ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿವಿಲ್ ಸರ್ವಿಸ್ ಹುದ್ದೆ ಉತ್ತರ ಬರೆಯುವುದೇ ಪ್ರಧಾನ ಕೌಶಲ

Last Updated 3 ನವೆಂಬರ್ 2021, 19:31 IST
ಅಕ್ಷರ ಗಾತ್ರ

ಸಿವಿಲ್ ಸರ್ವಿಸ್‌ನಂತಹ ಅಪೇಕ್ಷಿತ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮುನ್ನಡೆ ಸಾಧಿಸಲು ಕಠಿಣ ಪರಿಶ್ರಮದ ಜೊತೆಗೆ ಉತ್ತರ ಬರೆಯುವ ತಂತ್ರಗಾರಿಕೆ ಪ್ರಧಾನವಾದದ್ದು. ಶೇ 86.42 ರಷ್ಟು ಅಂಕಗಳು ಕೈಬರಹ ಕೌಶಲವನ್ನು ಅವಲಂಬಿಸಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಕೈಬರಹದ ಕೌಶಲ ಮೊಟಕಾಗಿದೆ. ಎಲ್ಲವನ್ನೂ ಟೈಪಿಸಿ ಉತ್ತರಿಸುವ ಪರಿಪಾಠ ಹೆಚ್ಚಾಗಿದೆ. ನಮ್ಮ ಹೆಚ್ಚಿನ ಬರವಣಿಗೆ ವಾಟ್ಸ್‌ಆ್ಯಪ್, ಫೇಸ್‌ಬುಕ್‌, ಟ್ವಿಟರ್ ಮತ್ತು ಇಮೇಲ್‌ಗೆ ಸೀಮಿತವಾಗಿದೆ. ವ್ಯಾಕರಣದ ಸರಿಯಾದ ಬಳಕೆ ಇಲ್ಲದ ಬರವಣಿಗೆ ಹೆಚ್ಚು ಪ್ರಚಲಿತದಲ್ಲಿದೆ. ಇದರಿಂದ ನಮ್ಮ ಮೂಲ ಕೈಬರಹದ ಕೌಶಲ ನಾಶವಾಗುತ್ತಿದೆ. ಸಿವಿಲ್ ಸರ್ವಿಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸರಿಯಾಗಿ ಉತ್ತರ ಬರೆಯಲಾಗದೆ ಹಿನ್ನಡೆ ಅನುಭವಿಸುವಂತಾಗುತ್ತದೆ. ಆದರೆ ಅದೆಲ್ಲವನ್ನೂ ಮೀರಿ ಉತ್ತರ ಬರೆಯುವ ಕೌಶಲವನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಾಕಷ್ಟು ಅವಕಾಶವಿದೆ. ಅಂತಹ ಅವಕಾಶಗಳ ಕುರಿತ ಕಿರುನೋಟ ಇಲ್ಲಿದೆ.

ಸುಂದರ ಕೈಬರಹ

ಸುಂದರ ಕೈಬರಹವು ಯಶಸ್ಸಿನ ಮುನ್ಸೂಚಕವಾಗಿದೆ. ಸುಂದರ ಕೈಬರಹದಿಂದ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳು ಪ್ರಾಪ್ತವಾಗುವುದಿಲ್ಲ. ಆದರೆ ಕೆಟ್ಟ ಕೈಬರಹದಿಂದ ಅಂಕಗಳು ನಷ್ಟವಾಗಬಹುದು. ಕೈಬರಹವು ಸಂಕೀರ್ಣವಾದ ಚಲನಾತ್ಮಕ ಮತ್ತು ಅರಿವಿನ ಕೌಶಲಗಳನ್ನು ಒಳಗೊಂಡಿದೆ. ಉತ್ತಮ ಕೈಬರಹವು ನಿರರ್ಗಳ ಓದಿಗೆ ಹೆಚ್ಚು ಕೊಡುಗೆ ನೀಡುತ್ತದೆ. ಏಕೆಂದರೆ ಇದು ಅಕ್ಷರಗಳ ದೃಶ್ಯ ಗ್ರಹಿಕೆಯನ್ನು ಸಕ್ರಿಯಗೊಳಿಸುತ್ತದೆ. ಪರೀಕ್ಷೆಗಳಲ್ಲಿ, ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಗಾಗಿ ಉತ್ತಮ ಕೈಬರಹವು ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಕೈರಬಹವು ಮೌಲ್ಯಮಾಪಕರ ಕಣ್ಣುಗಳಿಗೆ ಕಷ್ಟ ನೀಡುವಂತಿರಬಾರದು. ಬದಲಾಗಿ ನೋಡಿದೊಡನೆ ಆಕರ್ಷಿಸುವಂತಿರಬೇಕು. ಸಮಗಾತ್ರದ ಹಾಗೂ ಸಮರೂಪದ ಕೈಬರಹವು ಮೌಲ್ಯಮಾಪಕರನ್ನು ಆಕರ್ಷಿಸುತ್ತದೆ. ಉತ್ತಮ ಕೈಬರಹವು ಜ್ಞಾನದ ಖಚಿತ ಪ್ರಭಾವ ನೀಡುತ್ತದೆ. ಗೊಂದಲಗಳಿಗೆ ಅವಕಾಶ ಇರುವುದಿಲ್ಲ.

ಹೆಚ್ಚು ಓದು-ಸ್ಪಷ್ಟ ಉತ್ತರ

ಉನ್ನತ ಓದು ವಿಷಯ ಗ್ರಹಿಕೆಯನ್ನು ವಿಸ್ತರಿಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗ್ರಹಿಸಿದ ವಿಷಯವನ್ನು ವ್ಯವಸ್ಥಿತ ಪದಗಳ ಜೋಡಣೆಯೊಂದಿಗೆ ಉತ್ತರಿಸುವುದು ಬಹಳ ಮುಖ್ಯ. ಇಂತಹ ಕೌಶಲ ಒಂದೇ ಬಾರಿಗೆ ಸಿದ್ಧಿಸುವುದಿಲ್ಲ. ಇದಕ್ಕೆ ಸತತ ಅಭ್ಯಾಸ ಅಗತ್ಯ. ಪ್ರಶ್ನೆಗೆ ತಕ್ಕ ಉತ್ತರವನ್ನು ಸ್ಫುಟವಾಗಿ, ಸ್ಪಷ್ಟವಾಗಿ ಬರೆಯುವುದರಿಂದ ಉತ್ತಮ ಯಶಸ್ಸು ಗಳಿಸಲು ಅವಕಾಶವಿದೆ. ಹೆಚ್ಚು ಓದಿದಷ್ಟೂ ವಿಷಯದ ವಿವಿಧ ಆಯಾಮಗಳ ಪರಿಚಯವಾಗುತ್ತದೆ ಮತ್ತು ನಿರ್ದಿಷ್ಟ ಉತ್ತರ ಬರೆಯಲು ಸಹಕಾರಿಯಾಗುತ್ತದೆ. ವಿಷಯವನ್ನು ಮೂಲದಿಂದ ಇಂದಿನವರೆಗಿನ ಎಲ್ಲಾ ಬೆಳವಣಿಗೆಗಳು ಮತ್ತು ವಿವಿಧ ಸ್ತರಗಳಲ್ಲಿ ಅರ್ಥಮಾಡಿಕೊಂಡರೆ ವಿಷಯ ನಿರೂಪಣೆ ಸುಗಮವಾಗುತ್ತದೆ.

ವೈವಿಧ್ಯಮಯ ಪದಪುಂಜಗಳು

ಉತ್ತರವು ವೈವಿಧ್ಯಮಯ ಪದಪುಂಜಗಳಿಂದ ಕೂಡಿದ್ದರೆ ಹೆಚ್ಚು ಮೌಲ್ಯಯುತವಾಗಿರುತ್ತದೆ. ಪದಪುಂಜಗಳ ಬಳಕೆ ವ್ಯವಸ್ಥಿತ ರೂಪದಲ್ಲಿರಬೇಕು. ಬಳಸುವ ಪ್ರತಿ ಶಬ್ದವು ಧ್ವನಿಸುವಂತಿರಬೇಕು. ಪದಪುಂಜಗಳು ಪದೇ ಪದೇ ಓದುವಂತಿರಬೇಕು ಮತ್ತು ವಿಶೇಷತೆಯಿಂದ ಕೂಡಿರಬೇಕು. ಉತ್ತರದಲ್ಲಿ ಬಳಸಿದ ಶಬ್ದಗಳು ಮೌಲ್ಯಮಾಪಕರ ಮನಸ್ಸಿನಲ್ಲಿ ರಿಂಗಣಿಸುವಂತಿರಬೇಕು. ವಿಷಯಕ್ಕೆ ತಕ್ಕಂತಹ ನಿಖರವಾದ ಪಾರಿಭಾಷಿಕ ಪದಗಳನ್ನು ಬಳಸಬೇಕು. ಅಗತ್ಯವಿರುವಲ್ಲಿ ನುಡಿಗಟ್ಟುಗಳು, ಅಲಂಕಾರಗಳು, ವಚನಗಳು, ಕಗ್ಗಗಳಂತಹ ಭಾಷಾವೈಶಿಷ್ಟ್ಯಗಳನ್ನು ಬಳಸಿ.

ಸೃಜನಾತ್ಮಕ ಬರವಣಿಗೆ

ಉತ್ತರ ಬರಹ ಸೃಜನಾತ್ಮಕವಾಗಿರಬೇಕು. ಬರವಣಿಗೆಯ ರೂಪರೇಷೆ ರಚನಾತ್ಮಕವಾಗಿರಬೇಕು. ವಿಷಯ ಪರಿಕಲ್ಪನೆಯನ್ನು ನಿರ್ದಿಷ್ಟ ಪ್ಯಾರಾಗಳಲ್ಲಿ ಬಂಧಿಸಿಡುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ವಿಷಯಕ್ಕೆ ಪೂರಕವಾದ ಉದ್ಧರಣಗಳಿರಲಿ. ವಿಷಯವನ್ನು ವಿವಿಧ ಆಯಾಮಗಳಲ್ಲಿ ಉತ್ತರಿಸುವ ಕೌಶಲ ಬೆಳೆಸಿಕೊಳ್ಳಿ. ಮೈಂಡ್‌ಮ್ಯಾಪ್, ಫ್ಲೋಚಾರ್ಟ್, ಆಲೇಖಗಳ ರೂಪದಲ್ಲಿ ಉತ್ತರವನ್ನು ಪ್ರಸ್ತುತಪಡಿಸಿ. ಉತ್ತರವು ಬರಡಾದ ತಾತ್ವಿಕ ನೆಲೆಗಟ್ಟಿನಿಂದ ಕೂಡಿರದೆ ಪ್ರಾಯೋಗಿಕ ಅಂಶಗಳನ್ನು ಒಳಗೊಂಡಿರಲಿ. ಮೌಲ್ಯಮಾಪಕರು ಉನ್ನತ ಜ್ಞಾನವನ್ನು ಹೊಂದಿರುವುದರಿಂದ ಅವರ ಜ್ಞಾನಕ್ಕೆ ಸವಾಲಾಗುವಂತಹ ಅಂಶಗಳು ನಿಮ್ಮ ಉತ್ತರದಲ್ಲಿದ್ದರೆ ಹೆಚ್ಚು ಆಕರ್ಷಿಸುತ್ತವೆ. ಅಗತ್ಯಕ್ಕೆ ತಕ್ಕಂತಹ ವಿರಾಮ ಚಿಹ್ನೆಗಳ ಬಳಕೆ ಇರಲಿ.

ಸ್ಪಷ್ಟತೆ, ನಿರ್ದಿಷ್ಟತೆ ಇರಲಿ

ಉತ್ತರದಲ್ಲಿ ಸ್ಪಷ್ಟತೆ ಮತ್ತು ನಿರ್ದಿಷ್ಟತೆ ಮುಖ್ಯ. ನೀವು ಯಾವುದೋ ಒಂದು ಕಾದಂಬರಿಯನ್ನಾಗಲಿ, ಕಾಲ್ಪನಿಕ ಕಥೆಯನ್ನಾಗಲಿ ಬರೆಯುತ್ತಿಲ್ಲ; ಈಗ ಬರೆಯುತ್ತಿರುವುದು ನಿರ್ದಿಷ್ಟ ಪ್ರಶ್ನೆಗೆ ಉತ್ತರ ಎಂಬುದು ಮನಸ್ಸಿನಲ್ಲಿರಬೇಕು. ವಿಷಯವನ್ನು ಸಾಮಾನ್ಯೀಕರಿಸದೆ ನಿರ್ದಿಷ್ಟವಾದ ತಾತ್ವಿಕ ಹಾಗೂ ತಾಂತ್ರಿಕ ಪದಗಳಿಂದ ಉತ್ತರಿಸಿ. ವಿಷಯವನ್ನು ಅನಗತ್ಯ ಪದಗಳಿಂದ ಬಲೂನ್‌ನಂತೆ ತುಂಬಿಸಬೇಡಿ. ಅಗೆದಷ್ಟೂ ಮೊಗೆಯಬೇಕೆನಿಸುವ ಗಟ್ಟಿ ಉತ್ತರ ಹೆಚ್ಚು ಪ್ರಸ್ತುತವೆನಿಸುತ್ತದೆ. ಪಾರಿಭಾಷಿಕ ಹಾಗೂ ತಾಂತ್ರಿಕ ಪದಗಳನ್ನು ಹೈಲೈಟ್ ಮಾಡಿ. ನಿರ್ದಿಷ್ಟ ಸನ್ನಿವೇಶವನ್ನು ಒಂದು ಸುತ್ತು ಹಾಕಿದ ಅನುಭವ ನಿಮ್ಮ ಉತ್ತರದಲ್ಲಿರಲಿ.

ಸ್ವಂತಿಕೆ ಇರಲಿ

ನಿಮ್ಮ ಉತ್ತರವು ಗಿಳಿಪಾಠವಾಗಿರದೇ ಸ್ವಂತದ್ದು ಆಗಿರಲಿ. ವಿಷಯ ಗ್ರಹಿಕೆಗಾಗಿ ಓದಿದ ಪುಸ್ತಕಗಳ ಸಾಲುಗಳನ್ನು ಯಥಾವತ್ತಾಗಿ ಕಾಪಿ ಮಾಡದೇ ಸ್ವಂತಿಕೆಯಿಂದ ಕೂಡಿರಲಿ. ಪದಗಳ ಪುನರಾವರ್ತನೆಯನ್ನು ತಪ್ಪಿಸಲು ವೈವಿಧ್ಯಮಯ ಪದಗಳ ಬಳಕೆಯಿರಲಿ. ಹೆಚ್ಚು ಹೆಚ್ಚು ಅಭ್ಯಾಸವು ನಿಮ್ಮನ್ನು ಪರಿಪೂರ್ಣ ಬರಹಗಾರರನ್ನಾಗಿಸುತ್ತದೆ. ಅದಕ್ಕಾಗಿ ಹೆಚ್ಚು ಶ್ರಮವಹಿಸಿ ಬರಹದ ದೋಷಗಳನ್ನು ಸರಿಪಡಿಸಿಕೊಳ್ಳಿ. ಬರಹದಲ್ಲಿ ಕಾಗುಣಿತ ಹಾಗೂ ವ್ಯಾಕರಣಕ್ಕೆ ಹೆಚ್ಚು ಒತ್ತು ಕೊಡಿ. ಬರವಣಿಗೆಯು ದೋಷರಹಿತವಾಗಿರಲಿ. ಬರಹದಲ್ಲಿ ನಿಮ್ಮದೆ ಆದ ಒಂದು ಸ್ವಂತ ಶೈಲಿಯನ್ನು ಅಭಿವೃದ್ಧಿಪಡಿಸಿಕೊಳ್ಳಿ.

ಪ್ರಚಲಿತ ಮಾಹಿತಿ ಇರಲಿ

ಸಿವಿಲ್ ಸರ್ವಿಸ್ ಹುದ್ದೆಗಳ ಪರೀಕ್ಷೆಯಲ್ಲಿ ಪ್ರಚಲಿತ ಜ್ಞಾನಕ್ಕೆ ಹೆಚ್ಚು ಮಹತ್ವ ಇರುವುದರಿಂದ ನಿಮ್ಮ ಉತ್ತರದಲ್ಲಿ ಪ್ರಚಲಿತ ಮಾಹಿತಿ ಇರಲಿ. ನಿಗದಿತ ಪಠ್ಯದ ಓದಿನ ಜೊತೆಗೆ ಪತ್ರಿಕೆಗಳು, ಜನಸಂಖ್ಯಾ ವರದಿಗಳು, ಬಜೆಟ್ ಹಾಗೂ ಆರ್ಥಿಕ ಸಮೀಕ್ಷೆಗಳಂತಹ ಮೂಲಗಳ ಮಾಹಿತಿಯು ಉತ್ತರದಲ್ಲಿರಲಿ.

ಸರಣಿ ಪರೀಕ್ಷೆಯ ಅಭ್ಯಾಸ

ಉತ್ತಮ ಉತ್ತರ ಕೌಶಲ ಅಭಿವೃದ್ಧಿಗಾಗಿ ಸರಣಿ ಪರೀಕ್ಷೆಗಳನ್ನು ಅಭ್ಯಾಸ ಮಾಡಬೇಕು. ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಸರಣಿ ಪರೀಕ್ಷೆಗೆ ಬಳಸಿಕೊಳ್ಳಬಹುದು. ಬರೆದ ಉತ್ತರಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಣೆ ಮಾಡಿ ಕೈಬರಹವನ್ನು ಪ್ರಾಮಾಣಿಕವಾಗಿ ಉತ್ತಮ ಪಡಿಸಿಕೊಳ್ಳುವ ತಂತ್ರಗಳನ್ನು ಅಳವಡಿಸಿಕೊಳ್ಳಿ. ಅಗತ್ಯವಿದ್ದಲ್ಲಿ ತಜ್ಞರ ಸಲಹೆ ಪಡೆಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT