ಮಂಗಳವಾರ, ಮೇ 11, 2021
28 °C

ಯುಪಿಎಸ್‌ಸಿ: ಸಂದರ್ಶನದಲ್ಲಿ ವಿಫಲವಾದರೂ ಉದ್ಯೋಗಾವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತೀಯ ನಾಗರಿಕ ಸೇವಾ ಪರೀಕ್ಷೆಯ ಸ್ಪರ್ಧಾರ್ಥಿಗಳಿಗೆ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಲೋಕಸೇವಾ ಆಯೋಗ ಶುಭ ಸುದ್ದಿ ನೀಡಿವೆ. ಐಎಎಸ್‌ ಪ್ರಿಲಿಮ್ಸ್‌ ಮತ್ತು ಮೇನ್ಸ್‌ ಪರೀಕ್ಷೆಗಳಲ್ಲಿ ಅರ್ಹತೆ ಗಳಿಸಿ, ಸಂದರ್ಶನ/ ವ್ಯಕ್ತಿತ್ವ ಪರೀಕ್ಷೆಯ ಹಂತದಲ್ಲಿ ವಿಫಲರಾದ ಸ್ಪರ್ಧಾರ್ಥಿಗಳಿಗೆ ಸರ್ಕಾರದ ಇತರ ವಿಭಾಗಗಳು ಹಾಗೂ ಖಾಸಗಿ ವಲಯದಲ್ಲಿ ಉದ್ಯೋಗಕ್ಕೆ ಸೇರುವ ಅವಕಾಶ ಲಭಿಸಲಿದೆ.

ಇಂತಹ ಸ್ಪರ್ಧಾರ್ಥಿಗಳು ಪರೀಕ್ಷೆಯಲ್ಲಿ ಗಳಿಸಿದ ಅಂಕ, ವೈಯಕ್ತಿಕ ವಿವರಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸುವ, ಆ ಮೂಲಕ ಸರ್ಕಾರದ ಬೇರೆ ಬೇರೆ ವಿಭಾಗಗಳು, ಖಾಸಗಿ ಸಂಸ್ಥೆಗಳು ಇಂಥವರಿಗೆ ಉದ್ಯೋಗಾವಕಾಶವನ್ನು ನೀಡಲು ಅನುವಾಗುವಂತಹ ಪ್ರಸ್ತಾವವನ್ನು ಕೇಂದ್ರ ಲೋಕಸೇವಾ ಆಯೋಗವು ಎರಡು ವರ್ಷಗಳ ಹಿಂದೆಯೇ ಮುಂದಿಟ್ಟಿತ್ತು. ಈಗ ಅದಕ್ಕೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ.

ಈ ಹಿಂದೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಯ್ಕೆಯಾಗುವುದನ್ನು ಕೂದಲೆಳೆಯಲ್ಲಿ ತಪ್ಪಿಸಿಕೊಂಡ ಪ್ರತಿಭಾವಂತ ಸ್ಪರ್ಧಾರ್ಥಿಗಳಿಗೆ ಅಂತಹ ಉದ್ಯೋಗಾವಕಾಶವೇನೂ ಇರಲಿಲ್ಲ. ಆದರೆ ಸಂದರ್ಶನದ ಹಂತದವರೆಗೆ ಹೋಗಿ ವಿಫಲರಾದವರ ಅಂಕಗಳು ಹಾಗೂ ಇತರ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ ಇತರ ಉದ್ಯೋಗದಾತರಿಗೆ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರದ ಈ ಅನುಮೋದನೆ ಅನುವು ಮಾಡಿಕೊಟ್ಟಿದೆ. ಇದುವರೆಗೆ ಸ್ಪರ್ಧಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ವಿವರ ಸರ್ಕಾರದ ಬಳಿಯೇ ಇರುತ್ತಿತ್ತು.

ಸಂದರ್ಶನದ ಹಂತದವರೆಗೆ ಹೋಗಿ ವಿಫಲರಾದವರ ಈ ವಿವರಗಳನ್ನು ನ್ಯಾಷನಲ್‌ ಇನ್‌ಫಾರ್ಮಾಟಿಕ್ಸ್‌ ಕೇಂದ್ರ (ಎನ್‌ಐಸಿ) ಅಭಿವೃದ್ಧಿಪಡಿಸಿದ ಇಂಟಿಗ್ರೇಟೆಡ್‌ ಇನ್‌ಫಾರ್ಮೇಶನ್‌ ಸಿಸ್ಟಂಗೆ ಸಂಪರ್ಕಿಸಲಾಗುವುದು.

ಆದರೆ ಈ ಪ್ರಸ್ತಾವಕ್ಕೆ ಅಂದರೆ ವಿವರಗಳನ್ನು ಬಹಿರಂಗಪಡಿಸುವ ಯೋಜನೆಗೆ ಒಪ್ಪಿಗೆ ಸೂಚಿಸುವ ಅಥವಾ ನಿರಾಕರಿಸುವ ನಿರ್ಧಾರದ ಆಯ್ಕೆಯನ್ನು ಸ್ಪರ್ಧಾರ್ಥಿಗಳಿಗೆ ನೀಡಲಾಗಿದೆ. ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಸಂದರ್ಶನದ ಕರೆಯನ್ನು ಸ್ವೀಕರಿಸುವಾಗಲೇ ಈ ಆಯ್ಕೆಯನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಸೇನೆ, ಕೇಂದ್ರ ಕೈಗಾರಿಕೆ ಭದ್ರತಾ ಪಡೆ ಮೊದಲಾದ ಪರೀಕ್ಷೆಗಳಿಗೆ ಬರೆಯುವ ಸ್ಪರ್ಧಾರ್ಥಿಗಳಿಗೆ ಈ ಅವಕಾಶ ನೀಡಿಲ್ಲ ಎಂದು ಲೋಕಸೇವಾ ಆಯೋಗ ಸ್ಪಷ್ಟಪಡಿಸಿದೆ. ಹಾಗೆಯೇ ಸ್ಪರ್ಧಾರ್ಥಿಗಳು ಗಳಿಸಿದ ಅಂಕ, ಮತ್ತಿತರ ವಿವರಗಳನ್ನು ಪ್ರಕಟಿಸುವ ಹೊಣೆ ಮಾತ್ರ ತನ್ನದು ಎಂದು ಆಯೋಗ ಹೇಳಿದೆಯೇ ಹೊರತು ಅಂಥವರಿಗೆ ಉದ್ಯೋಗ ಕೊಡುವಂತೆ ಯಾವುದೇ ನೇಮಕಾತಿ ಏಜೆನ್ಸಿಗಳಿಗೆ ಶಿಫಾರಸ್ಸು ಮಾಡಲಾಗುವುದಿಲ್ಲ ಎಂದು ತಿಳಿಸಿದೆ. ಈ ಹಿಂದಿನ ವರ್ಷಗಳಲ್ಲಿ ಸಂದರ್ಶನ ಹಂತದವರೆಗೆ ಹೋಗಿ ವಿಫಲರಾದವರಿಗೆ ಈ ಅವಕಾಶ ಇದೆಯೇ ಎಂಬುದನ್ನೂ ಸ್ಪಷ್ಟಪಡಿಸಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು