ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ ಪ್ರಿಲಿಮ್ಸ್‌ ಯಾವ ಪಠ್ಯಕ್ರಮಕ್ಕೆ ಯಾರ ಪುಸ್ತಕ?

Last Updated 20 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಸುಮಾರು ಎರಡು ಸಾವಿರ ಅಂಕಗಳಿಗೆ ನಡೆಯುವ ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗಲು ಯಾವ ಪುಸ್ತಕಗಳನ್ನು ಓದಬೇಕು ಎಂಬ ಪ್ರಶ್ನೆ ಪರೀಕ್ಷೆ ಎದುರಿಸುವ ಎಲ್ಲ ಅಭ್ಯರ್ಥಿಗಳನ್ನೂ ಕಾಡುತ್ತದೆ.

ಪ್ರತಿ ವಿಷಯಕ್ಕೂ ಬೇಕಾದ ಸಾವಿರಾರು ಪುಸ್ತಕಗಳು ಮಾರುಕಟ್ಟೆಯಲ್ಲಿವೆ. ಯಾವುದು ಉತ್ತಮ? ಈ ಹಿಂದೆ ರ‍್ಯಾಂಕ್‌ಗಳಿಸಿದವರು ಯಾವ ಪುಸ್ತಕಗಳನ್ನು ಶಿಫಾರಸು ಮಾಡುತ್ತಾರೆ? ಎಂಬೆಲ್ಲ ಪ್ರಶ್ನೆಗಳಿಗೆ ಸಿಗುವ ಉತ್ತರಗಳೆಲ್ಲ ಅತ್ಯಂತ ಸಾಪೇಕ್ಷವಾಗಿರುತ್ತವೆ. ಅಂದರೆ ಅವರವರ ಅನುಭವ, ಕ್ಷಮತೆ, ಜಾಣತನ ಮತ್ತು ಆಯಾ ಕಾಲಕ್ಕೆ ತಕ್ಕಂತಿರುತ್ತವೆ. ಆದರೆ ಪಠ್ಯಕ್ರಮ (ಸಿಲಬಸ್‌ಗೆ) ಅನುಗುಣವಾಗಿ ಮೂಲ ತಯಾರಿಗೆ ಬೇಕಾದ, ಓದಲೇ ಬೇಕಾದ ಕೆಲವು ಪುಸ್ತಕಗಳಿರುತ್ತವೆ. ಒಬ್ಬೊಬ್ಬರದೂ ಒಂದೊಂದು ಅಭಿಪ್ರಾಯವಿರುವುದರಿಂದ ಹೊಸದಾಗಿ ಓದುವವರು ಗೊಂದಲಕ್ಕೆ ಬೀಳುವುದು ಸಹಜ.

ಸಿಲಬಸ್‌ಗೆ ತಕ್ಕ ಪುಸ್ತಕಗಳು

ಸಿಲಬಸ್‌ಗೆ ತಕ್ಕಂತೆ ಪುಸ್ತಕಗಳನ್ನು ಓದಬೇಕು. ಯುಪಿಎಸ್‌ಸಿಯ ಪೂರ್ವಭಾವಿ ಪರೀಕ್ಷೆಯಲ್ಲಿರುವ ಭಾರತದ ರಾಜಕೀಯದ ಪಠ್ಯಕ್ರಮದ ಓದಿಗೆ ಎಂ.ಲಕ್ಷ್ಮಿಕಾಂತ ಅವರ ಕೃತಿ ಅತ್ಯಂತ ಸೂಕ್ತ ಎಂಬ ಮಾತು ಐಎಎಸ್ ಸಾಧಕರದ್ದು. ಕೋಚಿಂಗ್ ಸಂಸ್ಥೆಗಳೂ ಇದನ್ನೇ ಹೇಳುತ್ತವೆ. ಇದು ಬೇರೆ ಪರೀಕ್ಷೆಗೂ ಅತ್ಯಂತ ಉಪಯುಕ್ತ ಎಂಬ ಅಭಿಪ್ರಾಯವೂ ಇದೆ. ಇದರ ಜೊತೆ ಎನ್‌ಸಿಇಆರ್‌ಟಿಯವರು 9 ರಿಂದ 12ನೇ ತರಗತಿಗೆ ನಿಗದಿ ಮಾಡಿರುವ ಪಠ್ಯಪುಸ್ತಕಗಳನ್ನು ಓದಿದರೆ ಯಶಸ್ಸು ಖಂಡಿತ.

ನಮ್ಮ ಕಲೆ, ಪರಂಪರೆ ಮತ್ತು ಸಂಸ್ಕೃತಿಯ ಅಮೂಲಾಗ್ರ ಅಧ್ಯಯನಕ್ಕೆ ನಿತಿನ್ ಸಿಂಘಾನಿಯ ಅವರ ‘ಇಂಡಿಯನ್ ಆರ್ಟ್ ಅಂಡ್ ಕಲ್ಚರ್’ ಎಂಬ ಪುಸ್ತಕದಲ್ಲಿ, ಸಿವಿಲ್ ಸರ್ವೀಸಸ್‌ ಪರೀಕ್ಷೆ ತಯಾರಿಗೆ ಬೇಕಾದ ವಸ್ತು – ವಿಷಯಗಳನ್ನು ಒದಗಿಸಬಲ್ಲ ಹೂರಣವಿದೆ. ಬಿಪನ್‌ಚಂದ್ರರ ‘ಇಂಡಿಯ ಆಫ್ಟರ್ ಇಂಡಿಪೆಂಡೆನ್ಸ್’ ಮತ್ತು ‘ಹಿಸ್ಟರಿ ಆಫ್ ಮಿಡೀವಲ್ ಇಂಡಿಯ’ ಹಾಗೂ ಆರ್. ಎಸ್. ಶರ್ಮರ ‘ಏನ್ಶಿಯಂಟ್ ಇಂಡಿಯ’ ಕೃತಿಗಳ ಜೊತೆಗೆ ಎನ್‌ಸಿಇಆರ್‌ಟಿಯ 11ನೇ ತರಗತಿಯ ‘ಆ್ಯನ್ ಇಂಟ್ರೊಡಕ್ಷನ್ ಟು ಇಂಡಿಯನ್ ಆರ್ಟ್’ ಪುಸ್ತಕಗಳು ಪರೀಕ್ಷೆ ತಯಾರಿಗೆ ಸಂಪೂರ್ಣ ನೆರವು ನೀಡುತ್ತವೆ.

ಎಕಾನಿಮಿಕ್ ಸರ್ವೆ ಓದಿ

ಭಾರತದ ಆರ್ಥಿಕತೆಯ ವಿಷಯಕ್ಕೆ ರಮೇಶ್ ಸಿಂಗ್ ಬರೆದಿರುವ ‘ಇಂಡಿಯನ್ ಎಕಾನಮಿ’ ಹಲವು ವರ್ಷಗಳಿಂದ ನಿರಂತರವಾಗಿ ಮಾರಾಟವಾಗುತ್ತಿರುವ ‘ಬೆಸ್ಟ್ ಸೆಲ್ಲರ್’ ಎನಿಸಿದ್ದು ವಿಷಯದ ಸಮಗ್ರ ನಿರೂಪಣೆಗೆ ಹೆಸರುವಾಸಿಯಾಗಿದೆ. ಹೆಚ್ಚಿನ ಅಂಕಗಳಿಸಲು ನಿತಿನ್ ಸಿಂಘಾನಿಯರ ‘ಇಂಡಿಯನ್ ಎಕಾನಮಿ’, ಜೈನ್ ಅಂಡ್ ಓಹ್ರಿಯ ‘ಎಕನಾಮಿಕ್ ಡೆವಲಪ್‌ಮೆಂಟ್ ಅಂಡ್ ಪಾಲಿಸೀಸ್ ಇನ್ ಇಂಡಿಯ’ ಹಾಗೂ 11ನೇ ತರಗತಿಯ ಎನ್‌ಸಿಆರ್‌ಟಿ ಪುಸ್ತಕ ಓದಬಹುದಾಗಿದೆ. ಅಧೀಕೃತ ಆರ್ಥಿಕ ಮಾಹಿತಿಗಾಗಿ ಕೇಂದ್ರ ಸಚಿವಾಲಯದ ಆರ್ಥಿಕ ಸಮೀಕ್ಷೆ (Economic Survey) ವರದಿಯನ್ನೂ ಓದಿದರೆ ಉತ್ತಮ.

ಭೂಗೋಳ ವಿಷಯಾಧ್ಯಯನಕ್ಕೆ ಜಿ.ಸಿ.ಲಿಯೊಂಗ್ ಬರೆದಿರುವ ‘ಸರ್ಟಿಫಿಕೇಟ್ ಫಿಸಿಕಲ್ ಅಂಡ್ ಹ್ಯೂಮನ್‌ ಜಿಯಾಗ್ರಫಿ’ ಅತ್ಯಂತ ಪ್ರಮುಖ ಪುಸ್ತಕವಾಗಿದೆ. ಐಎಎಸ್ ಪ್ರಿಲಿಮ್ಸ್ ಮತ್ತು ಮೇನ್ಸ್ ಎರಡೂ ಪರೀಕ್ಷೆಗೆ ಬೇಕಾದ ಎಲ್ಲ ಸರಕೂ ಇದರಲ್ಲಿದೆ. 6 ರಿಂದ 12ನೇ ತರಗತಿಯ ಎನ್‌ಸಿಇಆರ್‌ಟಿಯ ಹೊಸ- ಹಳೆಯ ಸಿಲೆಬಸ್‌ನ ಪುಸ್ತಕಗಳೂ ತಯಾರಿಗೆ ಬೇಕಾಗುತ್ತವೆ. ವಿಶ್ವದ ಭೌಗೋಳಿಕ ಸಂರಚನೆಯ ಚಿತ್ರ – ವಿವರಗಳಿಗಾಗಿ ಆಕ್ಸ್‌ಫರ್ಡ್ ಪ್ರೆಸ್‌ನವರ ‘ಆಕ್ಸ್‌ಫರ್ಡ್‌ ಸ್ಕೂಲ್ ಅಟ್ಲಾಸ್’ ಮತ್ತು ಓರಿಯಂಟ್ ಬ್ಲಾಕ್ ಸ್ವಾನ್ ಪ್ರಕಾಶನದ ‘ವರ್ಲ್ಡ್‌ ಅಟ್ಲಾಸ್’ ಅಭ್ಯರ್ಥಿಗಳ ಬಳಿ ಇರಲೇಬೇಕು. ಅದರಲ್ಲಿ 200ಕ್ಕೂ ಹೆಚ್ಚು ನಕ್ಷೆಗಳಿದ್ದು ಭಾರತಕ್ಕೆ ಸಂಬಂಧಿಸಿದ 94 ವಿವಿಧ ವಿಶೇಷಗಳ ನಕ್ಷೆಗಳಿವೆ.

ಆಧುನಿಕ ಭಾರತದ ಇತಿಹಾಸಕ್ಕಾಗಿ ರಾಜೀವ್ ಅಹಿರ್ ಬರೆದ ‘ಎ ಬ್ರೀಫ್ ಹಿಸ್ಟರಿ ಆಫ್ ಮಾಡ್ರನ್ ಇಂಡಿಯ’, ಅಂತರರಾಷ್ಟ್ರೀಯ ಸಂಬಂಧಗಳ ವಿವರಣೆಗೆ ಎನ್‌ಸಿಇಆರ್‌ಟಿಯ 12ನೇ ತರಗತಿಯ ಕಂಟೆಂಪೊರರಿ ವರ್ಲ್ಡ್ ಪಾಲಿಟಿಕ್ಸ್ ಎಂಬ ವಿಸ್ತೃತ ಅಧ್ಯಾಯ, ಪ್ರಚಲಿತ ವಿದ್ಯಮಾನಗಳಿಗಾಗಿ ಇಯರ್‌ ಬುಕ್‌, ಪ್ರೆಸ್‌ ಇನ್‌ಫರ್ಮೇಶನ್ ಬ್ಯುರೊದ ಸುದ್ದಿ ಸಮೀಕ್ಷೆ, ವಿವಿಧ ವಿಶ್ವಾಸಾರ್ಹ ದಿನಪತ್ರಿಕೆ / ನಿಯತಕಾಲಿಕೆಗಳನ್ನು ತಪ್ಪದೇ ಓದಬೇಕು.

‘ಡೌನ್‌ ಟು ಅರ್ಥ್’ ಉತ್ತಮ ಆಕರ

ಸೈನ್ಸ್ ಅಂಡ್ ಟೆಕ್ನಾಲಜಿಗಾಗಿ ಇಸ್ರೊ ವೆಬ್‌ಸೈಟ್, ಸೈನ್ಸ್ ರಿಪೋರ್ಟರ್‌ನ ಲೇಖಗಳು, ದಿನಪತ್ರಿಕೆಗಳ ವಿಜ್ಞಾನ ಅಂಕಣಗಳು, ಸಂಶೋಧನಾ ಸಂಸ್ಥೆಗಳು ಹೊರಡಿಸುವ ವಾರ್ತಾಪತ್ರಗಳನ್ನು ಕಡ್ಡಾಯವಾಗಿ ಓದಿದಲ್ಲಿ ಯಶಸ್ಸು ಖಚಿತ. ಪರಿಸರ ಮತ್ತು ಜೀವಿಪರಿಸರ ವಿಜ್ಞಾನ (Ecology) ಗಳ ಕುರಿತು ಡೌನ್‌ಟು ಅರ್ಥ ನಿಯತಕಾಲಿಕೆ, ಮುಂಗಾಬೇ(mongabay) ವೆಬ್‌ಸೈಟ್, ನೀತಿ ಆಯೋಗ ಮತ್ತು ಕೇಂದ್ರ ಪರಿಸರ ಸಚಿವಾಲಯದ ವೆಬ್‌ಸೈಟ್‌ಗಳನ್ನು ನೋಡಬೇಕು.‌

ಸಿಎಸ್‌ಎಟಿ (ಪ್ರಿಲಿಮ್ಸ್‌ನ ಎರಡನೆ ಪರೀಕ್ಷೆ)ಗೆ ತಯಾರಾಗಲು ಟಾಟಾ ಮೆಗ್ರಾಹಿಲ್‌ನ CSAT ಮ್ಯಾನವಲ್, ಅರಿಹಂತ್ ಪ್ರಕಾಶನದ CSAT – II Verbal (ಹೇಳಿಕೆ ರೂಪದ) and Non Verbal (ಚಿತ್ರರೂಪದ) ರೀಸನಿಂಗ್‌ಗೆ ಆರ್‌.ಎಸ್‌. ಅಗರ್‌ವಾಲ್ ಪುಸ್ತಕ ಬೇಕೇಬೇಕು. ಪರಿಮಾಣಾತ್ಮಕ (Quantitative) ಸಾಮರ್ಥ್ಯ (Attitude) ದ ಓದಿಗೆ ಆರ್‌.ಎಸ್‌. ಅಗರ್‌ವಾಲ್‌ರ ಪ್ರಸ್ತಕಗಳು ಅನಿವಾರ್ಯ.

ಕನ್ನಡ ಆವೃತ್ತಿಗಳೂ ಇವೆ

ಲೇಖನದಲ್ಲಿ ಹೆಸರಿಸಿರುವ ಬಹುತೇಕ ಪುಸ್ತಕಗಳು ಕನ್ನಡದಲ್ಲೂ ಲಭ್ಯವಿವೆ. ಪ್ರೊ. ಆರ್.ಎಸ್. ಶರ್ಮಾ ಅವರ ‘Ancient India' ಕೃತಿಯನ್ನು ಎನ್‌.ಪಿ. ಶಂಕರನಾರಾಯ ಣರಾವ್‌ ಹಾಗೂ ‍ಪ್ರೊ. ಬಿಪಿನ್ ಚಂದ್ರ ಅವರ ‘Modern Indian History' ಕೃತಿಯನ್ನು ಡಾ. ಎಚ್‌.ಎಸ್‌. ಗೋಪಾಲ್‌ರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ಪಾರೆ. ‘ಪ್ರಾಚೀನ ಭಾರತ‘ ಮತ್ತು ‘ಆಧುನಿಕ ಭಾರತದ ಇತಿಹಾಸ‘ ಶೀರ್ಷಿಕೆಗಳಲ್ಲಿ ಈ ಕೃತಿಗಳು ಲಭ್ಯವಿವೆ.

(ಮುಂದಿನವಾರ ಪಾಠ–6: ಯುಪಿಎಸ್‌ಸಿ ಮುಖ್ಯ ಪರೀಕ್ಷೆಗೆ ಯಾವ ಪುಸ್ತಕಗಳು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT