ಬುಧವಾರ, ಜನವರಿ 19, 2022
27 °C

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಪಿಎಚ್‌ಡಿ ಮಾಡುವುದು ಹೇಗೆ?

ಪ್ರದೀಪ್ Updated:

ಅಕ್ಷರ ಗಾತ್ರ : | |

Prajavani

1. ನಾನು ಎಂಬಿಎ (ಎಚ್‌ಆರ್ ಮತ್ತು ಫೈನಾನ್ಸ್) ಮುಗಿಸಿದ್ದೇನೆ. ಪಿಎಚ್‌ಡಿ ಮಾಡಬೇಕು ಎಂದುಕೊಂಡಿದ್ದೇನೆ. ಪಿಎಚ್‌ಡಿ ಪ್ರಕ್ರಿಯೆ ಹೇಗೆ? ಅರ್ಹತೆ ಏನು? ದಯವಿಟ್ಟು ತಿಳಿಸಿ.

ಚಂದನ್ ಕೆ., ಶಿವಮೊಗ್ಗ

ಸಾಮಾನ್ಯವಾಗಿ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಶೇ 55 ಅಂಕಗಳನ್ನು ಪಡೆದಿರಬೇಕು ಅಥವಾ ಪಿಎಚ್‌ಡಿ ಮಾಡುವ ವಿಶ್ವವಿದ್ಯಾಲಯದ ನಿಯಮಕ್ಕೆ ಒಳಪಟ್ಟಿರಬೇಕು. ನೀವು ಪಿಎಚ್‌ಡಿ ಮಾಡುವ ಕ್ಷೇತ್ರ (ಎಚ್‌ಆರ್, ಫೈನಾನ್ಸ್, ಮ್ಯಾನೇಜ್‌ಮೆಂಟ್ ಇತ್ಯಾದಿ) ಮತ್ತು ಸಂಶೋಧನಾ ವಿಷಯದ ಬಗ್ಗೆ ಸಂಪೂರ್ಣವಾದ ಮಾಹಿತಿ ಮತ್ತು ಕಲ್ಪನೆಯಿರಬೇಕು. ಪಿಎಚ್‌ಡಿ ಮಾಡಲು ಬಯಸುವ ವಿಶ್ವವಿದ್ಯಾಲಯದ ಅಧಿಸೂಚನೆಯಂತೆ ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. ಕೆಲವು ವಿಶ್ವವಿದ್ಯಾಲಯಗಳು ಅಭ್ಯರ್ಥಿಗಳು ತಮ್ಮ ಅರ್ಜಿಯೊಂದಿಗೆ ಸಂಶೋಧನಾ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಸೂಚಿಸುತ್ತವೆ.

ಪಿಎಚ್‌ಡಿ ಕೋರ್ಸ್ ಅರ್ಜಿಯ ಪರಿಶೀಲನೆಯ ನಂತರ ಪ್ರವೇಶ ಪರೀಕ್ಷೆ ಮತ್ತು ಇನ್ನಿತರ ಪ್ರಕ್ರಿಯೆಗಳ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸಂಶೋಧನೆಯಲ್ಲಿ ನಿಮಗೆ ಬೆಂಬಲ ಮತ್ತು ಮಾರ್ಗದರ್ಶನ ನೀಡಲು ಮಾರ್ಗದರ್ಶಕರನ್ನು ನಿಯೋಜಿಸಲಾಗುತ್ತದೆ. ಸಾಮಾನ್ಯವಾಗಿ, 3 ರಿಂದ 5 ವರ್ಷಗಳಲ್ಲಿ ಪಿಎಚ್‌ಡಿ ಮುಗಿಸಬಹುದು.

2. ನಾನು ಎಂಕಾಂ ಮುಗಿಸಿದ್ದೇನೆ. ಎಸ್‌ಎಸ್‌ಸಿ ನೇಮಕಾತಿ ಮಾಡುವ ಅಕೌಂಟೆಂಟ್ ಮತ್ತು ಆಡಿಟ್ ಹುದ್ದೆಗಳ ಮಾಹಿತಿ, ಪರೀಕ್ಷೆಯ ಪಠ್ಯಕ್ರಮ ಮತ್ತು ತಯಾರಿ ಹೇಗೆ ನಡೆಸಬೇಕು ಎಂದು ತಿಳಿಸಿ.

ಸುಭಾಷ್ ಪವಾರ, ಬೀದರ್

ಭಾರತ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು, ಸಂಸ್ಥೆಗಳ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ನಡೆಸುವ ರಾಷ್ಟ್ರೀಯ ಮಟ್ಟದ ಅತ್ಯಂತ ಜನಪ್ರಿಯ ಪರೀಕ್ಷೆಯ ಮಾದರಿ, ತಯಾರಿ ಮತ್ತು ಹೆಚ್ಚಿನ ವಿವರಗಳಿಗೆ ಗಮನಿಸಿ: https://www.shiksha.com/exams/ssc-cgl-exam-preparation

3. ಅರಣ್ಯ ರಕ್ಷಕ ಹುದ್ದೆಗಳ ಲಿಖಿತ ಪರೀಕ್ಷೆಗೆ ಋಣಾತ್ಮಕ ಅಂಕಗಳು ಇರುತ್ತವೆಯೇ ಎಂಬುದನ್ನು ತಿಳಿಸಿ.

ವಿಶ್ವನಾಥ್, ಊರು ತಿಳಿಸಿಲ್ಲ

ನಮಗಿರುವ ಮಾಹಿತಿಯಂತೆ ತಪ್ಪಾದ ಉತ್ತರಗಳಿಗೆ 0.25 ಋಣಾತ್ಮಕ ಅಂಕಗಳಿರುತ್ತದೆ.

4. ನಾನು ದ್ವಿತೀಯ ಪಿಯುಸಿ (ವಿಜ್ಞಾನ) ಮುಗಿಸಿದ್ದೇನೆ. ಈಗ ನಾನು ಸೇನೆಗೆ ಸೇರಬೇಕು ಎಂದು ಬಯಸಿದ್ದೇನೆ. ಅದಕ್ಕಾಗಿ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಹೇಗೆ ಸೇರಬೇಕೆಂದು ದಯಮಾಡಿ ತಿಳಿಸಿ.

ರಾಧಿಕಾ ಬಿ, ರಾಯಚೂರು

ರಕ್ಷಣಾ ಪಡೆಗೆ ಸೇರಿ ದೇಶಸೇವೆ ಮಾಡಬೇಕೆನ್ನುವ ನಿಮ್ಮ ಆಸೆ ಶ್ಲಾಘನೀಯ. ಪಿಯುಸಿ ನಂತರ ಎನ್‌ಡಿಎ ಪರೀಕ್ಷೆ ಅಥವಾ ಟೆಕ್ನಿಕಲ್ ಎಂಟ್ರಿ ಸ್ಕೀಮ್ ಮುಖಾಂತರ ರಕ್ಷಣಾ ಪಡೆಯನ್ನು ಸೇರಬಹುದು.

ಹೆಚ್ಚಿನ ವಿವರಗಳಿಗೆ ಗಮನಿಸಿ: https://indianarmy.nic.in/home

5. ಬಿಪಿಇಡಿ, ಎಂಪಿಇಡಿ ಮುಗಿಸಿದ್ದೇನೆ. ಮುಂದೇನು ಮಾಡಬಹುದು?

ಶಶಿಕುಮಾರ್, ಕೊಪ್ಪಳ

ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ದೈಹಿಕ ಶಿಕ್ಷಣ ಅತ್ಯಗತ್ಯ. ಎಂಪಿಇಡಿ ನಂತರ ಶಾಲಾ ಕಾಲೇಜುಗಳು, ಜಿಮ್ ಮತ್ತು ಫಿಟ್‌ನೆಸ್ ಸಂಸ್ಥೆಗಳು, ಕ್ರೀಡೆ ಮತ್ತು ಸಂಬಂಧಿತ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಎನ್‌ಜಿಒ ಸಂಸ್ಥೆಗಳು ಇತ್ಯಾದಿ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ. ಇನ್ನೂ ಹೆಚ್ಚಿನ ತಜ್ಞತೆಯ ಅಗತ್ಯವಿದ್ದರೆ, ಪಿಎಚ್‌ಡಿ ಕೂಡ ಮಾಡಬಹುದು.

6. ನಾನು ಪಿಯುಸಿ ಮುಗಿಸಿದ್ದೇನೆ. ಪೊಲೀಸ್ ಕಾನ್‌ಸ್ಟೇಬಲ್ ಆಗಲು ಇಚ್ಛಿಸಿದ್ದೇನೆ. ನನಗೆ ಸೂಕ್ತವಾದ ಸಲಹೆ ಮತ್ತು ಉತ್ತಮ ಪುಸ್ತಕಗಳನ್ನು ತಿಳಿಸಿ.

ವೀರೇಶ್, ಕಲಬುರ್ಗಿ

ಕರ್ನಾಟಕ ಪೊಲೀಸ್ ನೇಮಕಾತಿ ಪ್ರಕ್ರಿಯೆ, ಪರೀಕ್ಷೆಗಳ ವಿವರ, ದೈಹಿಕ ಮಾನದಂಡಗಳು ಮತ್ತು ವಿಷಯಸೂಚಿಗೆ ಗಮನಿಸಿ: https://prepp.in/karnataka-police-exam

7. ನಾನು ಬಿಎ ಕೊನೆಯ ವರ್ಷದಲ್ಲಿ ಓದುತ್ತಿದ್ದೇನೆ. ನನಗೆ ಐಎಫ್‌ಎಸ್ ಅಧಿಕಾರಿ ಆಗಬೇಕು ಎಂಬ ಆಸೆ ಇದೆ. ನಾನು ಮುಂದೇನು ಮಾಡಬೇಕು?

ಹೆಸರು, ಊರು ತಿಳಿಸಿಲ್ಲ

ಯಾವುದೇ ಪದವಿಯ ನಂತರ ಯುಪಿಎಸ್‌ಸಿ ಮುಖ್ಯ ಪರೀಕ್ಷೆಯ ಮುಖಾಂತರ ಐಎಫ್‌ಎಸ್ ಅಧಿಕಾರಿಯಾಗಬಹುದು. ನೀವು ಪದವಿ ಕೋರ್ಸ್‌ನ ಅಂತಿಮ ವರ್ಷದಲ್ಲಿರುವುದರಿಂದ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಭಾಗವಹಿಸಬಹುದು.

8. ನಾನು ಈಗ ಬಿಕಾಂ ಮುಗಿಸಿದ್ದೆನೆ. ನನಗೆ ಮುಂದೆ ಓದಲು ತುಂಬಾ ಆಸೆ. ಆದರೆ, ಮನೆಯಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಆದ್ದರಿಂದ ಮುಂದೆ ಓದಲು ಆಗುವುದಿಲ್ಲ. ಹಾಗಾಗಿ, ನಾನು ಮುಂದೆ ಯಾವ ತರಹದ ಕೆಲಸಕ್ಕೆ ಸೇರಬಹುದು?

ಹೆಸರು, ಊರು ತಿಳಿಸಿಲ್ಲ

ಆರ್ಥಿಕ ಸಮಸ್ಯೆಯ ಕಾರಣದಿಂದ ನಿಮ್ಮ ಭವಿಷ್ಯದ ಕನಸುಗಳನ್ನು ಕಾಣದೆ ಮುಂದಿನ ಬದುಕಿನ ಬಗ್ಗೆ ರಾಜಿಯಾಗದಿರಿ; ಏಕೆಂದರೆ, ಆರ್ಥಿಕ ಸಮಸ್ಯೆಗಳು ತಾತ್ಕಾಲಿಕ.

ಬ್ಯಾಂಕಿಗ್, ಫೈನಾನ್ಸ್, ಇನ್ವೆಸ್ಟ್‌ಮೆಂಟ್‌, ಇನ್‌ಶೂರೆನ್ಸ್‌, ರೀಟೇಲ್, ಮಾರ್ಕೆಟಿಂಗ್, ಎಫ್‌ಎಂಜಿಸಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನೀವು ವೃತ್ತಿಯನ್ನು ಅರಸಬಹುದು ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಕೆಲಸಗಳನ್ನೂ ಪಡೆಯಬಹುದು. ಜೊತೆಗೆ, ನಿಮ್ಮ ಆಸಕ್ತಿಯ ಅನುಸಾರ ದೂರ ಶಿಕ್ಷಣದ ಮುಖಾಂತರ ಎಂಬಿಎ ಮುಂತಾದ ಸ್ನಾತಕೋತ್ತರ ಕೋರ್ಸ್‌ಗಳನ್ನು ಮಾಡಬಹುದು. ಹಾಗಾಗಿ, ಈಗಿನ ಪರಿಸ್ಥಿತಿಯಿಂದ ಎದೆಗುಂದದೆ ನಿಮ್ಮ ದೀರ್ಘಾವಧಿ ಕನಸುಗಳನ್ನು ಸಾಕಾರಗೊಳಿಸುವ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಿ.

9. ನಾನು ಬಿಕಾಂ ಮಾಡಿ ಎಂಬಿಎ ಮಾಡಿದ್ದೇನೆ. ನನಗೆ ಬಿಎ ಓದುವ ಆಸಕ್ತಿ ಇದೆ. ರೆಗ್ಯುಲರ್ ಬಿಎ ಕೋರ್ಸ್‌ ಮಾಡಬೇಕು. ಹೇಗೆ ಮಾಡಬೇಕು ತಿಳಿಸಿ.

ತ್ರಿವೇಣಿ, ಬೆಳಗಾವಿ

‌ಸಾಮಾನ್ಯವಾಗಿ ಪದವಿಯ ನಂತರ ಸ್ನಾತಕೋತ್ತರ ಕೋರ್ಸ್‌ಗಳನ್ನು ಮಾಡುವುದು ವಾಡಿಕೆ. ಎಂಬಿಎ ಕೋರ್ಸ್ ನಂತರ ವೃತ್ತಿಯ ಉತ್ತಮ ಅವಕಾಶಗಳಿವೆ. ಹಾಗಾಗಿ, ಈ ಅವಕಾಶಗಳನ್ನು ಸದುಪಯೋಗಿಸಿಕೊಂಡು ದೂರ ಶಿಕ್ಷಣದ ಮುಖಾಂತರ ನಿಮಗಿಷ್ಟವಿರುವ ವಿಷಯದಲ್ಲಿ ಬಿಎ ಮಾಡಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು