ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಸಿರುಮನೆ ಪರಿಣಾಮ’ದಲ್ಲಿ ಹಸಿರ ಹೆಸರೇಕೆ ಬಂತು?

ಜ್ಞಾನ–ವಿಜ್ಞಾನ
Last Updated 31 ಜುಲೈ 2022, 19:31 IST
ಅಕ್ಷರ ಗಾತ್ರ

‘ಹಸಿರು ಮನೆ ಪರಿಣಾಮ‘ (ಗ್ರೀನ್‌ಹೌಸ್‌ ಎಫೆಕ್ಟ್‌) ಎಂಬ ನುಡಿಗಟ್ಟನ್ನು ಎಲ್ಲರೂ ಕೇಳಿರುತ್ತಾರೆ. ಈ ಪರಿಣಾಮದಿಂದಾಗಿಯೇ ಭೂಮಿಯ ಉಷ್ಣತೆ ಏರುತ್ತಿದೆ ಎಂಬುದೂ ಖಾತ್ರಿಯಾಗಿದೆ. ಆದರೆ ಇದು ಅನೇಕರಿಗೆ ಗೊಂದಲ ಹುಟ್ಟಿಸುವಂತಿದೆ. ಏಕೆಂದರೆ ಹಸಿರು ಅಥವಾ ಹಸಿರು ಮನೆ ಅಂದರೆ ನಮ್ಮ ಸಾಮಾನ್ಯ ಅರ್ಥದಲ್ಲಿ ಗಿಡಮರಗಳ, ದಟ್ಟ ಅರಣ್ಯದ ಚಿತ್ರಣ ನಮಗೆ ಮೂಡುತ್ತದೆ. ಇದರ ಪರಿಣಾಮ ಅದು ಹೇಗೆ ಭೂಮಿಯ ಉಷ್ಣತೆಯನ್ನು ಏರಿಸುತ್ತದೆ? ಈ ಗೊಂದಲ ಕೆಲವರಲ್ಲಿ ಸಹಜವಾಗಿಯೇ ಮೂಡುತ್ತದೆ.

ವಾಸ್ತವ ಏನೆಂದು ನೋಡೋಣ; ಬ್ರಿಟಿಷರು ಗಾಜಿನ ಮನೆಯಲ್ಲಿ ಸಸ್ಯಗಳನ್ನು ಬೆಳೆಸುತ್ತಿದ್ದರು. ಏಕೆಂದರೆ ಬ್ರಿಟನ್‌ನಲ್ಲಿ ಅಥವಾ ಯುರೋಪ್‌ನ ಅನೇಕ ದೇಶಗಳಲ್ಲಿ ಚಳಿ ತುಂಬಾ ಜಾಸ್ತಿ. ಬಿಸಿಲು ಜಾಸ್ತಿ ಇರುವ ಭಾರತದಂಥ ದೇಶದಲ್ಲಿ ಬೆಳೆಯುವ ಸಸ್ಯಗಳು (ಉದಾ: ಸೌತೆಕಾಯಿ) ಅಲ್ಲಿ ಬೆಳೆಯುವುದಿಲ್ಲ. ಚಳಿಗಾಲದಲ್ಲಂತೂ ಏನನ್ನೂ ಬೆಳೆಸಲು ಸಾಧ್ಯವಿಲ್ಲದಂಥ ಸ್ಥಿತಿ. ಅಲ್ಲಿನ ಘೋರ ಚಳಿಯಲ್ಲೂ ಸಸ್ಯಗಳನ್ನು ಬೆಳೆಸಲೆಂದೇ ಅವರು ಗಾಜಿನ ಮನೆಗಳನ್ನು ನಿರ್ಮಾಣ ಮಾಡಿ, ಅದರಲ್ಲಿ ತಮಗಿಷ್ಟವಾದ ಸಸ್ಯಗಳನ್ನು ಬೆಳೆಸುತ್ತಿದ್ದರು.

ಗಾಜಿನದೇ ಸೂರು, ಕಿಟಕಿ, ತೆಳುಗೋಡೆ ಮತ್ತು ಬಾಗಿಲು ಇದ್ದರೆ ಅದರಲ್ಲಿ ಸೆಕೆ ಜಾಸ್ತಿ ಇರುತ್ತದೆ. ಅಲ್ಲಿನ ಕೃತಕ ಪರಿಸರದಲ್ಲಿ ಶಾಖ ಹೆಚ್ಚಿರುವುದರಿಂದ ಚಳಿಗಾಲದಲ್ಲೂ ಬೆಳೆ ಚೆನ್ನಾಗಿ ಬರುತ್ತದೆ. ಗಾಳಿಯ ಹೊಡೆತ, ಕೀಟಬಾಧೆ ಇವೆಲ್ಲ ಇರುವುದಿಲ್ಲ. ಸಸ್ಯಗಳಿಗೆ ಅಗತ್ಯವಿದ್ದಷ್ಟು ತೇವಾಂಶ ಸಿಗುವಂತೆ ಮಾಡಬಹುದು. ಅದಕ್ಕೇ ಬ್ರಿಟಿಷರು ಬೆಂಗಳೂರಿನಲ್ಲೂ ಲಾಲ್‌ಬಾಗ್‌ನಲ್ಲಿ 1889ರಲ್ಲಿ ನಿರ್ಮಿಸಿದ ಗಾಜಿನ ಮನೆ ಗೊತ್ತಲ್ಲ? ಅದಕ್ಕೆ ಅವರು ಗ್ಲಾಸ್‌ಹೌಸ್‌ ಹೆಸರಿನ ಬದಲು ‘ಗ್ರೀನ್‌ಹೌಸ್‌’ ಎಂದು ಕರೆಯುತ್ತಾರೆ.

ಗಾಜಿನ ಬದಲು ಪ್ಲಾಸ್ಟಿಕ್‌ನಂಥ ಪಾರಕ ಹಾಳೆಗಳನ್ನು ಹೊದಿಸಿದರೂ ಅಂಥ ಮನೆಗಳಲ್ಲಿ ಸೆಕೆ ತುಂಬ ಜಾಸ್ತಿ ಇರುತ್ತದೆ. ನಮ್ಮಲ್ಲೂ ಈಗೀಗ ‘ಪಾಲಿ ಹೌಸ್‌’ (ಅಂದರೆ ಪಾಲಿಥೀನ್‌- ಪಾಸ್ಟಿಕ್‌- ಹಾಳೆಗಳನ್ನು ಹೊದಿಸಿದ ಕುಟೀರ) ರೈತರಲ್ಲಿ ಸಾಕಷ್ಟು ಜನಪ್ರಿಯ ಆಗುತ್ತಿದೆ. ಹೂಹಣ್ಣು ತರಕಾರಿಗಳನ್ನು ಉದ್ಯಮ ರೂಪದಲ್ಲಿ ಬೆಳೆಸುವವರಿಗಂತೂ ಇಂಥ ಪಾಲಿಹೌಸ್‌ ಬೇಕೇಬೇಕು. ಪುಷ್ಪೋದ್ಯಮ ಅರಳಿ ನಿಂತಿರುವುದೇ ಪಾಲಿಹೌಸ್‌ ಅಥವಾ ‘ಗ್ರೀನ್‌ಹೌಸ್‌’ ಗಳಲ್ಲಿ.

‘ಸೆಕೆ ಹೆಚ್ಚಾಗುತ್ತದೆ’ ಎಂಬುದಕ್ಕೇ ‘ಗಾಜಿನ ಮನೆ ಪರಿಣಾಮ’ ಎನ್ನುತ್ತಾರೆ. ಗಾಜಿನ ಅಥವಾ ಪ್ಲಾಸ್ಟಿಕ್‌ ಮನೆಯಲ್ಲಿ ಶಾಖ ಜಾಸ್ತಿ ಏಕೆ ಎಂಬುದನ್ನು ಈಗ ನೋಡೋಣ.

ಸೂರ್ಯನ ಬೆಳಕಿನ ತರಂಗಗಳು ಗಾಜನ್ನು ಅಥವಾ ಪ್ಲಾಸ್ಟಿಕ್ಕನ್ನು ಸಲೀಸಾಗಿ ದಾಟಿ ಮನೆಯೊಳಕ್ಕೆ ಬರುತ್ತದೆ. ಆದರೆ ಹಾಗೆ ಬಂದ ಬೆಳಕು ನೆಲ ಅಥವಾ ಸಸ್ಯಗಳ ಮೇಲೆ ಬಿದ್ದ ನಂತರ ಅದು ಶಾಖದ (ಅವಗೆಂಪು) ಕಿರಣಗಳಾಗಿ ಚದುರುತ್ತದೆ. ಅದು ಗಾಜನ್ನು ಭೇದಿಸಿ ಹೊರಕ್ಕೆ ಹೋಗಲಾರದು. ಒಂಥರಾ ಏಕಮುಖ ರಸ್ತೆಯ ಹಾಗೆ.

ಚಲಿಸದೇ ನಿಂತ ಬಸ್‌ ಅಥವಾ ಕಾರಿನಲ್ಲಿ ನಾವು ಇದನ್ನು ಅನುಭವಿಸುತ್ತೇವೆ. ಗಾಜಿನ ಮೂಲಕ ಒಳಕ್ಕೆ ಬರುವ ಬೆಳಕು ಸೆಕೆಯನ್ನು ಹೆಚ್ಚಿಸುತ್ತದೆ. ‘ಕಿಟಕಿ ತೆರೀರಿ’, ‘ಗಾಜು ಇಳಿಸ್ರೀ’ ಎಂದು ಕೇಳುವಂತಾಗುತ್ತದೆ.

ಗಾಜಿನ ಹೊದಿಕೆ ಇಲ್ಲದ ವಾತಾವರಣದಲ್ಲೂ ಗಾಳಿಯಲ್ಲಿ ‘ಕೆಲವು’ ಅನಿಲ ಕಣಗಳು ಬೆಳಕಿನ ಕಿರಣಗಳನ್ನು ಅತ್ತಿತ್ತ ಚದುರಿಸಿ, ಅವಗೆಂಪು ಕಿರಣಗಳನ್ನಾಗಿ ಮಾಡುತ್ತವೆ. ಅಂದರೆ ಅವು ಶಾಖವನ್ನು ಹೀರಿಕೊಳ್ಳುತ್ತವೆ ವಿನಾ ಮತ್ತೆ ಆ ಬೆಳಕು ಬಾಹ್ಯಾಕಾಶಕ್ಕೆ ಪ್ರತಿಫಲನಗೊಳ್ಳಲು ಬಿಡುವುದಿಲ್ಲ. ನೀರಿನ ಆವಿ, ಕಾರ್ಬನ್‌ ಡೈಆಕ್ಸೈಡ್‌, ನೈಟ್ರಸ್‌ ಆಕ್ಸೈಡ್‌, ಮೀಥೇನ್‌ ಮತ್ತು ಓಝೋನ್‌ ಕಣಗಳು ಹೀಗೆ ಬೆಳಕನ್ನು ಚದುರಿಸಿ ಭೂಮಿಯನ್ನು ಬೆಚ್ಚಗೆ ಇಡುತ್ತವೆ. ಅದಕ್ಕೇ ಅವುಗಳಿಗೆ ಗ್ರೀನ್‌ಹೌಸ್‌ ಗ್ಯಾಸ್‌ ಅಥವಾ ‘ಹಸಿರುಮನೆ ಅನಿಲಗಳು’ ಎನ್ನುತ್ತಾರೆ. ಮಿಥೇನ್‌ ಮತ್ತು ವಾಹನಗಳ ಹೊಗೆಯ ಅನಿಲಗಳು ಬಿಸಿಲಿಗೆ ಒಡೆದು ನೈಟ್ರಸ್‌ ಆಕ್ಸೈಡ್‌ ಮತ್ತು ನೆಲಮಟ್ಟದ ಓಝೋನ್‌ ಕಣಗಳಾಗಿ ಸೆಕೆಯನ್ನು ಇನ್ನೂ ಹೆಚ್ಚು ಮಾಡುತ್ತದೆ.

ಹೀಗೆ ಭೂಮಿಯ ಸೆಕೆಯನ್ನು ಹೆಚ್ಚಿಸುವ ಅನಿಲಗಳಿಗೆ ನಾವು ‘ಶಾಖವರ್ಧಕ ಅನಿಲಗಳು’ ಎಂದು ಹೇಳಬೇಕು. ತುಸು ಪ್ರಮಾಣದಲ್ಲಿ ಈ ಅನಿಲಗಳು ವಾತಾವರಣದಲ್ಲಿ ಇರಲೇಬೇಕು, ಏಕೆಂದರೆ ಭೂಮಿ ಬೆಚ್ಚಗೆ ಇರಬೇಕು. ಈ ಅನಿಲಗಳು ಇಲ್ಲದಿದ್ದರೆ ಭೂಮಿ ತೀರಾ ತಂಪಾಗಿ ಯಾರೂ ಬದುಕಲು ಸಾಧ್ಯವಿಲ್ಲದ ಹಿಮಚೆಂಡು ಆಗಿಬಿಡುತ್ತಿತ್ತು. ಆದರೆ ಏನಾಗುತ್ತಿದೆ ಎಂದರೆ ನಾವು ಮನುಷ್ಯರು ತುಂಬ ದೊಡ್ಡ ಪ್ರಮಾಣದಲ್ಲಿ ಪೆಟ್ರೋತೈಲ ಮತ್ತು ಕಲ್ಲಿದ್ದಲಿನಂಥ ಫಾಸಿಲ್‌(ಪಳೆಯುಳಿಕೆ) ಇಂಧನಗಳನ್ನು ಉರಿಸುವುದರಿಂದ ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್‌ ಪ್ರಮಾಣ ಹೆಚ್ಚುತ್ತಿದೆ. ಚರಂಡಿಯ ರೊಚ್ಚೆ, ಸೆಗಣಿ ಮತ್ತು ಕೆಸರಿನ ಕೆರೆ-ಕಾಲುವೆಗಳಿಂದ ಮೀಥೇನ್‌ ಉತ್ಪಾದನೆಯೂ ಹೆಚ್ಚುತ್ತಿದೆ. ಇವೆಲ್ಲ ಸೇರಿ, ಒಂದು ಅಗೋಚರ ಕಂಬಳಿಯ ಹಾಗೆ ವಾಯುಮಂಡಲವನ್ನು ಸುತ್ತಿಕೊಳ್ಳುತ್ತಿವೆ.

ಭೂಮಿಯ ಉಷ್ಣತೆ ದಿನದಿನಕ್ಕೆ ಹೆಚ್ಚುತ್ತಿದೆ. ಇದಕ್ಕೇ ‘ಗ್ರೀನ್‌ಹೌಸ್‌ ಪರಿಣಾಮ’ ಎನ್ನುತ್ತಾರೆ. ಅದರ ಅನುಭವ ಬೇಕೆಂದರೆ ಹಗಲು ವೇಳೆ ಯಾವುದಾದರೂ ಪಾಲಿಹೌಸ್‌ ಒಳಕ್ಕೆ ಹೋಗಿ ನಿಲ್ಲಿ. ಅಥವಾ ಗಾಜುಗಳನ್ನು ಏರಿಸಿಕೊಂಡು ಕಾರಲ್ಲಿ ಕೂತರೂ ಆದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT