ಭಾನುವಾರ, ಜುಲೈ 3, 2022
24 °C

ಎಸ್ಸೆಸ್ಸೆಲ್ಸಿ ಹೊಸ ಪರೀಕ್ಷಾ ಪದ್ಧತಿಗೆ ಬೇಕು ಸಿದ್ಧತೆ

ಡಾ. ಎಚ್.ಎಸ್. ಗಣೇಶಭಟ್ಟ Updated:

ಅಕ್ಷರ ಗಾತ್ರ : | |

Prajavani

ರಾಜ್ಯ ಸರ್ಕಾರವು ಸದ್ಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಎಸ್ಸೆಸ್ಸೆಲ್ಸಿ ಪರೀಕ್ಷೆಯು ಜುಲೈ ಮೂರನೇ ವಾರದಲ್ಲಿ ಹೊಸ ಪದ್ಧತಿಯಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು ಈ ಹೊಸ ಪದ್ಧತಿಗೆ ಅನುಗುಣವಾಗಿ ತಮ್ಮ ಸಿದ್ಧತೆಯನ್ನು ಚುರುಕುಗೊಳಿಸುವುದು ಸೂಕ್ತ.

ಕೋವಿಡ್‌ ಎರಡನೆಯ ಅಲೆಯಲ್ಲಿ ತತ್ತರಿಸಿರುವ ಅನೇಕ ವಿದ್ಯಮಾನಗಳಲ್ಲಿ ಶಿಕ್ಷಣವೂ ಒಂದು ಎಂದು ಈಗಾಗಲೇ ಎಲ್ಲರಿಗೂ ಗೊತ್ತಿದೆ. ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಆಗಿರುವ ಬದಲಾವಣೆ ಊಹಾತೀತ. ಸಾಂಪ್ರದಾಯಿಕ ಶಿಕ್ಷಣದ ಪದ್ಧತಿಯಿಂದ ಆನ್‍ಲೈನ್ ಶಿಕ್ಷಣಕ್ಕೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಹೊಂದಿಕೊಂಡಿದ್ದು, ಈಗ ನೂತನ ಪರೀಕ್ಷಾ ಪದ್ಧತಿಗೂ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಒದಗಿದೆ.

ರಾಜ್ಯ ಸರ್ಕಾರದ ಜೂನ್‌ 4ರ ಪ್ರಕಟಣೆಯಂತೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಜುಲೈ ಮೂರನೇ ವಾರದಲ್ಲಿ ಎರಡು ದಿನಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಈ ನಿರ್ಧಾರ ಸ್ವಾಗತಾರ್ಹವೇನೋ ಹೌದು. ಆದರೆ ಈ ಸಾರಿ ಎರಡೇ ದಿನದ ಪರೀಕ್ಷೆ ಎಂದು ವಿದ್ಯಾರ್ಥಿಗಳು ಸಮಾಧಾನ ಪಟ್ಟುಕೊಳ್ಳುವ ವಿಷಯವಲ್ಲ. ಸರ್ಕಾರದ ಈ ಪ್ರಕಟಣೆಯ ಅನ್ವಯ 120 ಅಂಕಗಳ ಎರಡು ಪ್ರಶ್ನೆ ಪತ್ರಿಕೆಗಳನ್ನು ವಿದ್ಯಾರ್ಥಿಗಳು ಎರಡು ದಿನಗಳಲ್ಲೇ ಉತ್ತರಿಸಬೇಕು. ಆರು ದಿನಗಳ ಪರೀಕ್ಷೆಗೆ ಮಾಡಿಕೊಳ್ಳಬೇಕಾದ ತಯಾರಿಯನ್ನು ಈ ಪರೀಕ್ಷೆಗೆ ಎರಡು ದಿನಗಳಲ್ಲೇ ವಿದ್ಯಾರ್ಥಿಗಳು ಮಾಡಿಕೊಳ್ಳಬೇಕು.

ಬಹು ಮಾದರಿ ಆಯ್ಕೆ

ಪರೀಕ್ಷೆಯಲ್ಲಿ ಬಹು ಆಯ್ಕೆ ಮಾದರಿಯ ಪ್ರಶ್ನೆ (ಎಂಸಿಕ್ಯೂ) ಗಳಿದ್ದು ನೇರ ಮತ್ತು ಸರಳವಾದ ಪ್ರಶ್ನೆಗಳಿರುತ್ತವೆ. ಕನ್ನಡ, ಇಂಗ್ಲಿಷ್ ಮತ್ತು ತೃತೀಯ ಭಾಷೆ ಒಂದು ಪತ್ರಿಕೆಯಾದರೆ, ಗಣಿತ, ವಿಜ್ಞಾನ ಮತ್ತು ಸಮಾಜವಿಜ್ಞಾನ ಇನ್ನೊಂದು ಪತ್ರಿಕೆಯಾಗಿರುತ್ತದೆ. ಪ್ರತಿ ವಿಷಯಕ್ಕೂ 40 ಅಂಕಗಳಿದ್ದು, ಒಂದು ಪ್ರಶ್ನೆ ಪತ್ರಿಕೆಯಲ್ಲಿ 120 ಪ್ರಶ್ನೆಗಳಿರುತ್ತವೆ. ಈ ಪ್ರಶ್ನೆ ಪತ್ರಿಕೆಗಳು ಕಡಿತಗೊಳಿಸಿರುವ ಪಠ್ಯ ವಿಷಯದ ರೂಪುರೇಷೆಗಳ ಆಧಾರದ ಮೇಲಿರುತ್ತವೆ. ಮೂರು ಗಂಟೆಗಳ ಅವಧಿಯಲ್ಲಿ ವಿದ್ಯಾರ್ಥಿಗಳು ಉತ್ತರಿಸಬೇಕಾಗಿರುತ್ತದೆ.

ಸಾಂಪ್ರದಾಯಿಕ ಪರೀಕ್ಷೆ ಪದ್ಧತಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ದಿನಕ್ಕೊಂದರಂತೆ ವಿಷಯವನ್ನು ಓದಿಕೊಂಡು ಪರೀಕ್ಷೆಗೆ ಸನ್ನದ್ಧರಾಗುತ್ತಿದ್ದರು. ಒಂದು ವಿಷಯಕ್ಕೂ - ಮತ್ತೊಂದು ವಿಷಯಕ್ಕೂ ಪರೀಕ್ಷಾ ಅವಧಿಗೆ ಸಾಕಷ್ಟು ಅಂತರವೂ ಇರುತ್ತಿತ್ತು. ಇಡೀ ವರ್ಷ ಓದಿದ ವಿಷಯಗಳನ್ನು ಗ್ರಹಿಸಿಕೊಂಡು ಉತ್ತರಿಸಲು ಮನಸ್ಸನ್ನು ಸಿದ್ಧಪಡಿಸಿಕೊಳ್ಳುತ್ತಿದ್ದರು.

ಆದರೆ ಈಗಿನ ಮಾದರಿಯಂತೆ ಮೂರೂ ಭಾಷೆಯ ವಿಷಯಗಳನ್ನು ಒಂದೇ ದಿನ, ಒಂದೇ ಅವಧಿಯಲ್ಲಿ (3 ಗಂಟೆಗಳು) ಉತ್ತರಿಸಬೇಕು.  ಹೀಗಾಗಿ ಶಾಲೆಗಳು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಪಡಿಸಲು ವಿಶೇಷ ಆದ್ಯತೆಯನ್ನು ಉಳಿದಿರುವ ಸಮಯದಲ್ಲಿ ಮಾಡಬೇಕಿದೆ. ಜೂನ್ 3ರವರೆಗೆ ವಿದ್ಯಾರ್ಥಿಗಳನ್ನು ಸಾಂಪ್ರದಾಯಿಕ ಪರೀಕ್ಷಾ ಪದ್ಧತಿಗೆ ಸಿದ್ಧಗೊಳಿಸಿ, ಪೂರ್ವಸಿದ್ಧತಾ ಪರೀಕ್ಷೆಗಳನ್ನೂ ನಡೆಸಲಾಗಿತ್ತು.  ಈಗ ವಿದ್ಯಾರ್ಥಿಗಳ ಮನೋಭೂಮಿಕೆಯನ್ನು ಬಹು ಅಂಶ ಆಯ್ಕೆ ಮಾದರಿ ಪ್ರಶ್ನೆಗಳಿಗೆ ಸಿದ್ಧಗೊಳಿಸಬೇಕಾದ ಸವಾಲು ಶಿಕ್ಷಕರ ಮುಂದಿದೆ.  ಇದು ವಿದ್ಯಾರ್ಥಿಗಳಿಗೆ ಪೂರಕವಾಗಿ ಹೊಸದೇನಲ್ಲ. ಪ್ರತಿ ವಿಷಯದಲ್ಲೂ 5– 10 ಪ್ರಶ್ನೆಗಳು ಈ ರೂಪದಲ್ಲೇ ಇರುತ್ತಿದ್ದವು. ಆದರೆ ಈಗ ಎಲ್ಲಾ ಪ್ರಶ್ನೆಗಳು ಬಹು ಆಯ್ಕೆ ಪ್ರಶ್ನೆಗಳೇ ಆಗಿರುವುದರಿಂದ ಸಿದ್ಧತಾ ಪರೀಕ್ಷೆಗಳನ್ನು ಶಾಲೆಗಳು ಇದೇ ಮಾದರಿಯಲ್ಲೇ ನಡೆಸಬೆಕಾಗುತ್ತದೆ. ಕೆಎಸ್‌ಇಇಬಿ ಮುಂದೆ ಕೊಡುವ ಮಾರ್ಗದರ್ಶನದಂತೆ ಶಾಲೆಗಳು ಎಲ್ಲಾ ವಿಷಯಗಳಲ್ಲೂ ವಿದ್ಯಾರ್ಥಿಗಳನ್ನು ಪುನಶ್ಚೇತನಗೊಳಿಸಬೇಕಾಗುತ್ತದೆ. ಶಿಕ್ಷಕರೂ ಸಹ ವಿಶೇಷವಾಗಿ ತಯಾರಿ ನಡೆಸಬೇಕಾಗುತ್ತದೆ.

ವಿಶೇಷ ಸಿದ್ಧತೆ

ವಿದ್ಯಾರ್ಥಿಗಳು ಜುಲೈ ಮೂರನೇ ವಾರದಲ್ಲಿ ನಡೆಯಲಿರುವ ಈ ಪರೀಕ್ಷೆಗೆ ವಿಶೇಷ ರೀತಿಯಲ್ಲಿ ತಯಾರಾಗಬೇಕು.

* ಎಲ್ಲಾ ಪಾಠಗಳನ್ನೂ ಪೂರ್ತಿಯಾಗಿ ಓದಿ ಅರ್ಥ ಮಾಡಿಕೊಳ್ಳಿ.

* ಪ್ರತಿಯೊಂದು ಪದ ಹಾಗೂ ವಾಕ್ಯವೂ ಸಹ ಬಹು ಮುಖ್ಯವಾಗಿರುತ್ತದೆ.

* ನಕ್ಷೆಗಳು, ಚಿತ್ರಗಳು, ರಚನೆಗಳು, ವ್ಯಾಕರಣ, ಸಂದರ್ಭಕ್ಕೆ ತಕ್ಕಂತೆ, ಚಿಂತಿಸುವುದು ಎಲ್ಲವೂ ಮುಖ್ಯ.

* ನೀವು ಓದುತ್ತಲೇ ಪ್ರಶ್ನೆಯ ಸ್ವರೂಪ ಹೇಗಿರಬಹುದು ಎಂದು ಆಲೋಚಿಸಿ.

* ಒಂದು ಎಂಸಿಕ್ಯೂ ಪ್ರಶ್ನೆಗೆ ಉತ್ತರಿಸಲು ಪರೀಕ್ಷೆಯಲ್ಲಿ ಸಿಗುವ ಸಮಯ ಎರಡು ನಿಮಿಷಗಳಿಗಿಂತಲೂ ಕಡಿಮೆ ಇರುತ್ತದೆ.

* ಪರೀಕ್ಷೆಗೆ ತಯಾರಿ ನಡೆಸುವಾಗ ಮೂರು ವಿಷಯಗಳನ್ನೂ ಒಟ್ಟಾಗಿ ಓದಿ ಉತ್ತರಿಸುವ ಕೌಶಲವನ್ನು ಬೆಳೆಸಿಕೊಳ್ಳಿ.

* ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷೆಯನ್ನೊಳಗೊಂಡ ಒಂದು ಪ್ರಶ್ನೆಪತ್ರಿಕೆಯಾದರೆ, ಇನ್ನೊಂದು ಗಣಿತ, ಸಮಾಜವಿಜ್ಞಾನ ಹಾಗೂ ವಿಜ್ಞಾನದ್ದಾಗಿರುತ್ತದೆ.

* ಎಂಸಿಕ್ಯೂ ಮಾದರಿಯ ಪ್ರಶ್ನೆಗಳಿಗೆ ಉತ್ತರಿಸಲು ಒಎಂಆರ್‌ ಉತ್ತರ ಪತ್ರಿಕೆಗಳನ್ನು ನೀಡಲಾಗುತ್ತದೆ. ಅದಕ್ಕೆ ಉತ್ತರಿಸುವ ವಿಧಾನವೇ ಬೇರೆಯ ರೀತಿಯದ್ದಾಗಿರುತ್ತದೆ.

ನಿಮಗೆ ಸೂಕ್ತವಾದ ಪರೀಕ್ಷಾಕೇಂದ್ರಕ್ಕೆ ನೀವು ನೋಂದಾಯಿಸಿಕೊಳ್ಳಬಹುದು. ಪರೀಕ್ಷಾ ವೇಳಾಪಟ್ಟಿಯನ್ನು ಸರಿಯಾಗಿ ಗಮನಿಸಿ ತಯಾರಾಗಿ. 

(ಲೇಖಕ: ನಿವೃತ್ತ ಪ್ರಾಂಶುಪಾಲರು, ಎಂಇಎಸ್ ಶಿಕ್ಷಣ ಕಾಲೇಜು, ಬೆಂಗಳೂರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು