ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಪರೀಕ್ಷಾ ಸಮಯ; ಮಗುವಿಗೂ ತಾಯಿಗೂ ಬೇಕು ಸಿದ್ಧತೆ

Last Updated 4 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಕಳೆದ ಎರಡು ವರ್ಷಗಳಿಂದ ಕೊರೊನಾ ಹಾವಳಿಯಿಂದ ಅಸ್ತವ್ಯಸ್ತಗೊಂಡಿದ್ದ ಶಿಕ್ಷಣ ವ್ಯವಸ್ಥೆ ನಿಧಾನಕ್ಕೆ ಚೇತರಿಸಿಕೊಳ್ಳತೊಡಗಿದೆ. ಕಂಪ್ಯೂಟರ್ ಮತ್ತು ಮೊಬೈಲ್ ಸ್ಕ್ರೀನಿನ ಮೇಲೆ ಕಣ್ಣು ಕೀಲಿಸಿ ಕುಳಿತಿರುತ್ತಿದ್ದ ಮಕ್ಕಳು ಶಾಲೆಗೆ ಹೋಗಿ ಪಾಠ ಕೇಳುತ್ತಿದ್ದಾರೆ.ಆನ್‌ಲೈನ್‌ ಪಾಠಕ್ಕೆ ಒಗ್ಗಿದ್ದವರು ನಿಧಾನವಾಗಿ ಆಫ್‌ಲೈನ್ ಪಾಠಕ್ಕೆ ಹೊಂದಿಕೊಳ್ಳುತ್ತಿದ್ದಾರೆ.

ಬದಲಾದ ಕಲಿಕಾ ವಾತಾವರಣದಿಂದ ಕೆಲವು ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಕೋವಿಡ್ ನಂತರ ಶಾಲೆಗಳಲ್ಲಿ ನಡೆದಿರುವ ‘ಕಿರು ಪರೀಕ್ಷೆ’ಗಳಲ್ಲಿ ಮಕ್ಕಳು ತೋರಿರುವ ‘ಪರ್ಫಾರ್ಮೆನ್ಸ್‌’, ಅವರ ಕಲಿಕಾ ಸಾಮರ್ಥ್ಯ ವನ್ನು ತೆರೆದಿಟ್ಟಿದೆ. ಇದರಿಂದ ಪೋಷಕರು ಆತಂಕಗೊಂಡಿದ್ದಾರೆ. ಈ ಸ್ಥಿತಿಯಲ್ಲೇ ಮಕ್ಕಳು ವಾರ್ಷಿಕ ಪರೀಕ್ಷೆ ಬರೆಯಬೇಕಿದ್ದು, ಕೆಲವರು ಸಹಜವಾಗಿ ಒತ್ತಡಕ್ಕೊಳಗಾಗುತ್ತಿದ್ದಾರೆ. ಇನ್ನೂ ಕೆಲ ಮಕ್ಕಳು ಖಿನ್ನತೆಗೆ ಒಳಗಾಗುವ ಸಾಧ್ಯತೆಯೂ ಇರುತ್ತದೆ.

ಈ ಹಂತದಲ್ಲಿ ತಾಯಂದಿರು ಸನ್ನಿವೇಶವನ್ನು ಸಮರ್ಪಕವಾಗಿ ನಿರ್ವಹಿಸಬೇಕು.ಆದರೆ, ವ್ಯತ್ಯಾಸವಾಗಿ ರುವ ಮಕ್ಕಳ ಕಲಿಕೆ ಕ್ರಮವನ್ನು ಸರಿದಾರಿಗೆ ತರುವುದು ಶಿಕ್ಷಕರು ಹಾಗೂ ಪೋಷಕರಿಗೆ ಸವಾಲಿನ ಕೆಲಸವೇ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಬೋಧನಾ ವಿಧಾನವನ್ನು ಪರಿಷ್ಕರಿಸಿಕೊಂಡು, ಸರಳ ಕಲಿಕಾ ವಿಧಾನಗಳು ಮತ್ತು ಪ್ರಾತ್ಯಕ್ಷಿಕೆಗಳನ್ನು ಅನುಸರಿಸಬೇಕು. ಇದೇ ವೇಳೆ ಪೋಷಕರು, ಮಕ್ಕಳ ಬಗ್ಗೆ ಹೆಚ್ಚು ನಿಗಾವಹಿಸಬೇಕು.

ತಾಯಂದಿರು ಏನು ಮಾಡಬೇಕು?

ಹೆಚ್ಚಿನ ಅಂಕ ಗಳಿಕೆಗಾಗಿ ಮಕ್ಕಳ ಮೇಲೆ ಒತ್ತಡ ಹಾಕಬೇಡಿ. ಅವರ ಜವಾಬ್ದಾರಿಯನ್ನಷ್ಟೇ ಅವರಿಗೆ ತಿಳಿಸಿಕೊಟ್ಟರೆ ಸಾಕು.

ಬೇರೆ ಮಕ್ಕಳ ಜೊತೆ ಹೋಲಿಕೆ ಸಲ್ಲ. ಪ್ರತಿ ಮಗು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಅದನ್ನು ಗುರುತಿಸಿ ಪೋಷಿಸಬೇಕು. ತಮ್ಮ ಮಗುವಿನ ಪ್ರತಿಭೆಯ ಕುರಿತು ಅಭಿಮಾನವಿರಲಿ ಮತ್ತು ಉತ್ತೇಜನವಿರಲಿ.

ಮಕ್ಕಳಿಗೆ ಸೂಕ್ತ ಸಮಯಕ್ಕೆ ಹಣ್ಣು, ತರಕಾರಿಯಂತಹ ಪೌಷ್ಟಿಕ ಆಹಾರ ನೀಡಿ. ಸರಿಯಾಗಿ ನಿದ್ದೆ ಮಾಡುವಂತೆ ಗಮನಹರಿಸಿ. ಆಹಾರ ಹಿತ–ಮಿತವಾಗಿರಲಿ. ಸಮಯಕ್ಕೆ ಸರಿಯಾಗಿ ಆಹಾರ ನೀಡಿ. ಇದು ಮಕ್ಕಳ ಬೌದ್ಧಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಆಹಾರದಷ್ಟೇ ಸಮರ್ಪಕವಾದ ನಿದ್ದೆ ಬಹಳ ಮುಖ್ಯ. ಮಗು ಸರಿಯಾಗಿ ನಿದ್ರಿಸುವಂತೆ ಗಮನಹರಿಸಿ.

ಇಷ್ಟು ದಿನ ಅಂಟಿಕೊಂಡಿದ್ದ ಮೊಬೈಲ್ ‘ಬಂಧ’ವನ್ನು ಒಮ್ಮೆಗೇ ಬಿಡಿಸುವುದು ಕಷ್ಟ. ಆದರೆ ಅದರ ಬಳಕೆ ಮಿತವಾಗಿರುವಂತೆ ನೋಡಿಕೊಳ್ಳಿ.ಮಗು ಏನನ್ನು ನೋಡುತ್ತದೆ ಎಂಬುದರ ಬಗ್ಗೆ ಗಮನವಿರಲಿ. ಆದರೆ ಸದಾ ಸಂದೇಹದಿಂದ ನೋಡಬೇಡಿ. ಅದು ಮಗುವಿನ ಮನಸ್ಸಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

ಗೆಳೆಯರೊಂದಿಗಿನ ಒಡನಾಟಕ್ಕೆ ಅತಿಯಾದ ನಿರ್ಬಂಧ ಸಲ್ಲದು. ಆದರೆ ಅವರ ಚಲನವಲನಗಳ ಬಗ್ಗೆ ನಿಗಾ ವಹಿಸಬೇಕು.

ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ವಾಂತಿಭೇದಿ, ಕಾಮಾಲೆಯಂತಹ ಕಾಯಿಲೆಗಳ ಸಂಭವನೀಯತೆಯೂ ಹೆಚ್ಚು. ಹಾಗಾಗಿ ಆಹಾರ ಪಾನೀಯಗಳ ಸೇವನೆ ಮತ್ತು ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳಲು ನಿಗಾ ವಹಿಸಬೇಕು. ಮಗುವಿನ ಯಾವುದೇ ಅನಾರೋಗ್ಯದ ಬಗ್ಗೆ ಉದಾಸೀನ ತೋರಬೇಡಿ. ತಕ್ಷಣ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಕೊಡಿಸಿ.

ಹದಿನೈದು ವರ್ಷ ಮೀರಿರುವ ಮಕ್ಕಳಿಗೆ ಕೊರೊನಾ ಲಸಿಕೆಯನ್ನು ತಪ್ಪದೇ ಹಾಕಿಸಿ.

ಕೊರೊನಾವು ಸಮುದಾಯದಲ್ಲಿ ಇನ್ನೂ ಇದೆ. ಹಾಗಾಗಿ ಎಲ್ಲಾ ಮುನ್ನೆಚ್ಚರಿಕೆಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಗುವಿಗೆ ತಿಳಿಹೇಳಬೇಕು.

ಮಕ್ಕಳು ಏನು ಮಾಡಬೇಕು?

ಪರೀಕ್ಷೆ ಸಮೀಪಿಸುತ್ತಿದೆ. ಪಾಠಗಳನ್ನು ಪುನರ್‌ಮನನ ಮಾಡಿಕೊಳ್ಳಿ. ಇದರಿಂದ ಪರೀಕ್ಷೆ ವೇಳೆ ಹೆಚ್ಚು ಒತ್ತಡಕ್ಕೊಳಗಾಗುವುದನ್ನು ತಪ್ಪಿಸಬಹುದು.

ಓದಿದ್ದನ್ನು ಬರೆದು ಅಭ್ಯಾಸ ಮಾಡಿ. ಆಗ ಚೆನ್ನಾಗಿ ನೆನಪಿನಲ್ಲಿ ಉಳಿಯುತ್ತದೆ.

ಸುಲಭವೆನಿಸುವ ವಿಷಯಗಳಿಗಿಂತ ಕ್ಲಿಷ್ಟಕರ ವಿಷಯಗಳಿಗೆ ಹೆಚ್ಚು ಒತ್ತು ನೀಡಬೇಕು.

ಸಹಪಾಠಿಗಳ ಜೊತೆ ಚರ್ಚಿಸುವುದು ವಿಷಯವನ್ನು ನೆನಪಿಟ್ಟುಕೊಳ್ಳಲು ಸಹಕಾರಿ.

ಯಾವುದೇ ವಿಷಯದಲ್ಲಿ ಏನೇ ಸಂದೇಹವಿದ್ದರೂ ನೇರವಾಗಿ ಶಿಕ್ಷಕರನ್ನು ಕೇಳಿ ಬಗೆಹರಿಸಿಕೊಳ್ಳಬೇಕು.

ಮೊಬೈಲ್ ಮತ್ತು ಟಿ.ವಿ ವೀಕ್ಷಣೆ ಮಿತವಾಗಿರಲಿ.‌ ಆದರೆ, ಸಾಹಿತ್ಯ, ಸಂಗೀತಗಳಂತಹ ಪಠ್ಯೇತರ ಚಟುವಟಿಕೆಗಳಿಗೂ ಒಂದಿಷ್ಟು ಸಮಯ ಕೊಡಿ.

ನೆನಪಿನ ಶಕ್ತಿಗೂ ನಿದ್ರೆಗೂ ನೇರ ಸಂಬಂಧವಿದೆ. ಆದುದರಿಂದ ಏಳರಿಂದ ಎಂಟು ಗಂಟೆಗಳ ಕಾಲ ಗುಣಮಟ್ಟದ ನಿದ್ರೆ ಅತ್ಯಗತ್ಯ. ಓದಿನ ನೆಪದಲ್ಲಿ ರಾತ್ರಿ ಬಹಳ ಹೊತ್ತಿನವರೆಗೆ ನಿದ್ದೆಗೆಡಬಾರದು. ಮುಂಜಾನೆಯ ಓದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಕಾರಿ.

ನಡಿಗೆ, ಓಟ ಮತ್ತಿತರ ಲಘು ವ್ಯಾಯಾಮಗಳು ಮನಸ್ಸನ್ನು ಪ್ರಫುಲ್ಲವಾಗಿರಿಸುತ್ತವೆ. ಆಟೋಟಗಳಿಗೆ ಸಮಯ ನಿಗದಿಯಾಗಿರಲಿ. ಧ್ಯಾನ ಮತ್ತು ಪ್ರಾಣಾಯಾಮ ನೆನಪಿನ ಶಕ್ತಿ ಹೆಚ್ಚಿಸುತ್ತವೆ. ಮಾತ್ರವಲ್ಲ, ನೆನಪಿನ ಶಕ್ತಿ ವೃದ್ಧಿಗೆ, ಸಕಾರಾತ್ಮಕ ಚಿಂತಿಸಲು ನೆರವಾಗುತ್ತವೆ.

ಸಮಯಕ್ಕೆ ಸರಿಯಾಗಿ ಊಟ ಮಾಡಿ. ಬೆಳಗಿನ ಉಪಾಹಾರ ತಪ್ಪಿಸಬೇಡಿ. ಏಕೆಂದರೆ ದಿನಪೂರ್ತಿ ಲವಲವಿಕೆಯಿಂದಿರಲು ಬೆಳಗಿನ ಉಪಾಹಾರವೇ ಮೂಲಾಧಾರ. ರಾತ್ರಿ ಭೋಜನ ಲಘುವಾಗಿರಲಿ. ಕಾಫಿ, ಚಹಾದ ಸೇವನೆ ಮಿತವಾಗಿರಲಿ. ತಾಜಾಹಣ್ಣುಗಳ ಸೇವನೆ ಒಳ್ಳೆಯದು. ಒಣಹಣ್ಣುಗಳು ನೆನಪಿನ ಶಕ್ತಿಯನ್ನು ವೃದ್ಧಿಸಲು ಮತ್ತು ಮನಸ್ಸನ್ನು ಶಾಂತವಾಗಿರಿಸಲು ಸಹಕಾರಿ. ಕರಿದ ಪದಾರ್ಥಗಳು ಮತ್ತು ಜಂಕ್ ಫುಡ್‌ಗಳ ಸೇವನೆಯ ಮೇಲೆ ನಿಯಂತ್ರಣವಿರಲಿ.

ಇನ್ನೇನು ಬಿಸಿಲು ಹೆಚ್ಚಾಗಲಿದೆ. ದಾಹ ತಣಿಸಲು ಮತ್ತು ನಿರ್ಜಲತೆ (DEHYDRATION) ತಡೆಗೆ ಆಗಾಗ ನೀರು ಕುಡಿಯುತ್ತಿರಬೇಕು. ಎಳನೀರು, ಹಣ್ಣಿನ ರಸದಂತಹ ತಾಜಾ ದ್ರವಾಹಾರಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT