ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಸಂವಹನ ನಿಮ್ಮ ಶಕ್ತಿ

ಪರೀಕ್ಷೆಗಳಲ್ಲಿ ಸಂವಹನ ಕೌಶಲ – ಭಾಗ –9
Last Updated 14 ಡಿಸೆಂಬರ್ 2022, 20:15 IST
ಅಕ್ಷರ ಗಾತ್ರ

ಸಂವಹನದ ಬಗ್ಗೆ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳಲ್ಲಿ ಸಂವಹನದ ಪ್ರಕ್ರಿಯೆಯ ಕುರಿತಾಗಿ ಪ್ರಶ್ನೆ ಇದ್ದೇ ಇರುತ್ತದೆ. ಸಂವಹನ ಹೇಗೆ ನಡೆಯುತ್ತದೆ ಎಂದು ತಿಳಿದುಕೊಳ್ಳುವುದು ಸಂವಹನ ಕೌಶಲವನ್ನು ಸುಧಾರಿಸಿಕೊಳ್ಳಲು ಕೂಡಾ ಅಗತ್ಯ. ಎಲ್ಲರಿಗೂ ಸಂವಹನ ಬೇಕಾದುದಾದರೂ ಎಲ್ಲರಲ್ಲೂ ಅದು ಒಂದೇ ಮಟ್ಟದಲ್ಲಿ ಇರುವುದಿಲ್ಲ. ಸಂವಹನದ ನಮ್ಮ ನ್ಯೂನತೆಗಳನ್ನು ಅರ್ಥೈಸಿಕೊಂಡರೆ ಯಾವ ವಯಸ್ಸಿನಲ್ಲಾದರೂ ನಮ್ಮ ಸಂವಹನ ಕಲೆಯನ್ನು ಉತ್ತಮಪಡಿಸಿಕೊಳ್ಳಬಹುದು.

ಸಂವಹನದ ಕುರಿತು ವೈಜ್ಞಾನಿಕವಾಗಿ ಅಧ್ಯಯನ ಮಾಡಿದವರಲ್ಲಿ ಅರಿಸ್ಟಾಟಲ್ ಮೊದಲಿಗರು. ಅವರು ಸಾರ್ವಜನಿಕ ಭಾಷಣದ ಪ್ರಕ್ರಿಯೆಯನ್ನು ಸೈದ್ಧಾಂತಿಕವಾಗಿ ವಿವರಿಸಲು ಪ್ರಯತ್ನಿಸಿದರು. ಅವರ ಪ್ರಕಾರ ನಾಲ್ಕೇ ಅಂಶಗಳು ಭಾಷಣದ ಪ್ರಕ್ರಿಯೆಯಲ್ಲಿರುವುದು. ಭಾಷಣ ಮಾಡುವವ (Source), ಭಾಷಣ ಕೇಳುವವರು (Receiver), ಭಾಷಣಕ್ಕೊಂದು ವಸ್ತು( Message) ಮತ್ತು ಅದನ್ನು ಕಳಿಸಲು ಒಂದು ವಾಹಿನಿ (Medium). ಇದು ಮುಂದೆ ಎಸ್‌ಎಂಸಿಆರ್ ಮಾದರಿ ಎಂಬುದಾಗಿ ಪ್ರಸಿದ್ಧವಾಯಿತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸಂವಹನದ ಪ್ರಭಾವ ಈ ನಾಲ್ಕು ಅಂಶಗಳ ಮೇಲೂ ನಿಂತಿರುತ್ತದೆ. ಯಾವುದೇ ಒಂದು ಅಂಗ ಬಡವಾದರೂ ಸಂವಹನ ಸೊರಗುತ್ತದೆ.

ಉದಾಹರಣೆಗೆ, ಮಾತನಾಡುವವನಿಗೆ ಧ್ವನಿ ಸಮಸ್ಯೆ ಇದ್ದರೆ, ತೊದಲುವ ಸಮಸ್ಯೆ ಇದ್ದರೆ ಅವನು ಹೇಳಿದ್ದು ಸರಿಯಾಗಿ ಕೇಳಿಸದು. ಹೇಳುವವ ಸರಿ ಇದ್ದರೂ ಕೇಳುವವನಿಗೆ ಕಿವಿ ಮಂದವಾಗಿದ್ದರೆ ಸಂವಹನ ತಲುಪದು. ನೀವು ಸಂತೆಯಲ್ಲಿ ನಿಂತು ಮೊಬೈಲಿನಿಂದ ಕರೆ ಮಾಡಲು ಪ್ರಯತ್ನಿಸಿ. ಆ ಕಡೆಯಿಂದ ಏನು ಹೇಳುವರೆಂದು ಕೇಳುವುದೇ ಇಲ್ಲ. ಅದು ರಿಸೀವರ್‌ನ ಸಮಸ್ಯೆ. ಹೇಳುವವರು ಕೇಳುವವರು ಇಬ್ಬರೂ ಸರಿಯಿದ್ದಾಗಲೂ ವಾಹಿನಿಯ ಸಮಸ್ಯೆ ಇರಬಹುದು. ಕೆಲವೊಮ್ಮೆ ಬೇಕಾದ ಸಮಯಕ್ಕೇ ಮೈಕು ಕೈಕೊಡುತ್ತದೆ ಅಥವಾ ಮೈಕಿನಿಂದ ಹೊರಡುವ ಕಿರ್ ಎಂಬ ಸದ್ದು ನಿಮ್ಮ ಸಂದೇಶವನ್ನೇ ಅಳಿಸಿಹಾಕಿಬಿಡುತ್ತದೆ. ಇವೆಲ್ಲವೂ ಸರಿಯಿದ್ದಾಗ ಸಂದೇಶವೇ ಪ್ರಧಾನ. ನೀವು ಹೇಳಲಿರುವ ವಿಷಯ ಕಬ್ಬಿಣದ ಕಡಲೆಯಾಗಿ ಕಾಣಬಹುದು. ಕೇಳುಗರಿಗೆ ಇಷ್ಟವಾಗಿರದ ಸಂಗತಿಯಾಗಿರಬಹುದು. ಅವರ ಭಾಷೆಯೇ ಬೇರೆಯಾಗಿದ್ದು ನಿಮ್ಮ ಸಂದೇಶ ಅರ್ಥವಾಗದಿರಬಹುದು. ಆಗೆಲ್ಲ ನಿಮ್ಮ ಸಂದೇಶಕ್ಕೆ ಸಿಗಬೇಕಾದ ಪ್ರತಿಕ್ರಿಯೆ ಸಿಗುವುದಿಲ್ಲ.

ಹೀಗೆ ಒಂದು ಯಶಸ್ವಿ ಸಂವಹನಕ್ಕೆ ಅನೇಕ ವಿಘ್ನಗಳು. ಆಗ ನಿಮ್ಮ ಬುದ್ಧಿವಂತಿಕೆ, ಪ್ರಜ್ಞಾವಂತಿಕೆ ಎಲ್ಲವೂ ಸರಿಯಾಗಿದ್ದೂ, ಸಂವಹನವನ್ನು ರೂಢಿಸಿಕೊಳ್ಳದ ಕಾರಣದಿಂದ ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತೆ ಆಗುತ್ತದೆ. ಬರಹದಲ್ಲಾಗಲೀ ಮಾತಿನಲ್ಲಾಗಲೀ, ಪರೀಕ್ಷೆಯಾಗಲೀ ದೈನಂದಿನ ವ್ಯವಹಾರಗಳಲ್ಲಾಗಲೀ ಸಂವಹನ ಉಂಟುಮಾಡುವ ವ್ಯತ್ಯಾಸಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಅಗತ್ಯ. ಪ್ರಜ್ಞಾಪೂರ್ವಕವಾಗಿ ನಮ್ಮ ಸಂವಹನವನ್ನು ಉತ್ತಮಪಡಿಸಿಕೊಳ್ಳಲು ನಿರಂತರ ಪ್ರಯತ್ನವೂ ಬೇಕು. ಉತ್ತರ ಪತ್ರಿಕೆಗಳಲ್ಲಾಗಲೀ ಸಂದರ್ಶನದಲ್ಲಾಗಲೀ ಸಂವಹನದ ಮೂಲಕ ಅಭ್ಯರ್ಥಿಯ ನೈಜ ದರ್ಶನವಾಗುತ್ತದೆ. ಬರೆದ ವ್ಯಕ್ತಿ ಎದುರಿಗೆ ಇರದ ಸಂದರ್ಭದಲ್ಲೂ ಅವನ ಉತ್ತರ ಅವನನ್ನು ಪರೀಕ್ಷಕನಿಗೆ ಪರಿಚಯಮಾಡಿಸಿಕೊಡುತ್ತದೆ. ‘You are what you communicate' ಎನ್ನುತ್ತಾರೆ.

ನೀವು ಹೇಗೆ ಸಂವಹನ ಮಾಡುತ್ತೀರೋ ಆ ಮೂಲಕ ನಿಮ್ಮನ್ನು ಜಗತ್ತಿಗೆ ಪ್ರಕಟಪಡಿಸಿಕೊಳ್ಳುತ್ತೀರಿ. ಒಮ್ಮೆ ಒಂದು ಭಾವನೆ ಬಂದ ಮೇಲೆ ಅಥವಾ ಪೂರ್ವಾಗ್ರಹ ಬಂದುಬಿಟ್ಟರೆ ಅದನ್ನು ಅಳಿಸುವುದು ಕಷ್ಟ. ಆಗ ಮೊದಲಿಗಿಂತ ಪರಿಣಾಮಕಾರಿ ಸಂವಹನ, ಅದೂ ಪದೇ ಪದೇ ಭಿನ್ನ ಭಾವನೆಯನ್ನು ಹುಟ್ಟುಹಾಕಲು ಸಾಧ್ಯವಾಗಬೇಕು. ಪರೀಕ್ಷೆಗಳಲ್ಲಿ ಮೊದಲ ಪ್ರಶ್ನೆಗೇ ಉತ್ತರ ಅಸಂಬದ್ಧವಾಗಿದ್ದರೆ ಮುಂದೆ ಸರಿ ಉತ್ತರಗಳನ್ನು ಬರೆದರೂ ಮೊದಲ ಉತ್ತರದ ಪ್ರಭಾವ ಮುಂದಿನ ಸರಿಯುತ್ತರಗಳನ್ನೂ ಅನುಮಾನಿಸುವಂತೆ ಮಾಡುತ್ತದೆ. ನಿಮ್ಮ ಮೊದಲ ಉತ್ತರ ಸರಿಯಾಗಿರಬೇಕು ಹಾಗೂ ಅದರ ಸಕಾರಾತ್ಮಕ ಪರಿಣಾಮ ಮುಂದಿನ ಉತ್ತರಗಳ ಬಗ್ಗೆಯೂ ಸದಭಿಪ್ರಾಯ ಮೂಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT