ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆಯ ಯಶಸ್ಸಿಗೆ ಸೃಜನಶೀಲ ಸಂವಹನ

ಪರೀಕ್ಷೆಗಳಲ್ಲಿ ಸಂವಹನ ಕೌಶಲ ಭಾಗ-5
Last Updated 16 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಂವಹನದ ದೃಷ್ಟಿಯಿಂದ ಉತ್ತರಗಳು ಹೇಗಿರಬೇಕು ಎಂಬ ಪ್ರಶ್ನೆಗೆ ಅವು ನಿಮ್ಮ ಸೃಜನಶೀಲತೆಯನ್ನು ಎತ್ತಿ ತೋರಿಸುವಂತಿರಬೇಕು ಎಂಬುದೇ ಸರಿಯಾದ ಉತ್ತರವೇನೊ.

ಯಾವುದೇ ಪರೀಕ್ಷೆಗಳಲ್ಲಿ ಉತ್ತರಗಳನ್ನು ಬರೆಯುವವರು ಸಾಮಾನ್ಯವಾಗಿ ಒಂದು ಚೌಕಟ್ಟಿಗೆ ಬದ್ಧರಾಗಿ ರುತ್ತಾರೆ. ಎಲ್ಲಾ ಉತ್ತರಗಳಲ್ಲೂ ಇದನ್ನೇ ನೋಡುವಾಗ ಪರೀಕ್ಷಕನಿಗೆ ರೇಜಿಗೆಯಾಗುತ್ತದೆ. ಕೆಲವರು ಮೊದಲಿಗೆ ಪ್ರಶ್ನೆಯನ್ನೂ ಬರೆದು ‘ಉತ್ತರ’ ಎಂಬ ಶೀರ್ಷಿಕೆ ಕೊಟ್ಟು ಉತ್ತರ ಆರಂಭಿಸುತ್ತಾರೆ! ಇದು ಅನಗತ್ಯ ಮಾತ್ರವಲ್ಲ ಜಾಗ ಮತ್ತು ಸಮಯದ ದಂಡ. ಸಾವಿರಾರು ಉತ್ತರ ಪತ್ರಿಕೆಗಳನ್ನು ತಿದ್ದುವವರಿಗೆ ಮೊದಲ ನೋಟಕ್ಕೇ ಇದು ಸಾಮಾನ್ಯ ಉತ್ತರ ಎನಿಸಿಬಿಡುತ್ತದೆ. ಆಗ ನಿಮಗೆ ಸಾಮಾನ್ಯ ಅಂದರೆ ಮಧ್ಯಮ ಅಂಕಗಳು ಮಾತ್ರ ಬರುತ್ತವೆ. ಕೆಲವರು ‘ಪೀಠಿಕೆ’ ಎಂದು ಬರೆದು ಉತ್ತರ ಆರಂಭಿಸುತ್ತಾರೆ ನಂತರ ‘ವಿವರಣೆ’ ಎನ್ನುತ್ತಾರೆ ಕೊನೆಗೆ ‘ಉಪಸಂಹಾರ’ವೂ ಇರುತ್ತದೆ. ಉತ್ತರದಲ್ಲಿ ಈ ವಿಭಜನೆಗಳೇ ನಿಮ್ಮ ಮಟ್ಟವನ್ನು ಜರ‍್ರನೆ ಹೈಸ್ಕೂಲು ಮಟ್ಟಕ್ಕೆ ಇಳಿಸಿಬಿಡುತ್ತವೆೆ. ಉತ್ತರಗಳಲ್ಲಿ ಪೀಠಿಕೆ, ಮುಕ್ತಾಯ ಎಲ್ಲವೂ ನೀವು ಬಯಸುವಂತೇ ಇರಲಿ. ಆದರೆ ಅವುಗಳನ್ನು ಪ್ರತ್ಯೇಕವಾಗಿಸಿ ಹೇಳುವ ಅಗತ್ಯವಿದೆಯೇ?

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲ್ಲುವ ಉಪಾಯವೆಂದರೆ ತೀರಾ ಕಡಿಮೆ ಸಮಯ ಇರುವಾಗಲೂ ನಿಮ್ಮ ಉತ್ತರಗಳಲ್ಲಿ ಸೃಜನಶೀಲತೆಯ ಹೊಳಹು ಕೊಡುವುದು. ಅಂದರೆ ಇತರರು ಸಾಮಾನ್ಯವಾಗಿ ಬರೆಯುವ ರೀತಿಯಿಂದ ಹಾಗೂ ಯೋಚನಾ ಸರಣಿಗಿಂತ ಭಿನ್ನವಾಗಿ, ಅನನ್ಯವಾಗಿ ತೋರಿಸಿಕೊಳ್ಳುವುದು. ಆಗ ನಿಮಗೆ ಇತರರಿಗಿಂತ ಹೆಚ್ಚು ಅಂಕಗಳು ಬರುವ ಸಾಧ್ಯತೆ ಹೆಚ್ಚು.

ಪುನರುಕ್ತಿ ತಪ್ಪಿಸಿ

ನಿಮ್ಮ ಉತ್ತರಗಳು ಈ ತಪ್ಪುಗಳನ್ನು ಮಾಡದಿರುವುದು ಒಳಿತು. ಉದಾಹರಣೆಗೆ ಒಳ್ಳೆಯ ಬರವಣಿಗೆ ಯಲ್ಲಿ ಪುನರುಕ್ತಿ ಇರುವುದಿಲ್ಲ. ಪುನರುಕ್ತಿ ಅಂದರೆ ಬರೆದಿದ್ದನ್ನೇ ಬರೆಯುವುದು. ಸಂವಹನದಲ್ಲಿ ಒಂದು ಪ್ಯಾರಾದಲ್ಲಿ ಒಮ್ಮೆ ಬಳಸಿದ ಪದವನ್ನು ಮತ್ತೆ ಮತ್ತೆ ಬಳಸುವುದು ಒಳ್ಳೆಯದಲ್ಲ ಎನ್ನುತ್ತೇವೆ. ನಮಗೆ ಗೊತ್ತಿಲ್ಲದೇ ಭಾಷಣದಲ್ಲೂ ಬರವಣಿಗೆಯಲ್ಲೂ ಒಂದೇ ಪದವನ್ನು ಹಲವು ಬಾರಿ ಬಳಸುವುದನ್ನು ರೂಢಿ ಮಾಡಿಕೊಂಡಿರುತ್ತೇವೆ. ಇಲ್ಲೊಬ್ಬರು ‘ಅಷ್ಟೇ ಅಲ್ಲದೇ’ ಎಂಬುದನ್ನು ಪ್ರತಿವಾಕ್ಯಕ್ಕೂ ಸೇರಿಸುತ್ತಾರೆ. ಈ ಪುನರುಕ್ತಿ ತಲೆ ಚಿಟ್ಟುಹಿಡಿಸಿಬಿಡುತ್ತದೆ. ‘ಮತ್ತು’ ಅಥವಾ ‘ಹಾಗೂ’ - ಎರಡು ವಾಕ್ಯಗಳನ್ನು ಜೋಡಿಸುವ ಪದಗಳು. ಇವುಗಳ ಅತಿಬಳಕೆ ಕೂಡಾ ಅಪಾಯಕಾರಿ. ಕೆಲವರು ಮತ್ತು, ಮತ್ತು ಎನ್ನುತ್ತಾ ವಾಕ್ಯಗಳನ್ನು ದೀರ್ಘ ಮಾಡುತ್ತಾ ಹೋಗುತ್ತಾರೆ. ಒಂದು ಪ್ಯಾರಾದಲ್ಲಿ ಒಂದೇ ವಾಕ್ಯವಿರಬೇಕು ಎಂದು ಹಟತೊಟ್ಟವರಂತೆ ಬರೆಯುತ್ತಾರೆ. ಇದು ಬರವಣಿಗೆಯ ಅಂದ ಕೆಡಿಸುತ್ತದೆ. ನೀವು ಬರೆದದ್ದು ಓದಬಹುದು ಆದರೆ ಅರ್ಥ ಮಾಡಿಕೊಳ್ಳುವುದು ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣಮಾಡುತ್ತದೆ.

ಪಾಂಡಿತ್ಯದ ಶಬ್ದ ಬೇಡ

ಇನ್ನು ಕೆಲವರಿಗೆ ದೊಡ್ಡ ದೊಡ್ಡ ಶಬ್ದಗಳನ್ನು ಬಳಸುವ ಚಟ. ಇವನ್ನು ಯಾವ ಶಬ್ದಕೋಶದಿಂದ ಹುಡುಕಿ ತಂದರೋ ಎಂದು ಆಶ್ಚರ್ಯವಾಗುತ್ತದೆ. ಎಷ್ಟೋ ಬಾರಿ ಅವುಗಳಿಗೆ ಅಲ್ಲಿ ಅರ್ಥವೇ ಇರುವುದಿಲ್ಲ. ಅನಗತ್ಯ ವಾಗಿ ಒಂದು ಪದವನ್ನೂ ಬಳಸದಿರುವುದು ಭಾಷೆಯನ್ನು ಚುರುಕಾಗಿಸುತ್ತದೆ. ಸಂವಹನದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಪರೀಕ್ಷೆಯಲ್ಲಿ ಗಡಿಬಿಡಿಯಲ್ಲಿ ಉತ್ತರ ಬರೆಯುವಾಗಲೂ ಅನಗತ್ಯವಾಗಿ ದೀರ್ಘವಾಗಿಸದ ಎಚ್ಚರಿಕೆ ಬೇಕು. ಸುಮ್ಮನೇ ಪುಟ ತುಂಬಿಸಲು ಏನೇನೋ ಬರೆದಿದ್ದಾರೆ ಎಂಬ ಅಭಿಪ್ರಾಯ ಮೌಲ್ಯಮಾಪಕರಲ್ಲಿ ಸುಳಿಯಬಾರದು. ಉತ್ತರಗಳು ಆದಷ್ಟು ಹೃಸ್ವವಾಗಿರಬೇಕು ಎಂಬುದು ನಿಜ. ಆದರೆ ಎಂಬುದು ಸಂವಹನದ ಮೂಲ ತತ್ವಗಳಲ್ಲಿ ಒಂದು. ಹೃಸ್ವವಾಗಿಸುವ ಹುಚ್ಚಿನಲ್ಲಿ ಸ್ಪಷ್ಟತೆಯನ್ನು ಬಲಿಕೊಡಬಾರದು.

ಅಂಡರ್‌ಲೈನ್ ಅನಗತ್ಯ

ಉತ್ತರಪತ್ರಿಕೆಗಳಲ್ಲಿ ಮೌಲ್ಯಮಾಪಕನಿಗೆ ಇರಿಸುಮುರಿಸು ಉಂಟುಮಾಡುವುದು ಎಲ್ಲಾ ವಾಕ್ಯಗಳನ್ನು ಅಂಡರ್‌ಲೈನ್ ಮಾಡುವ ಹುಚ್ಚು. ಯಾವುದೋ ವಿಶೇಷ ವಾಕ್ಯವಿದ್ದಾಗ ಮೌಲ್ಯಮಾಪಕರನ್ನು ಸೆಳೆಯಲು ಅಕ್ಷರಗಳ ಕೆಳಗೆ ಗೆರೆ ಎಳೆದರೆ ಒಪ್ಪೋಣ. ಆದರೆ ಎಲ್ಲಾ ವಾಕ್ಯಗಳಿಗೂ ಅಂಡರ್ ಲೈನ್ ಹಾಕಿದರೆ ಏನೆನಿಸುತ್ತದೆ? ಪರೀಕ್ಷಕ ಓದುವುದಿಲ್ಲ, ಆ ಸೂಕ್ಷ್ಮತೆ ಅವನಲ್ಲಿಲ್ಲ ಎಂಬ ತೀರ್ಮಾನದಿಂದ ಗೆರೆ ಎಳೆದು ಅವರನ್ನು ಆಕರ್ಷಿಸುವ ಹುನ್ನಾರ ಇದು ಎಂಬ ಅರ್ಥ ನೀಡದೇ? ಹೀಗೆ ಪ್ರತಿಯೊಂದೂ ವಾಕ್ಯವನ್ನೂ ಅಂಡರ್‌ಲೈನ್ ಮಾಡುವುದು ‘ತೋಳ ಬಂತು ತೋಳ’ ಕತೆಯನ್ನು ಜ್ಞಾಪಿಸುತ್ತದೆ. ನಿಜವಾಗಿಯೂ ಒಳ್ಳೆಯ ಅಂಶಗಳಿದ್ದು ಆ ಒಂದು ವಾಕ್ಯ ಪರೀಕ್ಷಕನನ್ನು ಸೆಳೆಯಲೇ ಬೇಕು ಎಂಬುದು ನಿಮ್ಮ ಉದ್ದೇಶವಾಗಿದ್ದರೆ, ಈ ಅಂಡರ್‌ಲೈನ್‌ಗಳ ಕಾರಣದಿಂದ ಆ ವಾಕ್ಯ ಪರೀಕ್ಷಕನ ಗಮನ ಸೆಳೆಯದೇ ಹೋಗಬಹುದು. ಉತ್ತರಗಳಿಗೆ ಅಂಡರ್‌ಲೈನ್ ಮಾಡುವ ಅಭ್ಯಾಸ ಅನಗತ್ಯ.ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಎಲ್ಲ ಪ್ರಶ್ನೆಗಳಿಗೂ ತಪ್ಪದೇ ಉತ್ತರ ನೀಡುವುದು ಬಹಳ ಮುಖ್ಯ. ತಪ್ಪು ಉತ್ತರ ನೀಡದಿರುವುದೂ ಅಷ್ಟೇ ಮುಖ್ಯ. ಹಾಗೆಯೇ ನಮ್ಮ ಉತ್ತರಗಳು ಸಮರ್ಥವಾಗಿ ಸಂವಹನಗೊಳ್ಳುವದು ನಿರ್ಣಾಯಕ ಅಂಶ.

ಲೇಖಕರು: ಸಂವಹನ ಪ್ರಾಧ್ಯಾಪಕರು ಮತ್ತು ಕುಲಪತಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT