ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷಯವನ್ನು ವೇಗವಾಗಿ ಗ್ರಹಿಸುವುದು ಹೇಗೆ ?

Last Updated 9 ಅಕ್ಟೋಬರ್ 2022, 21:27 IST
ಅಕ್ಷರ ಗಾತ್ರ

1. ನನಗೆ ಯಾವುದೇ ವಿಷಯ ಬೇಗ ಅರ್ಥವಾಗುವುದಿಲ್ಲ. ಗ್ರಹಿಕೆಯ ಶಕ್ತಿ ಕಡಿಮೆ ಇದೆ; ಗ್ರಹಿಸುವವರೆಗೂ ಕಷ್ಟಪಡುತ್ತೇನೆ. ಒಮ್ಮೆ ವಿಷಯವನ್ನು ಸರಿಯಾಗಿ ಗ್ರಹಿಸಿದ ಮೇಲೆ ಕಾರ್ಯತಂತ್ರವನ್ನು ಪಾಲಿಸುತ್ತೇನೆ. ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಏನು ಮಾಡಬೇಕು?
ಊರು, ಹೆಸರು ತಿಳಿಸಿಲ್ಲ.

ನಮ್ಮ ಸಾಮರ್ಥ್ಯದ ಒಂದು ಕನಿಷ್ಠ ಭಾಗವನ್ನಷ್ಟೇ ನಾವು ಸಕ್ರಿಯಗೊಳಿಸುತ್ತೇವೆ ಎಂದು ಅನೇಕ ಮನಃಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ, ಪ್ರಸ್ತುತ ನಿಮ್ಮ ಕಲಿಕೆಯ ಶೈಲಿಯನ್ನು ಪರೀಕ್ಷಿಸಿ, ನಿಮ್ಮ ಅನನ್ಯ ಕಲಿಕೆಯ ಶೈಲಿಯನ್ನು ಬೆಳೆಸಿಕೊಳ್ಳಿ.

ನಿಮ್ಮ ಗ್ರಹಿಕೆ ಮತ್ತು ಕಲಿಕೆಯ ಸಾಮರ್ಥ್ಯವನ್ನು ವೃದ್ಧಿಸಲು ಈ ಸಲಹೆಗಳನ್ನು ಅನುಸರಿಸಿ:

• ಎಲ್ಲಾ ವಿಷಯಗಳಲ್ಲಿ ಗ್ರಹಿಕೆಯ ಕೊರತೆಯಿದೆಯೇ ಅಥವಾ ಯಾವುದಾದರೂ ಒಂದೆರಡು ವಿಷಯಗಳಲ್ಲಿ ಮಾತ್ರ ಈ ಸಮಸ್ಯೆಯಿದೆಯೇ ಎಂದು ಪರಿಶೀಲಿಸಿ.
• ನಿಮಗಿರುವ ಗ್ರಹಿಕೆಯ ಸಮಸ್ಯೆಯ ಬಗ್ಗೆ ನಿಮ್ಮ ಅಧ್ಯಾಪಕರೊಡನೆ ಚರ್ಚಿಸಿ, ಅವರು ನೀಡುವ ಸಲಹೆಗಳನ್ನು ಪಾಲಿಸಿ.
• ಉಪನ್ಯಾಸಗಳನ್ನು ಏಕಾಗ್ರತೆಯಿಂದ ಸಕ್ರಿಯವಾಗಿ ಆಲಿಸಬೇಕು.
• ತರಗತಿಯಲ್ಲಿ ಬೋಧಿಸುವ ವಿಷಯ ಅರ್ಥವಾಗದಿದ್ದರೆ ಸಂಕೋಚವಿಲ್ಲದೆ ಪ್ರಶ್ನೆಗಳನ್ನು ಕೇಳಬೇಕು. ಏಕೆಂದರೆ, ಪ್ರಶ್ನೆಗಳನ್ನು ಕೇಳುವುದರಿಂದ ವಿಮರ್ಶಾತ್ಮಕ ಚಿಂತನಾ ಕೌಶಲ್ಯಗಳ ಅಭಿವೃದ್ಧಿಯ ಜೊತೆಗೆ, ವಿಷಯದ ಬಗ್ಗೆ ಒಳನೋಟಗಳು ಲಭಿಸಿ ಕಲಿಕೆ ಪರಿಣಾಮಕಾರಿಯಾಗುತ್ತದೆ.
• ತರಗತಿಯಲ್ಲಿ ಪರಿಣಾಮಕಾರಿಯಾಗಿ ಟಿಪ್ಪಣಿ (ನೋಟ್ಸ್) ಬರೆಯುವುದರಿಂದ ಕಲಿಕೆಯ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ಆತ್ಮವಿಶ್ವಾಸ ಬೆಳೆಯುತ್ತದೆ.
• ಪರಿಣಾಮಕಾರಿ ಓದುವಿಕೆಯ ಕಲೆಯನ್ನು ಎಸ್‌ಕ್ಯು3ಆರ್ (SQ3R) ನಂತಹ ತಂತ್ರಗಾರಿಕೆಯ ಮೂಲಕ ರೂಢಿಸಿಕೊಳ್ಳಿ. ಇದರಿಂದ, ಜ್ಞಾಪಕ ಶಕ್ತಿಯೂ ವೃದ್ಧಿಸುತ್ತದೆ.
ಸಕಾರಾತ್ಮಕವಾದ ಆಶಾಭಾವನೆಯಿಂದ ಈ ಸಲಹೆಗಳನ್ನು ಅನುಸರಿಸಿದರೆ ಒಂದೆರಡು ತಿಂಗಳುಗಳಲ್ಲಿ ನಿಮ್ಮ ಕಲಿಕೆ ಸುಧಾರಿಸುತ್ತದೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

2. ಪಿಯುಸಿ (ಪಿಸಿಎಂಬಿ) ಓದುತ್ತಿದ್ದೀನಿ. ಐದು ವರ್ಷಗಳಲ್ಲಿ ಎಂಬಿಬಿಎಸ್ ಹೊರತುಪಡಿಸಿ ವೃತ್ತಿಪರಳಾಗಲು ಯಾವ ಆಯ್ಕೆಗಳಿವೆ?

ರಶ್ಮಿ, ಊರು ತಿಳಿಸಿಲ್ಲ.

ಪಿಯುಸಿ (ಪಿಸಿಎಂಬಿ) ವಿದ್ಯಾರ್ಥಿಗಳಿಗೆ ಅಸಂಖ್ಯಾತ ಉನ್ನತ ಶಿಕ್ಷಣದ ಅವಕಾಶಗಳಿವೆ. ಉದಾಹರಣೆಗೆ, ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಡಿಸೈನ್, ಆಹಾರ ತಂತ್ರಜ್ಞಾನ, ಎನ್‌ಡಿಎ, ಐಎಎಸ್, ಮಾಧ್ಯಮ, ಪತ್ರಿಕೋದ್ಯಮ, ಕೃಷಿ ಸಂಬಂಧಿತ ಕೋರ್ಸ್‌ಗಳು, ಬಿಎಸ್ಸಿ(ಆನರ್ಸ್ ಸೇರಿದಂತೆ 50ಕ್ಕೂ ಹೆಚ್ಚು ಆಯ್ಕೆಗಳು), ಬಿಸಿಎ, ಸಿಎ, ಎಸಿಎಸ್, ಐಸಿಡಬ್ಲ್ಯು ಸೇರಿದಂತೆ ಅನೇಕ ಕೋರ್ಸ್ ಆಯ್ಕೆಗಳಿವೆ. ಪ್ರಮುಖವಾಗಿ, ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಅಭಿರುಚಿ ಯಾವ ಕ್ಷೇತ್ರದಲ್ಲಿದೆ ಎಂದು ನೀವು ಅರಿತು, ವೃತ್ತಿಯೋಜನೆಯ ಮುಖಾಂತರ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು.

ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

3. ಕೇವಲ ಬಿಎ ಪದವಿ ಪಡೆದವರಿಗೆ ಭವಿಷ್ಯ ಇದೆಯೇ? ಈ ಪದವಿ ಪಡೆದವರು ಯಾವ ಕ್ಷೇತ್ರದಲ್ಲಿ ಕೆಲಸ ಹುಡುಕಬಹುದು? ನನಗೆ ಮುಂದೆ ಓದುವಷ್ಟು ಆರ್ಥಿಕ ಅನುಕೂಲವಿಲ್ಲ. ಕೆಲಸ ಪಡೆದುಕೊಂಡು ಮತ್ತೆ ಓದಬೇಕೆಂಬ ಆಸೆಯಿದೆ. ಯಾವ ಕ್ಷೇತ್ರದಲ್ಲಿ ಕೆಲಸ ಹುಡುಕಿದರೆ ಸೂಕ್ತ ?
ಹೆಸರು, ಊರು ತಿಳಿಸಿಲ್ಲ.

ಕಲಾ ವಿಭಾಗ ಅತ್ಯಂತ ವಿಸ್ತಾರವಾದ ಕ್ಷೇತ್ರ; ಹಾಗಾಗಿ, ಈ ವಿಭಾಗದಲ್ಲಿ ಅವಕಾಶಗಳು ಕಡಿಮೆ ಎನ್ನುವ ಅಭಿಪ್ರಾಯ ಸರಿಯಲ್ಲ. ಉದಾಹರಣೆಗೆ, ನಿಮಗಿರುವ ಈ ಅವಕಾಶಗಳನ್ನು ಗಮನಿಸಿ:
• ಸರ್ಕಾರಿ ಕ್ಷೇತ್ರದ ಹೆಚ್ಚು ಕಡಿಮೆ ಎಲ್ಲಾ ಇಲಾಖೆಯ ಕೆಲಸಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿಯಾಗುತ್ತಿದೆ.
• ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಬ್ಯಾಂಕಿಂಗ್ ನೇಮಕಾತಿಗಳೂ ಸಹ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ಆಗುತ್ತಿದೆ.
• ಶಿಕ್ಷಣ ಸಂಬಂಧಿತ ಡಿಪ್ಲೊಮಾ/ಪದವಿ ಕೋರ್ಸ್ ಮುಗಿಸಿ ಶಿಕ್ಷಕ ವೃತ್ತಿಯನ್ನು ಅರಸಬಹುದು.
• ಸ್ವಂತ ಪರಿಶ್ರಮದಿಂದ ಕೆಪಿಎಸ್‌ಸಿ/ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗಿ ಸರ್ಕಾರಿ ವಲಯದ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬಹುದು.
• ಭಾಷೆ/ನಿರ್ದಿಷ್ಟ ವಿಷಯದಲ್ಲಿ ಅಭಿರುಚಿ ಮತ್ತು ಪರಿಣತಿಯಿದ್ದಲ್ಲಿ, ಅನುವಾದ/ವಿಷಯಾಭಿವೃದ್ಧಿ/ಮಾಧ್ಯಮ ಕ್ಷೇತ್ರದಲ್ಲಿರುವ ಅವಕಾಶಗಳನ್ನು ಅರಸಬಹುದು.

ಬಿಎ ಪದವೀಧರರಿಗೆ ಇಂತಹ ಅನೇಕ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ. ನಿಮಗೆ ಸೂಕ್ತವೆನಿಸುವ ಕೆಲಸದಲ್ಲಿ ತೊಡಗಿಸಿಕೊಂಡು ನಿಮ್ಮ ವೃತ್ತಿಯೋಜನೆಯಂತೆ ಅಲ್ಪಾವಧಿ/ಪೂರ್ಣಾವಧಿ ಸರ್ಟಿಫಿಕೆಟ್/ಡಿಪ್ಲೊಮಾ/ಸ್ನಾತಕೋತ್ತರ (ಎಂಎ, ಎಂಬಿಎ ಇತ್ಯಾದಿ) ಕೋರ್ಸ್‌ಗಳನ್ನು ಮಾಡಿ ನಿಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು.

4. ನಾನು ಎಂಜಿನಿಯರಿಂಗ್ ಮಾಡಬೇಕು ಅಂದುಕೊಂಡಿದ್ದೇನೆ. ನನಗೆ ಇ ಆ್ಯಂಡ್‌ ಸಿ (ಎಲೆಕ್ಟ್ರಾನಿಕ್‌ಆ್ಯಂಡ್‌ ಕಮ್ಯೂನಿಕೇಷನ್ ) ಮತ್ತು ಸಿ.ಎಸ್ (ಕಂಪ್ಯೂಟರ್ ಸೈನ್ಸ್) ವಿಭಾಗಗಳಲ್ಲಿ ಯಾವ ವಿಭಾಗವನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಗೊಂದಲವಿದೆ. ಗಣಿತ ಹಾಗೂ ರಸಾಯನಶಾಸ್ತ್ರದ ವಿಷಯಗಳು ಸುಲಭವಾಗಿವೆ; ಭೌತಶಾಸ್ತ್ರ ಸ್ವಲ್ಪ ಮಟ್ಟಿಗೆ ಕಠಿಣವೆನಿಸುತ್ತದೆ. ಯಾವ ವಿಭಾಗವನ್ನು ತೆಗೆದುಕೊಂಡರೆ ನನ್ನ ಮುಂದಿನ ಭವಿಷ್ಯ ಚೆನ್ನಾಗಿರುತ್ತದೆ? ಇ ಆ್ಯಂಡ್‌ ಸಿ ವಿಭಾಗಕ್ಕೆ ಸರ್ಕಾರಿ ವಲಯದಲ್ಲಿ ಉತ್ತಮ ಸಂಭಾವನೆ ದೊರೆಯುತ್ತದೆಯೇ? ಸಲಹೆ ನೀಡಿ.

ಹೆಸರು, ಊರು ತಿಳಿಸಿಲ್ಲ.

ಸದ್ಯಕ್ಕೆ, ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ ಹೆಚ್ಚಿನ ಬೇಡಿಕೆಯಿದೆ. ಹಾಗೂ ನಿಮಗೆ ಭೌತಶಾಸ್ತ್ರ ಕಠಿಣವೆನಿಸುವುದರಿಂದ ಕಂಪ್ಯೂಟರ್ ಸೈನ್ಸ್‌ ವಿಭಾಗ ಸೂಕ್ತವೆನಿಸುತ್ತದೆ. ಇ ಆ್ಯಂಡ್‌ ಸಿ ವಿಭಾಗದಲ್ಲಿ ಭೌತಶಾಸ್ತ್ರದ ಸಿದ್ದಾಂತಗಳು, ಪರಿಕಲ್ಪನೆಗಳು, ಸೂತ್ರಗಳು ಹೆಚ್ಚಾಗಿರುತ್ತವೆ.
ಎಂಜಿನಿಯರಿಂಗ್ (ಇಸಿ) ನಂತರ ಸರ್ಕಾರಿ ಕ್ಷೇತ್ರದ ಬೃಹತ್ ಉದ್ದಿಮೆಗಳಲ್ಲಿ (ಬಿಎಸ್‌ಎನ್‌ಎಲ್, ಬಿಇಎಲ್, ಬಿಎಅರ್‌ಸಿ, ಡಿಆರ್‌ಡಿಒ, ಐಎಸ್‌ಆರ್‌ಒ ಇತ್ಯಾದಿ), ಸರ್ಕಾರಿ ಇಲಾಖೆಗಳಲ್ಲಿ ಹಾಗೂ ಖಾಸಗಿ ಕ್ಷೇತ್ರದ ಉದ್ದಿಮೆಗಳಲ್ಲಿ ಉದ್ಯೋಗಾವಕಾಶಗಳಿವೆ. ಇದೇ ರೀತಿ, ಎಂಜಿನಿಯರಿಂಗ್ (ಸಿಎಸ್) ವಿಭಾಗದಲ್ಲೂ ಆಕರ್ಷಕ ಉದ್ಯೋಗಾವಕಾಶಗಳಿವೆ. ಆದ್ದರಿಂದ, ಅಂತಿಮ ಆಯ್ಕೆಯ ಮೊದಲು ಎಂಜಿನಿಯರಿಂಗ್ (ಇಸಿ) ವಿಭಾಗದ ಪಠ್ಯಕ್ರಮ, ವಿಷಯಸೂಚಿಯನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.

ಮತ್ತಷ್ಟು ಪ‍್ರಶ್ನೋತ್ತರಕ್ಕಾಗಿ www.prajavani.net/education ಜಾಲತಾಣಕ್ಕೆ ಭೇಟಿ ನೀಡಿ.

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ
ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT