ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಪರ್ಧಾ ವಾಣಿ: ಭಾರತದ ಪ್ರಮುಖ ಸರೋವರಗಳು

–ಗುರುಶಂಕರ್.ಕೆ.ಪಿ
Published 4 ಸೆಪ್ಟೆಂಬರ್ 2024, 22:22 IST
Last Updated 4 ಸೆಪ್ಟೆಂಬರ್ 2024, 22:22 IST
ಅಕ್ಷರ ಗಾತ್ರ

ಯುಪಿಎಸ್‌ಸಿ ಪ್ರಿಲಿಮ್ಸ್‌, ಕೆಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ - 2 ಹಾಗೂ ಎಲ್ಲಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಸಾಮಾನ್ಯ ಜ್ಞಾನದ ಮಾಹಿತಿಗಳಿವು.

ಡಲ್ ಸರೋವರ

* ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಡಲ್ ಸರೋವರ ಕಾಣಬಹುದು.  ಈ ಸರೋವರವನ್ನು ಕಾಶ್ಮೀರದ ಕಿರೀಟದಲ್ಲಿರುವ ರತ್ನ ಅಥವಾ ಶ್ರೀನಗರದ ಆಭರಣ ಎಂದೂ ಕರೆಯಲಾಗುತ್ತದೆ.

* 18 ಚದರ ಕಿ.ಮೀ. ವಿಸ್ತೀರ್ಣವನ್ನು ಹೊಂದಿರುವ ಈ ಸರೋವರದಲ್ಲಿ ತೇಲುವ ಉದ್ಯಾನಗಳು ನೈಸರ್ಗಿಕವಾಗಿ ನಿರ್ಮಾಣವಾಗಿದೆ.

* ತೇಲುವ ಉದ್ಯಾನಗಳನ್ನು ಕಾಶ್ಮೀರದಲ್ಲಿ ‘ರಾದ್’ ಎಂದು ಕರೆಯಲಾಗುತ್ತದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ತಾವರೆ ಹೂವು  ಹೆಚ್ಚಿನ ಪ್ರಮಾಣದಲ್ಲಿ ಅರಳುತ್ತದೆ.

* ಡಲ್ ಸರೋವರದ ಮತ್ತೊಂದು ವಿಶೇಷತೆ ಏನೆಂದರೆ ಶ್ರೀನಗರದ ಪ್ರವಾಸಿಗರಿಗೆ ವಸತಿ ದೋಣಿಗಳ ಮೂಲಕ ವಸತಿ ಸವಲತ್ತನ್ನು ಕಲ್ಪಿಸಲಾಗುತ್ತದೆ. ಜಮ್ಮು-ಕಾಶ್ಮೀರದ ಎರಡನೇ ಅತಿದೊಡ್ಡ ಸರೋವರವಾಗಿದ್ದು ಈ ಸರೋವರದ ಸುತ್ತ ಜಬ್ಬರ್ ವನ್ ಪರ್ವತ ಕಣಿವೆ, ಶಂಕರಾಚಾರ್ಯ ಪರ್ವತದ ತಪ್ಪಲು ಪ್ರದೇಶ ಮೂರು ಕಡೆಯಿಂದ ಸುತ್ತುವರಿದಿದೆ.

ಸಂಭಾರ್‌ ಸರೋವರ

* ರಾಜಸ್ಥಾನದಲ್ಲಿ ಕಂಡುಬರುವ ಈ ಸರೋವರವು ಭಾರತದ ಅತಿದೊಡ್ಡ ಒಳನಾಡಿನ ಉಪ್ಪು ನೀರಿನ ಸರೋವರವಾಗಿದೆ.

* ಅರಾವಳಿ ಶ್ರೇಣಿಯ ತಪ್ಪಲಿನಲ್ಲಿ ನಿರ್ಮಾಣವಾಗಿರುವ ಈ ಸರೋವರವು ಮೊಘಲರ ಆಳ್ವಿಕೆಯ ಸಂದರ್ಭದಲ್ಲಿ ಮೊಘಲರ ಸಾಮ್ರಾಜ್ಯದ ಉಪ್ಪು ತಯಾರಿಕಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿತ್ತು. ಮೊಘಲರ ಪತನದ ನಂತರ ಜೈಪುರ್ ಮತ್ತು ಜೋಧಪುರ್ ದೇಶೀಯ ಸಂಸ್ಥಾನಗಳು ಜಂಟಿಯಾಗಿ ಈ ಉಪ್ಪು ನೀರಿನ ಸರೋವರವನ್ನು ನಿಯಂತ್ರಿಸುತ್ತಿದ್ದರು.

* ರಾಮ್ಸರ್ ಸಮಾವೇಶದ ಅನ್ವಯ 1990ರಲ್ಲಿ ಸಂಭಾರ್‌ ಸರೋವರವನ್ನು ಅಂತರರಾಷ್ಟ್ರೀಯ ಜೌಗು ಪ್ರದೇಶ ಎಂದು ಘೋಷಿಸಲಾಯಿತು.

* ಬೇಸಿಗೆಯ ಸಂದರ್ಭದಲ್ಲಿ ಈ ಸರೋವರದ ಆಳ ಅತ್ಯಂತ ಕಡಿಮೆಯಾಗುತ್ತದೆ ಹಾಗೂ ಮುಂಗಾರಿನ ಸಂದರ್ಭದಲ್ಲಿ ಸರೋವರದ ಆಳ ಹೆಚ್ಚಾಗುತ್ತದೆ. ಸಂಭಾರ್‌ ಸರೋವರಕ್ಕೆ ಹರಿದುಬರುವ ನದಿಗಳು : ಸಮದ್, ಖಾರಿ, ಮಾಂತ, ಖಂಡಲ, ಮೆಡ್ಥಾ ಮತ್ತು ರೂಪಂಗರ್ ನದಿಗಳು.

ಕೋಲ್ಲೆರು ಸರೋವರ

* ಭಾರತದ ಅತಿ ದೊಡ್ಡ ಸರೋವರವಾಗಿದ್ದು , ಕೃಷ್ಣ ಮತ್ತು ಗೋದಾವರಿ ನದಿಯ ಮುಖಜ ಭೂಮಿಯಲ್ಲಿ ಈ ಸರೋವರ ನಿರ್ಮಾಣವಾಗಿದೆ.

* ಭಾರತದಲ್ಲಿರುವ ಅತಿದೊಡ್ಡ ಶುದ್ಧ ನೀರಿನ ಸರೋವರವಾಗಿದ್ದು ಆಂಧ್ರದ ಎರಡು ಜಿಲ್ಲೆಗಳಾದ ಕೃಷ್ಣ ಮತ್ತು ಪಶ್ಚಿಮ ಗೋದಾವರಿಯಲ್ಲಿ ಆವೃತವಾಗಿದೆ.

* ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅನ್ವಯ ಈ ಸರೋವರವನ್ನು ನವೆಂಬರ್ 1999ರಲ್ಲಿ ವನ್ಯಜೀವಿ ಧಾಮ ಎಂದು ಘೋಷಿಸಲಾಯಿತು. 2002ರಲ್ಲಿ ರಾಮ್ಸರ್ ಒಪ್ಪಂದದ ಅನ್ವಯ ಅಂತರರಾಷ್ಟ್ರೀಯ ಪ್ರಾಮುಖ್ಯ ಇರುವ ಜೌಗು ಪ್ರದೇಶ ಎನ್ನುವ ಸ್ಥಾನಮಾನವನ್ನು ಕಲ್ಪಿಸಲಾಗಿದೆ.

* ವಲಸೆ ಪಕ್ಷಿಗಳಿಗೆ ಪ್ರಮುಖ ವಾಸಸ್ಥಾನವಾಗಿದ್ದು ಸೈಬೀರಿಯಾದ ಕೊಕ್ಕರೆ, ಇಬಿಸ್‌ ಬಣ್ಣದ ಕೊಕ್ಕರೆಗಳು ಚಳಿಗಾಲದಲ್ಲಿ ಈ ಪ್ರದೇಶಕ್ಕೆ ವಲಸೆ ಬರುತ್ತವೆ.

ವೆಂಬನಾಡ್ ಸರೋವರ

* ಕೇರಳದ ಮೂರು ಪ್ರತ್ಯೇಕ ಜಿಲ್ಲೆಗಳಲ್ಲಿ ಈ ಸರೋವರ ಆವೃತವಾಗಿದ್ದು 12 ಮೀಟರ್ ಆಳ ಮತ್ತು 2033 ಚದರ ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ.

* ಭಾರತದಲ್ಲಿಯೇ ಅತಿ ಉದ್ದನೆಯ ಸರೋವರ ಎಂದು ಪ್ರಖ್ಯಾತಿ ಹೊಂದಿದೆ.

* ಕೇರಳದ ಅತಿ ದೊಡ್ಡ ಸರೋವರವಾಗಿದೆ. ವೆಂಬನಾಡು ಸರೋವರವನ್ನು ವೆಂಬನಾಡು ಕಾಯಲ್, ವೆಂಬನಾಡ್ ಕೋಲ್, ಪುನ್ನಮಡ ಸರೋವರ ಮತ್ತು ಕೊಚ್ಚಿ ಸರೋವರ ಎಂದೂ ಕರೆಯಲಾಗುತ್ತದೆ.

* ಕೇರಳದ ನಾಲ್ಕು ನದಿಗಳು ಈ ಸರೋವರವನ್ನು ಸೇರುತ್ತದೆ ಅವುಗಳೆಂದರೆ ಮೀನಾಚಿಲ್, ಅಚ್ಚನ್ ಕೋವಿಲ್, ಪಂಪ ಮತ್ತು ಮನಿಮಲ .

* ಅರಬ್ಬಿ ಸಮುದ್ರದಿಂದ ಬೇರ್ಪಟ್ಟಿರುವ ಸರೋವರವಾಗಿದ್ದು, ಕೇರಳದ ಜನಪ್ರಿಯ ಹಿನ್ನೀರಿನ ಪ್ರದೇಶವಾಗಿದೆ.

* ಸರೋವರದ ಮತ್ತೊಂದು ವಿಶೇಷತೆ ಏನೆಂದರೆ ಪ್ರತಿ ವರ್ಷ ಆಗಸ್ಟ್‌ನಲ್ಲಿ ನೆಹರೂ ಟ್ರೋಫಿ ದೋಣಿ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಈ ಸ್ಪರ್ಧೆಗೆ ಇರುವ ಮತ್ತೊಂದು ಹೆಸರು ಸ್ನೇಕ್ ಬೋಟ್ ಸ್ಪರ್ಧೆ.

* 2002ರಲ್ಲಿ ರಾಮ್ಸರ್‌ ಒಪ್ಪಂದದ ಪ್ರಕಾರ ಅಂತರರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿರುವ ಜೌಗು ಪ್ರದೇಶಗಳ ಪಟ್ಟಿಯಲ್ಲಿ ಇದನ್ನು ಸೇರಿಸಲಾಗಿದ್ದು, ಪಶ್ಚಿಮ ಬಂಗಾಳದಲ್ಲಿರುವ ಸುಂದರ್‌ಬನ್ಸ್ ನಂತರ ರಾಮ್ಸರ್ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಎರಡನೇ ಅತಿದೊಡ್ಡ ಸ್ಥಳವಾಗಿದೆ.

* ಭಾರತ ಸರ್ಕಾರ ವೆಂಬನಾಡು ಜೌಗು ಪ್ರದೇಶವನ್ನು ರಾಷ್ಟ್ರೀಯ ಜೌಗು ಪ್ರದೇಶ ಸಂರಕ್ಷಣಾ ಕಾರ್ಯಕ್ರಮದ ಅಡಿಯಲ್ಲಿ ತಂದಿದೆ. ನಿರಂತರವಾಗಿ ಈ ಪ್ರದೇಶದಲ್ಲಿ ಸಂರಕ್ಷಣಾ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಕುಮಾರಕೋಮ್‌ ಪಕ್ಷಿಧಾಮ ಈ ಸರೋವರದಲ್ಲಿ ಇದೆ.
ವೆಂಬನಾಡು ಸರೋವರದಲ್ಲಿರುವ ದ್ವೀಪವೆಂದರೆ ವಿಲ್ಲಿಂಗ್ ಡನ್ ದ್ವೀಪ.

ಚಿಲ್ಕ ಸರೋವರ

* ಒಡಿಶಾದಲ್ಲಿರುವ ಈ ಸರೋವರವು ಹಿನ್ನೀರಿನ ಸರೋವರವಾಗಿದೆ. ಈ ಸರೋವರದ ಒಟ್ಟು ವಿಸ್ತೀರ್ಣ 1165 ಚದರ ಕಿ.ಮೀ. ಮತ್ತು ಈ ಸರೋವರದ ಆಳ 4.2 ಮೀಟರ್‌ನಷ್ಟಿದೆ.

* ಜಲಪಕ್ಷಿಗಳ ಸ್ಥಿತಿ ಸಮೀಕ್ಷೆ-2022ರ ಅನ್ವಯ ಒಂದು ವರ್ಷದಲ್ಲಿ ಈ ಸರೋವರಕ್ಕೆ 11 ಲಕ್ಷ ಜಲ ಪಕ್ಷಿಗಳು ಮತ್ತು ಜೌಗು ಪ್ರದೇಶದಲ್ಲಿ ವಾಸಿಸುವ ವಿವಿಧ ಪಕ್ಷಿಗಳು ಭೇಟಿ ನೀಡಿವೆ ಎಂದು ಉಲ್ಲೇಖಿಸಿದೆ.

* ಏಷ್ಯಾದ ಅತಿದೊಡ್ಡ ಮತ್ತು ವಿಶ್ವದ ಎರಡನೇ ಅತಿದೊಡ್ಡ ಲಗೂನ್ ಎಂದು ಈ ಸರೋವರವನ್ನು ಪರಿಗಣಿಸಲಾಗುತ್ತದೆ.

*1981ರಲ್ಲಿ ಜೌಗು ಪ್ರದೇಶ ಎಂದು ರಾಮ್ಸರ್ ಪಟ್ಟಿಯಲ್ಲಿ ಸ್ಥಾನವನ್ನು ನೀಡಲಾಯಿತು. ರಾಮ್ಸರ್ ಪಟ್ಟಿಯಲ್ಲಿ ಸ್ಥಾನವನ್ನು ಪಡೆದ ಭಾರತದ ಮೊಟ್ಟಮೊದಲ ಜೌಗು ಪ್ರದೇಶ ಎನ್ನುವ ಹೆಗ್ಗಳಿಕೆಯನ್ನು ಇದು ಪಡೆಯಿತು.

* ಚಿಲ್ಕ ಸರೋವರದಲ್ಲಿರುವ ಮತ್ತೊಂದು ಆಕರ್ಷಣೆ ಏನೆಂದರೆ ಐರಾವಡ್ಡಿ ಡಾಲ್ಫಿನ್‌ಗಳು. ಚಿಲ್ಕ ಸರೋವರದಲ್ಲಿರುವ ಸತಪತ ದ್ವೀಪದಲ್ಲಿ ಕಂಡುಬರುತ್ತದೆ. ಇದಲ್ಲದೆ ಚಿಲ್ಕ ಸರೋವರದಲ್ಲಿ ನಲ್ಬನ ದ್ವೀಪ 16 ಚದರ ಕಿ.ಮೀ. ಪ್ರದೇಶವನ್ನು ಆವರಿಸಿಕೊಂಡಿದ್ದು, 1987ರಲ್ಲಿ ಈ ದ್ವೀಪವನ್ನು ಭಾರತ ಸರ್ಕಾರ ಪಕ್ಷಿಧಾಮ ಎಂದು ಘೋಷಿಸಿತು.

* ಚಿಲ್ಕ ಸರೋವರದ ದ್ವೀಪದಲ್ಲಿರುವ ದೇವಾಲಯ: ಕಲಿಜಾಯ್ ದೇವಾಲಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT