ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ: ಬೇಕು ಪೂರ್ವಸಿದ್ಧತಾ ಪರೀಕ್ಷೆಗಳು

Last Updated 12 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಪೂರ್ವಸಿದ್ಧತಾ ಪರೀಕ್ಷೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಬೂಸ್ಟರ್‌ಗಳಿದ್ದಂತೆ. ಅವು ಮುಖ್ಯಪರೀಕ್ಷೆಗೆ ಬೇಕಾದ ಶಿಸ್ತು ಕಲಿಸುತ್ತವೆ.

***

ಮೊದಲ ಬಾರಿ ದೊಡ್ಡ ಪರೀಕ್ಷೆಗೆ (ಎಸ್ಸೆಸ್ಸೆಲ್ಸಿ, ಪಿಯುಸಿ) ಕೂರುವ ಮಕ್ಕಳಿಗೆ ಆತ್ಮವಿಶ್ವಾಸ ಬೇಕು. ಅವರಿಗೆ ಈಗಾಗಲೇ ಇದರ ಬಗ್ಗೆ ಎಷ್ಟೇ ಹೇಳಿದರೂ ಏನೇ ಹೇಳಿದರೂ ಅಷ್ಟಕ್ಕೆ ಅವರ ಮನಸು ಒಪ್ಪುವುದಿಲ್ಲ. ಆ ಕೆಲಸಗಳನ್ನು ಪೂರ್ವ ಸಿದ್ಧತಾ ಪರೀಕ್ಷೆಗಳು (ಪ್ರಿಪ್ರೇಟರಿ ಪರೀಕ್ಷೆ) ಯಶಸ್ವಿಯಾಗಿ ಮಾಡಬಲ್ಲವು. ಕುಸ್ತಿಪಟು ಅಖಾಡಕ್ಕೆ ಇಳಿಯುವ ಮುನ್ನ ಬೆವರು ಹರಿಸಿ ಹೊಸಪಟ್ಟು ಕಲಿಯುತ್ತಾನೆ. ಹಾಗೆ ಮಕ್ಕಳಿಗೂ ಈ ಪೂರ್ವಸಿದ್ಧತಾ ಪರೀಕ್ಷೆಗಳ ತಾಲೀಮು ಯಶಸ್ಸು ತಂದುಕೊಡಬಲ್ಲದು.

ಈಗಾಗಲೇ ಶಾಲೆ ಕಾಲೇಜುಗಳಲ್ಲಿ ಪೂರ್ವ ಸಿದ್ಧತಾ ಪರೀಕ್ಷೆಗಳ ಸರಣಿಗಳು ಆರಂಭವಾಗಿವೆ. ಪೂರ್ವ ಸಿದ್ಧತಾ ಪರೀಕ್ಷೆಯಿಂದ ಮಗುವಿನ ಆತ್ಮವಿಶ್ವಾಸ ಹೇಗೆಲ್ಲ ಹೆಚ್ಚುತ್ತದೆ ಎಂಬುದನ್ನು ಇಲ್ಲಿ ಒಂದಷ್ಟು ಚರ್ಚಿಸಲಾಗಿದೆ.

1. ಪ್ರಶ್ನೆಪತ್ರಿಕೆಯ ಸ್ವರೂಪ, ಸಂರಚನೆಯ ಅರಿವು

ಪ್ರತಿ ಪ್ರಶ್ನೆಪತ್ರಿಕೆಯು ಒಂದು ನೀಲ ನಕಾಶೆಯನ್ನು ಆಧರಿಸಿರುತ್ತದೆ. ಒಂದು ಪತ್ರಿಕೆಯಲ್ಲಿ ಏನಿರಬೇಕು? ಎಷ್ಟಿರಬೇಕು? ಎಂಬುದರ ಬಗ್ಗೆ ಪರೀಕ್ಷಾ ಮಂಡಳಿ ಸ್ಪಷ್ಟವಾಗಿ ಸೂಚಿಸಿರುತ್ತದೆ. ಅದರಂತೆ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಇರುವುದರಿಂದ ಮಗುವಿಗೆ ತಾನು ಮುಂದೆ ಬರೆಯಬೇಕಾದ ಪತ್ರಿಕೆಯ ಬಗ್ಗೆ ಸ್ಪಷ್ಟನೆ ಸಿಗುತ್ತದೆ. ಕಠಿಣತೆಯ ಮಟ್ಟ, ಸರಳತೆ ಹಾಗೂ ಪ್ರಶ್ನೆಗಳ ಸ್ವರೂಪ ಇವುಗಳನ್ನು ಮಗು ಅವಲೋಕಿಸಿ ಅದರಂತೆ ತಯಾರಿ ಮಾಡಿಕೊಂಡು ಮುಖ್ಯ ಪರೀಕ್ಷೆಯಲ್ಲಿ ಸರಾಗವಾಗಿ ಬರೆಯಲು ಅನುಕೂಲವಾಗುತ್ತದೆ. ಪ್ರಶ್ನೆ ಪತ್ರಿಕೆಯೇ ಪರೀಕ್ಷೆ ಜೀವಾಳವಾದ್ದರಿಂದ ಮಗು ಮೂರುಗಂಟೆಯಲ್ಲಿ ಅದರ ಸ್ವರೂಪವನ್ನು ಸರಿಯಾಗಿ ಗ್ರಹಿಸಲು ಪೂರ್ವ ಸಿದ್ಧತಾ ಪರೀಕ್ಷೆ ಕಲಿಸಿಕೊಡುತ್ತದೆ.

2. ಸಮಯ ನಿರ್ವಹಣೆ

ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಕೊಠಡಿಯಿಂದ ಹೊರಬಂದಾಗ ಅವರಲ್ಲಿ ಒಂದು ಗೊಣಗಾಟವಿರುತ್ತದೆ. ‘ಸರ್, ಟೈಮ್ ಸಾಕಾಗಲಿಲ್ಲ. ಬೇಗ ಉತ್ತರ ಪತ್ರಿಕೆ ಕಿತ್ತುಕೊಂಡ್ರು’ ಅಂತಾರೆ. ಪತ್ರಿಕೆಗಳಲ್ಲಿರುವ ಪ್ರಶ್ನೆಗಳಿಗೆ ಸಾಕಾಗುವಷ್ಟು ಸಮಯ ನೀಡಲಾಗಿರುತ್ತದೆ. ಸಮಯ ಸಾಕಾಗಿಲ್ಲ ಅಂದ್ರೆ ಅಗತ್ಯಕ್ಕಿಂತ ಹೆಚ್ಚು ಬರೆದಿದ್ದೀರಿ ಮತ್ತು ಕಾಲಹರಣ ಮಾಡಿದ್ದೀರಿ ಅಂತ ಅರ್ಥ. ಮಕ್ಕಳು ಪೂರ್ವಸಿದ್ಧತಾ ಪರೀಕ್ಷೆಯಲ್ಲಿಯೇ ತನ್ನ ಸಮಯ ಹೊಂದಾಣಿಕೆಯನ್ನು ಕಲಿಯಬಹುದು. ಎಷ್ಟು ಬರೆಯಬೇಕು. ಕಾಲಹರಣ ತಡೆಯುವುದು ಹೇಗೆ ಎಂಬುದನ್ನು ಮಗು ಕಲಿಯಬಹುದು.‌

3. ಶಿಕ್ಷಕರಿಗೆ ಸ್ಪಷ್ಟವಾದ ಹಿಮ್ಮಾಹಿತಿ

ಪೂರ್ವಸಿದ್ಧತಾ ಪರೀಕ್ಷೆಗಳು ಬರೀ ಮಕ್ಕಳಿಗೆ ವರದಾನ ಎಂದು ಭಾವಿಸಬಾರದು. ಅದು ಶಿಕ್ಷಕರಿಗೂ ಸಹಾಯಕ. ಶಿಕ್ಷಕ ತಾನು ಕಲಿಸುವ ವಿಷಯದಲ್ಲಿ ಯಾವ ಮಗು ಯಾವ ಹಂತದಲ್ಲಿದೆ. ಯಾವ ಮಗು ಯಾವ ತಪ್ಪು ಮಾಡಿದೆ. ಯಾವ ಮಗುವಿಗೆ ಇನ್ನಷ್ಟು ಹೇಳಿಕೊಡಬೇಕು. ಯಾವ ತಪ್ಪು ತಿದ್ದಬೇಕು. ಯಾವುದು ಸರಿ? ಯಾವುದು ತಪ್ಪು? ಯಾವುದು ಬೇಕು? ಯಾವುದು ಬೇಡ? ಇಂತಹ ಹತ್ತು ಹಲವು ವಿಚಾರಗಳ ಬಗ್ಗೆ ಪೂರ್ವ ಸಿದ್ಧತಾ ಪರೀಕ್ಷೆಯಿಂದ ಹಿಮ್ಮಾಹಿತಿ(Feedback) ಸಿಗುತ್ತದೆ. ಕಲಿಸುವ ಯೋಜನೆ ಮರು ರೂಪಿಸಿಕೊಳ್ಳಲು ಶಿಕ್ಷಕರಿಗೆ ಮತ್ತು ಯಶಸ್ವಿಯಾಗಿ ಪರೀಕ್ಷೆ ಬರೆಯುವಂತಾಗಲು ಮಗುವಿಗೆ ಸಹಾಯವಾಗುತ್ತದೆ.

4. ಆತ್ಮವಿಶ್ವಾಸ, ಭರವಸೆಯ ಬೂಸ್ಟರ್

ಇದನ್ನು ಬರೆಯಲು ಆಗುತ್ತದಾ? ನಾನು ಸತತ ಮೂರು ಗಂಟೆ ಕೂತು ಬರೆಯಬಲ್ಲೆನಾ? ಎಷ್ಟು ಬರೆಯಬೇಕು? ಹೇಗೆ ಬರೆದರೆ ಅಂಕ ಬರುತ್ತವೆ? ಮಕ್ಕಳ ಇಂತಹ ಹತ್ತೆಂಟು ಪ್ರಶ್ನೆಗಳಿಗೆ ಪೂರ್ವ ಸಿದ್ಧತಾ ಪರೀಕ್ಷೆ ಉತ್ತರ ಒದಗಿಸುತ್ತದೆ. ಮಕ್ಕಳಲ್ಲಿ ಆತ್ಮವಿಶ್ವಾಸ ರೂಪುಗೊಳ್ಳುತ್ತದೆ. ಪರೀಕ್ಷೆ ಅಂದರೆ ಭಯ ಪಡುವ ಬದಲು ಅದಕ್ಕೆ ಸರಿಯಾದ ತಯಾರಿ ನಡೆಸಲು ಪೂರ್ವ ಸಿದ್ಧತಾ ಪರೀಕ್ಷೆಗಳು ಸಹಕಾರಿ.

ಮುಖ್ಯ ಪರೀಕ್ಷೆ ಬಗ್ಗೆ ಮಗುವಿಗೆ ಸ್ವಾಭಾವಿಕವಾಗಿರುವ ಆತಂಕಗಳು ಈ ಪರೀಕ್ಷೆಯಿಂದ ದೂರವಾಗುತ್ತವೆ. ಮಗು ಮುಖ್ಯ ಪರೀಕ್ಷೆಯನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡು ತಲ್ಲಣಿಸದೇ ಸ್ವಾಭಾವಿಕವಾಗಿಯೇ ಬರೆದು ಮುಗಿಸುವಂತೆ ಅಣಿಗೊಳಿಸುವ ಕಾರ್ಯವನ್ನು ಪೂರ್ವ ಸಿದ್ಧತಾ ಪರೀಕ್ಷೆ ಮಾಡುತ್ತದೆ.

ಹೆಚ್ಚು ಸರಣಿ ಪರೀಕ್ಷೆಗಳು ಬೇಡ..
ಪೂರ್ವ ಸಿದ್ಧತಾ ಪರೀಕ್ಷೆಗಳು ಎರಡಾದರೆ ಚೆಂದ ಮತ್ತು ಉಪಯುಕ್ತ. ಕೆಲವರು ಶಾಲಾ ಹಂತ, ತಾಲ್ಲೂಕು ಹಂತ, ಜಿಲ್ಲಾ ಹಂತ, ರಾಜ್ಯ ಹಂತ.. ಅಂತ ಹಲವು ಪರೀಕ್ಷೆ ಮಾಡುತ್ತಾರೆ. ಮಗು ಒಂದು ತಿಂಗಳು ಸತತವಾಗಿ ಪರೀಕ್ಷೆ ಬರೆಯುತ್ತಲೇ ಕೂರಬೇಕಾಗುತ್ತದೆ. ಇದು ಅಧ್ಯಯನಕ್ಕೆ ಮತ್ತು ಮುಖ್ಯ ಪರೀಕ್ಷೆಯ ತಯಾರಿಗೆ ತೊಡಕಾಗುತ್ತದೆ. ಅಲ್ಲದೆ ಮಗುವಿಗೆ ಪರೀಕ್ಷೆ ಎಂದರೆ ಒಂದು ರೀತಿಯ ಅಸಹನೆ ಮೂಡಿ ಅದು ಮುಖ್ಯ ಪರೀಕ್ಷೆಯನ್ನು ಪ್ರಭಾವಿಸುತ್ತದೆ.

ಅವಶ್ಯಕ ತಾಲೀಮು
ಕೆಲವರು ಪೂರ್ವ ಸಿದ್ಧತಾ ಪರೀಕ್ಷೆಯನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆ. ಆದರೆ ಅದು ಸರಿಯಲ್ಲ. ಮುಖ್ಯ ಪರೀಕ್ಷೆಗೆ ಇದು ಒಂದು ತಾಲೀಮು. ಪರೀಕ್ಷೆ ಎಂದರೆ ಕೇವಲ ಉತ್ತರ ಬರೆಯುವ ಕ್ರಿಯೆ ಅಲ್ಲ. ಅನೇಕ ಆತಂಕಗಳ ಮೊತ್ತ ಅದು. ಅದನ್ನು ಒಂದೊಂದಾಗಿ ಬಿಡಿಸುವ ಕೆಲಸವನ್ನು ಇದು ಮಾಡುತ್ತದೆ. ಎಲ್ಲಾ ರೀತಿಯಿಂದ ಇದೊಂದು ಅವಶ್ಯಕವಾಗಿ ಬೇಕಾದ ತಾಲೀಮು.

**
ಇದು ಮಗುವಿಗೆ ತನ್ನ ಅವಲೋಕನಕ್ಕೆ ಬೇಕೇ ಬೇಕಾದ ಒಂದು ತಂತ್ರ. ಮುಖ್ಯ ಪರೀಕ್ಷೆ ಬರೆದ ಮೇಲೆ ಅಲ್ಲಿ ತಿದ್ದಿಕೊಳ್ಳಲು ಅವಕಾಶ ಇಲ್ಲ. ಆದರೆ ಪೂರ್ವ ಸಿದ್ಧತಾ ಪರೀಕ್ಷೆಗಳಿಂದ ತಿದ್ದಿಕೊಳ್ಳಬಹುದು. ಪೂರ್ವ ಸಿದ್ಧತಾ ಪರೀಕ್ಷೆಗಳ ಯಶಸ್ಸು ಅದನ್ನು ಹೇಗೆ ಆಯೋಜಿಸುತ್ತೇವೆ ಅನ್ನುವುದರ ಮೇಲಿದೆ. ಪ್ರಾಮಾಣಿಕ ಆಯೋಜನೆಗೆ ಪ್ರಾಮಾಣಿಕ ಫಲಿತಾಂಶ ಲಭ್ಯ. ಮಕ್ಕಳು ಪೂರ್ವ ಸಿದ್ದತಾ ಪರೀಕ್ಷೆಗಳಿಂದ ತಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುತ್ತಾರೆ.
-ರೇಣುಕಾ ಎಸ್, ಹಿರಿಯ ಉಪನ್ಯಾಸಕರು. ಡಯಟ್, ಶಿವಮೊಗ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT