ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರಿಂಗ್‌ ಕೋರ್ಸ್‌: ನ್ಯಾನೊ, ಬಯೊಮೆಡಿಕಲ್‌ನತ್ತ ವಿದ್ಯಾರ್ಥಿಗಳ ಚಿತ್ತ

Last Updated 10 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳು ಎಂಜಿನಿಯರಿಂಗ್‌ ಕೋರ್ಸ್‌ಗೆ ಸೇರುವ ಮುನ್ನ ಯಾವುದಕ್ಕೆ ಬೇಡಿಕೆ ಇದೆ ಎಂದು ತಿಳಿದುಕೊಳ್ಳುವುದು ಅಗತ್ಯ. ಬಯೊಮೆಡಿಕಲ್‌, ಏರೋಸ್ಪೇಸ್‌, ಕೆಮಿಕಲ್‌, ಸೋಲಾರ್‌, ರೋಬಾಟಿಕ್ಸ್‌, ನ್ಯಾನೊ ತಂತ್ರಜ್ಞಾನ ಮೊದಲಾದ ಕೋರ್ಸ್‌ಗಳಿಗೆ ಸದ್ಯ ಬೇಡಿಕೆ ಹೆಚ್ಚಿದೆ

ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯ ಫಲಿತಾಂಶ ಪ್ರಕಟವಾಗಿದ್ದು, ರ‍್ಯಾಂಕಿಂಗ್‌ ಪಟ್ಟಿ ಪ್ರಕಾರ ವಿದ್ಯಾರ್ಥಿಗಳು ಮುಂದಿನ ಎಂಜಿನಿಯರಿಂಗ್‌ ಕೋರ್ಸ್‌, ಕಾಲೇಜಿನ ಆಯ್ಕೆಯಲ್ಲಿ ತೊಡಗಿದ್ದಾರೆ. ಎಂಜಿನಿಯರಿಂಗ್‌ ವಿಭಾಗದಲ್ಲಿ ಶಾಖೆಗಳು ಸಾಕಷ್ಟಿದ್ದು, ವಿದ್ಯಾರ್ಥಿಗಳಲ್ಲಿ ಹಲವರಿಗೆ ಯಾವ ಶಾಖೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ ಇರಬಹುದು. ಸದ್ಯಕ್ಕೆ ಯಾವುದಕ್ಕೆ ಬೇಡಿಕೆ ಇದೆ ಎನ್ನುವುದಕ್ಕಿಂತ ಅವರ ಪದವಿ ಮುಗಿಯುವ ಸಮಯದಲ್ಲಿ ಯಾವುದಕ್ಕೆ ಬೇಡಿಕೆ ಬರಬಹುದು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ. ಇದು ಸ್ವಲ್ಪ ಕಷ್ಟಕರವಾದರೂ ಉದ್ಯೋಗ ಮಾರುಕಟ್ಟೆಯಲ್ಲಿನ ಏರಿಳಿತಗಳನ್ನು ಗಮನಿಸುವ ಮಾರ್ಗದರ್ಶಕರ ನೆರವನ್ನು ಕೋರಬಹುದು.

ಸಾಮಾನ್ಯವಾಗಿ ಹೇಳುವುದಾದರೆ ಬಹುತೇಕ ಎಲ್ಲಾ ಶಾಖೆಗಳಲ್ಲೂ ಸಾಕಷ್ಟು ಅವಕಾಶಗಳಿವೆ. ಆದರೆ ಕೆಲವು ಶಾಖೆಗಳಲ್ಲಿ ಹೆಚ್ಚು ಅವಕಾಶಗಳಿವೆ ಎನ್ನಬಹುದು. ಕಂಪ್ಯೂಟರ್‌ ವಿಜ್ಞಾನ, ಎಲೆಕ್ಟ್ರಾನಿಕ್ಸ್‌, ಎಲೆಕ್ಟ್ರಿಕಲ್‌, ಮೆಕ್ಯಾನಿಕಲ್‌, ಸಿವಿಲ್‌ ಮೊದಲಾದವುಗಳು ಸಾಂಪ್ರದಾಯಿಕ ಕೋರ್ಸ್‌ಗಳಾಗಿದ್ದು, ಕೆಲವು ಹೊಸ ಕೋರ್ಸ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ.

ಬಯೊಮೆಡಿಕಲ್‌, ಏರೋಸ್ಪೇಸ್‌, ಕೆಮಿಕಲ್‌, ಸೋಲಾರ್‌, ನ್ಯಾನೊ ತಂತ್ರಜ್ಞಾನ, ಟೆಲಿಕಮ್ಯೂನಿಕೇಶನ್‌, ರೋಬಾಟಿಕ್ಸ್‌, ಮಶೀನ್‌ ಲರ್ನಿಂಗ್‌, ಪೆಟ್ರೋಲಿಯಂ ಎನರ್ಜಿ, ಡೇಟಾ ಸೈನ್ಸ್‌, ಮೈನಿಂಗ್‌... ಮೊದಲಾದ ಹತ್ತು ಹಲವಾರು ಕೋರ್ಸ್‌ಗಳನ್ನು ಇತ್ತೀಚೆಗೆ ಆರಂಭಿಸಲಾಗಿದ್ದು, ವಿದ್ಯಾರ್ಥಿಗಳು ಈ ಹೊಸ ಕೋರ್ಸ್‌ಗಳ ಬಗ್ಗೆ ಆಸಕ್ತರಾಗಿದ್ದಾರೆ.

ನ್ಯಾನೊ ಟೆಕ್ನಾಲಜಿ: ಇದರಲ್ಲಿ ಹತ್ತಾರು ವಿಷಯಗಳನ್ನು ವಿದ್ಯಾರ್ಥಿ ಕಲಿಯಬಹುದು. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ ಮೊದಲಾದವುಗಳು ಇದರಲ್ಲಿ ಸೇರಿವೆ. ಕ್ವಾಂಟಮ್‌ ಮೆಕ್ಯಾನಿಕ್ಸ್‌, ಮಟೀರಿಯಲ್‌ ಸೈನ್ಸ್‌, ಥರ್ಮೊಡೈನಮಿಕ್ಸ್‌, ಕಾರ್ಬನ್‌ ಮಟೀರಿಯಲ್‌, ಎಲೆಕ್ಟ್ರಾನಿಕ್ಸ್‌ ಮೊದಲಾದವುಗಳ ಬಗ್ಗೆ ಅಧ್ಯಯನ ನಡೆಸಬಹುದು. ಇದು ಬಹಳ ವಿಸ್ತಾರವಾದ ಕ್ಷೇತ್ರವಾಗಿದ್ದು, ಸಂಶೋಧನೆಗೆ ಸಾಕಷ್ಟು ಅವಕಾಶಗಳಿವೆ. ಔಷಧ ಕ್ಷೇತ್ರದಲ್ಲಿ ಕೂಡ ಸಂಶೋಧನೆ ನಡೆಸಬಹುದು. ಇದರಲ್ಲಿ ಪದವಿ ಪಡೆದವರು ನ್ಯಾನೊ ಟೆಕ್ನಾಲಜಿಸ್ಟ್‌, ಮೈಕ್ರೊಫ್ಯಾಬ್ರಿಕೇಶನ್‌ ಎಂಜಿನಿಯರ್‌ ಅಲ್ಲದೇ ಪ್ರಾಧ್ಯಾಪಕರಾಗಿ, ವಿಜ್ಞಾನಿಯಾಗಿ ಉದ್ಯೋಗಕ್ಕೆ ಸೇರಬಹುದು.

ಪೆಟ್ರೋಲಿಯಂ ಎಂಜಿನಿಯರಿಂಗ್‌: ಇದರಲ್ಲಿ ಫ್ಲ್ಯೂಡ್‌ ಮೆಕ್ಯಾನಿಕ್ಸ್‌, ಥರ್ಮೊಡೈನಮಿಕ್ಸ್‌ ಮೊದಲಾದ ವಿಷಯಗಳು ಅಡಕವಾಗಿವೆ. ವಿದ್ಯಾರ್ಥಿಗಳು ಪೆಟ್ರೋಲಿಯಂ ನಿಕ್ಷೇಪಗಳ ಬಗ್ಗೆ, ಬಾವಿ ಕೊರೆಯುವ ತಂತ್ರಜ್ಞಾನಗಳು, ಪೆಟ್ರೋಲಿಯಂ ಮೂಲಗಳ ಬಳಕೆ ಬಗ್ಗೆ ಕಲಿಯಬಹುದು. ಈ ಕೋರ್ಸ್‌ನಲ್ಲಿ ಪದವಿ ಪಡೆದವರು ಪ್ರೊಡಕ್ಷನ್‌ ಎಂಜಿನಿಯರ್‌, ರಿಸರ್ವೈರ್‌ ಎಂಜಿನಿಯರ್‌ ಮೊದಲಾದ ಹುದ್ದೆಗಳನ್ನು ಗಿಟ್ಟಿಸಬಹುದು.

ಬಯೊಮೆಡಿಕಲ್‌ ಎಂಜಿನಿಯರಿಂಗ್‌: ಹೆಸರೇ ಸೂಚಿಸುವಂತೆ ಈ ಎಂಜಿನಿಯರಿಂಗ್‌ ಕೋರ್ಸ್‌ನಲ್ಲಿ ವೈದ್ಯಕೀಯ ಹಾಗೂ ಜೀವಶಾಸ್ತ್ರದ ವಿಷಯಗಳು ಸೇರಿಕೊಂಡಿವೆ. ಇದನ್ನು ಓದಿದವರಿಗೆ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದು, ವಿದೇಶಗಳಲ್ಲಿ ಕೂಡ ಉದ್ಯೋಗಕ್ಕೆ ಸೇರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT