭಾಷೆಗಳು, ವಿಷಯಾನುಸಾರ ಸರ್ಟಿಫಿಕೆಟ್ ಮತ್ತು ಡಿಪ್ಲೊಮಾ ಕೋರ್ಸ್‌ಗಳು ಇತ್ಯಾದಿ.

ಬಿಎ ಕೋರ್ಸನ್ನು ಸಂಬಂಧಪಟ್ಟ ವಿಷಯದಲ್ಲಿ ಮಾಡಿದ್ದಲ್ಲಿ, ಎಂಎಸ್‌ಡಬ್ಲ್ಯು ಕೋರ್ಸ್‌ಗೆ ಅರ್ಹತೆಯಿರುತ್ತದೆ. ಒಂದು ಸಂಸ್ಥೆಯ ಅಭಿವೃದ್ಧಿಗಾಗಿ, ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಯೋಜನೆಗಳನ್ನು ರಚಿಸಿ, ಎಲ್ಲಾ ಪ್ರಯತ್ನಗಳನ್ನು ಕೇಂದ್ರೀಕರಿಸಿ, ಯೋಜನೆಗಳನ್ನು ನಿಷ್ಠೆಯಿಂದ ಕಾರ್ಯಗತಗೊಳಿಸುವುದೇ ಆಡಳಿತ ವರ್ಗದ ಮೂಲ ಉದ್ದೇಶ. ಈ ನಿಟ್ಟಿನಲ್ಲಿ, ಮಾನವ ಸಂಪನ್ಮೂಲದ ನಿರ್ವಹಣೆ, ಸಂಸ್ಥೆಗಳ ಕಾರ್ಯಾಚರಣೆಯಲ್ಲಿ ಹೆಚ್ಚಿನ ಪ್ರಾಮುಖ್ಯವನ್ನು ಪಡೆದಿದೆ. ಹಾಗಾಗಿ, ಎಂಎಸ್‌ಡಬ್ಲ್ಯು ಪದವೀಧರರಿಗೆ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಮಾನವ ಸಂಪನ್ಮೂಲದ ಅಭಿವೃದ್ಧಿ ಮತ್ತು ನಿರ್ವಹಣೆ, ಕಾರ್ಮಿಕ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ, ಸಮುದಾಯದ ಅಭಿವೃದ್ಧಿ ಇತ್ಯಾದಿ ವಲಯಗಳಲ್ಲಿ ವ್ಯಾಪಕವಾದ ಉದ್ಯೊಗಾವಕಾಶಗಳಿವೆ.

3. ಬಿ.ಎಸ್ಸಿ ಓದುತ್ತಿದ್ದೇನೆ. ನಂತರ ಎಂ.ಎಸ್ಸಿ ಮಾಡಬೇಕಾದರೆ ಹೇಗೆ ಸಿದ್ಧತೆ ಮಾಡಬೇಕು?

ಹೆಸರು, ಊರು ತಿಳಿಸಿಲ್ಲ.

ಮೊದಲಿಗೆ, ಎಂ.ಎಸ್ಸಿ ನಂತರದ ನಿಮ್ಮ ವೃತ್ತಿಜೀವನದ ಕನಸುಗಳೇನು ಎನ್ನುವುದರ ಬಗ್ಗೆ ಸ್ಪಷ್ಟತೆಯಿರಬೇಕು ಮತ್ತು ಅದರಂತೆ ಶಿಕ್ಷಣವನ್ನು ಮುಂದುವರೆಸಬೇಕು. ಹಾಗೂ, ಯಾವ ವಿಷಯದಲ್ಲಿ ( ಉದಾಹರಣೆಗೆ ಭೌತಶಾಸ್ತ್ರ, ಗಣಿತ, ರಸಾಯನ ಶಾಸ್ತ್ರ ಇತ್ಯಾದಿ) ಮತ್ತು ಯಾವ ವಿಭಾಗದಲ್ಲಿ ( ಉದಾಹರಣೆಗೆ ಭೌತಶಾಸ್ತ್ರದ ವಿಭಾಗಗಳಾದ ಆಸ್ಟ್ರೊಫಿಸಿಕ್ಸ್, ಜಿಯೋಫಿಸಿಕ್ಸ್, ಥರ್ಮೋಡೈನಾಮಿಕ್ಸ್, ಕ್ವಾಂಟಮ್ ಮೆಕ್ಯಾನಿಕ್ಸ್ ಇತ್ಯಾದಿ) ಎಂ.ಎಸ್ಸಿ ಮಾಡಬೇಕು ಎಂದು ನಿರ್ಧರಿಸಿ.

ಆಯ್ಕೆ ಮಾಡಿದ ವಿಭಾಗಕ್ಕೆ ಸಂಬಂಧಿಸಿದಂತೆ, ಯಾವ ವಿಶ್ವವಿದ್ಯಾಲಯ ಸೂಕ್ತವೆಂದು ನಿರ್ಧರಿಸಲು ಮೂಲ ಸೌಕರ್ಯ, ಪ್ರಾಧ್ಯಾಪಕ ವರ್ಗ, ಪ್ರಯೋಗಾಲಯಗಳು, ಗ್ರಂಥಾಲಯ, ಉದ್ಯಮಗಳ ಸಹಯೋಗ, ನೇಮಕಾತಿ ದಾಖಲೆ ಇತ್ಯಾದಿ ಅಂಶಗಳನ್ನು ಪರಿಶೀಲಿಸಿ. ನಿಮಗೆ ಸೂಕ್ತವೆನಿಸಿದ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆಗಳ ಮಾದರಿ, ಪಠ್ಯಕ್ರಮ ಇತ್ಯಾದಿಗಳನ್ನು ಗಮನಿಸಿ, ಕಾರ್ಯತಂತ್ರವನ್ನು ರೂಪಿಸಿ, ತಯಾರಾಗಿ. ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಸೈನ್ಸ್ ಮುಂತಾದ ಪ್ರತಿಷ್ಟಿತ ಸಂಸ್ಥೆಗ ಳಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡಿದರೆ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ.

4. ನಾನು ಈಗ ಬಿಎ ಮುಗಿಸಿದ್ದೇನೆ. ನನಗೆ ಒಂದು ಗೊಂದಲ ಇದೆ ಬಿ.ಎ ಮುಗಿದ ತಕ್ಷಣ ಬಿ.ಇಡಿ, ಅಥವಾ ಎಂಎ ಅಥವಾ ಎಲ್‌ಎಲ್‌ಬಿ ಮಾಡಬಹುದು ಆದರೆ ನಾನು ಪದವಿಯಲ್ಲಿ ಸಮಾಜಶಾಸ್ತ್ರ ವಿಷಯವನ್ನು ತೆಗೆದುಕೊಂಡಿದ್ದೇನೆ. ಹಾಗಾಗಿ, ಎಂಎಸ್‌ಡಬ್ಲ್ಯು ಮಾಡಿದರೆ ನನಗೆ ಮುಂದೆ ಉದ್ಯೋಗಾವಕಾಶವಿರುತ್ತದೆಯೇ?

ಹೆಸರು, ಊರು ತಿಳಿಸಿಲ್ಲ.

ವೃತ್ತಿ/ಕೋರ್ಸ್ ಆಯ್ಕೆಯ ಪ್ರಕ್ರಿಯೆಯಲ್ಲಿ ಅನೇಕ ಆಯ್ಕೆಗಳಿದ್ದರೆ (ಬಿ.ಇಡಿ, ಎಂಎ, ಎಲ್‌ಎಲ್‌ಬಿ, ಎಂಎಸ್‌ಡಬ್ಲ್ಯು), ಗೊಂದಲ ಹೆಚ್ಚಾಗಿ ನಿರ್ಧಾರ ಕ್ಲಿಷ್ಟವಾಗುತ್ತದೆ. ಎಂಎಸ್‌ಡಬ್ಲ್ಯು ನಂತರ ವ್ಯಾಪಕವಾದ ಉದ್ಯೋಗಾವಕಾಶಗಳಿವೆ; ಆದರೆ, ನಿಮಗೆ ಅದು ಸೂಕ್ತವೇ ಎಂದು ಯೋಚಿಸಿ. ನಿಮ್ಮ ಅಭಿರುಚಿ, ಆಸಕ್ತಿ, ಮತ್ತು ಸಾಮರ್ಥ್ಯಗಳನ್ನು ಅರ್ಥಮಾಡಿಕೊಂಡು, ಸೂಕ್ತವಾದ ಎರಡು ಆಯ್ಕೆಗಳನ್ನು ಪರಿಶೀಲಿಸಿ, ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬಹುದು.‌

5. ನನ್ನ ಮಗ ಬಿಎ, ಎಲ್‌ಎಲ್‌ಬಿ ಓದುತ್ತಿದ್ದು ಎಲ್‌ಎಲ್‌ಎಂ ಮಾಡುವ ಆಸೆಯಿದೆ. ನಂತರ ಇದೇ ವೃತ್ತಿಯಲ್ಲಿ ಮುಂದುವರೆಯವುದು ಸರಿಯೇ ಅಥವಾ ಐಎಎಸ್, ಐಪಿಎಸ್ ಪರೀಕ್ಷೆಗೆ ತಯಾರಿ ಮಾಡುವುದೇ? ನನ್ನ ಗೊಂದಲ ಬಗೆಹರಿಸಿ.

ಹೆಸರು, ಊರು ತಿಳಿಸಿಲ್ಲ.

ವಕೀಲಿ ವೃತ್ತಿಗೂ ಭಾರತೀಯ ಆಡಳಿತ ಸೇವೆಯ ವೃತ್ತಿಗೂ ಅಗತ್ಯವಾದ ಆಸಕ್ತಿ, ಅಭಿರುಚಿ ಮತ್ತು ಕೌಶಲಗಳಲ್ಲಿ ಅನೇಕ ವ್ಯತ್ಯಾಸಗಳಿವೆ. ಹಾಗಾಗಿ, ಆಪ್ಟಿಟ್ಯೂಡ್ ಟೆಸ್ಟ್/ಸ್ವಯಂ-ಮೌಲ್ಯಮಾಪನದ ಆಧಾರದ ಮೇಲೆ ನಿರ್ಧರಿಸುವುದು ಸೂಕ್ತ.

6. ನಾನು ಪಿಯುಸಿ (ವಿಜ್ಞಾನ) ಮುಗಿಸಿದ್ದು, ಈಗ ಬಿಎ ದ್ವಿತೀಯ ವರ್ಷದಲ್ಲಿದ್ದೇನೆ. ನಾನೊಬ್ಬ ಕನ್ನಡ ಮಾಧ್ಯಮದ ವಿದ್ಯಾರ್ಥಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆ ಹೇಳಿ ಸರ್.

ಹೆಸರು, ಊರು ತಿಳಿಸಿಲ್ಲ.

ಉತ್ಸಾಹಭರಿತ ಮನಸ್ಸು, ಗುರಿ ಸೇರುವ ಸಂಕಲ್ಪ, ನಿಮ್ಮ ಸಾಮರ್ಥ್ಯದಲ್ಲಿ ಅಚಲವಾದ ಆತ್ಮವಿಶ್ವಾಸ ಮತ್ತು ಪರಿಣಾಮಕಾರಿ ಕಾರ್ಯತಂತ್ರವಿದ್ದರೆ, ನಿಮ್ಮನ್ನು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಜೊತೆಗೆ, ಈ ಸಲಹೆಗಳನ್ನು ಅನುಸರಿಸಿ.

• ಪರೀಕ್ಷೆಯ ಮಾದರಿ, ಪಠ್ಯಕ್ರಮಗಳನ್ನು ಮೊದಲು ಗಮನಿಸಿ.
• ಪರೀಕ್ಷೆಯಲ್ಲಿ ಅಪೇಕ್ಷಿತ ಶೇಕಡಾವಾರು ಗುರಿಯನ್ನು ನಿರ್ಧರಿಸಿ.
• ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ತಿಳಿದು ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.
• ಅಣಕು ಪರೀಕ್ಷೆಗಳನ್ನು ಪ್ರತ್ಯೇಕವಾಗಿ ಮತ್ತು ಸಹಪಾಠಿಗಳೊಡನೆ ಅಭ್ಯಾಸ ಮಾಡಿ.
• ಪ್ರಶ್ನೆಪತ್ರಿಕೆಯಲ್ಲಿನ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ.
• ಖಚಿತವಾಗಿ ತಿಳಿದಿರುವ ಪ್ರಶ್ನೆಗಳು/ವಿಭಾಗಗಳನ್ನು ಮೊದಲು ಉತ್ತರಿಸಿ.
• ಪ್ರಶ್ನೆಗಳನ್ನು ಉತ್ತರಿಸುವಾಗ ವೇಗ ಮತ್ತು ನಿಖರತೆಯಲ್ಲಿ ಸಮತೋಲನವಿರಲಿ.
• ತಪ್ಪುದಾರಿಗೆಳೆಯಬಹುದಾದ ತಂತ್ರಗಾರಿಕೆಯ ಪ್ರಶ್ನೆಗಳ ಬಗ್ಗೆ ಎಚ್ಚರವಿರಲಿ.
• ಪರೀಕ್ಷೆಯ ದಿನದಂದು ಆದಷ್ಟು ಶಾಂತಚಿತ್ತದಿಂದಿರುವುದರಿಂದ ಒತ್ತಡ ಕಡಿಮೆಯಾಗಿ ಫಲಿತಾಂಶ ಉತ್ತಮವಾಗುತ್ತದೆ.
• ನಿಮ್ಮ ಆಸಕ್ತಿ, ಅಭಿರುಚಿ ಕುರಿತ ಪ್ರಶ್ನೆಗಳನ್ನು ಪ್ರಾಮಾಣಿಕವಾಗಿ ಉತ್ತರಿಸಿ.
• ತಿಳಿಯದ ಬಹು ಆಯ್ಕೆ ಪ್ರಶ್ನೆಗಳನ್ನು ಉತ್ತರಿಸುವಾಗ ಖಚಿತವಾದ ತಪ್ಪು ಆಯ್ಕೆಗಳನ್ನು ತೆಗೆದುಹಾಕಿ ಜಾಣತನದಿಂದ ಊಹಿಸಿ.
ಈಗ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಬರೆಯಬಹುದು. ಕಾರ್ಯತಂತ್ರಗಳನ್ನು ರೂಪಿಸುವ ಮಾರ್ಗದರ್ಶನಕ್ಕಾಗಿ ಗಮನಿಸಿ: http://www.vpradeepkumar.com/how-to-succeed-in-entrance-exams/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT